ADVERTISEMENT

ಲಕ್ಷ್ಮಿ ರೈ ಅವರಿಗೆ ವಯಸ್ಸೇ ಆಗುತ್ತಿಲ್ಲವಾ?

ಕೆ.ಎಂ.ಸಂತೋಷ್‌ ಕುಮಾರ್‌
Published 2 ಸೆಪ್ಟೆಂಬರ್ 2019, 7:24 IST
Last Updated 2 ಸೆಪ್ಟೆಂಬರ್ 2019, 7:24 IST
ಲಕ್ಷ್ಮಿ ರೈ
ಲಕ್ಷ್ಮಿ ರೈ   

ಮನುಷ್ಯನ ವಯಸ್ಸು ಯಾವತ್ತೂ ಹಿಂದೆ ಚಲಿಸುವುದಿಲ್ಲ, ಹಾಗೆಯೇ ವಯಸ್ಸು ಕಳೆದಂತೆ ಆರೋಗ್ಯವು ದ್ವಿಗುಣಿಸುವುದಿಲ್ಲ. ಆದರೆ, ಕ್ರಿಯಾಶೀಲ ಚಟುವಟಿಕೆ, ಯೋಗ, ಧ್ಯಾನ, ವ್ಯಾಯಾಮ, ಸಂತುಲಿತ ಮತ್ತು ಸಮತೋಲನದ ಆಹಾರ ಕ್ರಮ, ಶಿಸ್ತಿನ ಜೀವನ ಶೈಲಿಯಿಂದ ಮನುಷ್ಯ ಖಂಡಿತ ಆರೋಗ್ಯ ಕಾಪಾಡಿಕೊಳ್ಳಬಹುದು. ಫಿಟ್‌ನೆಸ್‌ ಕೂಡ ಉಳಿಸಿಕೊಳ್ಳಬಹುದು.

ಈ ರೀತಿ ಬದುಕಿನಲ್ಲಿ ಶಿಸ್ತು ರೂಢಿಸಿಕೊಂಡು, ತನ್ನ ವಯೋ ಮಾನದವರು, ತನಗಿಂತಕಿರಿಯರೂ ನಾಚಿಕೊಳ್ಳುವಂತೆ ಫಿಟ್‌ನೆಸ್‌ ಮತ್ತು ಸೌಂದರ್ಯ ಕಾಪಾಡಿಕೊಂಡಿರುವ ನಟಿಯರಲ್ಲಿಬಹುಭಾಷಾ ತಾರೆ ಲಕ್ಷ್ಮಿ ರೈ ಈಗ ಎದ್ದು ಕಾಣುತ್ತಾರೆ.

ಇವರೇನಾ ಲಕ್ಷ್ಮಿ ರೈ? ಇವರಿಗೆ ವಯಸ್ಸೇ ಆಗುತ್ತಿಲ್ಲವಾ? ಹೇಗೆ ಇಷ್ಟೊಂದು ಸ್ಲಿಮ್‌ ಆಗಿಬಿಟ್ಟರು, ಸೌಂದರ್ಯವನ್ನು ಹೇಗೆ ಇಷ್ಟರಮಟ್ಟಿಗೆ ವರ್ಧಿಸಿಕೊಂಡರೆಂದು? ಫಿಟ್‌ನೆಸ್‌ ಪ್ರಿಯರು, ಸೌಂದರ್ಯಪ್ರಿಯರೆಲ್ಲರೂಬೆರಗುಗಣ್ಣಿನಿಂದ ಅವರತ್ತ ನೋಡುವಂತೆ ಮಾಡಿದ್ದಾರೆ. ಅವರ ‘ಬಿಕನಿ ಬಾಡಿ’ಯ ಫೋಟೊಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲೂ ಬಹಳಷ್ಟು ವೈರಲ್‌ ಆಗಿದ್ದವು. ಅವರ ಅಭಿಮಾನಿಗಳು, ಜಾಲತಾಣಿಗರೂ ಬೆರಗುಗಣ್ಣಿನಿಂದ ನೋಡಿದ್ದೂ ಉಂಟು.

ADVERTISEMENT

ಅಂತಹ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಕ್ಕೂ ಸಮರ್ಥನೆ ಕೊಟ್ಟಿದ್ದರು. ‘ಹಿಂದೆ ನಾನು ಹೇಗಿದ್ದೆ, ಈಗ ಹೇಗಾಗಿದ್ದೇನೆ ಎನ್ನುವುದನ್ನು ಜನರ ಮುಂದಿಡಬೇಕಿತ್ತು. ಅದು ಬೇರೆಯವರಿಗೂ ಸ್ಫೂರ್ತಿಯಾಗಲಿ ಎಂಬ ಆಶಯವೂ ಇತ್ತು’ ಎನ್ನುವ ಮಾಹಿತಿಯನ್ನು ರೈ ಹಂಚಿಕೊಂಡಿದ್ದಾರೆ. ಕಳೆದುಕೊಂಡಿದ್ದ ಫಿಟ್‌ನೆಸ್‌ ಅನ್ನು ಮರಳಿ ಗಳಿಸಿಕೊಂಡ ಯಶೋಗಾಥೆಯನ್ನು ಅವರು ಇಲ್ಲಿ ತೆರೆದಿಟ್ಟಿದ್ದಾರೆ.

‘ಸಿನಿಮಾ ಕರಿಯರ್‌ನಲ್ಲಿ ಮುಳುಗಿ ನನ್ನ ಬಗ್ಗೆ ನನಗೇ ಯೋಚಿಸಲು ಸಮಯ ಇಲ್ಲದಷ್ಟು ಬ್ಯುಸಿಯಾಗಿಬಿಟ್ಟಿದ್ದೆ.ನನ್ನ ದೇಹದ ತೂಕ ನನಗೇ ಅರಿವಿಲ್ಲದೆ75 ಕೆ.ಜಿಗೆ ತಲುಪಿತ್ತು. ‘ಈ ಲೋಕ ಕೂಡ ಹೇಗಿದೆ ಎಂದರೆ, ನೀನು ನಿನ್ನ ಬಗ್ಗೆ ಯೋಚಿಸಬೇಡ, ನೀನು ಏನಾದರೂ ಪರವಾಗಿಲ್ಲ ಮೊದಲು ನನ್ನ ಕೆಲಸ ಮಾಡಿಕೊಡು’ ಎನ್ನುವ ಸ್ವಾರ್ಥ ಮನೋಭಾವದಲ್ಲಿದೆ. ಯಾಕೋ ಒಂದು ದಿನ ಕನ್ನಡಿ ಮುಂದೆ ನಿಂತು ನನ್ನ ಮುಖವನ್ನು, ಶರೀರವನ್ನು ನೋಡಿಕೊಂಡೆ, ನಾನು ಮೊದಲು ಹೀಗೆದ್ದೆನಾ? ಎನ್ನುವ ಅನುಮಾನ ಕಾಡಲಾರಂಭಿಸಿತು. ಮೊದಲು ನನ್ನ ಆರೋಗ್ಯ ನೋಡಿಕೊಳ್ಳಬೇಕು, ಅಷ್ಟರಮಟ್ಟಿಗಾದರೂ ನಾನು ಸ್ವಾರ್ಥಿಯಾಗಬೇಕೆನಿಸಿದಾಗ ವರ್ಕೌಟ್‌ ಶುರು ಮಾಡಿದೆ’ ಎನ್ನುತ್ತಾರೆ ನಟಿ ಲಕ್ಷ್ಮಿ ರೈ.

‘ಇದು ಒಂದೆರಡು ದಿನ, ತಿಂಗಳ ಶ್ರಮವಲ್ಲ. ನನ್ನ ಫಿಟ್‌ನೆಸ್‌ ಮರಳಿ ತಂದುಕೊಳ್ಳಲು ನಿರಂತರ ಎರಡು ವರ್ಷಗಳು ಬೇಕಾಯಿತು. ನಮ್ಮ ಮನಸು ಮತ್ತು ಶರೀರದ ಮೇಲೆ ನಿಯಂತ್ರಣ ಸಾಧಿಸಬೇಕಾದರೆ ಮಾತ್ರೆ, ಔಷಧಿಯಿಂದ ಅದು ಸಾಧ್ಯವಿಲ್ಲ. ಅದು ನಮ್ಮ ಕೈಯಲ್ಲೇ ಇರುತ್ತದೆ. ಇದು ಒಂದೆರಡು ದಿನಗಳಲ್ಲಿ ಬರುವಂತದ್ದಲ್ಲ, ಆಗುವಂತದ್ದೂ ಅಲ್ಲ. ಇದು ಕೂಡ ಒಂದು ದೀರ್ಘ ‌ತಪಸ್ಸಿನ ತರವೇ ಆಗಬೇಕಾದ ಕೆಲಸ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಡಯಟಿಂಗ್‌, ಈಟಿಂಗ್‌ ಸಲಹೆಗಳು ಸೀಮಿತವಾದುದು. ಡಯಟಿಂಗ್‌ನಿಂದ ಬರುವ ಫಲಿತಾಂಶ ಶಾಶ್ವತವಲ್ಲ. ಅದನ್ನು ನಾನೂ ಮಾಡಿದ್ದೇನೆ. ಡಯಟಿಂಗ್‌ ಶುರು ಮಾಡಿದಾಗ ತೂಕ ಕಡಿಮೆಯಾಗಿದ್ದೇನೆ, ಅದನ್ನು ಬಿಟ್ಟಾಗ ಮತ್ತೆ ಯಥಾಸ್ಥಿತಿ. ಪರಿಪೂರ್ಣವಾಗಿ ಇಡೀ ಜೀವನಶೈಲಿಯನ್ನೇ ಬದಲಿಸಿಕೊಳ್ಳಬೇಕು. ಬೆಳಿಗ್ಗೆ ಸರಿಯಾದ ಸಮಯಕ್ಕೆ ಎದ್ದು, ಸರಿಯಾದ ಸಮಯಕ್ಕೆ ಉಪಾಹಾರ ಸೇವಿಸಬೇಕು. ಹಾಗಂತ ಹೊಟ್ಟೆ ಬಿರಿಯುವಂತೆ ತಿನ್ನುವುದಲ್ಲ. ಮಿತವಾಗಿ ತಿನ್ನಬೇಕು. ಸೇವಿಸಬೇಕಾದ ಆಹಾರದ ಪ್ರಮಾಣವನ್ನು ಚಿಕ್ಕಚಿಕ್ಕದಾಗಿ ವಿಂಗಡಿಸಿಕೊಂಡು ಕನಿಷ್ಠಎರಡು ಗಂಟೆ ಬಿಡುವು ನೀಡಿ ತಿನ್ನಬೇಕು.

ನನಗೂ ಆಸಿಡಿಟಿ ಸಮಸ್ಯೆ ಇತ್ತು. ಮಧ್ಯಾಹ್ನದ ಊಟ ವಿಳಂಬವಾದರೆ ತಲೆನೋವು ಬರುತ್ತಿತ್ತು. ಸರಿಯಾದ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದ ಆ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದೇನೆ. ರೈಸ್‌, ಚಿಕನ್‌, ದಾಲ್‌ ತಿನ್ನುತ್ತೇನೆ. ತಿನ್ನುವ ಆಹಾರ ಮುಖ್ಯವಲ್ಲ. ನೋಡಿ, ಒಂದು ಬೈಕಿಗೆ ಪೆಟ್ರೋಲ್‌ ಹಾಕಿಸಿ ಅದನ್ನು ಓಡಿಸದೆ ನಿಲ್ಲಿಸಿದರೆ ಏನು ಪ್ರಯೋಜನ? ತುಂಬಾ ದಿನ ನಿಲ್ಲಿಸಿದರೆ ಪೆಟ್ರೋಲ್‌ ಟ್ಯಾಂಕ್‌ನಲ್ಲಿಗಾಳಿ ತುಂಬಿಕೊಳ್ಳುತ್ತದೆ. ಮನುಷ್ಯನ ದೇಹವೂ ಅಷ್ಟೇ. ಊಟ ತಿಂದು ಕುಳಿತರೆ ಅಥವಾ ಮಲಗಿದರೆ ದೇಹದೊಳಗೆ ಕೊಬ್ಬು ಶೇಖರವಾಗುತ್ತದೆ. ಆ ನಂತರ ನೂರಿಪ್ಪತ್ತು ಸಮಸ್ಯೆ ಇದ್ದದ್ದೇ ಅಲ್ಲವೇ? ಎನ್ನುವುದು ರೈ ಮಾತು.

ಇನ್ನೂ ವರ್ಕೌಟ್‌ ವಿಷಯಕ್ಕೆ ಬಂದಾಗ, ನಾನೇನು ತುಂಬಾ ಹೊತ್ತು ವರ್ಕೌಟ್‌ ಮಾಡುವುದಿಲ್ಲ. ಬೆಳಿಗ್ಗೆಶೂಟಿಂಗ್‌ ಇರುವಾಗ ರಾತ್ರಿ ಮನೆಗೆ ಬಂದು ಕನಿಷ್ಠ ಒಂದು ಗಂಟೆಯಾದರೂ ವರ್ಕೌಟ್‌ ಮಾಡುತ್ತೇನೆ. ಆ ನಂತರವೇ ಮಲಗುವುದು.

ಆರೋಗ್ಯ ಸರಿ ಇಲ್ಲದಾಗ ವರ್ಕೌಟ್‌ ಮಾಡುವ ಅಗತ್ಯವಿಲ್ಲ. ಆಗ ಸಹಜವಾಗಿಯೇ ತೂಕ ಕಳೆದುಕೊಳ್ಳುತ್ತೇವೆ. ವರ್ಕೌಟ್‌ ಅಂದಾಕ್ಷಣ; ಜಿಮ್‌ಗೆ ಹೋಗಿ ಶರೀರದ ಬೆವರು ಬಸಿಯಬೇಕೆಂದಲ್ಲ. ಡಾನ್ಸ್‌ ಕೂಡ ಮಾಡಬಹುದು. ಕ್ರೀಡಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬಹುದು. ನಾನು ಸಹ ಬ್ಯಾಡ್ಮಿಂಟನ್‌ ಆಡುತ್ತೇನೆ. ಸ್ವಿಮ್ಮಿಂಗ್‌, ಟ್ರೆಕ್ಕಿಂಗ್‌, ಮೌಂಟೇನ್‌ ಕ್ಲೈಂಬಿಂಗ್‌ಗೆ ಹೋಗುತ್ತೇನೆ. ಆಸಕ್ತಿ ಇರುವ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದರಿಂದಲೂ ಕ್ಯಾಲರಿ ಬರ್ನ್‌ ಆಗುತ್ತದೆ. ನಿತ್ಯವೂ ಏನಾದರೊಂದು ಚಟುವಟಿಕೆಯಲ್ಲಿ ದೇಹ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಅದೇ ನಿತ್ಯ ಚೈತನ್ಯ ಮತ್ತು ಉಲ್ಲಾಸದ ಬದುಕಿನ ಗುಟ್ಟು ಎನ್ನುತ್ತಾರೆ ಲಕ್ಷ್ಮಿ ರೈ.

ರೈ ಟಿಪ್ಸ್‌

-ದಿನಕ್ಕೆ ಕನಿಷ್ಠ 6ರಿಂದ 8 ಗಂಟೆ ಚೆನ್ನಾಗಿ ನಿದ್ದೆ ಮಾಡಬೇಕು.

- ಏನಾದರೂ ಒಂದು ಚಟುವಟಿಕೆಯಲ್ಲಿ ನಿರತವಾಗಿರಬೇಕು.

- ಎಣ್ಣೆ ಪದಾರ್ಥ, ಕರಿದ ಆಹಾರ ಕಡಿಮೆ ಮಾಡಬೇಕು, ಬಿಟ್ಟುಬಿಟ್ಟರೆ ಇನ್ನೂ ಒಳಿತು.

- ಎಲ್ಲವೂ ಕೃತಕವಾಗುತ್ತಿರುವ ಕಾಲದಲ್ಲಿ ಆರ್ಗ್ಯಾನಿಕ್‌ ಫುಡ್‌ಗೆ ಒತ್ತುಕೊಡಲೇಬೇಕು.

- ಸಿಕ್ಕಸಿಕ್ಕಿದ್ದೆಲ್ಲ ತಿನ್ನಬೇಡಿ, ಊಟ–ತಿಂಡಿ ಹಿತಮಿತವಾಗಿರಲಿ.

-ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಿ.

- ದಿನವೂ ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಎದ್ದೇಳಿ.

- ವಾಕಿಂಗ್‌, ಜಾಗಿಂಗ್‌, ಸ್ವಿಮ್ಮಿಂಗ್‌, ಯೋಗ, ವ್ಯಾಯಾಮ ಹೀಗೆ ಏನಾದರೂಂದು ದೈಹಿಕ ಕಸರತ್ತು ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.