ADVERTISEMENT

ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು: ಅಪ್ಪಿ ಅಜ್ಜಿಯ ನಾಟಿ ಮದ್ದಿಗೆ ಕಾಯಿಲೆ ದೂರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 8:45 IST
Last Updated 22 ಅಕ್ಟೋಬರ್ 2019, 8:45 IST
ಮದ್ದು ತಯಾರಿಸುತ್ತಿರುವುದು.
ಮದ್ದು ತಯಾರಿಸುತ್ತಿರುವುದು.   

ಕೋಟಿ ವಿದ್ಯೆಗಿಂತ ನಾಟಿ ವಿದ್ಯೆ ಮೇಲು ಎಂಬ ಮಾತಿದೆ. ಗುಡ್ಡಗಳಲ್ಲಿ ಸಿಗುವ ಎಲೆ, ಬೇರು, ಕಾಯಿಗಳಿಂದ ತಾವೇ ಔಷಧ ತಯಾರಿಸಿ ಜನರಿಗೆ ನೀಡುವುದೇ ನಾಟಿ ವೈದ್ಯರ ವೃತ್ತಿ. ನಾಟಿ ಮದ್ದಿನಿಂದ ಆರೋಗ್ಯ ನಿಧಾನವಾಗಿ ಸುಧಾರಿಸಿದರೂ, ಇದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮವಿಲ್ಲ. ಇತ್ತೀಚಿಗೆ ನಾಟಿ ವೈದ್ಯರು ಮರೆಯಾಗುತ್ತಿದ್ದರೆ, ನಾಟಿ ಔಷಧದ ಉಪಯೋಗ ಕಡಿಮೆ ಆಗಿದೆ. ಅಲೋಪಥಿ ಮದ್ದಿನ ಮೋಹ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿಯೂ ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ನಾಟಿ ವೈದ್ಯೆ ಅಪ್ಪಿ ಅಜ್ಜಿ ನಾಟಿ ಔಷಧ ನೀಡುವ ಕಾಯಕ ಮುಂದುವರಿಸಿದ್ದಾರೆ.

ಅಪ್ಪಿ ಅಜ್ಜಿ 25 ವರ್ಷಗಳಿಂದ ಮದ್ದು ನೀಡುತ್ತಾರೆ. ಊರಿನ ಜನರಿಗೆ ಆರೋಗ್ಯ ಮಾರ್ಗ ಸೂಚಿಸಿದ್ದಾರೆ. ಪತಿ ರಾಮಣ್ಣ ಅವರು ವಿದ್ಯೆ ಕಲಿಸಿದ್ದಾರೆ. ಪತಿ ರಾಮಣ್ಣ ಅವರು ಉತ್ತಮ ನಾಟಿ ವೈದ್ಯರಾಗಿದ್ದರು. ಪತಿ ಬೇರೆಯವರಿಗೆ ನಾಟಿ ಔಷಧ ನೀಡುವುದನ್ನು ನೋಡಿ ಆಸಕ್ತಿಯಿಂದ ಕಲಿತು ವೃತ್ತಿ ಮುಂದುವರಿಸಿದ್ದಾರೆ.

75 ವರ್ಷ ಪ್ರಾಯದ ಅಪ್ಪಿ ಅಜ್ಜಿ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬಂದವರಿಗೆ ಧೈರ್ಯದ ಮಾತು ಹೇಳಿ ಕಾಯಿಲೆ ಕಡಿಮೆ ಮಾಡುವ ಪ್ರಭಾವ ಹೊಂದಿದ್ದಾರೆ. ರೋಗಿಗಳ ಸಮಸ್ಯೆಗೆ ತಕ್ಕಂತಹ ಔಷಧಿ ನೀಡುತ್ತಾರೆ. ಗರ್ಭ, ಮುಟ್ಟು, ವಾತ, ಸುಟ್ಟ ಗಾಯ, ಹಳದಿ ಕಾಮಾಲೆಸಮಸ್ಯೆಗೆ ಮದ್ದು ನೀಡುತ್ತಾರೆ. ಅಪ್ಪಿ ಅಜ್ಜಿ ನೀಡುವ ಔಷಧ ಹಲವಾರು ಜನರಿಗೆ ಉಪಯುಕ್ತವಾಗಿದೆ. ಹೀಗಾಗಿಯೇ ಅಪ್ಪಿ ಅಜ್ಜಿಯನ್ನು ಜನ ಹುಡುಕಿ ಬರುತ್ತಾರೆ.

ADVERTISEMENT

ಅಪ್ಪಿ ಅಜ್ಜಿ ಜನರಿಗೆ ನೀಡುವ ಮದ್ದಿಗಾಗಿ ಇಂತಿಷ್ಟೇ ಶುಲ್ಕ ಎಂದು ಎಂದಿಗೂ ಯಾರನ್ನೂ ಕೇಳಿಲ್ಲ. ಜನರು ಖುಷಿಯಿಂದ ನೀಡುವಷ್ಟು ತೆಗೆದುಕೊಳ್ಳುವ ಗುಣ ಅವರದು. ಊರ ಜನರು ಮೆಚ್ಚುವ ಅಪ್ಪಿ ಅಜ್ಜಿ ಬಳಿ ಪರ ಊರುಗಳ ಜನರು ಕೂಡಾ ಬಂದು ನಾಟಿ ಔಷಧ ತೆಗೆದುಕೊಂಡು ಹೋಗುತ್ತಾರೆ.

ಅಪ್ಪಿ ಅಜ್ಜಿ ಪ್ರತಿ ದಿನ ಗುಡ್ಡಗಳಿಗೆ ಹೋಗಿ ಎಲೆ, ಬೇರು, ತೊಗಟೆ ಸಂಗ್ರಹಿಸಿ, ಕೈಯಲ್ಲಿ ಜಜ್ಜಿ, ಎಣ್ಣೆ, ಔಷಧಿ ತಯಾರಿಸುತ್ತಾರೆ. 75 ವರ್ಷದಲ್ಲಿಯೂ ಪಾದರಸದಂತೆ ತುಡಿತ ಹೊಂದಿರುವ ಅಜ್ಜಿಯ ಜೀವನ ಪ್ರೀತಿ ಮೆಚ್ಚಲೇಬೇಕು.

ಅಪ್ಪಿ ಅವರಿಗೆ ಅನೇಕ ಸಂಘ ಸಂಸ್ಧೆಗಳು ನಾಟಿ ವೈದ್ಯೆ ಆಗಿ ಮಾಡುವ ಕಾಯಕಕ್ಕೆ ಸನ್ಮಾನಿಸಿವೆ. ಊರಿನ ಜನ ಅಲೋಪಥಿ ಔಷಧಿಗಳನ್ನು ಬಳಸುವುದು ಬಿಟ್ಟಿದ್ದಾರೆ. ಅಪ್ಪಿ ಅಜ್ಜಿ ಕೈಗುಣದಲ್ಲಿ ಮತ್ತು ಅವರು ನೀಡುವ ಔಷಧಿ ತುಂಬಾ ಪರಿಣಾಮಕಾರಿ ಆಗಿರುತ್ತದೆ ಎಂಬ ಭಾವನೆ ಔಷಧ ತೆಗೆದುಕೊಳ್ಳವ ಜನರಲ್ಲಿದೆ.

ನಾಟಿ ವೈದ್ಯೆ ಎಂದೇ ಮನೆ ಮಾತು

ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ನಾಟಿ ವೈದ್ಯೆ ಎಂದು ಮನೆ ಮಾತಾಗಿರುವ ಅಪ್ಪಿಅಜ್ಜಿ ಬರೊಬ್ಬರಿ 75 ರ ಪ್ರಾಯ. ಈ ವಯಸ್ಸಿನಲ್ಲಿಯೂ ಕುಂದದ ಉತ್ಸಾಹ, ಕಾಯಿಲೆ ಎಂದು ಮನೆ ಬಾಗಿಲಿಗೆ ಬರುವ ಮಂದಿಗೆ ಅಜ್ಜಿ ಪ್ರೀತಿಯಿಂದಲೇ ನಾಟಿ ಔಷಧಿ ನೀಡುತ್ತಾರೆ. ಪ್ರೀತಿಯಿಂದ ಕೊಡುವ ಹಣವನ್ನು ಮಾತ್ರ ಅಪ್ಪಿ ಅಜ್ಜಿ ಸ್ವೀಕಾರ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.