ADVERTISEMENT

ಆ್ಯಂಟಿಬಯೋಟಿಕ್‌ಗಳು ಮಾರಕ ಔಷಧಗಳಾಗುತ್ತಿವೆಯೆ?

ಕೆ.ಸಿ.ರಘು
Published 20 ಜುಲೈ 2018, 19:30 IST
Last Updated 20 ಜುಲೈ 2018, 19:30 IST
   

ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಲಸಿಕೆಗಳು ಮತ್ತು ಆ್ಯಂಟಿಬಯೋಟಿಕ್‍ಗಳು ರೋಗವನ್ನು ತಡೆಗಟ್ಟುವಲ್ಲಿ ಮತ್ತು ನಿವಾರಿಸುವಲ್ಲಿ ಅತ್ಯಂತ ಉಪಯುಕ್ತ ಸಾಧನಗಳಾದವು; ಆಧುನಿಕ ವಿಜ್ಞಾನದ ಹೆಗ್ಗಳಿಕೆಗೂ ಸಾಕ್ಷಿಯಾದವು.

ಲಸಿಕೆಗಳ ವಿಚಾರದಲ್ಲಿ ಅಲ್ಲಲ್ಲಿ ಅಪಸ್ವರಗಳು ಈಗ ಕೇಳಿಬರುವುದುಂಟು. ಇವುಗಳಲ್ಲಿ ಹೆಚ್ಚಿನವು ಹೋಮಿಯೋಪತಿ, ನಾಚುರೋಪತಿ ಇನ್ನಿತರ ಪರ್ಯಾಯ ವೈದ್ಯಕೀಯ ವ್ಯವಸ್ಥೆಯವರು ಎತ್ತುವ ಪ್ರಶ್ನೆಗಳಾಗಿವೆ. ಅವುಗಳಿಗೆ ಪರಿಪೂರ್ಣ ವೈಜ್ಞಾನಿಕ ಮಾಹಿತಿಯ ಕೊರತೆ ಇದೆ. ಹಾಗಾಗಿ ಅವು ಪ್ರಶ್ನಾತೀತವಲ್ಲ. ಆದರೆ ವೈದ್ಯಕೀಯ ಕಂಪನಿಗಳು ಎಲ್ಲ ಕಾಯಿಲೆಗಳಿಗೂ ಲಸಿಕೆ ಹಾಕಲು ಯತ್ನಿಸುವುದು ಸ್ವಲ್ಪ ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ. ವರ್ಷದಿಂದ ವರ್ಷಕ್ಕೆ ಲಸಿಕೆಯ ಪಟ್ಟಿ ಉದ್ದವಾಗುತ್ತಲೇ ಇದೆ. ಆದರೆ ಯಾವುದೇ ಕಾರಣಕ್ಕೂ ಲಸಿಕೆಗಳ ಬಗ್ಗೆ ಅಸಡ್ಡೆ ಧೋರಣೆ ತೋರುವಂತಿಲ್ಲ. ಇದು ವೈಯಕ್ತಿಕ ನಿರ್ಧಾರ ಅಥವಾ ಆಯ್ಕೆಯೆಂದು ಪರಿಗಣಿಸುವಂತಿಲ್ಲ. ಇದು ಸಮಾಜದ ಮತ್ತು ಸಮುದಾಯಗಳು ಒಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸುವ ಕಾರ್ಯವಾಗಿದೆ.

ಆದರೆ, ಆ್ಯಂಟಿಬಯೋಟಿಕ್‍ಗಳು ಬಗ್ಗೆ ಹೆಚ್ಚುಹೆಚ್ಚು ಅಪಸ್ವರ ಮತ್ತು ಅಪಖ್ಯಾತಿ ಕಂಡುಬರುತ್ತಿದೆ. ಈಗ ಆ್ಯಂಟಿಬಯೋಟಿಕ್‍ಗಳ ಬಗ್ಗೆ ಮೊದಲ ಮಾತು ‘ಐಸಿಯು ಪುಸ್ತಕ’ (The ICU book - Intensive Care Unit book) ಹೀಗೆ ಹೇಳುತ್ತದೆ: ’ಬಳಕೆ ಮಾಡದಿರಿ, ಮಾಡಿದಲ್ಲಿ ಹಲವನ್ನು ಮಾಡದಿರಿ. ರೋಗ ತಡೆಗಟ್ಟಲು ಮಾತ್ರ ಬಳಕೆ ಮಾಡದಿರುವುದೇ ಲೇಸು. ಬ್ಯಾಕ್ಟೀರಿಯಾಗಳ ಕಾಯಿಲೆಗಳೇ ಹೊರತು ವೈರಾಣುಗಳಿಗೆ ಬಳಸದೇ ಇರುವುದು’.

ADVERTISEMENT

ಇಂದು ಪ್ರಾಣಿಗಳ ಸಾಕಾಣಿಕೆಯಲ್ಲಿ ಶೇ 80ರಷ್ಟು ಔಷಧದ ಕಂಪನಿಗಳು ತಯಾರಿಸುವ ಆ್ಯಂಟಿಬಯೋಟಿಕ್‍ಗಳು ಬಳಕೆಯಾಗುತ್ತಿವೆ. ಇವುಗಳ ಮೂಲ ಉದ್ದೇಶ ತೂಕ ಹೆಚ್ಚಿಸುವುದಾಗಿದೆ. ಇವುಗಳಿಗೆ ಅಲ್ಲಿ ಬಳಸುವ ಹೆಸರೇ ‘ಗ್ರೋತ್ ಪ್ರಮೋಟರ್ಸ್’ ಎಂದು. ಈ ರೀತಿ ದುರ್ಬಳಕೆಯಿಂದ 2050ಕ್ಕೆ ಕ್ಯಾನ್ಸರ್‌ಗಿಂತಲೂಆ್ಯಂಟಿಬಯೋಟಿಕ್‍ಗಳಿಗೆ ಬಗ್ಗದ ಸೋಂಕುರೋಗಗಳಿಂದ ಹೆಚ್ಚು ಜನರು ಬಲಿಯಾಗುತ್ತಾರೆ – ಎಂದು ಹೆಸರಾಂತ ‘ಸಿಡಿಸಿ ಸಂಸ್ಥೆ’ ವರದಿ ಮಾಡಿದೆ. ಆಸಕ್ತಿ ಉಳ್ಳವರು ಅವರು ತಯಾರಿಸುವ ಆ್ಯಂಟಿಬಯೋಟಿಕ್‍ ರೆಸಿಸ್ಟೆನ್ಸ್ ಅಟ್ಲಸ್ ನೋಡಬಹುದು. ಈ ವರದಿಯ ಪ್ರಕಾರ ಪ್ರತಿ ವರ್ಷ ಸುಮಾರು ಒಂದು ಕೋಟಿ ಜನರು ಆ್ಯಂಟಿಬಯೋಟಿಕ್‍ಗಳಿಗೆ ಬಗ್ಗದ ರೋಗಾಣುಗಳಿಂದ ಕೊಲ್ಲಲ್ಪಡುತ್ತಾರೆ. ಇತ್ತ ಇವುಗಳ ದುರ್ಬಳಕೆ ಮಾಂಸ ತಯಾರಿಕೆಯಲ್ಲಿ ಮತ್ತು ಜನರು ತಾವಾಗಿಯೇ ಔಷಧ ಅಂಗಡಿಗಳಲ್ಲಿ ಕೊಂಡು ಆ್ಯಂಟಿಬಯೋಟಿಕ್‍ಗಳನ್ನು ಬಳಸುತ್ತಿರುವುದು ಕಾರಣವಾಗಿದೆ. ಇನ್ನೊಂದೆಡೆ ಯಾವುದೇ ದೈತ್ಯ ಔಷಧ ಕಂಪನಿಗಳು ಹೊಸ ಆ್ಯಂಟಿಬಯೋಟಿಕ್‍ಗಳ ಅನ್ವೇಷಣೆಯಲ್ಲಿ ತೊಡಗದಿರುವುದು ಅಥವಾ ಕೈಹಾಕದಿರುವುದು ಆಘಾತಕಾರಿಯೇ ಆಗಿದೆ.

ಸೋಂಕುರೋಗ ಬಡರಾಷ್ಟ್ರಗಳ ಕಾಯಿಲೆಯಾಗಿದ್ದು, ಹೆಚ್ಚು ವ್ಯಾಪಾರ ಕಂಡುಬರುವುದಿಲ್ಲ ಎನ್ನುವುದು ಇದಕ್ಕೆ ಮುಖ್ಯ ಕಾರಣ. ಇತ್ತೀಚೆಗೆ ಹೆಸರಾಂತ ನೊವಾರ್ಟೀಸ್ ಕಂಪನಿ ಕೂಡ ಹೊಸ ಆ್ಯಂಟಿಬಯೋಟಿಕ್‍ಗಳ ಅನ್ವೇಷಣೆಯಿಂದ ಹಿಂದೆ ಸರಿದಿದೆ. ಆಸ್ಟ್ರಾಜನಕ, ಸನ್ನಫಿ, ಅಲಗ್ಗನ್ ಅಂಡ್ ಮೆಡಿಸನ್ಸ್ ಕೋ ಹಾಗೂ ಗ್ಲಾಕ್ಸೋ ಸ್ಮಿತ್‍ಕ್ಲೈನ್ ಕೂಡ ಆ್ಯಂಟಿಬಯೋಟಿಕ್‍ ಅನ್ವೇಷಣೆಯಿಂದ ಹಿಂದೆ ಸರಿದಿವೆ. ಈಗ ರೋಗಾಣುಗಳು ಆ್ಯಂಟಿಬಯೋಟಿಕ್‍ಗಳ ವಿರುದ್ಧ ಸಮರದಲ್ಲಿ ಜಯ ಸಾಧಿಸುತ್ತ ಮುನ್ನುಗ್ಗುತ್ತಿದ್ದರೆ, ಇತ್ತ ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಆಯುಧಗಳಿಲ್ಲದೆ ಹಿಂದೆ ಸರಿಯುವಂತಾಗುತ್ತಿದೆ. ಈ ನಡುವೆ, ಅಮೆರಿಕದ ‘ಎಫ್‌ಡಿಎ’ ನಮ್ಮಲ್ಲಿ ಸೋಂಕು ನಿವಾರಣೆಗೆ ನಿತ್ಯ ಬಳಸುವ ಆ್ಯಂಟಿಬಯೋಟಿಕ್‍ಗಳಾದ ಸಿಪ್ರೋಪ್ಲೋಕ್ಸಾಸಿನ್, ಲೇವೋಪ್ಲೋಕ್ಸಾಸಿನ್, ಮಾಕ್ಸಿಪ್ಲೋಕ್ಸಾಸಿನ್, ಓಫ್ಲೋಪ್ಲೋಕ್ಸಾಸಿನ್, ಜೆಮ್ಮಿಪ್ಲೋಕ್ಸಾಸಿನ್ ಮತ್ತು ಡೇಲಾಪ್ಲೋಕ್ಸಾಸಿನ್‍ಗಳಿಂದ ಮಾನಸಿಕ ರೋಗ ಉಂಟಾಗುತ್ತದೆ ಎಂದು ವರದಿ ಮಾಡಿದೆ. ಅಲ್ಲದೆ, ಅವುಗಳ ಮೇಲೆ ಈ ಎಚ್ಚರಿಕೆಯ ಸೂಚನೆ ಹಾಕಬೇಕೆಂಬುದನ್ನು ಪರಿಗಣಿಸಿದೆ. ಈ ಆ್ಯಂಟಿಬಯೋಟಿಕ್‍ಗಳು ಯಾವುದೇ ಒಂದು ವಿಷಯದಲ್ಲಿ ಗಮನಹರಿಸದಂತೆ ಮಾಡುವಂತದ್ದು, ಜ್ಞಾಪಕಶಕ್ತಿಯನ್ನು ನಾಶ ಮಾಡುವಂತದ್ದು ಮತ್ತು ಭ್ರಾಂತಿಯುಂಟುಮಾಡಬಹುದು ಎನ್ನಲಾಗುತ್ತಿದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಏರುಪೇರು ಮಾಡುವುದು, ನಮ್ಮ ದೇಹಕ್ಕೆ ಬೇಕಾದ ಗ್ಲೂಕೋಸ್ ಪ್ರಮಾಣವನ್ನು ಕ್ಷೀಣಿಸಿ, ಕೋಮಾ ಅವಸ್ಥೆಗೂ ತಲುಪಿಸಬಹುದು ಎಂದು ವರದಿ ತಿಳಿಸುತ್ತದೆ.

ಆ್ಯಂಟಿಬಯೋಟಿಕ್‍ಗಳ ಉಪಯೋಗ ಅಲ್ಲಗಳೆಯುವಂತಿಲ್ಲ, ಆದರೆ ಅವುಗಳ ದುರುಪಯೋಗದಿಂದ ನಮ್ಮ ಕೈಯಾರೆ ಪ್ರಯೋಜನಕಾರಿ ಔಷಧಗಳನ್ನು ಮಾರಕ ವಸ್ತುಗಳನ್ನಾಗಿ ಮಾರ್ಪಡಿಸಿದ್ದೇವೆ.

–ರಘು ಕೆ.ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.