ನನ್ನ ಅಜ್ಜಿ ಹೇಳುತ್ತಿದ್ದಳು, ‘ಊಟ ಅಂದ್ರೆ ಜೀವನದ ಹಬ್ಬ’. ಈ ಮಾತು ನನ್ನ ವೈದ್ಯಕೀಯ ದೃಷ್ಟಿಕೋನವನ್ನೇ ಬದಲಿಸಿತು. ನಾನು ಮಧುಮೇಹರೋಗಿಗಳಿಗೆ ಹೇಳುತ್ತೇನೆ: ‘ನಿಮ್ಮ ಆಹಾರ ಒಂದು ಜೀವಂತ ಕಲಾಕೃತಿ. ಪಾಲಕ್ ಸೊಪ್ಪು ನಿಮ್ಮ ರಕ್ತದಲ್ಲಿ ಸಮತೋಲನ ಕಾಯುತ್ತದೆ, ದಾಳಿಂಬೆ ನಿಮ್ಮ ಕೋಶಗಳನ್ನು ಕಾಪಾಡುತ್ತದೆ, ಜೋಳ ನಿಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ.’
‘ಇದನ್ನು ತಿನ್ನಬೇಡಿ’ ಎಂದು ಹೇಳುವ ಬದಲು, ‘ಈ ಆಹಾರಗಳು ನಿಮಗೆ ಉತ್ತಮ’ ಎಂದು ಹೇಳುವುದೇ ಒಳಿತು. ಪ್ರತಿ ಊಟವನ್ನು ಒಂದು ಸಣ್ಣ ಹಬ್ಬವನ್ನಾಗಿ ಮಾಡಿ - ಜಾಗೃತಿಯಿಂದ, ಕೃತಜ್ಞತೆಯಿಂದ, ಪ್ರೀತಿಯಿಂದ. ಮಧುಮೇಹ ನಿಮ್ಮನ್ನು ನಿರ್ಬಂಧಿಸುವುದಿಲ್ಲ; ಅದು ನಿಮ್ಮನ್ನು ಹೊಸ ರುಚಿಗಳ, ಹೊಸ ಆರೋಗ್ಯದ ಲೋಕಕ್ಕೆ ಕರೆದೊಯ್ಯುತ್ತದೆ. ನಾನು ನಿಮಗೆ ಕೇವಲ ವಿಜ್ಞಾನ ಮತ್ತು ಸಲಹೆಗಳನ್ನು ಮಾತ್ರವಲ್ಲ, ಹೊಸ ರುಚಿಗಳ ಬಗ್ಗೆಯೂ ತಿಳಿಸುತ್ತೇನೆ. ಮಧುಮೇಹದೊಂದಿಗೆ ಬದುಕುವುದು ಕೂಡ ಸ್ವಾದಿಷ್ಟ ಪ್ರಯಾಣವಾಗಬಹುದು!
ನಮ್ಮ ಸ್ವಾದಿಷ್ಟ ಪಯಣದಲ್ಲಿ ಮೊದಲ ನಿಲುಗಡೆ ತರಕಾರಿಗಳು: ಇವು ನಮ್ಮ ಅಜ್ಜಿ-ಅಜ್ಜಂದಿರು ಎಂದಿಗೂ ತಪ್ಪಿಸದ ಆರೋಗ್ಯದ ಖಜಾನೆ. ಇವುಗಳನ್ನು ನಿಮ್ಮ ತಟ್ಟೆಯ ಆಪ್ತ ಸ್ನೇಹಿತರಂತೆ ಭಾವಿಸಿ. ಪಾಲಕ್, ಮೆಂತ್ಯ ಮತ್ತು ದಂಟಿನ ಸೊಪ್ಪುಗಳು ಕೇವಲ ರುಚಿಕರವಲ್ಲ; ಅವು ನಿಮ್ಮ ದೇಹಕ್ಕೆ ಶಕ್ತಿಯ ಚಿಲುಮೆ.
ನಂತರ ಸಂಪೂರ್ಣ ಧಾನ್ಯಗಳು. ಕಂದು ಅಕ್ಕಿ, ರಾಗಿ, ಜೋಳ, ಸಜ್ಜೆ - ಇವು ನಮ್ಮ ದೇಶದ ಹಳ್ಳಿಗಳಲ್ಲಿ ಶತಮಾನಗಳಿಂದ ಬೆಳೆಯುತ್ತಿರುವ ಆರೋಗ್ಯದ ಭಂಡಾರ.
ಪ್ರೊಟೀನ್‌ಗಳು ನಮ್ಮ ದೇಹದ ಬಿಲ್ಡಿಂಗ್ ಬ್ಲಾಕ್‌ಗಳು. ನಮ್ಮ ದೈನಂದಿನ ದಾಲ್, ಹುರಿಗಡಲೆ, ಮೊಟ್ಟೆ ಅಥವಾ ಮೀನು - ಇವೆಲ್ಲವೂ ಉತ್ತಮ ಪ್ರೊಟೀನ್ ಮೂಲಗಳು. ಇವು ನಿಮ್ಮನ್ನು ದೀರ್ಘ ಸಮಯದವರೆಗೆ ಹಸಿವಿಲ್ಲದೆ ಇರಿಸುತ್ತವೆ. ಏಕೆಂದರೆ ಪ್ರೊಟೀನ್‌ಗಳು ಜೀರ್ಣಕ್ರಿಯೆಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ. ಇದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವೂ ನಿಧಾನವಾಗಿ ಏರುತ್ತದೆ. ಇದು ಮಧುಮೇಹ ನಿಯಂತ್ರಣಕ್ಕೆ ಸಹಾಯಕ.
ಹಣ್ಣುಗಳು ನಮ್ಮ ಪ್ರಕೃತಿ ತಾಯಿಯ ಕೊಡುಗೆ. ಅವುಗಳಲ್ಲಿ ಸಕ್ಕರೆ ಇದ್ದರೂ, ಅದರೊಂದಿಗೆ ನಾರು, ವಿಟಮಿನ್‌ಗಳು ಮತ್ತು ಆ್ಯಂಟಿ–ಆಕ್ಸಿಡೆಂಟ್‌ಗಳ ಖಜಾನೆಯೂ ಇದೆ. ಬೆರ್‍ರಿಗಳು, ಸೇಬು, ಪೇರಲೆ - ಇವೆಲ್ಲವೂ ನಿಮ್ಮ ಸ್ನೇಹಿತರು. ನಮ್ಮ ದೇಶೀಯ ಹಣ್ಣುಗಳಾದ ಸೀತಾಫಲ, ಜಾಮೂನು (ನೇರಳೆ), ಅಂಜೂರ ಕೂಡ ಉತ್ತಮ ಆಯ್ಕೆಗಳು.
ಕೊಬ್ಬುಗಳ ಬಗ್ಗೆ ನಮ್ಮ ಅಜ್ಜಿ ಹೇಳುತ್ತಿದ್ದಳು: ‘ಒಳ್ಳೆಯದನ್ನು ತಿನ್ನು, ಆದರೆ ಸ್ವಲ್ಪ ಸ್ವಲ್ಪ ತಿನ್ನು.’ ಅದೇ ನಿಯಮ ಇಲ್ಲಿಯೂ ಅನ್ವಯಿಸುತ್ತದೆ. ಬೀಜಗಳು, ಕಾಳುಗಳು, ನೆಲ್ಲಿಕಾಯಿ, ತೆಂಗಿನಕಾಯಿ - ಇವೆಲ್ಲವೂ ನಿಮ್ಮ ಹೃದಯಕ್ಕೆ ಒಳ್ಳೆಯದು.
ಸಂಜೆಯ ಉಪಾಹಾರಗಳು ನಿಷೇಧವಲ್ಲ; ಬದಲಿಗೆ, ಹುರಿದ ಕಡಲೆ, ಸುಗಂಧಿತ ಶುಂಠಿ ಚಹಾ, ಮೆಂತ್ಯಇಡ್ಲಿ, ರಾಗಿರೊಟ್ಟಿ, ಅವರೆಕಾಳು ಸುಂಡಾಲ್, ಸಬ್ಜಾ ಬೀಜದ ಶರಬತ್ತು, ನವಣೆ ದೋಸೆ, ಕೋಸಂಬರಿ, ಹುರಿಗಡಲೆ ಉಸ್ಲಿ, ಸ್ಟೀವಿಯಾ ಸೇರಿಸಿ ತಯಾರಿಸಿದ ಸಬ್ಬಕ್ಕಿ ಪಾಯಸ, ಮೆಕ್ಕೆಜೋಳದ ರೊಟ್ಟಿ - ಇವೆಲ್ಲವೂ ನಿಮ್ಮ ದೇಹದ ಇಂಧನಮೂಲಗಳು.
ನೆನಪಿರಲಿ, ಮಧುಮೇಹವನ್ನು ನಿಯಂತ್ರಿಸುವುದು ಎಂದರೆ ನಿಮ್ಮ ಆಹಾರದ ಆನಂದವನ್ನು ಕಳೆದುಕೊಳ್ಳುವುದಲ್ಲ. ಅದು ನಿಮ್ಮ ದೇಹ ಮತ್ತು ಮನಸ್ಸನ್ನು ಆಲಿಸುವ, ಅದಕ್ಕೆ ಪ್ರತಿಕ್ರಿಯಿಸುವ ಒಂದು ಹೊಸ ಮಾರ್ಗ.
ಊಟ ಮಾಡುವುದು ಕೂಡ ಒಂದು ಕಲೆ. ಕೇವಲ ಏನು ತಿನ್ನುತ್ತೀರಿ ಎಂಬುದಷ್ಟೇ ಅಲ್ಲ, ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯ. ಮೊದಲು ನಾರಿನಂಶ ಮತ್ತು ಪ್ರೊಟೀನ್ ಸೇವಿಸುವುದು (ಸಲಾಡ್, ಕಾಳು ಪಲ್ಯ), ನಂತರ ಪಿಷ್ಟಪದಾರ್ಥಗಳನ್ನು ತಿನ್ನುವುದು (ರೊಟ್ಟಿ-ದಾಲ್). ಈ ಕ್ರಮ ಊಟದ ನಂತರದ ರಕ್ತದ ಸಕ್ಕರೆ ಏರಿಕೆಯನ್ನು ಶೇ 73ರಷ್ಟು ಕಡಿಮೆ ಮಾಡುತ್ತದೆ.
ನಮ್ಮ ಹಿರಿಯರು ಸದಾ ಹೇಳುತ್ತಿದ್ದರು: ‘ನಮ್ಮ ಮನೆಯ ಔಷಧ ನಮ್ಮ ಅಡುಗೆಮನೆಯಲ್ಲಿದೆ.’ ಅದು ನಿಜ! ಹಾಗಲಕಾಯಿ, ಮೆಂತ್ಯ, ಅರಿಶಿನ - ಇವೆಲ್ಲವೂ ನಮ್ಮ ದೈನಂದಿನ ಊಟದಲ್ಲಿರುವ ಆರೋಗ್ಯದ ಖಜಾನೆಗಳು. ಇವುಗಳ ನಿಯಮಿತ ಸೇವನೆ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ: ಹಾಗಲಕಾಯಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಮೆಂತ್ಯ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ, ಮತ್ತು ಅರಿಶಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಮಧುಮೇಹದ ನಿಯಂತ್ರಣ ಎಂದರೆ ನಮ್ಮ ಜೀವನದ ಸಂತೋಷಗಳನ್ನು ತ್ಯಜಿಸುವುದಲ್ಲ. ಅದು ನಮ್ಮ ಆಹಾರ, ನಮ್ಮ ಆರೋಗ್ಯ, ಮತ್ತು ನಮ್ಮ ಸಂತೋಷ - ಈ ಮೂರನ್ನೂ ಸಮತೋಲನಗೊಳಿಸುವ ಕಲೆ.
ನಿಮ್ಮ ತಟ್ಟೆ ಒಂದು ಪ್ರೇಮಪತ್ರ. ಪ್ರತಿ ತುತ್ತು ಒಂದು ಅಕ್ಷರ. ಹಸಿರುಸೊಪ್ಪುಗಳು ಕವನಗಳು. ರಾಗಿ-ಜೋಳ ಕಥೆಗಳು. ಬೇಳೆ-ಕಡಲೆ ನುಡಿಮುತ್ತುಗಳು. ನಿಮ್ಮ ದೇಹ ಓದುತ್ತದೆ, ಕೇಳುತ್ತದೆ, ಮಾತನಾಡುತ್ತದೆ. ಆಲಿಸಿ, ಪ್ರತಿಸ್ಪಂದಿಸಿ. ಆಹಾರವನ್ನು ಕಂಡು ಭಯಪಡಬೇಡಿ; ಅದರ ಶಕ್ತಿಯನ್ನು ಅನುಭವಿಸಿ, ರುಚಿಯನ್ನು ಆಚರಿಸಿ.
ಇದು ಬರೀ ಮಧುಮೇಹದ ಕುರಿತಲ್ಲ, ಜೀವನದ ಕುರಿತು. ಹೊಸ ರುಚಿಗಳು, ಹೊಸ ಆನಂದ, ಹೊಸ ನೀವು. ಸಕ್ಕರೆಯನ್ನು ನಿಯಂತ್ರಿಸಿ; ಆದರೆ ಜೀವನದ ಮಾಧುರ್ಯವನ್ನು ಕಳೆದುಕೊಳ್ಳಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.