ಯಾವ ವಸ್ತುವಿನಿಂದ ಅಲರ್ಜಿ ಎಂದು ಗೊತ್ತಾದ ಮೇಲೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು; ಆಪ್ತರಿಗೆ ತಿಳಿಸಿರುವುದೂ ಮುಖ್ಯ.
ನಮ್ಮ ಶರೀರದಲ್ಲಿ ರೋಗಗಳನ್ನು ನಿಯಂತ್ರಿಸುವ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಆ್ಯಂಟಿಬಾಡಿ(ಪ್ರತಿರೋಧಕ)ಗಳ ಸಹಾಯದಿಂದ ಸೂಕ್ಷ್ಮಾಣುಜೀವಿಗಳಾದ ಬ್ಯಾಕ್ಟೀರಿಯಾ/ ವೈರಸ್‌ಗಳನ್ನೂ ನಾಶಮಾಡುತ್ತವೆ. ಆದರೆ ವ್ಯತಿರಿಕ್ತವಾಗಿ, ರೋಗನಿಯಂತ್ರಣ ವ್ಯವಸ್ಥೆಯಲ್ಲಿ ಶರೀರಕ್ಕೆ ತೊಂದರೆ ಕೊಡದ ವಸ್ತುಗಳನ್ನು ಅಪಾಯಕಾರಿ ಎಂದು ಭಾವಿಸಿ ಪ್ರತಿರೋಧ ವ್ಯಕ್ತಪಡಿಸಿದಾಗ ಪ್ರತಿರೋಧಕಗಳು ಉತ್ಪತ್ತಿಯಾಗಿ, ಪ್ರಚೋದಕಗಳನ್ನು ಅನಗತ್ಯವಾಗಿ ಸ್ರವಿಸುವಂತೆ ಮಾಡಿ, ದೇಹದ ಆರೋಗ್ಯದಲ್ಲಿ ವ್ಯತ್ಯಾಸ ತರುವುದನ್ನೇ ‘ಅಲರ್ಜಿ’ ಅನ್ನುತ್ತಾರೆ. ಸಾಮಾನ್ಯ ನೆಗಡಿ, ಚರ್ಮದ ತುರಿಕೆಯಿಂದ ಹಿಡಿದು, ಪ್ರಾಣಾಪಾಯವನ್ನು ತರುವಷ್ಟವರೆಗೂ ಈ ಅಲರ್ಜಿಗಳು ಸಮಸ್ಯೆಯನ್ನು ಉಂಟುಮಾಡಬಹುದು.
ಗಾಳಿಯಲ್ಲಿರುವ ದೂಳು, ಹೂವಿನ ಪರಾಗ, ವಾಸನೆ/ಪರಿಮಳ ಸೂಸುವ ರಾಸಾಯನಿಕಗಳು, ಪ್ರಾಣಿಗಳ ಕೂದಲು, ವಾತಾವರಣದಲ್ಲಿ ಉಷ್ಣತೆಯಲ್ಲಿ ಆಗುವ ವ್ಯತ್ಯಾಸ, ತಂಪುಗಾಳಿ, ಮುಂತಾದವು.
ಆಹಾರ: ಮೊಟ್ಟೆ, ಹಾಲು, ಕಡಲೆಕಾಯಿ, ಮರದ ಕಾಯಿಗಳು, (ಬಾದಾಮಿ, ಗೋಡಂಬಿ) ಮೀನು,ಸಿಗಡಿ, ಏಡಿ, ಗೋಧಿ
ಕೀಟಗಳು: ಉದಾಹರಣೆಗೆ, ಜೇನುನೊಣ ಕಡಿತ
ಔಷಧಗಳು: ಪೆನ್ಸಿಲಿನ್, ಬ್ರೂಫೆನ್ , ಡಿಕ್ಲೋಫೆ ನಾಕ್ (ನೋವುನಿವಾರಕ ಗುಳಿಗೆಗಳು), ಆ್ಯಂಟಿಬಯೋಟಿಕ್‌ಗಳು
ಲಾಟೆಕ್ಸ್, ಚರ್ಮದ ವಸ್ತುಗಳು, ಮುಂತಾದವು.
ಕಣ್ಣು ಉರಿಯುವುದು, ತುರಿಸುವುದು, ಕೆಂಪಾಗುವುದು, ನೀರು ಸುರಿಯುವುದು, ಊದಿಕೊಳ್ಳುವುದು, ಕಣ್ಣರೆಪ್ಪೆಗಳು ಊದಿಕೊಳ್ಳುವುದು.
ಮೂಗಿನ ಹೊಳ್ಳೆಗಳಲ್ಲಿ ಕಿರಿಕಿರಿ , ಸೀನುವುದು, ಮೂಗು ಕಟ್ಟುವುದು, ನೀರು ಸುರಿಯುವುದು.
ಶ್ವಾಸಕೋಶದಲ್ಲಿ, ಶ್ವಾಸನಾಳಗಳು ಸಂಕುಚಿತಗೊಂಡು ಉಸಿರಾಡಲು ಕಷ್ಟವಾಗುವುದು, ಉಬ್ಬಸ, ಆಸ್ತಮಾ ತೊಂದರೆ.
ಬಾಯಿಯಲ್ಲಿ ಸ್ಪರ್ಶಜ್ಞಾನ ಇಲ್ಲವಾಗುವುದು , ಬಾಯಿಯ ಒಳಪದರ, ತುಟಿ ದಪ್ಪವಾಗುವುದು ನಾಲಗೆ ದಪ್ಪವಾಗುವುದು, ಗಂಟಲಿನ ಒಳಭಾಗ ಊದಿಕೊಂಡು ಎಂಜಲು ನುಂಗಲು ಕಷ್ಟವಾಗಬಹುದು.
ಚರ್ಮದಲ್ಲಿ ತುರಿಕೆ, ಕೆಂಪು ಕೆಂಪಾದ ಕಲೆಗಳು ಕಾಣಿಸಿಕೊಳ್ಳುವುದು, ಒಂದೆರಡು ದದ್ದೆಗಳು(ದಡಿಕೆ) ಕಾಣಿಸಿಕೊಂಡು, ಕೆಲವು ನಿಮಿಷಗಳಲ್ಲಿ ದೇಹವನ್ನೆಲ್ಲ ವ್ಯಾಪಿಸುವುದು; ಅಂಗೈಯಲ್ಲಿ ಊತ, ಬೆರಳುಗಳು ದಪ್ಪಗಾಗುವುದು, ಮುಖದಲ್ಲಿಯೂ ಊತ.
ತಲೆ ತಿರುಗುವುದು, ತಲೆನೋವು , ವಾಕರಿಕೆ, ವಾಂತಿ, ಹೃದಯಬಡಿತ ಹೆಚ್ಚಾಗುವುದು, ಪ್ರಜ್ಞೆ ತಪ್ಪಿ ಬೀಳುವುದು; ರಕ್ತದೊತ್ತಡ ಕಡಿಮೆಯಾಗುವುದು; ಹೃದಯಬಡಿತ ನಿಲ್ಲಲೂಬಹುದು.
ಅಲರ್ಜಿಯನ್ನು ಉಂಟುಮಾಡುವ ವಸ್ತುವಿಗೆ ‘ಅಲರ್ಜನ್’ ಎಂದು ಕರೆಯಬಹುದು. ಇದು ದೇಹವನ್ನು ಪ್ರವೇಶಿಸಿದಾಗ, ಅದನ್ನು ವಿಷ ಅಥವಾ ಪರಕೀಯ ಎಂದು ಭಾವಿಸಿ, ಅದಕ್ಕೆ ಬಿಳಿಯ ರಕ್ತಕಣಗಳು ದೇಹದಲ್ಲಿ ಪ್ರತಿಕ್ರಿಯಿಸುವ ರೀತಿಯಿಂದ ಅಲರ್ಜಿಯಲ್ಲಿ ನಾಲ್ಕು ವಿಧಾನಗಳೆಂದು ವಿಭಾಗಿಸಬಹುದು.
ಅಲರ್ಜಿಯ ಸಮಸ್ಯೆಗೆ ಒಳಾಗದ ಮೇಲೆಯೇ ಯಾವ ವಸ್ತು, ಔಷಧ, ಆಹಾರ ತನ್ನ ದೇಹಕ್ಕೆ ಒಗ್ಗುವುದಿಲ್ಲ ಎಂದು ಗೊತ್ತಾಗುವುದು. ಸಾಮಾನ್ಯವಾಗಿ ನಮಗೆ ಒಂದು ವಸ್ತುವಿಗೆ ಅಲರ್ಜಿ ಇದೆ ಎಂದಾದಲ್ಲಿ, ಅಲರ್ಜಿಯ ಸಮಸ್ಯೆಗಳು ಬೇರೆ ಬೇರೆ ವಸ್ತುಗಳಿಗೂ ಇರುವ ಸಾಧ್ಯತೆ ಹೆಚ್ಚು.
ಯಾವ ವಸ್ತುವಿನಿಂದ ಅಲರ್ಜಿ ಎಂದು ಗೊತ್ತಾದಮೇಲೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು; ಆಪ್ತರಿಗೆ ತಿಳಿಸಿರುವುದೂ ಮುಖ್ಯ. ಉದಾಹರಣೆಗೆ, ಒಂದು ಆಹಾರ ತನಗೆ ಅಲರ್ಜಿ ಎಂದಾಗ ಅದನ್ನು ಮತ್ತೆ ಉಪಯೋಗಿಸದೆ ಇರುವುದು ಉತ್ತಮ. ಔಷಧಸೇವನೆಯಿಂದ ಅಲರ್ಜಿ ಉಂಟಾದಾಗ ಅದನ್ನು ಬರೆದಿಟ್ಟುಕೊಂಡು, ಅಥವಾ ಆ ಔಷಧವನ್ನು ವೈದ್ಯರಿಗೆ ತೋರಿಸಿ ಹೇಳುವುದೂ ಒಳ್ಳೆಯದು.
ನಮಗೆ ಯಾವುದಕ್ಕೆ ಅಲರ್ಜಿ ಎಂದು ಗೊತ್ತಾಗದೆ ಇದ್ದಾಗ, ‘ಪ್ಯಾಚ್ ಟೆಸ್ಟ್’ ಮಾಡಿಸಬಹುದು. ಬೇರೆ ಬೇರೆ ಪ್ರತಿಜನಕಗಳನ್ನು (ಹೂ ದೂಳಿನ ಕಣ, ಹುಲ್ಲು, ಕೀಟದ ಪ್ರೊಟೀನ್, ಬಟಾಣಿಯ ತಿರುಳು) ಚರ್ಮದ ಕೆಳಗೆ ಚುಚ್ಚಿ ಪ್ರತಿಕ್ರಿಯೆಯನ್ನು ಗಮನಿಸಿ, ಅಲರ್ಜಿಯ ಸಾಧ್ಯತೆಯನ್ನು ಕಂಡುಹಿಡಿಯುತ್ತಾರೆ. ದೇಹಭಾಗದಲ್ಲಿ ಸಣ್ಣದಾಗಿ ಕೆಂಪಾಗುವಿಕೆಯಿಂದ ಹಿಡಿದು ಊತದ ಗುಳ್ಳೆಯಾಗುವ ಸಾಧ್ಯತೆಗಳು ಇವೆ. ರಕ್ತಪರೀಕ್ಷೆಯಲ್ಲಿ ಹೆಚ್ಚಿದ ಬಿಳಿರಕ್ತ ಕಣಗಳು, ‘ಇಯೋಸಿನೊಫೈಲ್ಸ್’ ಹೆಚ್ಚು ಇರುವುದನ್ನು ಗುರುತಿಸಬಹುದು. IgE ಮಟ್ಟವನ್ನೂ ಗುರುತಿಸಲಾಗುತ್ತದೆ.
ಸಾಮಾನ್ಯ ಅಲರ್ಜಿಗಳಿಗೆ ಸಂದರ್ಭದಲ್ಲಿ ತೀವ್ರತೆಯನ್ನು ಗಮನಿಸಿ ‘ಆ್ಯಂಟಿ ಈಸ್ಟಮಿನ್’ ಮಾತ್ರೆಗಳು ಮತ್ತು ಚುಚ್ಚುಮದ್ದುಗಳ ಮೂಲಕ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಸ್ಟಿರಾಯ್ಡ್‌ಗಳ ಬಳಕೆಯು ಅನೇಕ ಸಲ ರೋಗಿಗಳ ಜೀವವನ್ನು ಉಳಿಸುವಲ್ಲಿ ಕೆಲಸ ಮಾಡಿದೆ ಎನ್ನುವುದು ಸತ್ಯ. ಮೂಗಿನ ಅಲರ್ಜಿ ಮತ್ತು ಅಸ್ತಮಾದಂತಹ ಕಾಯಿಲೆಗಳಿಗೆ ಸ್ಟಿರಾಯ್ಡ್ ಅನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ‘ಇನ್‌ಹೇಲರ್’ಗಳ ಮೂಲಕ ಬಳಸಬಹುದು. ಪ್ರತಿರೋಧವನ್ನು ಕಡಿಮೆ ಮಾಡುವಂತಹ ಮಾತ್ರೆಗಳನ್ನು ಬಳಸಬಹುದು (ಮೌಂಟೆಲೋ ಕಾಸ್ಟ್). ತೀವ್ರ ಪ್ರಮಾಣದಲ್ಲಿ ಅಲರ್ಜಿ ಉಂಟಾದಾಗ ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ.
ಯಾವ ವಸ್ತುವಿನಿಂದ ಅಲರ್ಜಿ ಎಂದು ತಿಳಿದುಕೊಂಡು ಆ ವಸ್ತುವಿನಿಂದ ದೂರವಿರುವುದು.
ಅಲರ್ಜಿ ಉಂಟುಮಾಡುವ ಆಹಾರವನ್ನು ಸೇವಿಸದಿರುವುದು.
ಪ್ರಾಣಿಗಳಿಂದ ಅಲರ್ಜಿಯಾದರೆ ಅವುಗಳಿಂದ ದೂರವಿರುವುದು.
ಜೀವನಶೈಲಿಯಲ್ಲಿ ಬದಲಾವಣೆ.
ಶೀತದ ಅಲರ್ಜಿ ಇರುವವರು ತಂಪು ವಾತಾವರಣವನ್ನು ಪ್ರವೇಶಿಸುವಾಗ ಬೆಚ್ಚಗಿನ ಉಡುಗೆಯನ್ನು ಧರಿಸಬೇಕು.
ಸಿಟ್ರಸ್ ಹಣ್ಣು, ವಿಟಮಿನ್ ಸಿ ಭರಿತ ಆಹಾರ, ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಇರುವ ಆಹಾರದ ಸೇವನೆ.
ಇಮ್ಯೂನೋಥೆರಪಿ ಮೂಲಕ ದೊಡ್ಡ ಪ್ರಮಾಣದ ಅಲರ್ಜಿಯನ್ನು ನಿಯಂತ್ರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.