‘ಶರಪಂಜರ’ ಸಿನಿಮಾದ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೆ ಚುಂಬಕ ಗಾಳಿಯು ಬೀಸುತ್ತಿದೆ...’ ಎಂಬ ಸುಮಧುರ ಹಾಡು ಕೇಳಿದಾಗಲೆಲ್ಲಾ ಆಹ್ಲಾದವಾಗುವುದೇನೋ ನಿಜ! ಆದರೆ, ಗಾಳಿ ಬೀಸಿದಂತೆ ಮನಸ್ಸೂ ಒಂದು ಧ್ರುವದಿಂದ ಇನ್ನೊಂದು ಧ್ರುವದೆಡೆಗೆ ಹೊಯ್ದಾಡುತ್ತಿದ್ದರೆ, ಮನಸ್ಸಿನ ಅಂತರಾಳದಲ್ಲಿ ತಳಮಳವುಂಟಾಗಿ, ಮನೋವ್ಯಾಕುಲತೆ ಉಂಟಾಗುವುದೂ ನಿಜವೇ!
ಪ್ರತಿ ವರ್ಷ ಮಾರ್ಚ್ ತಿಂಗಳ ಮೂವತ್ತರಂದು ‘ವಿಶ್ವ ಬೈಪೋಲಾರ್ ದಿನ’ (ದ್ವಿ-ಧ್ರುವ ಮನೋವ್ಯಾಕುಲತೆ/ಚಿತ್ತಲಹರಿಯ ಅಸ್ವಸ್ಥತೆ) ಎಂದು ಹಮ್ಮಿಕೊಳ್ಳಲಾಗುತ್ತದೆ. ಈ ದಿನಂದಂದು ಈ ಬೈಪೋಲಾರ್ ‘mood disorder’ ಎಂಬ ಮಾನಸಿಕ ಕಾಯಿಲೆಯ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಲಕ್ಷಣಗಳೇನು?
ಮನಸ್ಸಿನ ಭಾವನೆಗಳು ಮಿತಿಮೀರಿ ಅತಿರೇಕದ, ವಿರೂಪದ ಸ್ವರೂಪ ತಾಳಿದಾಗ ಮನೋವ್ಯಾಕುಲತೆಗಳು ಅಥವಾ ಚಿತ್ತಲಹರಿಯ ಅಸ್ವಸ್ಥತೆ (mood disorder) ಉಂಟಾಗುತ್ತದೆ. ಇಲ್ಲಿ ‘ಖಿನ್ನತೆ’ (depression) ಎಂಬ ಕಾಯಿಲೆ ಒಂದು ಧ್ರುವದಲ್ಲಿದ್ದರೆ, ತದ್ವಿರುದ್ಧ ಧ್ರುವದಲ್ಲಿ ‘ಉನ್ಮಾದ’ (mania) ಎಂಬ ಕಾಯಿಲೆ ಇರುವುದು. ಎರಡೂ ಮನೋಬೇನೆಗಳು ಬಿಟ್ಟು ಬಿಟ್ಟು ಒಂದರ ನಂತರ ಒಂದರಂತೆ, ಒಂದಿಷ್ಟು ನಿರ್ದಿಷ್ಟಾವಧಿಯ ಕಾಲದಲ್ಲಿ (3-6 ತಿಂಗಳುಗಳ ಕಾಲ) ಬರುತ್ತಿದ್ದರೆ, ಆ ರೀತಿಯ ಅಸ್ವಸ್ಥತೆಗೆ ‘bipolar mood disorder’ ಅಥವಾ ‘ದ್ವಿ-ಧ್ರುವ ಮನೋವ್ಯಾಕುಲತೆ’ ಅಥವಾ ಚಿತ್ತಲಹರಿಯ ಅಸ್ವಸ್ಥತೆ ಎನ್ನಲಾಗುತ್ತದೆ.
ಸದಾ ಕಾಲ ಬೇಸರ, ಬೇಜಾರು, ನಿರಾಸಕ್ತಿ, ಅಸಂತೋಷ, ಅತಿಯಾದ ಸುಸ್ತು, ನಿಃಶಕ್ತಿ, ನಿದ್ದೆ-ಆಹಾರಸೇವನೆಯಲ್ಲಿ ಏರುಪೇರು, ಗಮನ ಕೇಂದ್ರಿಕರಿಸಲು ಆಗದಿರುವಿಕೆ, ಅತಿ ಕಡಿಮೆ ಆತ್ಮವಿಶ್ವಾಸ, ಅನಾವಶ್ಯಕ ಸಿಟ್ಟು/ಸಿಡುಕು, ತೀವ್ರತರವಾದ ತಪ್ಪಿತಸ್ಥ ಭಾವನೆಗಳು, ಆತ್ಮಹತ್ಯೆಯ ಯೋಚನೆ-ಯೋಜನೆಗಳು ಈ ರೀತಿಯ ಗುಣಲಕ್ಷಣಗಳು, ಕನಿಷ್ಠ ಪಕ್ಷ ಎರಡು ವಾರದವರೆಗೂ ಸತತವಾಗಿ ಇದ್ದು, ಆ ವ್ಯಕ್ತಿಯ ಕೆಲಸ/ಕಾರ್ಯಗಳಲ್ಲಿ ತೊಡಕುಂಟುಮಾಡುತ್ತಿದ್ದರೆ, ಆ ಕಾಯಿಲೆಯನ್ನು ‘ಖಿನ್ನತೆ’ ಎನ್ನಬಹುದು.
ಇದರ ವಿರುದ್ಧ ದಿಕ್ಕಿನಲ್ಲಿ, ಅತಿಯಾದ ಸಂತೋಷ/ಉದ್ರೇಕದ ಮನಃಸ್ಥಿತಿ, ತೀವ್ರವಾದ ಚಡಪಡಿಕೆ, ಅತಿಯಾದ ಆತ್ಮವಿಶ್ವಾಸ, ದುಡುಕಿನ ಸ್ವಭಾವ, ತನ್ನ ಬಗ್ಗೆ ತಾನೇ ಕೊಚ್ಚಿಕೊಳ್ಳುವಿಕೆ, ಅತಿ ಕಡಿಮೆ ನಿದ್ದೆಯ ಅವಶ್ಯಕತೆ, ಅತಿಯಾದ ಮಾತು/ಚಟುವಟಿಕೆ, ಅತಿ ವೇಗದ ಯೋಚನಾ ಲಹರಿಗಳು, ಅತಿಯಾದ ಕೋಪ, ಮನೋಚಾಪಲ್ಯ, ಅತಿ ಚಂಚಲತೆ, ತೀವ್ರ ಕಾಮಾತುರತೆ, ಸುಖಾನ್ವೇಷಣೆಯಲ್ಲಿ ಅತಿಯಾಗಿ ತೊಡಗಿಕೊಳ್ಳುವಿಕೆ (ಉದಾಹರಣೆಗೆ, ಅತಿಯಾದ ಕೊಳ್ಳುವಿಕೆ, ಖರೀದಿಗಳು, ಲೈಂಗಿಕ ಕ್ರಿಯೆಗಳು, ಮಾದಕ ವಸ್ತುಗಳ ದುರ್ಬಳಕೆ, ಅತಿಯಾದ ಭಕ್ತಿ, ದೈವಾರಾಧನೆ, ಇತ್ಯಾದಿ) - ಇವುಗಳೆಲ್ಲಾ ಒಂದು ವಾರದವರೆಗಾದರೂ ಸತತವಾಗಿ ಕಾಡಿ, ಆ ವ್ಯಕ್ತಿಯ ಔದ್ಯೋಗಿಕ/ಸಾಮಾಜಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಹಾವಳಿಯನ್ನುಂಟುಮಾಡುತ್ತಿದ್ದರೆ, ಆ ಕಾಯಿಲೆಗೆ ‘ಉನ್ಮಾದ ಮನೋವ್ಯಾಧಿ’ ಎನ್ನುತ್ತೇವೆ. ಈ ರೀತಿಯ ಮನೋವ್ಯಾಕುಲತೆಗಳು, ಎಂದರೆ ಕೆಲವೊಮ್ಮೆ ಖಿನ್ನತೆ, ಕೆಲವೊಮ್ಮೆ ಉನ್ಮಾದ, ಬಿಟ್ಟು ಬಿಟ್ಟು ಬರುತ್ತಿದ್ದರೆ, ಅದಕ್ಕೆ ‘ದ್ವಿ-ಧ್ರುವ ಚಿತ್ತಲಹರಿಯ ಅಸ್ವಸ್ಥತೆ’ ಎನ್ನಲಾಗುತ್ತದೆ.
ತಪ್ಪು ತಿಳಿವಳಿಕೆಗಳು ಹಾಗೂ ನಿಜಾಂಶಗಳು
ತಪ್ಪು ತಿಳಿವಳಿಕೆ (ತ): ‘ಖಿನ್ನತೆ’ ಎಂದರೆ ಬೇಜಾರಾಗಿರುವುದು, ‘ಉನ್ಮಾದ: ಎಂದರೆ ಖುಷಿಯಾಗಿರುವುದು. ಇಂಥ ವಿಂಗಡಣೆಯಿಂದ ರೋಗಿಯೇ ಸ್ವ-ಇಚ್ಛೆಯಿಂದ ಹೊರಬರಬೇಕು.
ನಿಜಾಂಶ (ನಿ): ಖಿನ್ನತೆ ಹಾಗೂ ಉನ್ಮಾದ ಎಂಬುದು ಮನೋವ್ಯಾಕುಲತೆಗಳು ಕೇವಲ ಮನೋಸಹಜ ಭಾವನೆಗಳಿಗಲ್ಲ. ಬೇರೆ ಮಾನಸಿಕ ಕಾಯಿಲೆಗಳಲ್ಲಾಗುವಂತೆ ಇಲ್ಲಿಯೂ ಮಿದುಳಿನ ರಸಾಯನಿಕಗಳಲ್ಲಿ ಏರುಪೇರಾಗುತ್ತದೆ. ಇದರಿಂದ ರೋಗಿ ತನ್ನಿಂದ ತಾನೇ ಹೊರಬರಲು ಸಾಧ್ಯವಿಲ್ಲ. ನಿರ್ದಿಷ್ಟ ಔಷಧಗಳು, ಸಮಾಲೋಚಕರ ಮನೋಚಿಕಿತ್ಸೆ, ಕುಟುಂಬ ಹಾಗೂ ಸಮಾಜದ ಪ್ರೀತಿ, ಆಸರೆ - ಇವು ಇದ್ದರೆ, ಆಗ ರೋಗಿ ಕಾಯಿಲೆಯಿಂದ ಗುಣಮುಖನಾಗಲು ಸಾಧ್ಯ.
(ತ): ಖಿನ್ನತೆ ಇರುವವರು ಬೇರೆಯವರನ್ನೂ ಬೇಜಾರು ಮಾಡುತ್ತಾರೆ.
(ನಿ): ಖಿನ್ನತೆ ಇದ್ದಾಗ ಬೇರೆಯವರೊಡನೆ ತಮ್ಮ ಭಾವನೆಗಳನ್ನು ಹಂಚಿಕೊಂಡು, ಅವರಿಂದ ಸಹಾಯವನ್ನು ಪಡೆದು, ಅದರಿಂದ ಹೊರಬರಲು ಸಾಧ್ಯ. ಖಿನ್ನತೆ ಅಥವಾ ಉನ್ಮಾದಗಳು ಸೋಂಕುಕಾಯಿಲೆಯಂತೆ ಒಬ್ಬರಿಂದ ಇನ್ನೊಬ್ಬರಿಗೆ ಬರದು.
(ತ): ಉನ್ಮಾದದಲ್ಲಿರುವಾಗ ರೋಗಿ ಖುಷಿಯಾಗಿರುತ್ತಾನೆ. ಅದರಿಂದ ಅವನಿಗೆ ಚಿಕಿತ್ಸೆ ಕೊಡಿಸಿ, ಆ ಸಂತೋಷವನ್ನು ಕಿತ್ತುಕೊಳ್ಳುವ ಅವಶ್ಯಕತೆ ಇಲ್ಲ.
(ನಿ): ಉನ್ಮಾದಲ್ಲಿರುವಾಗಿನ ಖುಷಿ ಸಹಜವಾದುದಲ್ಲ. ನಶ್ವರವಾದ, ಕ್ಷಣಿಕವಾದ, ಚಂಚಲವಾದ, ಅತಿರೇಕವೆನಿಸುವ ಅಸಂಬದ್ಧ ಸಂತೋಷವದು. ಆ ಸಮಯದಲ್ಲಿ ರೋಗಿ ಎಷ್ಟೋ ಸಲ, ಮುಜುಗರ ಉಂಟು ಮಾಡುವ, ಜೀವನವನ್ನೇ ಬದಲಿಸುವ, ತಮ್ಮ ಹಾಗೂ ಇತರರ ಜೀವಕ್ಕೆ ಕುತ್ತು ತರುವ ಅಪಾಯಕಾರಿ ಕಾರ್ಯಗಳಿಗೆ ಕೈ ಹಾಕುವಂತಾಗುತ್ತದೆ. ಈ ರೀತಿಯ ಪ್ರಮಾದಗಳನ್ನು ತಪ್ಪಿಸಲಾದರೂ ಚಿಕಿತ್ಸೆ ಅತ್ಯಗತ್ಯ.
(ತ): ಅತ್ತರೆ ಖಿನ್ನತೆ, ನಕ್ಕರೆ ಉನ್ಮಾದ.
(ನಿ): ಅಳು-ನಗು, ಸುಖ-ದುಃಖ, ಮಾನವನ ಸಹಜ ಭಾವನೆಗಳು. ಪರಿಸ್ಥಿತಿಗೆ ಪ್ರಸ್ತುತವಾಗಿ ನಿರ್ದಿಷ್ಟ ಕಾಲದಲ್ಲಿ ಆಗುವ ಈ ಭಾವನೆಗಳು ಕಾಯಿಲೆ ಎನಿಸಿಕೊಳ್ಳಲಾರವು. ಅತಿಯಾದ ದುಃಖ, ಅತಿರೇಕದ ಸಂತೋಷ, ಪರಿಸ್ಥಿತಿಗೆ ಅಪ್ರಸ್ತುತವಾಗುತ್ತಾ, ದೀರ್ಘಾವಧಿ ವ್ಯಕ್ತಿಯಲ್ಲಿ ವೈಯಕ್ತಿಕ ಸಂಕಟವನ್ನು ಉಂಟುಮಾಡಿ, ಅವನ ಔದ್ಯೋಗಿಕ, ಕೌಟುಂಬಿಕ, ಸಾಮಾಜಿಕ ವಲಯವನ್ನೂ ಹಾಳುಗೆಡವುದರ ಮಟ್ಟಿಗೆ ಬೆಳೆದಿದ್ದರೆ, ಆಗ ಮಾತ್ರ ಈ ಭಾವನೆಗಳು ಕಾಯಿಲೆಯ ಸ್ವರೂಪವನ್ನು ಪಡೆದುಕೊಳ್ಳುತ್ತವೆ.
ಅತಿರೇಕದ ಭಾವನೆಗಳು ನಿಮ್ಮನ್ನು ಕಾಡುತ್ತಿದ್ದರೆ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಿರಿ.
*******
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.