ADVERTISEMENT

ಏನಾದ್ರು ಕೇಳ್ಬೋದು: ಹದಿಹರೆಯದ ಲೈಂಗಿಕ ಬಯಕೆ ಸಹಜ!

ನಡಹಳ್ಳಿ ವಂಸತ್‌
Published 29 ನವೆಂಬರ್ 2019, 19:30 IST
Last Updated 29 ನವೆಂಬರ್ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
  • ನಾನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ. ಎಷ್ಟೇ ಚೆನ್ನಾಗಿ ಪ್ರಯತ್ನಪಟ್ಟರೂ ಆಸಕ್ತಿಯಿಲ್ಲದೆ ಓದೋಕೆ ಆಗ್ತಿಲ್ಲ. ಕೆಲವೊಮ್ಮೆ ಪದವಿನೂ ಬೇಡ, ಏನೂ ಬೇಡ ಅನ್ನಿಸುತ್ತೆ. ಏನು ಮಾಡುವುದು ತೋಚುತ್ತಿಲ್ಲ.

- ಹೆಸರು, ಊರು ಇಲ್ಲ

ಪತ್ರದಲ್ಲಿ ಸಾಕಷ್ಟು ವಿವರಗಳಿಲ್ಲ ಮಗು. ಪತ್ರದ ತುಂಬಾ ಹತಾಶೆಯ ಧ್ವನಿಯಿದೆ. ಪದವಿ ಓದುವುದು ನಿಮ್ಮ ಮೂಲಭೂತ ಆಸಕ್ತಿಯಾಗಿರುವಂತಿಲ್ಲ. ಯಾರನ್ನೋ ಮೆಚ್ಚಿಸಲು, ಅವರ ಒತ್ತಾಯಕ್ಕೆ ಮಣಿದು ಅಥವಾ ಅವರನ್ನು ವಿರೋಧಿಸಲಾಗದ ಹಿಂಜರಿಕೆಯಿಂದ ನೀವು ಓದುತ್ತಿರಬಹುದೇ? ನಿಮ್ಮ ಆಸಕ್ತಿಗಳನ್ನು ಮತ್ತು ಅದನ್ನು ಸಾಧಿಸುವ ದಾರಿಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಕಷ್ಟಗಳನ್ನು, ಆಸಕ್ತಿಗಳನ್ನು ಕುಟುಂಬದವರೊಂದಿಗೆ ಹಂಚಿಕೊಂಡು ಬದಲಾವಣೆಗೆ ಪ್ರಯತ್ನಿಸಿ. ವಿರೋಧ, ಒತ್ತಾಯಗಳಿಗೆ ಹಿಂಜರಿದರೆ ನಿಮ್ಮ ಅಂತರಂಗದ ನೋವು ಹೆಚ್ಚುತ್ತಲೇ ಹೋಗಬಹುದು. ಆರಂಭದ ಹಾದಿಯು ಕಷ್ಟಕರವಾದದ್ದು. ಇದು ನಿಮ್ಮನ್ನು ಹಿಮ್ಮೆಟ್ಟಿಸಿದರೆ ಹತಾಶೆ ಮತ್ತೆ ಆವರಿಸಿಕೊಳ್ಳುತ್ತದೆ.

  • ಪಿಯು ವಿದ್ಯಾರ್ಥಿ, ವಯಸ್ಸು 17. ಮೊದಲು ಚೆನ್ನಾಗಿ ಓದುತ್ತಿದ್ದೆ. ಈಗ ನನಗೆ ಲೈಂಗಿಕ ಆಸೆ ಸೇರಿ ಕೆಟ್ಟ ದುಶ್ಚಟಕ್ಕೆ ಒಳಪಟ್ಟಿದ್ದೇನೆ. ಯಾವಾಗಲೂ ಕಾಮದ ಯೋಚನೆಯೇ ಬರುತ್ತದೆ. ಸರಿಯಾಗಿ ಓದೋಕೆ ಆಗ್ತಿಲ್ಲ. ಏನು ಮಾಡುವುದು ತಿಳಿಯುತ್ತಿಲ್ಲ. ನಾನು ಚೆನ್ನಾಗಿ ಓದಬೇಕು. ನನಗೆ 25 ವರ್ಷಗಳವರೆಗೆ ಲೈಂಗಿಕತೆ ಅಂದರೆ ಗೊತ್ತಿರಬಾರದು, ಸಂಪೂರ್ಣ ಹೊರಹೋಗಬೇಕು. ಅಂತಹ ಮಾತ್ರೆಗಳು, ಅಹಾರ ಪದ್ಧತಿಯಿದ್ದರೆ ತಿಳಿಸಿಕೊಡಿ.

- ಹೆಸರು, ಊರು ಇಲ್ಲ

ADVERTISEMENT

ಕಷ್ಟಗಳನ್ನು ಪ್ರಾಮಾಣಿಕವಾಗಿ ಹೇಳಿಕೊಳ್ಳುವ ನಿಮ್ಮ ಧೈರ್ಯಕ್ಕೆ ಶಹಭಾಸ್‌ ಎನ್ನುತ್ತೇನೆ. ಲೈಂಗಿಕತೆಯ ಬಗೆಗೆ ನಿಮ್ಮೊಳಗೆ ಹಲವಾರು ತಪ್ಪು ಮಾಹಿತಿಗಳಿವೆ ಎನ್ನುವುದು ಪತ್ರದ ಧ್ವನಿಯಿಂದ ಅರ್ಥವಾಗುತ್ತದೆ. ಕಾಮದ ಬಗೆಗೆ ಅಸಹನೆಯನ್ನು ಬೆಳೆಸಿಕೊಂಡಿದ್ದೀರಿ. ಲೈಂಗಿಕ ಆಸಕ್ತಿಯನ್ನು ತಡೆಯುವುದರಲ್ಲಿ ಸೋಲುತ್ತಾ, ಅದನ್ನು ದ್ವೇಷಿಸುತ್ತಾ ಮಾನಸಿಕ ಹೋರಾಟದಲ್ಲಿರುವಾಗ ಓದುವುದು ಹೇಗೆ ಸಾಧ್ಯ?
ಪ್ರಕೃತಿಯ ದೃಷ್ಟಿಯಿಂದ ನೀವು ಲೈಂಗಿಕಕ್ರಿಯೆಗೆ ಸಿದ್ಧರಾಗಿದ್ದರೂ ಸಾಮಾಜಿಕ ಸಂದರ್ಭಗಳಿಂದಾಗಿ ಅದನ್ನು ಮುಂದೂಡುವುದು ಅನಿವಾರ್ಯ. ಹದಿವಯಸ್ಸಿನ ಲೈಂಗಿಕ ಆಸಕ್ತಿ ಸಹಜವಾದದ್ದು. ಅದನ್ನು ಹತ್ತಿಕ್ಕಲು ಮಾತ್ರೆಗಳಿಲ್ಲ ಅಥವಾ ಹಿಡಿತದಲ್ಲಿಡಲು ಮೆದುಳಿನಲ್ಲಿ ಸ್ವಿಚ್‌ ಇಲ್ಲ. ಆಸಕ್ತಿಯನ್ನು ಸಹಜವೆಂದು ಒಪ್ಪಿಕೊಂಡು ತಾತ್ಕಾಲಿಕವಾಗಿ ಹಸ್ತಮೈಥುನದ ಮೂಲಕ ತೃಪ್ತಿ ಪಡೆಯುವುದು ಸಂಪೂರ್ಣ ಆರೋಗ್ಯಕರವಾದ ಪ್ರವೃತ್ತಿ. ಹಬ್ಬಕ್ಕೆ ಕಾಯ್ದಿಡುವ ಹೊಸಬಟ್ಟೆಯಂತೆ ಕಾಮವನ್ನು ಸೂಕ್ತ ಸಮಯದಲ್ಲಿ ನೀವು ಮೆಚ್ಚುವ ವ್ಯಕ್ತಿಯೊಡನೆ ಹಂಚಿಕೊಳ್ಳಲು ಕಾಯ್ದಿಟ್ಟುಕೊಳ್ಳಬೇಕಾದ ಅಮೂಲ್ಯವಾದ ಅನುಭವವೆಂದುಕೊಳ್ಳಿ.

ದ್ವೇಷಿಸಿದಷ್ಟೂ ಕಾಮ ನಿಮ್ಮನ್ನು ಹೆಚ್ಚು ಆವರಿಸಿಕೊಳ್ಳುತ್ತದೆ. ಅದನ್ನು ಸಹಜವೆಂದು ಒಪ್ಪಿಕೊಂಡು ವಿದ್ಯಾಭ್ಯಾಸದ ಕಡೆ ಗಮನಕೊಡಿ. ನಿಧಾನವಾಗಿ ಏಕಾಗ್ರತೆ ಸಾಧಿಸುತ್ತೀರಿ.

  • ವಯಸ್ಸು 61, ಮೂವರು ಮಕ್ಕಳಿದ್ದಾರೆ. ವ್ಯಾಪಾರದಲ್ಲಿ ಒಮ್ಮೆ ನಷ್ಟವಾಗಿ ಮನೆಯವರು ಬೇಡವೆಂದರೂ ಮತ್ತೊಮ್ಮೆ ವ್ಯಾಪಾರ ಮಾಡಿ ಹಣ ಕಳೆದುಕೊಂಡೆ. ಇದೇ ಕಾರಣಕ್ಕಾಗಿ ಹೆಂಡತಿ ವೈಮನಸ್ಸಿನಿಂದ ನನ್ನ ಜೊತೆ ದೈಹಿಕ ಸಂಪರ್ಕವಿಟ್ಟುಕೊಳ್ಳದೆ ನಾಲ್ಕು ವರ್ಷಗಳಾದವು. ಎಷ್ಟೇ ತಿಳಿಹೇಳಿದರೂ ಬದಲಾವಣೆಯಾಗಿಲ್ಲ. ಆತ್ಮೀಯರಿಲ್ಲದೆ ಕೆಲವು ದಿನಗಳಿಂದ ನನ್ನೊಡನೆ ಕೆಲಸ ಮಾಡುವ ಮಹಿಳೆಯ ಬಗ್ಗೆ ಆಕರ್ಷಣೆಯಾಗಿದೆ. ಅವಳೂ ಆತ್ಮೀಯಳಾಗಿದ್ದು ನನ್ನ ಸಾಂಗತ್ಯ ಇಷ್ಟಪಡುತ್ತಾಳೆ. ಅವಳೊಡನೆ ಲೈಂಗಿಕ ಸಂಬಂಧ ಹೊಂದುವ ಬಯಕೆಯಾದರೂ ಅವಳು ಒಪ್ಪುತ್ತಾಳೋ ಇಲ್ಲವೋ ಗೊತ್ತಿಲ್ಲ. ತಪ್ಪು– ಸರಿಗಳ ದ್ವಂದ್ವದಲ್ಲಿದ್ದೇನೆ.

- ಹೆಸರು, ಊರು ಇಲ್ಲ

ನಿಮ್ಮ ಲೈಂಗಿಕ ಆಸಕ್ತಿ ಸಹಜವಾದದ್ದೇ. ಹೆಂಡತಿಯಿಂದ ಸಿಗದ ಅನ್ಯೋನ್ಯತೆ, ದೈಹಿಕ ತೃಪ್ತಿಗಳನ್ನು ಬೇರೆಯವರಿಂದ ಬಯಸುವುದರಲ್ಲಿರುವ ತೊಂದರೆಗಳಿಗೆ ನೀವು ಸಿದ್ಧರಾಗಿದ್ದೀರಾ ಎಂದು ಯೋಚಿಸಿ. ಆ ಮಹಿಳೆ ನಿಮ್ಮ ಬೇಡಿಕೆಯನ್ನು ತಿರಸ್ಕರಿಸಬಹುದು. ಹಾಗೊಮ್ಮೆ ಒಪ್ಪಿಕೊಂಡರೂ ನಿಮ್ಮ ಸಂಬಂಧವನ್ನು ಬಹಳ ದಿನ ಮುಚ್ಚಿಡಲಾಗುವುದಿಲ್ಲ. ಎಲ್ಲರಿಗೂ ತಿಳಿದಾಗ ಇಬ್ಬರೂ ಮುಜುಗರಕ್ಕೊಳಗಾಗಬಹುದು. ಅವಳ ಕೌಟುಂಬಿಕ ಜೀವನ ಹಾಳಾಗುವುದರ ಜೊತೆಗೆ ನಿಮ್ಮ ಕುಟುಂಬದ ವಾತಾವರಣ ಇನ್ನೂ ಹದಗೆಡಬಹುದು.

ವಯೋಸಹಜವಾಗಿ ನಿಮ್ಮ ಪತ್ನಿಗೆ ಲೈಂಗಿಕ ಬಯಕೆ ಕಡಿಮೆಯಾಗಿರಬಹುದು. ನೀವು ಹಿಂದೆ ಮಾಡಿದ ದುಡುಕಿನ ನಿರ್ಧಾರಗಳಿಗೆ ಅವರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯನ್ನು ಕೇಳಿ. ಹತ್ತಿಕ್ಕಲಾರದ ನಿಮ್ಮ ಲೈಂಗಿಕ ಬಯಕೆಗಳನ್ನು ಅವರಿಂದಲೇ ಪೂರೈಸಿಕೊಳ್ಳುವ ಬದ್ಧತೆಯನ್ನು ವ್ಯಕ್ತಪಡಿಸಿ. ಸ್ವಲ್ಪ ನಿಧಾನವಾಗಿಯಾದರೂ ಅವರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.