ADVERTISEMENT

ಆರೋಗ್ಯ: ಕೃತಕ ಸ್ತನ, ವರದಾನ

ಪ್ರಜಾವಾಣಿ ವಿಶೇಷ
Published 14 ಜೂನ್ 2024, 23:30 IST
Last Updated 14 ಜೂನ್ 2024, 23:30 IST
   

ಸ್ತನ ಎಂದರೆ ಅದು ಹೆಣ್ತನ. ಈ ಹೆಣ್ತನದೊಂದಿಗೆ ಸಮೀಕರಿಸಲ್ಪಟ್ಟಿದೆ ಸ್ತನ ಎಂಬ ಅಂಗ. ಈ ಅಂಗವೇ ಇಲ್ಲ ಎಂದರೆ ಮಹಿಳೆಯ ಮಾನಸಿಕ ಕ್ಷಮತೆ ಕುಗ್ಗದೇ ಇರದು, ಸ್ತನ ಕ್ಯಾನ್ಸರ್‌ಗೆ ಬಲಿಯಾದ ಮಹಿಳೆ ಸ್ತನವನ್ನೇ ಸರ್ಜರಿ ಮಾಡಿಸಿಕೊಳ್ಳಬೇಕಾದ ಪ್ರಮೇಯ ಒದಗಿ ಬರುತ್ತದೆ. ಇಂಥ ಸಂದರ್ಭದಲ್ಲಿ ಖಾಲಿ ಖಾಲಿ ಎದೆಯನ್ನು ಹೊತ್ತ ಮಹಿಳೆಗೆ ಹೊರಗೆ ಹೋಗಲೂ ಮುಜುಗರ, ದೈಹಿಕ ಯಾತನೆ ಜೊತೆಗೆ ಮಾನಸಿಕ ತುಮುಲ. ಈ ಕೊರತೆಯನ್ನು ನಿವಾರಿಸಲೆಂದೇ ಇದೀಗ ‘ಕೃತಕ ಸ್ತನ‘ (ಪ್ರೋಸ್ತೆಸಿಸ್‌ ಬ್ರೆಸ್ಟ್‌) ಬಂದಿದೆ. ಸರ್ಜರಿ ಮಾಡಿಸಿಕೊಂಡ ಮಹಿಳೆಯರಿಗೆ ವರದಾನ.

‘ಸ್ತನ ಪ್ರೋಸ್ಥೆಸಿಸ್’ ರೋಗಿಯ ಮಾನಸಿಕ ಕ್ಷಮತೆ ಹೆಚ್ಚಿಸಲು ಕಾರಣವಾಗುವುದಲ್ಲದೆ, ದೈಹಿಕ ಸದೃಢತೆಯನ್ನೂ ಕಾಪಾಡುತ್ತದೆ. ದೇಹದ ದೀರ್ಘಕಾಲದ ಅಸಮತೋಲನದಿಂದ ಉಂಟಾಗುವ ಬೆನ್ನುಮೂಳೆಯ ವಕ್ರತೆಯನ್ನು (ಸ್ಕೋಲಿಯೊಸಿಸ್) ಕೂಡ ಕೃತಕ ಸ್ತನ ತಡೆಯುತ್ತದೆ ಎನ್ನುತ್ತದೆ ವೈದ್ಯಕೀಯ ಅಧ್ಯಯನ.

ಕ್ಯಾನ್ಸರ್‌ ಮಟ್ಟಿಗೆ ದೇಶದಲ್ಲಿ ಅತ್ಯಂತ ಹೆಚ್ಚು ಮಹಿಳೆಯರು ಬಳಲುತ್ತಿರುವುದು ಇದೇ ಕ್ಯಾನ್ಸರ್‌ನಿಂದ. ವಿಶ್ವಸಂಸ್ಥೆಯ ಮಾಹಿತಿಯಂತೆ ಕಳೆದ ಐದು ವರ್ಷಗಳಲ್ಲಿ ಜಾಗತಿಕವಾಗಿ 7.8 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಅಪಾಯವೂ ಇದೆ.

ADVERTISEMENT

ಸ್ತನ ಕ್ಯಾನ್ಸರ್‌ನಿಂದ ಬಳಲಿ ಸರ್ಜರಿಗೊಳಗಾದ ಮಹಿಳೆಯರು ಸ್ತನ ನಷ್ಟದ ಬಗ್ಗೆ ಮಾನಸಿಕ ಹಾಗೂ ಭಾವನಾತ್ಮಕವಾಗಿ ಕುಗ್ಗಬಹುದು. ತಮ್ಮ ದೇಹದ ಸೌಂದರ್ಯ, ಮಾನಸಿಕ ಯೋಗ-ಕ್ಷೇಮ ಮತ್ತು ಹೆಣ್ತನವನ್ನು ಮರಳಿ ಪಡೆಯಲು ‘ಸ್ತನ ಪ್ರೋಸ್ಥೆಸಿಸ್’ ಸಹಾಯ ಮಾಡುತ್ತದೆ. ‘ಸ್ತನ ಪ್ರೋಸ್ಥೆಸಿಸ್’ನಿಂದ ರೋಗಿಯ ಬಾಹ್ಯ ಸೌಂದರ್ಯ ಸುಧಾರಿಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ. ಈಗ ಸಿಲಿಕಾನ್ ಪ್ರೋಸ್ಥೆಸಿಸ್, ವುಲನ್ ಪ್ರೋಸ್ತೆಸಿಸ್‌ ಸೇರಿದಂತೆ ಅನೇಕ ಬಗೆಯ ಕೃತಕ ಸ್ತನಗಳು ಮಾರುಕಟ್ಟೆಗೆ ಬಂದಿವೆ. ಸ್ತನದ ಆಕಾರ ಹೋಲುವಂತೆ ತೆಳುವಾದ ಫಿಲ್ಮ್‌ನಲ್ಲಿ ಸುತ್ತುವರಿದ ಮೃದುವಾದ ಸಿಲಿಕಾನ್ ಜೆಲ್‌ನಿಂದ ಇದನ್ನು ತಯಾರಿಸಲಾಗುತ್ತದೆ. ಇದು ಧರಿಸಿಕೊಳ್ಳಲು ಆರಾಮದಾಯಕ. ಪ್ರೋಸ್ಥೆಟಿಕ್‌ ಬ್ರಾ ಬೆಂಗಳೂರಿನ ಕಿದ್ವಾಯ್‌ ಗಂಥಿ ಆಸ್ಪತ್ರೆಯಲ್ಲಿ ಸಿಗುತ್ತದೆ. ಹುಬ್ಬಳ್ಳಿಯ ನವನಗರದಲ್ಲಿರುವ ಕ್ಯಾನ್ಸರ್‌ ಆಸ್ಪತ್ರೆಯಲ್ಲೂ ಲಭ್ಯ. ಜಾಕಿ ಎಂಬ ಕಂಪನಿ ‘ಮ್ಯಾಸ್ಟೆಕ್ಟಮಿ ಬ್ರಾ’ ತಯಾರಿಸಿ ವರ್ಷಕ್ಕೆ ಒಮ್ಮೆ ಉಚಿತವಾಗಿ ನೀಡುತ್ತದೆ.

ಎರಡೂ ಸ್ತನ ಸರ್ಜರಿ; ಬ್ರೆಸ್ಟ್‌ ಪ್ರೋಸ್ಥೆಸಿಸ್‌ ಒಂದೇ ದಾರಿ ‘ಆನುವಂಶೀಯವಾಗಿ ಬಂದ ಸ್ತನ ಕ್ಯಾನ್ಸರ್‌ನಿಂದಾಗಿ ನಾನು ಎರಡೂ ಸ್ತನಗಳನ್ನು ಸರ್ಜರಿ ಮಾಡಿಸಿ ಕೊಳ್ಳಬೇಕಾಯಿತು. ಈಗ ಸಂಪೂರ್ಣವಾಗಿ ಗುಣಮುಖಳಾದರೂ ಮಹಿಳೆಯರ ‘ಐಡೆಂಟಿಟಿ’ ಎನಿಸಿದ ಸ್ತನಗಳು ಇಲ್ಲ ಎಂದು ಮುಜುಗರವಾಗುತ್ತದೆ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಎರಡೂ ಸ್ತನಗಳಿಗೆ ‘ಪ್ರೋಸ್ಥೆಟಿಕ್‌ ಬ್ರಾ’ ಬಳಸುತ್ತಿದ್ದೀನಿ. ಇದರಿಂದ ಮನಸ್ಸಿಗೆ ಎಷ್ಟೋ ಸಮಾಧಾನ ಸಿಕ್ಕಿದೆ’ ಎನ್ನುತ್ತಾರೆ ಪ್ರೋಸ್ಥೆಟಿಕ್‌ ಸ್ತನ ಹೊಂದಿರುವ ಹೋಮಿಯೋಪತಿ ವೈದ್ಯೆಯೂ ಆಗಿರುವ ಬೆಂಗಳೂರಿನ ಡಾ. ಗಿರಿಜಾ ನಾಡಗೌಡರ್.

‘ನನಗೆ ಕ್ಯಾನ್ಸರ್ ಬಂದಿರುವುದು ಒಂದು ಕೆಟ್ಟ ಗಳಿಗೆ. ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಎರಡೂ ಸ್ತನಗಳನ್ನು ತೆಗೆಸಿಕೊಂಡೆ. ಒಂದು ಸ್ತನ ಸರ್ಜರಿ ಆಗಿ 12 ವರ್ಷಗಳ ಬಳಿಕ ಮತ್ತೊಂದು ಸ್ತನಕ್ಕೂ ಕ್ಯಾನ್ಸರ್‌ ಬಂದು ಸರ್ಜರಿ ಅನಿವಾರ್ಯವಾಯಿತು. ಕ್ಯಾನ್ಸರ್‌ ಬಂದಾಗ ಮೊದಲು ಸ್ತನದ ಗಾತ್ರ, ಬಣ್ಣ, ಆಕಾರದಲ್ಲಿ ವ್ಯತ್ಯಾಸವಾಯಿತು. ಮೊಲೆತೊಟ್ಟು ಒಳಮುಖವಾಗಿ ಮಡಿಚಿಕೊಂಡು ಕೀವು, ರಕ್ತ ಸೋರುವುದಕ್ಕೆ ಶುರು ಆಯ್ತು. ಈ ಬದಲಾವಣೆ ಗಮನಿಸಿ ವೈದ್ಯರ ಬಳಿ ಹೋದೆ. ಅಸಹಜವಾಗಿ ಉತ್ಪತ್ತಿಯಾಗುವ ಜೀವಕೋಶ ಕ್ಯಾನ್ಸರ್‌ ಆಗಿ ಬದಲಾಗಿರುವ ಅಂಶ ಬೆಳಕಿಗೆ ಬಂತು. ಬಯಾಪ್ಸಿ, ಅಲ್ಟ್ರಾಸೌಂಡ್‌, ಮ್ಯಾಮೊಗ್ರಫಿ, ಎಂಆರ್‌ಐ ಮಾಡಿಸಿಕೊಂಡ ಬಳಿಕ ಕ್ಯಾನ್ಸರ್‌ ಚಿಕಿತ್ಸೆ ಆರಂಭವಾಗಿ ಸರ್ಜರಿಯಲ್ಲಿ ಕೊನೆಗೊಂಡಿತು’ ಎಂದು ನೋವಿನ ದಿನಗಳನ್ನು ಬೇಸರದಿಂದಲೇ ಹಂಚಿಕೊಳ್ಳುತ್ತಾರೆ ಡಾ. ಗಿರಿಜಾ.

ಸ್ತನ ಕ್ಯಾನ್ಸರ್ ಬಂದ ಮಹಿಳೆಯರು ಅಂಜಬೇಕಿಲ್ಲ. ಸರ್ಜರಿ ಆದ ಮಹಿಳೆಯರಿಗಾಗಿಯೇ ಬಂದಿರುವ’ ಸ್ತನ ಪ್ರೋಸ್ಥೆಸಿಸ್‘ ಧರಿಸಬಹುದಾದ ಕೃತಕ ಸ್ತನವಾಗಿದ್ದು, ಮಹಿಳೆಯರಿಗೆ ವರದಾನವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.