ADVERTISEMENT

ಆರೋಗ್ಯ: ಸೈನಸ್‌ ಆಗಲಿ ಮೈನಸ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
   

ಮಳೆಗಾಲ ಬಂತೆಂದರೆ ಆರೋಗ್ಯದಲ್ಲಿ ವ್ಯತ್ಯಯವಾಗುವುದು ಸಹಜ. ಅದರಲ್ಲಿಯೂ ನೆಗಡಿ, ಶೀತ ಬಹಳ ತೊಂದರೆ ಕೊಡುವ ಸಮಸ್ಯೆ. ಜತೆಗೆ ಬ್ಯಾಕ್ಟೀರಿಯಾ, ವೈರಾಣುಗಳ ಸೋಂಕು ಇದ್ದೇ ಇರುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಸೋಂಕು ಉಂಟಾಗಿ ತೊಂದರೆಯಾಗಬಹುದು. ಅದರಲ್ಲಿ ಸೈನಸ್‌ನಲ್ಲಿ ಉಂಟಾಗುವ ಸೋಂಕು ಕೂಡ ಒಂದು.

ಸೈನಸ್‌ ಸೋಂಕುಗಳು ಮೇಲ್ನೋಟಕ್ಕೆ ಗಣನೀಯ ಅನಿಸದೇ ಹೋದರೂ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ದೀರ್ಘಕಾಲ ತೊಂದರೆಯನ್ನು ತರುವಂಥ ಸಮಸ್ಯೆಯಾಗಿದೆ. ಎಂಟು ಭಾರತೀಯರಲ್ಲಿ ಒಬ್ಬರಿಗೆ ದೀರ್ಘಕಾಲದ ಸೈನುಟಿಸ್‌ ಸಮಸ್ಯೆ ಉಂಟಾಗಬಹುದು. ಇದನ್ನು ರೈನೋಸಿನುಸಿಟಿಸ್‌ ಎಂದು ಕರೆಯುತ್ತಾರೆ. ‌ 

‌ಮನುಷ್ಯನ ತಲೆಬುರುಡೆಯಲ್ಲಿ ನಾಲ್ಕು ಬಗೆಯ ಸೈನಸ್‌ ಕುಳಿಗಳಿವೆ. ಅವುಗಳ ನಡುವೆ ಸಣ್ಣ ಕಾಲುವೆಯಂಥ ಹಾದಿಯಿರುತ್ತದೆ. ಈ ಸೈನಸ್‌ಗಳಲ್ಲಿ ಉತ್ಪತ್ತಿಯಾಗುವ ತೆಳ್ಳಗಿನ, ನೀರಿನಂಶದ ಲೋಳೆಯು ಸಾಮಾನ್ಯವಾಗಿ ಮೂಗಿನೊಳಕ್ಕೆ ಮುಕ್ತವಾಗಿ ಹರಿಯುತ್ತದೆ. ಇವು ಸೂಕ್ಷ್ಮಜೀವಿಗಳು, ಅಲರ್ಜಿ ಹಾಗೂ ಸೋಂಕಿನಿಂದ ಮುಕ್ತವಾಗಿರುತ್ತದೆ. ಇದೇ ಕುಳಿಗಳಲ್ಲಿ ದಪ್ಪ ಲೋಳೆಯ, ಊರಿಯೂತವನ್ನು ತಂದೊಡ್ಡುವ ಬ್ಯಾಕ್ಟೀರಿಯಾ ಮತ್ತು ಅಲರ್ಜಿಯ ಪರಿಣಾಮ ದ್ರವ ಸಂಗ್ರಹಗೊಳ್ಳುತ್ತದೆ. ಇದು ಒತ್ತಡಕ್ಕೆ ಕಾರಣವಾಗುತ್ತದೆ.

ADVERTISEMENT

ತೊಂದರೆಯೇನು?

ಈ ಸೈನಸ್‌ ಸೋಂಕು, ನೆಗಡಿ ಅಲರ್ಜಿ, ಕೋವಿಡ್‌ ಸೋಂಕು ಮತ್ತು ಶೀತಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ತುಸು ಕಷ್ಟ. ಏಕೆಂದರೆ ಈ ಎಲ್ಲದರ ರೋಗಲಕ್ಷಣಗಳು ಒಂದೇ ತೆರನಾಗಿರುತ್ತವೆ. ಶೀತವು ಸಾಮಾನ್ಯವಾಗಿ ವಾರದವರೆಗೆ ಇರುತ್ತದೆ. ಆಮೇಲೆ ಕಡಿಮೆಯಾಗುತ್ತ ಹೋಗುತ್ತದೆ.

ಇನ್ನು ಸಾಮಾನ್ಯ ನೆಗಡಿಯಲ್ಲಿಯೂ ಮೂಗು ಸೋರುವಿಕೆ, ಕಣ್ಣು ಹಾಗೂ ಮೂಗು ತುರಿಕೆ, ಸೀನುವಿಕೆ ಇರುತ್ತದೆ. ಆದರೆ ಸೈನಸ್‌ನಲ್ಲಿ ಈ ಲಕ್ಷಣಗಳ ಜತೆಗೆ ಮುಖ ಊದಿದಂತೆ ಆಗುತ್ತದೆ. ಬಾವಿನಿಂದಾಗಿ ನೋವು ಉಂಟಾಗುತ್ತದೆ. ಸೈನಸ್‌ಗಳಲ್ಲಿರುವ ಸಣ್ಣ ಕೂದಲಿನಂಥ ರಚನೆಗಳು ಸೈನಸ್‌ ಕುಳಿಗಳಲ್ಲಿ ಲೋಳೆಯನ್ನು ಹೊರಹಾಕುತ್ತವೆ. ಸೂಕ್ಷ್ಮಜೀವಿಗಳು ಹಾಗೂ ಮಾಲಿನ್ಯಕಾರಕ ಅಂಶಗಳನ್ನು ತೆಗೆದುಹಾಕುತ್ತದೆ. ಶೀತ ಹಾಗೂ ವೈರಾಣು ಜ್ವರಗಳಿಂದ ಸೈನಸ್‌ ಕುಳಿಗಳಿಗೆ ಸೋಂಕು ತಗುಲಿದರೆ, ವೈರಾಣು ಸೈನುಟಿಸ್‌ ಸಂಭವಿಸುತ್ತದೆ. ಕೆಲವೊಮ್ಮೆ ಬ್ಯಾಕ್ಟೀರಿಯಾದ ಸೋಂಕುಗಳಿಂದಲೂ ಸೈನುಟಿಸ್‌ಗಳಿಗೆ ತೊಂದರೆಯಾಗಬಹುದು. ಇದನ್ನು ದೀರ್ಘಕಾಲದ ಮತ್ತು ಮರುಕಳಿಸುವ ಸೈನುಟಿಸ್‌ ಎನ್ನಲಾಗುತ್ತದೆ. ವೈರಾಣು, ಬ್ಯಾಕ್ಟೀರಿಯಾ, ಶಿಲೀಂಧ್ರಗಳ ಸೋಂಕಿನ ಆಧಾರದ ಮೇಲೆ ಸೈನಸೈಟಿಸ್‌ ಅನ್ನು ವರ್ಗೀಕರಿಸಬಹುದು. ಸೈನಸೈಟಿಸ್‌ನ ಪ್ರಮುಖ ಲಕ್ಷಣಗಳಲ್ಲಿ ಹಣೆ, ಮೂಗಿನ ಭಾಗದಲ್ಲಿ ಒತ್ತಡ, ನೋವು, ಬಣ್ಣ ಬಣ್ಣದ ಮೂಗು ಸೋರುವಿಕೆ (ಸಾಮಾನ್ಯವಾಗಿ ಹಳದಿ ಮತ್ತು ಹಸಿರು).ಆಘ್ರಾಣಶಕ್ತಿ ಕುಂದುವುದು, ಜ್ವರ, ತಲೆನೋವು, ಮೇಲಿನ ದವಡೆಯ ಭಾಗದಲ್ಲಿ ನೋವು ಮತ್ತು ಆಯಾಸ ಇರುತ್ತದೆ. ನಿಗದಿತ ಸಂದರ್ಭಗಳಲ್ಲಿ ಹಬೆ ತೆಗೆದುಕೊಳ್ಳುವುದು, ಮೂಗಿನ ಡ್ರಾಪ್ಸ್ ಬಳಸುವುದು, ಮುಖಕ್ಕೆ ಬೆಚ್ಚಗಿನ ನೀರು ಬಳಸುವುದರಿಂದ ಊತ ಕಡಿಮೆಯಾಗುತ್ತದೆ. ತಜ್ಞ ವೈದ್ಯರ ನೆರವಿನಿಂದ ಆ್ಯಂಟಿ ಆಲರ್ಜಿಕ್‌ ಔಷಧಿ ಬಳಸಬಹುದು.

ಯಾರಲ್ಲಿ ಹೆಚ್ಚು?

ರೋಗನಿರೋಧಕ ಶಕ್ತಿ ಕಡಿಮೆ ಹೊಂದಿರುವವರು ಪದೇ ಪದೇ ಶೀತ, ನೆಗಡಿ, ಕೆಮ್ಮಿನ ಸಮಸ್ಯೆಗೆ ತುತ್ತಾಗುತ್ತಾರೆ. ಅದರಲ್ಲಿಯೂ ಶಿಲೀಂಧ್ರ, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೈನಸ್‌ ಸೋಂಕು ಇಂಥವರಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ.

ಡಾ. ಹರ್ಷಲತಾ ಎಸ್‌. ಕಣ್ಣು, ಕಿವಿ, ಮೂಗುತಜ್ಞೆ, ರಾಮಕೃಷ್ಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.