ADVERTISEMENT

ಔಷಧಿಯ ವ್ಯತಿರಿಕ್ತ ಪರಿಣಾಮ

ಡಾ.ಉಮಾಮಹೇಶ್ವರಿ ಎನ್.
Published 24 ಜನವರಿ 2020, 19:30 IST
Last Updated 24 ಜನವರಿ 2020, 19:30 IST
   

ಎಷ್ಟೇ ಸಂಶೋಧನೆಗಳನ್ನು ನಡೆಸಿದರೂ ಮಾರುಕಟ್ಟೆಗೆ ಬಂದ ಔಷಧಿಯ ಉಪಯೋಗದಿಂದ ಅನಿರೀಕ್ಷಿತ ಅಡ್ಡಪರಿಣಾಮಗಳು ಕೆಲವು ರೋಗಿಗಳಲ್ಲಿ ಕಂಡು ಬರುವ ಸಾಧ್ಯತೆಗಳಿವೆ. ಈ ವ್ಯತಿರಿಕ್ತ ಪರಿಣಾಮಗಳು ಕಡಿಮೆ ತೀವ್ರತೆಯಿಂದ ಹಿಡಿದು ಜೀವಕ್ಕೆ ಅಪಾಯವಾಗುವಂತಹ ತೀವ್ರತೆಯವರೆಗೆ ಇರಬಹುದು. ಈ ಅಡ್ಡ ಪರಿಣಾಮಗಳು ಉಂಟಾಗುವ ವಿಧಾನಗಳು ಹಾಗೂ ನಮೂನೆಗಳು ಪ್ರತಿ ಔಷಧಿಗೂ, ಪ್ರತಿರೋಗಿಗೂ ಅವರ ದೇಹ ಪ್ರಕೃತಿಗೆ ಅನುಗುಣವಾಗಿ ಭಿನ್ನವಾಗಿರುತ್ತವೆ. ಇದರ ಅರ್ಥ ಔಷಧಗಳೆಲ್ಲವೂ ಅಪಾಯಕಾರಿ, ತೆಗೆದುಕೊಳ್ಳಲೇಬಾರದು ಎಂದಲ್ಲ. ಇವುಗಳಲ್ಲಿ ಕೆಲವನ್ನಾದರೂ ಸೂಕ್ತ ಮುಂಜಾಗರೂಕತೆಗಳಿಂದ ತಡೆಗಟ್ಟಲು ಸಾಧ್ಯವಿದೆ.

ಔಷಧಿಗಳಿಂದಾಗುವ ವ್ಯತಿರಿಕ್ತ ಪರಿಣಾಮಗಳು

1. ಅಲರ್ಜಿ ಅಥವಾ ಡ್ರಗ್ ರಿಯಾಕ್ಷನ್

ADVERTISEMENT

2. ಹೆಚ್ಚು ಪ್ರಮಾಣದ ಔಷಧ ಸೇವನೆಯಿಂದಾಗುವ ತೊಂದರೆಗಳು

3. ಸೇವನೆಯಿಂದ ಉಂಟಾಗುವ ಸಾಮಾನ್ಯ ಅಡ್ಡ ಪರಿಣಾಮಗಳು.

ಅಲರ್ಜಿ

ಔಷಧಿಗಳನ್ನು ಸೇವಿಸಿದಾಗ ದೇಹದ ನಿರೋಧಕ ವ್ಯವಸ್ಥೆ ಪ್ರತಿಕೂಲವಾಗಿ ವರ್ತಿಸುವುದರಿಂದ ಉಂಟಾಗುವ ಸನ್ನಿವೇಶ. ಕೆಲವು ಚರ್ಮದ ಮೇಲಿನ ಕೆಂಪು ಬಣ್ಣದ ಗಂದೆ(ದಡಿಕೆ)ಗಳಿಂದ ಹಿಡಿದು, ತುರಿಕೆ, ಊತ, ಉಸಿರಾಟದ ತೊಂದರೆ, ಮೂಗು- ಕಣ್ಣುಗಳಲ್ಲಿ ನೀರು ಬರುವುದು, ವಾಂತಿ ಉಂಟಾಗಬಹುದು. ತೀವ್ರವಾದ ಅಲರ್ಜಿಯನ್ನು ಅನಾಫಿಲಾಕ್ಸಿಸ್ ಎನ್ನಲಾಗುತ್ತದೆ. ಇದರಲ್ಲಿ ಕ್ಷಿಪ್ರವಾಗಿ ತೊಡಗುವ ಉಸಿರಾಟದ ತೊಂದರೆ, ತೀವ್ರವಾದ ಹೃದಯಬಡಿತ, ರಕ್ತದೊತ್ತಡ ಕಡಿಮೆಯಾಗುವುದು, ವಾಂತಿ-ಭೇದಿ, ಅಪಸ್ಮಾರ, ಪ್ರಜ್ಞಾಹೀನತೆ ಹಾಗೂ ಮರಣ ಸಂಭವಿಸಬಹುದು. ಯಾವುದೇ ಔಷಧಿ, ಆಹಾರ, ಕೀಟಗಳ ಕಡಿತ, ರಾಸಾಯನಿಕಗಳಿಂದ ಈ ಪರಿಸ್ಥಿತಿ ಉಂಟಾಗಬಹುದು.

ಔಷಧಿಗಳಲ್ಲಿ ಪೆನ್ಸಿಲಿನ್ ಮತ್ತು ಸಂಬಂಧಿತ ಆ್ಯಂಟಿಬಯಾಟಿಕ್‌ಗಳು, ನೋವು ನಿವಾರಕ ಔಷಧಗಳು, ಕ್ಯಾನ್ಸರ್ ಔಷಧಗಳು ಸಾಮಾನ್ಯವಾಗಿ ಅಲರ್ಜಿಗೆ ಕಾರಣವಾಗಿರುತ್ತವೆ. ಸಲ್ಫಾ ಎಂಬ ಗುಂಪಿನ ಔಷಧಗಳೂ ತೀವ್ರವಾದ ಚರ್ಮದ ಅಲರ್ಜಿ ಉಂಟುಮಾಡಬಹುದು. ಇದನ್ನು ಸ್ಡೀವನ್ ಜಾನ್ಸನ್ ಸಿಂಡ್ರೋಮ್ ಎನ್ನುತ್ತಾರೆ. ಇಡೀ ಮೈ ಚರ್ಮವೇ ಅಲರ್ಜಿಯಿಂದಾಗಿ ಬೊಬ್ಬೆ(ಗುಳ್ಳೆ)ಗಳಿಂದ ತುಂಬಿ ಹೋಗಬಹುದು. ಈ ಪರಿಸ್ಥಿತಿಯಲ್ಲಿ ರೋಗಿಯ ಜೀವಕ್ಕೆ ಅಪಾಯವಾಗಬಹುದು. ಇದಲ್ಲದೆ ಮೂತ್ರಪಿಂಡಗಳ, ಯಕೃತ್ತಿನ, ಶ್ವಾಸಕೋಶಗಳ, ರಕ್ತಕಣಗಳ ವ್ಯತ್ಯಾಸಗಳೂ ಅಲರ್ಜಿ ಅಥವಾ ಇತರ ಕಾರಣಗಳಿಂದಾಗಿ ಔಷಧಿಗಳ ವ್ಯತಿರಿಕ್ತ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು.

ಪತ್ತೆ ಹಚ್ಚುವುದು ಹೇಗೆ?

ಹೆಚ್ಚಾಗಿ ಪರಿಣತ ವೈದ್ಯರು ರೋಗಿಯ ಮಾತುಗಳನ್ನು ಕೇಳಿ, ರೋಗಿಯ ದೈಹಿಕ ಸ್ಥಿತಿಯನ್ನು ಪರೀಕ್ಷಿಸಿ ಪತ್ತೆ ಮಾಡುತ್ತಾರೆ. ಯಾವ ಔಷಧಿ ತೆಗೆದುಕೊಂಡ ನಂತರ, ಎಷ್ಟು ಸಮಯದ ನಂತರ, ಏನೆಲ್ಲಾ ಲಕ್ಷಣಗಳು ಕಂಡು ಬಂದವೆಂದು ವಿವರವಾಗಿ ಸಂಬಂಧಿತ ವೈದ್ಯರಿಗೆ ತಿಳಿಸುವುದು ಅವಶ್ಯ. ಹಲವಾರು ಔಷಧಿಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಳ್ಳುವವರಲ್ಲಿ ಯಾವ ಔಷಧಿ ಕಾರಣವಾಗಿರಬಹುದೆಂದು ವಿಶ್ಲೇಷಿಸುವುದು ಅತೀ ಅವಶ್ಯ.

ಕೆಲವು ಚುಚ್ಚುಮದ್ದುಗಳನ್ನು ಕೊಡುವ ಮುಂಚೆ ಅಲರ್ಜಿ ಇದೆಯೋ ಎಂದು ತಿಳಿಯಲು ಸಣ್ಣ ಪ್ರಮಾಣದ ಔಷಧಿಯನ್ನು ಮುಂಗೈ ಚರ್ಮಕ್ಕೆ ಕೊಡುವುದು ಸೂಕ್ತ. ಇದಕ್ಕೆ ಟೆಸ್ಟ್ ಡೋಸ್ ಎನ್ನುತ್ತಾರೆ. ತುರಿಕೆ, ಕೆಂಪಗಿನ ಊತ ಕಂಡುಬಂದರೆ ಚುಚ್ಚುಮದ್ದನ್ನು ಕೊಡುವುದಿಲ್ಲ. ಯಾವುದೇ ಬದಲಾವಣೆಗಳು ಕಾಣದಿದ್ದರೆ ಪೂರ್ತಿ ಚುಚ್ಚುಮದ್ದಿನ ಪ್ರಮಾಣವನ್ನು ಕೊಡಬಹುದು. ಆದರೆ ಕೆಲವೊಮ್ಮೆ ಟೆಸ್ಟ್ ಡೋಸ್ ಕೊಟ್ಟಾಗ ಏನೂ ಕಾಣಿಸದೆ ಪೂರ್ತಿ ಔಷಧಕ್ಕೆ ಅಲರ್ಜಿ ಕಾಣಿಸುವ ಸಂಭವವೂ ಇದೆ.

ರಕ್ತ ಪರೀಕ್ಷೆಗಳು: ಅಲರ್ಜಿಯಂತೆ ಕಾಣುವ ಇತರ ರೋಗಗಳನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆಗಳ ಅವಶ್ಯಕತೆ ಬೀಳಬಹುದು. ಕೆಲವೇ ಔಷಧಿಗಳ ಅಲರ್ಜಿಗೋಸ್ಕರ ರಕ್ತ ಪರೀಕ್ಷೆಗಳು ಲಭ್ಯವಿವೆ.

ಚಿಕಿತ್ಸೆ

ಚಿಕಿತ್ಸೆಯಲ್ಲಿ ಎರಡು ಅಂಶಗಳನ್ನು ಪರಿಗಣಿಸಬೇಕು.

1. ಆಗಿರುವ ಅಲರ್ಜಿಯ ಚಿಕಿತ್ಸೆ: ಸಣ್ಣ ಪ್ರಮಾಣದ ತೊಂದರೆಗಳಿದ್ದಾಗ ಅಲರ್ಜಿಯ ಗುಳಿಗೆಗಳು
(ಆ್ಯಂಟಿಹಿಸ್ಟಮಿನಿಕ್ ಔಷಧಿಗಳು) ಶಮನ ಮಾಡುವುದರಲ್ಲಿ ಸಫಲವಾಗುತ್ತವೆ. ತೀವ್ರತೆ ಹೆಚ್ಚಿದ್ದಾಗ ಸ್ಟೀರಾಯ್ಡ್ ಗುಳಿಗೆಗಳು ಅಥವಾ ಚುಚ್ಚುಮದ್ದುಗಳ ಅವಶ್ಯಕತೆ ಬೀಳಬಹುದು. ಅತಿ ತೀವ್ರವಾದ ಅನಾಫಿಲಾಕ್ಸಿಸ್‌ನಲ್ಲಿ ರಕ್ತದೊತ್ತಡ ಇಳಿಮುಖವಾಗಿ ಉಸಿರಾಟದ ತೊಂದರೆ ಇದ್ದಾಗ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಸೇರಿಸಿ ರಕ್ತನಾಳದ ಮೂಲಕ ಕೊಡುವ ದ್ರಾವಣಗಳು, ಅಡ್ರಿನಾಲಿನ್ ಎಂಬ ಔಷಧಿಯ ಅವಶ್ಯಕತೆ ಬೀಳಬಹುದು. ಕೆಲವೊಮ್ಮೆ ಇದಕ್ಕೂ ಸಮಯವಿಲ್ಲದೆ ಕ್ಷಣಾರ್ಧದಲ್ಲಿ ಮರಣ ಸಂಭವಿಸುವ ಸಾಧ್ಯತೆಯೂ ಇದೆ.( ಇದು ಕೆಲವು ಆಹಾರದ ಅಲರ್ಜಿಯಲ್ಲಿ, ಜೇನುಹುಳ ಅಥವಾ ಇತರ ಕೀಟಗಳು ಕಚ್ಚಿದಾಗಲೂ ಸಂಭವಿಸಬಹುದು) ತೀವ್ರವಾದ ಸ್ಟೀವನ್ ಜಾನ್ಸನ್ ಸಿಂಡ್ರೋಮ್‌ನಲ್ಲಿ ಚರ್ಮದ ಆರೈಕೆ ಸುಟ್ಟಗಾಯಗಳ ಆರೈಕೆಯಷ್ಟೇ ಕ್ಲಿಷ್ಟಕರ.

2. ಅಲರ್ಜಿ ಮುಂದೆ ಮರುಕಳಿಸದಂತೆ ನೋಡುವುದು: ಯಾವುದೇ ಔಷಧಿಗೆ ಅಲರ್ಜಿ ಇದ್ದರೂ ಅದು ಮತ್ತು ಸಂಬಂಧಿತ ಗುಂಪಿನ ಇತರ ಔಷಧಿಗಳು ಪುನಃ ಅಲರ್ಜಿ ಉಂಟು ಮಾಡುತ್ತವೆ. ಪ್ರತಿ ಬಾರಿ ಔಷಧಿ ತೆಗೆದುಕೊಂಡಾಗಲೂ ಅಲರ್ಜಿಯ ತೀವ್ರತೆ ವೃದ್ಧಿಸುತ್ತಲೇ ಹೋಗುತ್ತದೆ. ಹೀಗಾಗಿ ಯಾವ ಔಷಧಿಗೆ ಅಲರ್ಜಿಯಾಯಿತೆಂದು ನೆನಪಿಟ್ಟುಕೊಂಡು, ವೈದ್ಯರು ಕೊಟ್ಟ ಚೀಟಿ ಅಥವಾ ಕಾರ್ಡ್‌ ಅನ್ನು ಜೊತೆಗೇ ಇಟ್ಟುಕೊಳ್ಳಬೇಕು. ಎಲ್ಲೇ ಯಾವ ತೊಂದರೆಗೋಸ್ಕರ ಹೋದರೂ ಇದನ್ನು ವೈದ್ಯರಿಗೆ ತಿಳಿಸಲೇಬೇಕು. ಅವಶ್ಯಕತೆ ಇಲ್ಲದೆ ಔಷಧಗಳನ್ನು, ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬಾರದು. ಅಲರ್ಜಿ ಇರುವ ಔಷಧಿ ರೋಗಿಯ ಚಿಕಿತ್ಸೆಗೆ ಅತಿ ಅವಶ್ಯವಿದ್ದರೆ ತಜ್ಞರ ಮಾರ್ಗದರ್ಶನದಲ್ಲಿ ಪ್ರತಿಕ್ರಿಯಾಶಮನ (ಡಿಸೆನ್ಸಿಟೈಸೇಶನ್) ಪ್ರಯತ್ನಿಸಬಹುದು. ಇದರಲ್ಲಿ ತೀವ್ರನಿಗಾದಲ್ಲಿ ಅಲರ್ಜಿಯುಂಟು ಮಾಡುವ ಔಷಧಿಯ ಅತಿ ಚಿಕ್ಕ ಪ್ರಮಾಣವನ್ನು ಕೊಟ್ಟು , 20–30 ನಿಮಿಷಗಳ ಅಂತರದಲ್ಲಿ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆ. ಪೂರ್ತಿ ಪ್ರಮಾಣ ಕೊಡುವವರೆಗೆ ಏನೂ ತೊಂದರೆಯಾಗದಿದ್ದರೆ ಪ್ರತಿಕ್ರಿಯಾಶಮನ ಸಫಲವಾಯಿತೆಂದು ಅರ್ಥ.

ಹೆಚ್ಚು ಪ್ರಮಾಣದ ಸೇವನೆ

ಆತ್ಮಹತ್ಯೆಯ ಪ್ರಯತ್ನದಲ್ಲಿ, ಮಕ್ಕಳು ಹುಡುಗಾಟದಿಂದ ದೊಡ್ಡವರ ಗುಳಿಗೆಗಳನ್ನು ನುಂಗಿದಾಗ, ವೃದ್ಧರು ಮರೆವಿನಿಂದಾಗಿಯೋ ಅಸಮರ್ಪಕ ದೃಷ್ಟಿಯಿಂದಾಗಿಯೋ ತಮ್ಮ ಔಷಧಿಗಳನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡಾಗ. ಸಂದರ್ಭಕ್ಕನುಗುಣವಾಗಿ ಇದನ್ನು ಗಮನಿಸಿ ಚಿಕಿತ್ಸೆ ನೀಡಬೇಕು.

ಸಾಮಾನ್ಯ ಅಡ್ಡ ಪರಿಣಾಮಗಳು

ಇವುಗಳು ಹಾನಿಕಾರಕವಲ್ಲದ ಕೆಲವು ಪರಿಣಾಮಗಳು. ಉದಾಹರಣೆಗೆ ಹೊಟ್ಟೆಯುಬ್ಬರ, ಹಸಿವೆ ಕಡಿಮೆಯಾಗುವುದು, ಮಲಬದ್ಧತೆ ಅಥವಾ ಭೇದಿ. ಇವುಗಳು ಸಣ್ಣ ಪ್ರಮಾಣದಲ್ಲಿದ್ದರೆ ಔಷಧಿಗಳನ್ನು ಮುಂದುವರಿಸಬಹುದು. ರೋಗಿಗೆ ತಾಳಿಕೊಳ್ಳಲು ಅಸಾಧ್ಯವಾದಾಗ

ಆಹಾರ ಮತ್ತು ಔಷಧಗಳು

ಹೆಚ್ಚಿನ ಔಷಧಗಳನ್ನು ಗುಳಿಗೆ/ ದ್ರವ ರೂಪದಲ್ಲಿ ಜೀರ್ಣಾಂಗವ್ಯೂಹದ ಮೂಲಕ ಕೊಡುವುದರಿಂದ ಆಹಾರ ಮತ್ತು ಔಷಧಗಳ ನಡುವಿನ ರಾಸಾಯನಿಕ ಕ್ರಿಯೆಗಳಿಂದಾಗಿ ಔಷಧಗಳ ಪರಿಣಾಮದಲ್ಲಿ ವ್ಯತ್ಯಾಸ ಉಂಟಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಆಹಾರದ ಜೊತೆಗೆ ಔಷಧಿ ಸೇರಿಕೊಂಡು ರಕ್ತಕ್ಕೆ ಸೇರುವ ಔಷಧಿಗಳ ಪ್ರಮಾಣ ಇಳಿಕೆಯಾಗಿ ನಿಗದಿತ ಪರಿಣಾಮ ನೀಡಲು ಅಶಕ್ತವಾಗಬಹುದು. ಉದಾ: ಕಬ್ಬಿಣ ಸತ್ವ, ಕ್ಯಾಲ್ಶಿಯಂ, ಕೆಲವು ಆ್ಯಂಟಿಬಯಾಟಿಕ್‌ಗಳು, ಕ್ಷಯರೋಗದ ಔಷಧಿಗಳು. ಇದರಿಂದಾಗಿ ಕೆಲವು ಔಷಧಿಗಳನ್ನು ಊಟಕ್ಕೆ ಒಂದು ಗಂಟೆಯ ಮೊದಲು ಅಥವಾ ಊಟವಾಗಿ ಎರಡು ಗಂಟೆಗಳ ನಂತರ ತೆಗೆದುಕೊಳ್ಳಲು ಹೇಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಔಷಧಗಳ ಕಾರ್ಯ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಉದಾಹರಣೆ: ಮೋಸಂಬಿ ಹಣ್ಣು ಮತ್ತು ಅದರ ರಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.