ADVERTISEMENT

ಆರೋಗ್ಯ: ಗರ್ಭಿಣಿಯರಲ್ಲಿ ಮಧುಮೇಹ

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2024, 23:30 IST
Last Updated 6 ಸೆಪ್ಟೆಂಬರ್ 2024, 23:30 IST
   

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಕ್ಲೇಶಗಳು ಉಂಟಾಗುತ್ತದೆ. ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್‌ (ಜಿಡಿಎಂ) ಮಧುಮೇಹದ ಒಂದು ರೂಪವಾಗಿದ್ದು, ಹಾರ್ಮೋನ್‌ಗಳ ವೈಪರೀತ್ಯದಿಂದಾಗಿ ಇನ್ಸುಲಿನ್‌ ಉತ್ಪಾದನೆ ಅಥವಾ ಬಳಕೆಗೆ ಅಡ್ಡಿಯಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ತೀವ್ರಗತಿಯಲ್ಲಿ ಹೆಚ್ಚುತ್ತದೆ.

ದೇಹದಲ್ಲಿ ಶೇಖರಣೆಯಾಗುವ ಸಕ್ಕರೆಯ ಪ್ರಮಾಣವನ್ನು ವಿಭಜಿಸಿ ಜೀವಕೋಶಗಳಿಗೆ ಸಮನಾಗಿ ತಲುಪಿಸುವ ಹೊಣೆಯನ್ನು ಇನ್ಸುಲಿನ್‌ ಮಾಡುತ್ತದೆ. ಆದರೆ, ಗರ್ಭಾವಸ್ಥೆಯಲ್ಲಿ ಮಾಸುಚೀಲದ ಒತ್ತಡದಿಂದ ಹಲವು ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇವು ಇನ್ಸುಲಿನ್ ಉತ್ಪಾದನೆಗೆ ಅಡ್ಡಿ ಉಂಟು ಮಾಡುತ್ತವೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚುವುದಲ್ಲದೇ ಗರ್ಭಿಣಿಯರಲ್ಲಿ ಮಧುಮೇಹಕ್ಕೆ ಕಾರಣವಾಗುತ್ತದೆ.

ಕಾರಣವೇನು?

ADVERTISEMENT


ಗರ್ಭಿಣಿಯರಿಗೆ ಯಾವುದೇ ಹಂತದಲ್ಲಿ ಮಧುಮೇಹ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೃದ್ರೋಗ, ಅಧಿಕ ರಕ್ತದ ಒತ್ತಡ, ಬೊಜ್ಜು, ಗರ್ಭಧಾರಣೆಗೂ ಮೊದಲು ಅಧಿಕ ತೂಕ, ಕೌಟುಂಬಿಕ ಇತಿಹಾಸ, ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌, ಹೆಚ್ಚಿದ ತಾಯಿಯ ವಯಸ್ಸು ಇವುಗಳೆಲ್ಲವೂ ಕಾರಣವಾಗಬಹುದು.


ಸಮರ್ಪಕವಾಗಿ ಚಿಕಿತ್ಸೆ ಸಿಗದೇ ಇದ್ದರೆ ಗರ್ಭಿಣಿ ಹಾಗೂ ಮಗುವಿಗೆ ಏಕಕಾಲಕ್ಕೆ ಹಲವು ಆರೋಗ್ಯ ತೊಂದರೆಗಳು ಉಂಟಾಗಬಹುದು. ಪ್ರೀಕ್ಲ್ಯಾಂಪ್ಸಿಯಾ ಅಪಾಯವನ್ನು (ಅಧಿಕ ರಕ್ತದೊತ್ತಡದೊಂದಿಗೆ ಉಂಟಾಗುವ ಸಮಸ್ಯೆ) ಹೆಚ್ಚಿಸುತ್ತದೆ. ರಕ್ತದೊತ್ತಡ ಹೆಚ್ಚಿ, ಅಕಾಲದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ.


ಅತಿ ತೂಕದ ಮಗು ಜನಿಸಬಹುದು. ಇದರಿಂದ ಮಗುವಿಗೂ ಹಲವು ತರಹದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಜತೆಗೆ ಶಿಶುವಿಗೆ ಉಸಿರಾಟದ ತೊಂದರೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಕುಸಿಯವ ಸ್ಥಿತಿ (ಹೈಪೊಗೈಸಿಮಿಯಾ), ಟೈಪ್‌ 2 ಮಧುಮೇಹದ ಅಪಾಯಗಳು ಬರಬಹುದು.

ಲಕ್ಷಣಗಳೇನು?‌

ಗರ್ಭಿಣಿಯರಲ್ಲಿ ಮಧುಮೇಹ ಉಂಟಾದರೆ ಸ್ಪಷ್ಟ ಲಕ್ಷಣಗಳು ತೋರಿಸದೇ ಇರಬಹುದು. ಆದರೂ ಕೆಲವು ಲಕ್ಷಣಗಳಿಂದ ಮಧುಮೇಹ ಇರುವುದನ್ನು ಪತ್ತೆ ಹಚ್ಚಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಹಾಗೂ ಸುಸ್ತು, ವಾಕರಿಕೆ ಇರುತ್ತವೆ.

ನಿಯಂತ್ರಣ ಹೇಗೆ?
ಗರ್ಭಿಣಿಯರಲ್ಲಿ ಮಧುಮೇಹದ ತಪಾಸಣೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ. ಗರ್ಭ ಧರಿಸಿ 20 ಮತ್ತು 24ನೇ ವಾರಗಳ ನಡುವೆ ಈ ತಪಾಸಣೆ ಮಾಡಲಾಗುತ್ತದೆ. ಅಧಿಕ ತೂಕ ಇರುವವರು, ಮಧುಮೇಹದ ಕೌಟುಂಬಿಕ ಇತಿಹಾಸ ಹೊಂದಿರುವವರು ಮತ್ತು ಮೊದಲ ಗರ್ಭಧಾರಣೆಯಲ್ಲಿ ಮಧುಮೇಹ ಇರುವವರಿಗೆ ಮುಂಚಿತವಾಗಿಯೇ ತಪಾಸಣೆ ನಡೆಸಲಾಗುತ್ತದೆ. 180 mg/dL (10.0 mmol/L) ಅಥವಾ ಹೆಚ್ಚಿನ ಮಟ್ಟದಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣವಿದ್ದರೆ ಅದನ್ನು ಮಧುಮೇಹ ಎನ್ನಲಾಗುತ್ತದೆ. 155 mg/dL (8.6 mmol/L) ಗಿಂತ ಕಡಿಮೆ ಪ್ರಮಾಣವಿದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.


ಅಗತ್ಯವಿದ್ದರೆ ಗಂಟೆಗೊಮ್ಮೆ ರಕ್ತದಲ್ಲಿನ ಪರೀಕ್ಷೆ ನಡೆಸಿ, ಮಧುಮೇಹದ ಪ್ರಮಾಣವನ್ನು ಅಳೆದು ತಾಯಿ ಹಾಗೂ ಮಗುವಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿಯರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುವುವುದು ಬಹಳ ಮುಖ್ಯವಾಗಿರುತ್ತದೆ. ನಿರ್ದಿಷ್ಟ ಆಹಾರ, ನಿಯಮಿತ ಲಘು ವ್ಯಾಯಾಮ, ನಿರಂತರವಾಗಿ ರಕ್ತದಲ್ಲಿನ ಗ್ಲುಕೋಸ್ ಅಂಶಗ ನಿರ್ವಹಣೆ ಅದಕ್ಕಾಗಿ ಇನ್ಸುಲಿನ್‌ ತೆಗೆದುಕೊಳ್ಳುವುದು ಕಡ್ಡಾಯವಾಗುತ್ತದೆ.

ಡಾ. ಶುಭ್ರತಾ ದಾಸ್‌, ಮಧುಮೇಹತಜ್ಞೆ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.