ಇತ್ತೀಚಿನ ದಿನಗಳಲ್ಲಿ ‘ಓವರ್ ಥಿಂಕಿಂಗ್’ ಎಂಬ ಪದವನ್ನು ನಾವು ಸರ್ವೇ ಸಾಮಾನ್ಯವಾಗಿ ಬಳಸುತ್ತೇವೆ. ‘ನೀನು ತುಂಬ ಓವರ್ ಥಿಂಕ್ ಮಾಡ್ತೀಯಾ.. ಅಷ್ಟು ಓವರ್ ಥಿಂಕ್ ಮಾಡೋ ಅವಶ್ಯಕತೆ ಇದೆಯ?’, ‘ನಿಂದಿದೇ ಗೋಳು, ಓವರ್ ಥಿಂಕ್ ಮಾಡಿ ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೊಗೊಳೋ ಲೆಕ್ಕ!’, ‘ಬರೀ ಓವರ್ ಥಿಂಕಿಂಗೇ ಆಯ್ತು, ಡಿಸಿಶನ್ ತೊಗೊಳೋದೇ ಇಲ್ಲ’... ಇಂತಹ ಮಾತುಗಳನ್ನು ದಿನನಿತ್ಯ ಕೇಳುತ್ತಿರುತ್ತೇವೆ.
ಹಾಗಾದರೆ, ಇಷ್ಟು ಕಾಮನ್ ಆಗಿ ಬಳಸುವ ಪದದ ಸೂಕ್ತವಾದ ಅರ್ಥವೇನು? ಓವರ್ ಥಿಂಕಿಂಗ್ ಅನ್ನು ಚಿಂತೆ ಅನ್ನಬಹುದು. ಚಿಂತೆಯೆಂದರೆ, ಒಂದು ವಿಷಯ ಅಥವಾ ವಸ್ತುವಿನ ಬಗ್ಗೆ ಅವಶ್ಯಕತೆಗಿಂತ ಹೆಚ್ಚಿಗೆ ವಿಶ್ಲೇಷಿಸುವುದು, ಯೋಚಿಸುವುದು. ಅದರ ಆಗುಹೋಗುಗಳ ಬಗ್ಗೆ, ಪರಿಣಾಮ–ಫಲಿತಾಂಶಗಳ ಬಗೆಗಿನ ಆಲೋಚನೆಗಳಲ್ಲಿಯೇ ನಿರಂತರವಾಗಿ ಮಗ್ನವಾಗಿರುವುದು.
ಒಂದಲ್ಲ ಒಂದು ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಓವರ್ ಥಿಂಕಿಂಗ್ ಮಾಡಿಯೇ ಮಾಡಿರುತ್ತೇವೆ. ಅದು ಕೌಟುಂಬಿಕ ಸಮಸ್ಯೆ, ಮನೆ, ಆಸ್ತಿ, ವಾಹನಖರೀದಿ, ಉದ್ಯೋಗದ ಬದಲಾವಣೆ – ಇಂತಹ ಮಹತ್ವದ, ನಮ್ಮ ಜೀವನದಿಕ್ಕನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಮಗ್ರ ಆಲೋಚನೆಯ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಓವರ್ ಥಿಂಕಿಂಗ್ ಅಥವಾ ಚಿಂತೆಯು ನಮ್ಮನ್ನು ದಣಿಸಿ ಆಲೋಚನೆಯ ಮಟ್ಟದಲ್ಲೇ ಗೊಂದಲಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿ, ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗದಂತೆ ಮಾಡುತ್ತದೆ. ಬರೀ ಯೋಚನೆಯಷ್ಟೆ, ಕೃತಿಯೇ ಇಲ್ಲವಾಗುತ್ತದೆ.
ಹಾಗಿದ್ದರೆ ಓವರಥಿಂಕಿಂಗ್‌ಗೆ ಕಾರಣಗಳೇನು?
ಚಿಂತನೆ (solution oriented thinking) ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಅತ್ಯಾವಶ್ಯಕ. ಕೆಲವರು ಪರಿಪೂರ್ಣತೆಯನ್ನು ಬಯಸುವ ವ್ಯಕ್ತಿತ್ವವನ್ನು ಹೊಂದಿರುವವರು, ಚಿಂತನೆಯ ಮುಖಾಂತರ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅದು ಕಾಲಕ್ರಮೇಣ ‘ಓವರ್ ಥಿಂಕಿಂಗ್’ ಅಥವಾ ಚಿಂತೆಯಾಗಿ ಮಾರ್ಪಡುತ್ತದೆ. ಇದರಿಂದ ಅತಿಯಾದ ಒತ್ತಡ, ಆತಂಕ, ಖಿನ್ನತೆಗಳೂ ಉಂಟಾಗಬಹುದು. ಆತಂಕ, ಹಿಂಜರಿಕೆಯ ಸ್ವಭಾವವಿದ್ದವರೂ ಸಹ ಯೋಚನೆಗಳ ಮಹಾಪೂರದಲ್ಲಿಯೇ ಮುಳುಗಿರಬಹುದು. ಓವರ್ ಥಿಂಕಿಂಗ್‍ನಿಂದ ಮನೋರೋಗಗಳು (ಖಿನ್ನತೆ, ಆತಂಕ) ಉಂಟಾಗುವವು ಅಥವಾ ಮನೋರೋಗಗಳಿಂದ ಓವರ್ ಥಿಂಕಿಂಗ್ ಮಾಡುತ್ತಾರೋ ಎನ್ನುವುದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬಂತೆ!
ಚಿಂತೆ ಹಾಗೂ ಚಿಂತನೆಗಳ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಚಿಂತೆಯಲ್ಲಿ ಗಮನವೆಲ್ಲ ಸಮಸ್ಯೆಯ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಅದೇ ಚಿಂತನೆಯು ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಮಾಡುವ ಜಾಗೃತ ಪ್ರಯತ್ನ.
ಚಿಂತೆಯ ಪರಿಣಾಮಗಳು
• ಮನಸ್ಸು ಸತತವಾದ ಚಿಂತೆಯಿಂದ ದಣಿಯುತ್ತದೆ. ಮಾನಸಿಕ ಸ್ಥಿತಿ ಕುಗ್ಗುತ್ತದೆ. ಅತಿಯಾದ ಒತ್ತಡದಿಂದ ನಿದ್ರಾಹೀನತೆ, ಖಿನ್ನತೆ–ಆತಂಕಗಳು ಉಂಟಾಗಬಹುದು.
• ಚಿಂತೆಯಲ್ಲಿರುವಾಗ ನಮ್ಮ ಹಳೆಯ ನೋವುಗಳು, ದುಃಖ-ದುಮ್ಮಾನ, ವಿಫಲತೆಗಳು ಮೇಲ್ಮೈಗೆ ಬಂದು ನೋವನ್ನು ಉಂಟುಮಾಡುತ್ತವೆ; ಸಮಸ್ಯೆಗಳನ್ನು ಇನ್ನಷ್ಟು ಜಟಿಲವನ್ನಾಗಿಸುತ್ತವೆ.
* ಚಿಂತೆಯಿಂದ ಉಂಟಾಗುವ ಮಾನಸಿಕ ಗೊಂದಲಗಳು ಕೀಳರಿಮೆಯನ್ನೂ ಉಂಟುಮಾಡಬಹುದು.
• ಚಿಂತೆಯ ಗೊಂದಲದಲ್ಲಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದೇ, ಅವಕಾಶಗಳಿಂದ ವಂಚಿತರಾಗಬಹುದು.
• ನಮ್ಮ ಸೃಜನಶೀಲತೆ, ಸಾಮರ್ಥ್ಯ, ನೆನಪಿನ ಶಕ್ತಿ, ತಾಳ್ಮೆಗಳು ಕುಂದುವುದು.
ನಿಯಂತ್ರಣ
1. ಸತತ ಆಲೋಚನೆಯಿಂದ ನಿಮ್ಮ ಮೆದುಳು ದಣಿದಿರುತ್ತದೆ. ಇದರಿಂದ ಪರಿಹಾರ ಕಂಡುಕೊಳ್ಳಬಲ್ಲ ನಮ್ಮ ಮೆದಳಿನ ಸಾಮರ್ಥ್ಯ ಕಡಿಮೆಯಾಗುತ್ತದೆ. ಹಾಗಾಗಿ, ಮೆದುಳಿಗೆ ಕೊಂಚ ವಿಶ್ರಾಂತಿ ನೀಡಿ. ಅದನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆಟ, ಓದು, ಸ್ನೇಹಿತರ ಜೊತೆ ಸಮಯ ಕಳೆಯುವುದು, ಪ್ರವಾಸ ಮೊದಲಾದ ಹವ್ಯಾಸಗಳನ್ನುರೂಢಿಸಿಕೊಳ್ಳಿ. ಮೆದುಳಿಗೆ ವಿಶ್ರಾಂತಿ ದೊರೆತರೆ, ಆಗ ಅದು ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಹೊಸ ದಾರಿಗಳನ್ನು ಕಂಡು ಹಿಡಿಯುತ್ತದೆ.
2. ಮೊದಲಿಗೆ ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಸಾಮರ್ಥ್ಯ, ಮಿತಿಗಳು ಹಾಗೂ ವ್ಯಕ್ತಿತ್ವದ ಬಗ್ಗೆ ಅರಿತುಕೊಳ್ಳಿ.
3. ಹಳೆಯ ಕೆಲವು ತಪ್ಪುಗಳ ಆಧಾರದ ಮೇಲೆ ನಿಮ್ಮನ್ನು ನೀವು ಯಾವಾಗಲೂ ದೂಷಿಸಿಕೊಳ್ಳಬೇಡಿ.
4. ನಕಾರಾತ್ಮಕ ಆಲೋಚನೆಗಳು ಕಾಡುತ್ತಿದ್ದರೆ, ಅವುಗಳಿಗೆ ಸವಾಲು ಹಾಕಿ. ನಿಖರ ಮಾಹಿತಿ, ತಥ್ಯಗಳು ಹಾಗೂ ತರ್ಕಗಳಿಂದ ಅಂಥ ಆಲೋಚನೆಗನ್ನು ಮಟ್ಟಹಾಕಬಹುದು.
5. ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸಿದರೆ ಆತಂಕ ಹೆಚ್ಚಾಗುವುದು ಸಹಜ. ಅದಕ್ಕೆ ‘ಟೇಕ್ ಒನ್ ಡೇ ಅಟ್ ಅ ಟೈಮ್’. ಇಂದು ಜೀವಿಸಿ, ನಾಳೆಯ ಚಿಂತೆಯಲ್ಲಿ ಇಂದಿನ ಖುಷಿಯನ್ನು ಕಳೆದುಕೊಳ್ಳಬೇಡಿ.
6. ಪರಿಸ್ಥಿತಿಯು ನಮ್ಮ ಹತೋಟಿಯಲ್ಲಿದ್ದು, ನಮ್ಮ ಕ್ರಿಯೆಗಳಿಂದ ಅದು ಬದಲಾಗುವ ಹಾಗಿದ್ದರೆ ಆಗ ತಕ್ಕ ಕ್ರಮಗಳನ್ನು ಕೈಗೊಳ್ಳಿ. ಹತೋಟಿಯಲ್ಲಿಲ್ಲದಿದ್ದರೆ ಚಿಂತಿಸಿ ಪ್ರಯೋಜನವೇನು?
ಆತಂಕ, ಆಲೋಚನೆಗಳು ಅತಿಯಾದರೆ, ದೈನಂದಿನ ಚಟುವಟಿಕೆಗಳು ದುಸ್ತರವಾದರೆ, ಕೂಡಲೇ ಮನೋವೈದ್ಯರನ್ನು ಭೆಟಿಯಾಗಿ ಸಮಾಲೋಚಿಸಿ.
‘ತಲ್ಲಣಿಸದಿರು ಕಂಡ್ಯ ತಾಳು ಮನವೇ ,
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.
ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೋ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಗಿರಲು
ಗಟ್ಟಾಗಿ ಸಲುಹುವನು ಇದಕೆ ಸಂಶಯವಿಲ್ಲ’ –ಎಂಬ ಕನಕದಾಸರ ಮಾತನ್ನು ಮರೆಯದಿರಿ. ಮೇಲೆ ಉಲ್ಲೇಖಿಸಿದ ಕೆಲವು ಸರಳ ಉಪಾಯಗಳನ್ನು ಮನನ ಮಾಡಿ, ಅನುಸರಿಸುತ್ತ, ದಿನನಿತ್ಯದ ಕಾಯಕದಲ್ಲಿ ಸಂತೋಷವಾಗಿ ತೊಡಗಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.