ಸಾಧಾರಣವಾಗಿ ಇತ್ತೀಚೆಗೆ ಮಕ್ಕಳನ್ನು ಎಡಿಎಚ್‍ಡಿ ಅಂದರೆ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಅಂತ ಗುರುತಿಸುವುದು ಸರ್ವೇ ಸಾಮಾನ್ಯವಾಗಿದೆ. ಎಡಿಎಚ್‍ಡಿ ಅಂದರೆ ಏಕಾಗ್ರತೆಯ ಕೊರತೆ ಮತ್ತು ಅತಿಯಾದ ಚಟುವಟಿಕೆಯ ಅಸ್ವಸ್ಥತೆ ಎಂದರ್ಥ.
ನಾವು ಮೊದಲಿಗೆ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ, ‘ಯಾಕೆ ಕಳೆದ ಸುಮಾರು 10ರಿಂದ 15ವರ್ಷಗಳಲ್ಲಿ ನಾವು ಈ ಸಮಸ್ಯೆಯನ್ನು ಮಕ್ಕಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ?’ ಎನ್ನುವುದು.
ಇದಕ್ಕೆ ಉತ್ತರ ಬಹಳ ಸರಳ. ಮಕ್ಕಳಲ್ಲಿ ಎಳವೆಯಲ್ಲಿ ಬಹಳ ಉತ್ಸುಕತೆ ಇರುತ್ತದೆ. ಅವರಲ್ಲಿರುವ ದೈಹಿಕ ಶಕ್ತಿ ಮತ್ತು ಸಾಮರ್ಥ್ಯ ಅವರನ್ನು ದಿನವಿಡೀ ಪುಟಿಯುವ ಚೆಂಡಿನಂತಿಡುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಮನೆಯಿಂದ ಹೊರಗಡೆ ಆಟ ಆಡುವುದಕ್ಕೆ ಅವಕಾಶ ಸಿಗುತ್ತಿತ್ತು. ಆವಾಗ ಅಲ್ಲಿ ಓಡುವುದು, ಕುಣಿಯುವುದು, ಮರ ಹತ್ತುವುದು, ಇಳಿಯುವುದು ಹೀಗೆ ಅನೇಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡಿರುತ್ತಿದ್ದರು. ಮನೆಗೆ ಬಂದಾಗ ಸುಸ್ತಾಗಿರುತ್ತಿತ್ತು. ಹಾಗಾಗಿ ಬೇಗ ನಿದ್ದೆಗೂ ಜಾರಿ ಬಿಡುತ್ತಿದ್ದರು. ಆದರೆ, ಈಗ ಮಕ್ಕಳಿಗೆ ಹೊರಾಂಗಣ ಆಟದ ಅವಕಾಶಗಳು ಕಡಿಮೆ. ಹಾಗಾಗಿ ಅವರಲ್ಲಿರುವಂಥ ಶಕ್ತಿಯನ್ನು ವ್ಯಯಿಸುವುದಕ್ಕೆ ಇರುವ ಅವಕಾಶಗಳು ವಿರಳ. ಆದ್ದರಿಂದ ಅವರನ್ನು ಬೇರೆ ಬೇರೆ ಚಟುವಟಿಕೆಗಳನ್ನು ಮಾಡುವುದಕ್ಕೆ ಮನಸ್ಸು ಎಳೆಯುತ್ತಿರುತ್ತದೆ. ಹಾಗಾಗಿ ಒಂದೇ ವಿಷಯದ ಕಡೆಗೆ ಗಮನವಿಡುವುದು ಕಷ್ಟವಾಗಿ ಬಿಡುತ್ತದೆ. ಇದೇ ಕಾರಣದಿಂದಲೇ ಎಷ್ಟೋ ಬಾರಿ ಮಕ್ಕಳು ನಿದ್ದೆಗೆ ಜಾರುವುದಕ್ಕೂ ಕಷ್ಟಪಡುತ್ತಾರೆ.
ಅನೇಕ ಹೆತ್ತವರು ಇಂಥ ಪರಿಸ್ಥಿತಿಯಲ್ಲಿ ಅಸಹಾಯಕತೆಯನ್ನು ಅನುಭವಿಸುತ್ತಾರೆ. ಯಾಕೆಂದರೆ ಮಕ್ಕಳನ್ನು ಅಷ್ಟೊಂದು ವೈವಿಧ್ಯಮಯವಾದ ಚಟುವಟಿಕೆಗಳಲ್ಲಿ ತೊಡಗಿಸುವುದು ಸುಲಭದ ಮಾತಲ್ಲ. ಮತ್ತು ಅವರುಗಳು ತಮ್ಮ ಬಾಲ್ಯದಲ್ಲಿ ತಾವು ಹೀಗಿರಲಿಲ್ಲವಲ್ಲಾ ಅಂತ ಹೋಲಿಸಿಕೊಳ್ಳುತ್ತಾರೆ. ಆದರೆ ಅವರ ಬಾಲ್ಯದ ಅವಕಾಶಗಳಿಗೂ, ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನುವುದನ್ನು ಅವರು ಗಮನಿಸುವುದಿಲ್ಲ. ಹಾಗಾಗಿಯೇ ಸೈಕಾಲಜಿಸ್ಟ್ ಗಳ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಅನೇಕ ಸೈಕಾಲಜಿಸ್ಟ್ ಗಳು ಕೂಡಾ ಈ ಸಾಮಾಜಿಕ ಬದಲಾವಣೆಯನ್ನು ಗಮನಕ್ಕೆ ತೆಗೆದುಕೊಳ್ಳದೆ, ಕೇವಲ ಮಗುವಿನ ಲಕ್ಷಣಗಳನ್ನಷ್ಟೇ ಗಮನಿಸಿ ಅವರುಗಳನ್ನು ಎಡಿಎಚ್‍ಡಿ ಅಂತ ಲೇಬಲ್ ಮಾಡುತ್ತಾರೆ.
ಅದರ ಬದಲಿಗೆ ಒಂದು ವೇಳೆ ನಾವು ಮಕ್ಕಳಿಗೆ ದೈಹಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟದ್ದೇ ಆದಲ್ಲಿ, ಎಡಿಎಚ್‍ಡಿ ಸಮಸ್ಯೆಯನ್ನು ಸುಲಭವಾಗಿ ನೀಗಿಸಬಹುದು.
ಲೇಖಕರು: ಮನಃಶಾಸ್ತ್ರಜ್ಞ ಮತ್ತು ಸಂಸ್ಥಾಪಕ ಮನೋಸಂವಾದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.