ಮನುಷ್ಯ ತನ್ನನ್ನು ತಾನು ಈ ಬ್ರಹ್ಮಾಂಡದಲ್ಲಿಯೇ ಅತ್ಯಂತ ಬುದ್ಧಿಶಾಲಿ ಜೀವಿ ಎಂದು ಘೋಷಿಸಿಕೊಳ್ಳುವುದಕ್ಕೆ ಅವನ ವಿಕಸಿತ ನೆನಪಿನ ಶಕ್ತಿ ಒಂದು ಪ್ರಮುಖ ಕಾರಣ. ನೆನಪಿನ ಶಕ್ತಿ ವಯೋಸಹಜವಾಗಿ ಕುಂದುತ್ತದೆ. ಅರವತ್ತಕ್ಕೆ ಅರಳು ಮರಳು ಎಂಬ ನುಡಿಯನ್ನು ವಾನಪ್ರಸ್ಥಾಶ್ರಮದ ಸಮಯದಲ್ಲಿ ಬಳಸುವುದು ಸಾಮಾನ್ಯ.
ಆದರೆ, ವಯೋಸಹಜ ಕುಂದಿಗಿಂತ ವೇಗವಾಗಿ ಹಾಗೂ ವ್ಯಾಪಕವಾಗಿ ನೆನಪಿನ ಶಕ್ತಿಯು ಕೆಲವೊಮ್ಮೆ ಕಡಿಮೆಯಾಗುತ್ತದೆ. ಇದನ್ನೇ ಡೆಮೆನ್ಶಿಯ ಅಥವಾ ಮುಪ್ಪಿನ ಮರೆವಿನ ಕಾಯಿಲೆ ಎನ್ನುತ್ತೇವೆ.
ವಿಶ್ವದಲ್ಲಿ ಸುಮಾರು 5 ಕೋಟಿ ಜನ ಡೆಮೆನ್ಶಿಯದಿಂದ ಬಳಲುತ್ತಿದ್ದಾರೆ. ಪ್ರತಿ ಮೂರು ಸೆಕೆಂಡಿಗೆ ಒಬ್ಬರು ಡೆಮೆನ್ಶಿಯಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ , ಈ ಸಂಖ್ಯೆ ಸುಮಾರು 45– 50 ಲಕ್ಷ! ನಮ್ಮಲ್ಲಿ ಈ ಕಾಯಿಲೆಯ ಬಗ್ಗೆ ಅರಿವು ಅಷ್ಟೊಂದಿಲ್ಲದ ಕಾರಣ, ಅನೇಕರು ವೈದ್ಯಕೀಯ ಸಂಪರ್ಕಕ್ಕೆ ಬರುವುದಿಲ್ಲ. ಹೀಗಾಗಿ ಬಳಲುತ್ತಿರುವವರ ಸಂಖ್ಯೆ ವಾಸ್ತವದಲ್ಲಿ ಇನ್ನೂ ಹೆಚ್ಚಿರಬಹುದು.
ಡೆಮೆನ್ಶಿಯಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಅಲ್ಝೈಮರ್ಸ್ ಕಾಯಿಲೆ.
ಕಾರಣಗಳು
ಇಳಿವಯಸ್ಸು, ಅನುವಂಶೀಯತೆ, ಜೆನೆಟಿಕ್ ಅಂಶಗಳು ಮುಖ್ಯವಾದವು. ಜೊತೆಗೆ ತಲೆಗೆ ಬಲವಾದ ಪೆಟ್ಟು, ದುಃಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ - ಈ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
ಅಲ್ಝೈಮರ್ಸ್ ಕಾಯಿಲೆಯಲ್ಲಿ ಅಮೈಲಾಯ್ಡ್ ಹಾಗೂ ಟಾವು ಎಂಬ ರಾಸಾಯನಿಕಗಳು ಮೆದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಸಂಗ್ರಹಗೊಳ್ಳುತ್ತವೆ. ಇದರಿಂದ ನರಕೋಶಗಳು ಹಾಳಾಗುತ್ತವೆ. ಮೆದುಳಿನ ಗಾತ್ರ ಸಂಕುಚಿತಗೊಳ್ಳುತ್ತದೆ. ಅಸಿಟೈಲ್ ಕೊಲೀನ್ ಎಂಬ ನರವಾಹಕದ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ನೆನಪಿನ ಶಕ್ತಿ ಕುಂದಲಾರಂಭಿಸುತ್ತದೆ.
ರೋಗ ಲಕ್ಷಣಗಳು
ಮೊದಲ ಹಂತದಲ್ಲಿ ಮರೆವು ಶುರುವಾಗುತ್ತದೆ. ಇತ್ತೀಚಿನ ಚಟುವಟಿಕೆಗಳು, ಘಟನೆಗಳು ನೆನಪಿಗೆ ಬರುವುದಿಲ್ಲ. ಉದಾಹರಣೆಗೆ: ಬೆಳಗಿನ ಉಪಾಹಾರ ಸೇವಿಸಿದ್ದರೂ, ಪದೇ ಪದೇ ಬಂದು ಉಪಾಹಾರ ಕೇಳುವುದು. ದಿನನಿತ್ಯದ ವಸ್ತುಗಳನ್ನು ಇಟ್ಟ ಜಾಗವನ್ನು ಮರೆಯುವುದು, ಹುಡುಕಾಡುವುದು. ವಸ್ತುಗಳ ಹೆಸರೂ ಮರೆತು ಹೋಗಬಹುದು. ಹೊರಗೆ ಹೋದರೆ ಮರಳಿ ಮನೆಗೆ ಬರಲು ದಾರಿ ಗೊತ್ತಾಗದೇ ಇರಬಹುದು. ಸಂಕೀರ್ಣ ಚಟುವಟಿಕೆಗಳನ್ನು ನಿಭಾಯಿಸಲು ಆಗುವುದಿಲ್ಲ.
ಈ ಹಂತದಲ್ಲಿ, ಚಿಕ್ಕ ಪುಟ್ಟ ವಿಷಯಗಳು ನೆನಪಿಗೆ ಬರದಿದ್ದಾಗ, ವಸ್ತುಗಳು ಸಿಗದಿದ್ದಾಗ ಹತಾಶೆ, ಸಿಟ್ಟು ಬರುತ್ತದೆ. ಹೀಗೆ ಮುಂದುವರಿದರೆ, ಆತಂಕ, ಖಿನ್ನತೆಗಳು ಶುರುವಾಗುತ್ತವೆ.
ಮಧ್ಯದ ಹಂತದಲ್ಲಿ ಮರೆವು ಇನ್ನಷ್ಟು ಹೆಚ್ಚಿ ಜೀವನದ ವಿವಿಧ ಆಯಾಮಗಳನ್ನು ಆವರಿಸಿಕೊಳ್ಳುತ್ತದೆ. ಲೆಕ್ಕ, ವಸ್ತುಗಳ ಉಪಯೋಗ, ಮನೆಯಲ್ಲಿ ಕೋಣೆಯ ದಾರಿ ಇವೆಲ್ಲ ಮರೆತು ಹೋಗಬಹುದು. ಹತ್ತಿರದ ಸಂಬಂಧಿಗಳು, ಬಂಧುಮಿತ್ರರ ಹೆಸರುಗಳನ್ನು ಸ್ಮರಿಸಿಕೊಳ್ಳಲು ಆಗದಿರಬಹುದು. ದಿಕ್ಕು ತಪ್ಪಿ ಅಲೆದಾಡುವುದು, ಪದೇ ಪದೇ ಕೇಳಿದ್ದನ್ನೇ ಕೇಳುವುದು ಸಾಮಾನ್ಯವಾಗುತ್ತದೆ. ಮಾತು ಕಡಿಮೆಯಾಗಬಹುದು. ಭ್ರಾಂತಿ, ನಿದ್ರಾಹೀನತೆ, ಅಸಹಜವಾದ ಸಿಟ್ಟು, ಗೊಂದಲ ಉಂಟಾಗುತ್ತವೆ.
ಕೊನೆಯ ಹಂತದಲ್ಲಿ, ವ್ಯಕ್ತಿಯು ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತನಾಗುತ್ತಾನೆ. ಆಹಾರವನ್ನು ಜಗಿಯುವುದು, ದ್ರವ ಪದಾರ್ಥಗಳನ್ನು ನುಂಗುವುದನ್ನು ಹೇಳಬೇಕಾಗುತ್ತದೆ. ಮಲ-ಮೂತ್ರ ವಿಸರ್ಜನೆಯ ಮೇಲಿನ ನಿಯಂತ್ರಣ ಇರುವುದಿಲ್ಲ. ದಿನ-ರಾತ್ರಿಯ ಪ್ರಜ್ಞೆ ಇರುವುದಿಲ್ಲ. ಹಗಲು ಮಲಗುವುದು, ರಾತ್ರಿ ಎಚ್ಚರವಿರುತ್ತಾರೆ. ಭ್ರಮಾವಸ್ಥೆ ಹೆಚ್ಚುತ್ತದೆ.
ಚಿಕಿತ್ಸೆ
ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಕೆಲವು ಔಷಧಿಗಳು, ಥೆರಪಿ ಹಾಗೂ ಉತ್ತಮ ಆರೈಕೆಯಿಂದ ರೋಗ ಉಲ್ಬಣಗೊಳ್ಳುವ ಗತಿಯನ್ನು ನಿಧಾನಗೊಳಿಸಬಹುದು.
ಔಷಧಿಗಳ ಜೊತೆಗೆ, ರೆಮಿನಿಸೆನ್ಸ್ ಥೆರಪಿ (ಹಳೆಯ ಘಟನೆಗಳನ್ನು, ನೆನಪುಗಳನ್ನು ಸ್ಮರಿಸಲು ಕತೆ, ಚಿತ್ರದ ಸಹಾಯದಿಂದ ಕೈಗೊಳ್ಳುವ ಚಿಕಿತ್ಸೆ), ಬೌದ್ಧಿಕ ಪುನರ್ವಸತಿಗಳಿಂದ ವ್ಯಕ್ತಿಯ ರೋಗ ಲಕ್ಷಣಗಳು ಒಂದು ಮಟ್ಟಿಗೆ ಹತೋಟಿಯಲ್ಲಿರುತ್ತವೆ. ಜೊತೆಗೆ ಖಿನ್ನತೆ, ಆತಂಕ, ಭ್ರಮೆ, ನಿದ್ರಾಹೀನತೆಗೆ ಚಿಕಿತ್ಸೆ ನೀಡುವುದರಿಂದ ರೋಗಿಯ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ.
ಅಲ್ಝೈಮರ್ಸ್ ವ್ಯಕ್ತಿಗಳ ಆರೈಕೆ
ಈ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿಯೊಂದು ಚಟುವಟಿಕೆಗೂ ಇತರರನ್ನು ಅವಲಂಬಿಸಿರುತ್ತಾರೆ. ನೆನಪಿನ ಶಕ್ತಿ ಹಾಗೂ ಇತರ ಬೌದ್ಧಿಕ ಶಕ್ತಿಗಳು ಕಡಿಮೆಯಾಗುವುದರಿಂದ, ಇತರರ ಮೇಲಿನ ಅತಿಯಾದ ಅವಲಂಬನೆ ಹೆಚ್ಚಾಗಿ ವ್ಯಕ್ತಿಗೆ ಮುಜುಗರವಾಗುತ್ತದೆ. ಇದು ಮುಂದುವರಿದು ಹತಾಶೆ, ಖಿನ್ನತೆ, ತಾವು ಇತರರಿಗೆ ಭಾರ ಎಂಬ ಭಾವನೆ ಉಂಟಾಗುತ್ತದೆ. ಹೀಗಾಗಿ ಶಾಂತ ಹಾಗೂ ವಿಶ್ವಾಸಭರಿತ ಆರೈಕೆಯ ಅವಶ್ಯಕತೆಯಿರುತ್ತದೆ.
ಆರೈಕೆಗೆ ಸಲಹೆಗಳು
* ದಿನಚರಿಯನ್ನು ನಿಗದಿಪಡಿಸಿ. ಊಟ, ವ್ಯಾಯಾಮ, ಓದು ಇತ್ಯಾದಿ ಚಟುವಟಿಕೆಗಳಿಗೆ ಸಮಯ ನಿಗದಿಗೊಳಿಸಿ.
* ರೋಗಿಯ ಮರೆವನ್ನು ಅವಮಾನಿಸದಿರಿ. ಅವರ ಅಸಹಾಯಕತೆಗೆ ಕೋಪಗೊಳ್ಳಬೇಡಿ.
* ಅವರು ನೆನಪಿಸಿಕೊಳ್ಳಲು ಕಷ್ಟಪಡುತ್ತಿರುವಾಗ, ನೆನಪಿಸಿಕೊಳ್ಳುವಂತೆ ಸವಾಲು ಹಾಕಬೇಡಿ. ಬದಲಾಗಿ, ಅವರು ಕೇಳುವ ಮುನ್ನವೇ ಅವರಿಗೆ ಸಹಾಯ ಮಾಡಿ.
* ಮನೆಯ ವಾತಾವಾರಣ ಶಾಂತವಾಗಿರಲಿ. ಅನಾವಶ್ಯಕ ಶಬ್ದ, ಗದ್ದಲ ಬೇಡ.
* ಅವರಿಗೆ ಕೇಳುವ ಪ್ರಶ್ನೆಗಳು ಸರಳವಾಗಿರಲಿ. ಏನು ಕುಡಿಯುತ್ತೀರಿ? ಎನ್ನುವ ಬದಲು ಕಾಫಿ ಇಲ್ಲವೇ ಟೀ ಕುಡಿಯುವಿರಾ? ಎಂದು ಪ್ರಶ್ನಿಸಿ.
* ಮನೆಯಲ್ಲಿ ಕೋಣೆಗಳು, ದಿನಬಳಕೆಯ ವಸ್ತುಗಳ ಸ್ಥಳಗಳು ಮುಂತಾದವನ್ನು ಹೆಸರಿನಿಂದ ಗುರುತಿಸಿ.
* ಅವರನ್ನು ಒಬ್ಬರನ್ನೇ ಹೊರಹೋಗಲು ಬಿಡಬೇಡಿ. ಮನೆಯ ಬಾಗಿಲುಗಳು ಭದ್ರವಾಗಿರಲಿ.
* ಅಕ್ಕಪಕ್ಕದವರಿಗೆ ಅವರ ಪರಿಸ್ಥಿತಿಯ ಬಗ್ಗೆ ತಿಳಿಸಿ.
*ದೈಹಿಕ ಸ್ವಚ್ಛತೆ ಹಾಗೂ ಆಹಾರದ ಬಗ್ಗೆ ವಿಶೇಷ ಕಾಳಜಿಯಿರಲಿ.
* ಸುಲಭವಾಗಿ ಧರಿಸುವಂತಹ ಹಾಗೂ ಕಳಚುವಂತಹ ಬಟ್ಟೆಗಳನ್ನು ಹಾಕಿಸಿ.
* ಅವರ ಹೆಸರು, ವಿಳಾಸ, ತುರ್ತು ದೂರವಾಣಿ ಸಂಖ್ಯೆಗಳಿರುವ ಗುರುತಿನ ಚೀಟಿಯನ್ನು ಅವರ ಬ್ರೇಸ್‌ಲೆಟ್‌ನಲ್ಲೋ, ಜೇಬಲ್ಲೊ ಸದಾ ಇಟ್ಟಿರಿ.
ಭಾರತ ಸದ್ಯ, ಯುವ ರಾಷ್ಟ್ರವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯಾ ಚಕ್ರ ಮುನ್ನಡೆದು, ಇನ್ನು ಕೆಲವು ದಶಕಗಳಲ್ಲಿ ನಮ್ಮ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗಲಿದೆ. ಆಗ ಸಹಜವಾಗಿಯೇ ಡೆಮೆನ್ಶಿಯದಿಂದ ಬಳಲುವವರ ಸಂಖ್ಯೆ ವೃದ್ಧಿಸಲಿದೆ. ಹೀಗಾಗಿ, ಈ ಕಾಯಿಲೆಯ ಬಗ್ಗೆ ಜಾಗೃತಿಯಷ್ಟೇ ಅಲ್ಲದೇ, ಇದನ್ನು ನಿಭಾಯಿಸುವುದಕ್ಕೆ ಅಗತ್ಯವಿರುವ ಕೌಶಲ ಹಾಗೂ ಸಂಪನ್ಮೂಲಗಳ ಬಗೆಗಿನ ತಯಾರಿ ಈಗಿನಿಂದಲೇ ಆರಂಭವಾಗಬೇಕಿದೆ.
ಸ್ವಾರಸ್ಯಕರ ಸಂಗತಿಗಳು
* ಕೊಲಂಬಿಯಾದ ಯರುಮಲ್ ಎಂಬ ಪ್ರದೇಶ ಜಗತ್ತಿನಲ್ಲಿಯೇ ಅತಿ ಹೆಚ್ಚು ಅಲ್ಝೈಮರ್ಸ್ ರೋಗಿಗಳನ್ನು ಹೊಂದಿರುವ ಪ್ರದೇಶವೆಂದು ಕುಖ್ಯಾತಿ ಗಳಿಸಿದೆ. ಇದಕ್ಕೆ ಮನುಷ್ಯನ ಡಿಎನ್‌ಎಯಲ್ಲಿನ ಒಂದು ಜೀನ್‌ನ ರೂಪಾಂತರ ಕಾರಣ. ಜನಸಂಖ್ಯೆಯ ಶೇ 15ರಷ್ಟು , ಸುಮಾರು 5000 ಜನ ಅಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ.
* ಇತ್ತೀಚಿಗೆ, ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಡೆಮೆನ್ಶಿಯ ಗ್ರಾಮಗಳನ್ನು ಸ್ಥಾಪಿಸುತ್ತಿದ್ದಾರೆ. ಈ ವಸತಿ ಪ್ರದೇಶಗಳಲ್ಲಿ, ಮನೆಗಳು, ಅಂಗಡಿಗಳು, ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಡೆಮೆನ್ಶಿಯ ಇರುವ ವ್ಯಕ್ತಿಗಳು ಜೀವನ ನಡೆಸಲು ಪೂರಕವಾಗಿರುವಂತೆ ಕಟ್ಟಿರುತ್ತಾರೆ. ನೆದರ್ಲೆಂಡ್‌ನ ವೀಸ್ಪ್ ಹಾಗೂ ಫ್ರಾನ್ಸ್‌ನ ಡ್ಯಾಕ್ಸ್ ಎಂಬಲ್ಲಿ ಇಂತಹ ಹಳ್ಳಿಗಳಿವೆ.
* ಕನ್ನಡದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ಮರಾಠಿಯ ‘ಅಸ್ತು’, ಮಲಯಾಳಂನ ‘ತನ್ಮಾತ್ರ’ದಂತಹ ಚಲನಚಿತ್ರಗಳು ಈ ಕಾಯಿಲೆಯ ಬಗ್ಗೆ, ಬಳಲುವ ವ್ಯಕ್ತಿಯ ಸ್ಥಿತಿ ಹಾಗೂ ಆರೈಕೆ ಮಾಡುವವರ ಅನುಭವವನ್ನು ವಿವರಿಸುತ್ತವೆ.
(ಲೇಖಕರು ಹುಬ್ಬಳ್ಳಿಯಲ್ಲಿ ಮನೋವೈದ್ಯರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.