ADVERTISEMENT

ಆರೋಗ್ಯ | ಡಾಕ್ಟರ್ ಶಾಪ್ಪಿಂಗ್

ಡಾ.ಕೆ.ಎಸ್.ಪವಿತ್ರ
Published 22 ಜುಲೈ 2024, 23:30 IST
Last Updated 22 ಜುಲೈ 2024, 23:30 IST
   

ಆರೋಗ್ಯದ ಒಂದೇ ರೀತಿಯ ಸಮಸ್ಯೆಗಾಗಿ ವೈದ್ಯರಿಂದ ವೈದ್ಯರಿಗೆ ರೋಗಿ ಓಡಾಡುವುದು, ಚಿಕಿತ್ಸೆಯನ್ನು ಪಡೆಯುವುದನ್ನು ‘ಡಾಕ್ಟರ್ ಶಾಪ್ಪಿಂಗ್’ ಎಂದು ವೈದ್ಯವಿಜ್ಞಾನ ಗುರುತಿಸುತ್ತದೆ.

ಹೀಗೆ ವೈದ್ಯರನ್ನು ಮತ್ತೆ ಮತ್ತೆ ಬದಲಾಯಿಸುವುದಕ್ಕೆ ಕಾರಣಗಳನ್ನೂ ವೈದ್ಯಕೀಯ ಕ್ಷೇತ್ರ ಅಧ್ಯಯನ ಮಾಡಿದೆ. ಅಂತಹ ಕಾರಣಗಳನ್ನು ಪ್ರಮುಖವಾಗಿ ಎರಡು ವಿಭಾಗಗಳಲ್ಲಿ ಗುರುತಿಸಬಹುದು. ಮೊದಲನೆಯದು ವೈದ್ಯನಿಗೆ ಸಂಬಂಧಿಸಿದ್ದು; ಎರಡನೆಯದು ರೋಗಿಯ ಆರೋಗ್ಯ ಸಮಸ್ಯೆಗೆ, ಆತನ ವ್ಯಕ್ತಿತ್ವ, ಕೌಟುಂಬಿಕ ಪರಿಸರಗಳಿಗೆ ಸಂಬಂಧಪಟ್ಟದ್ದು.

ವೈದ್ಯಕೀಯ ಕ್ಷೇತ್ರ ವಿಜ್ಞಾನ ಕ್ಷೇತ್ರವೇ ಆದರೂ ದೇಹದೊಳಗಿನ ಲಕ್ಷಾಂತರ ಜೀವಕೋಶಗಳು ಕರಾರುವಾಕ್ಕಾಗಿ, ನಿರ್ದಿಷ್ಟವಾಗಿ ಹೀಗೆಯೇ, ಇಂತಿಷ್ಟೇ ಎಂಬಂತೆ ನಡೆದುಕೊಳ್ಳುತ್ತವೆ ಎಂದೇನೂ ಇಲ್ಲ. ಹೀಗಿರುವಾಗ ‘ರೋಗ’ ಎಷ್ಟೇ ಸಾಮಾನ್ಯವಾದ್ದು, ಸಾದಾ ನೆಗಡಿಯಷ್ಟೇ ನಿರಾಪಾಯಕಾರಿ ಎಂದರೂ, ಅದರ ಬಗೆಗೆ ಬೇಕಾದಷ್ಟು ಸಂಶೋಧನೆ-ಔಷಧಿಗಳಿವೆ ಎಂದರೂ, ಒಮ್ಮೆಲೇ ಕಾಯಿಲೆಯನ್ನು ನಿರ್ಧರಿಸುವುದು, ಚಿಕಿತ್ಸೆ ನೀಡುವುದು ನಾವು ಅಂದುಕೊಂಡಷ್ಟು ಸುಲಭ-ಸರಳವಲ್ಲ. ಇಂದಿನ ದಿನಗಳಲ್ಲಂತೂ ‘ಗೂಗಲ್ ಡಾಕ್ಟರ್’ರಿಂದ ಸಲಹೆ ಪಡೆದೇ ರೋಗಿ ಬರುವ ಇಂದಿನ ಪರಿಸ್ಥಿತಿಯಲ್ಲಿ ವೈದ್ಯನೆಂದರೆ ಆತ ‘ಸರ್ವಶಕ್ತ’ ಎಂಬ ಅತಿ ನಿರೀಕ್ಷೆಯ ಜೊತೆಗೆ ತದ್ವಿರುದ್ಧವಾಗಿ ಆತ ದುರುದ್ದೇಶ-ನಿರ್ಲಕ್ಷ್ಯಗಳಿಂದಲೇ ಕೆಲಸ ಮಾಡಬಹುದು ಎಂಬ ಸಂದೇಹ – ಎರಡೂ ಸೇರಿ ‘ಡಾಕ್ಟರ್ ಶಾಪ್ಪಿಂಗ್’ ಹೆಚ್ಚುವಂತೆ ಮಾಡಿದೆ.

ADVERTISEMENT

ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಧ, ಕೆಲವು ಮಾನಸಿಕ ಸಮಸ್ಯೆಗಳು ಒಂದೇ ರೀತಿಯ ಕಾಯಿಲೆಗಾಗಿ ವೈದ್ಯರನ್ನು ಮೇಲಿಂದ ಮೇಲೆ ಬದಲಾಯಿಸುವಂತೆ ಪ್ರೇರೇಪಿಸಬಹುದು. ಮನೋದೈಹಿಕ ಕಾಯಿಲೆ, ‘ಸೊಮಟೈಸೇಷನ್ ಡಿಸಾರ್ಡರ್’ ಎಂಬ ಸಮಸ್ಯೆಯಲ್ಲಿ ಮಿದುಳಿನ ರಾಸಾಯನಿಕಗಳ ಏರುಪೇರು ದೇಹದ ವಿವಿಧೆಡೆಗಳಲ್ಲಿ ನೋವು, ವಿವಿಧ ಸಂವೇದನೆಗಳನ್ನು ಉಂಟುಮಾಡಲು ಸಾಧ್ಯವಿದೆ. ಉದಾಹರಣೆಗೆ, ಮಧ್ಯವಯಸ್ಕ ಮಹಿಳೆಯರಲ್ಲಿ ಕಾಣಿಸುವ ವಿವಿಧ ರೀತಿಯ ನೋವುಗಳು ಒಬ್ಬ ಮಹಿಳೆ ಕೈಕಾಲು ನೋವಿನಿಂದ ಒಬ್ಬ ವೈದ್ಯರ ಬಳಿ ಹೋದರೆ, ಅವರು ಕೈಕಾಲು ನೋವಿಗೆ ಬೇಕಾದ ಪರೀಕ್ಷೆಗಳನ್ನು ಮಾಡಿ, ಅವುಗಳಲ್ಲಿ ಸಹಜ - ‘ನಾರ್ಮಲ್’ ಆಗಿವೆ ಎಂದು ಹೇಳುತ್ತಾರೆ ಎನ್ನಿ; ಆಗ ರೋಗಿ ಅದನ್ನು ಅರ್ಥ ಮಾಡಿಕೊಳ್ಳುವ ಬಗೆ - ‘ನನಗೆ ಯಾವ ಕಾಯಿಲೆಯೂ ಇಲ್ಲ’. ಆದರೆ ಮೈ–ಕೈನೋವುಗಳು ಮುಂದುವರಿಯುತ್ತವೆ! ಪರಿಣಾಮ ಸ್ವಲ್ಪ ದಿನಗಳ ನಂತರ ಮತ್ತೊಬ್ಬ ವೈದ್ಯರ ಬಳಿ ಅದೇ ಕೈಕಾಲು ನೋವಿಗೆಂದು ಆ ಮಹಿಳೆ ಮತ್ತೆ ಹೋಗುತ್ತಾರೆ! ಇಲ್ಲಿ ವೈದ್ಯರು ಹೇಳಬೇಕಿರುವುದೂ, ಸ್ವತಃ ಮಹಿಳೆ ಕೇಳಿ-ಅರ್ಥ ಮಾಡಿಕೊಳ್ಳಬೇಕಾದ್ದೂ, ಎಲ್ಲ ಪರೀಕ್ಷೆಗಳೂ ‘ನಾರ್ಮಲ್'‌’ ಎನ್ನಿಸಿಯೂ ಸಮಸ್ಯೆ ಇರಲು ಸಾಧ್ಯವಿದೆ; ನೋವು-ಸಂವೇದನೆ ಎನ್ನುವುದು ವೈಯಕ್ತಿಕವಾದದ್ದು – ಎಂಬ ವೈಜ್ಞಾನಿಕ ಸತ್ಯವನ್ನು!

ಎಂದರೆ ರೋಗಿಯ ಮನೆಯವರಾಗಲೀ ಸ್ವತಃ ವೈದ್ಯ-ವೈದ್ಯಕೀಯ ಸಿಬ್ಬಂದಿಯಾಗಲಿ ‘ಇವರ ಟೆಸ್ಟ್‌ಗಳೆಲ್ಲ ನಾರ್ಮಲ್ ಬಂದಿರಬೇಕಾದರೆ ಇವರಿಗೆ ಏನು ಕಾಯಿಲೆಯಿರಲು ಸಾಧ್ಯ?’ ಎಂದು ಅಚ್ಚರಿ ಪಡುವ ಅವಶ್ಯಕತೆಯಿಲ್ಲ! ಸ್ವತಃ ರೋಗಿಯೂ ಇದನ್ನು ಒಂದು ಸರಳ ಉದಾಹರಣೆಯಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಕೋಣೆಯೊಂದರಲ್ಲಿ ಟ್ಯೂಟ್‍ಲೈಟ್ ಹತ್ತುತ್ತಿಲ್ಲ ಅಂದುಕೊಳ್ಳಿ, ಮೊದಲಿಗೆ `ಟ್ಯೂಬ್' ಸರಿಯಿದೆಯೇ ಎಂದು ನೋಡುತ್ತೇವೆ, ಟ್ಯೂಬನ್ನು ಬದಲಾಯಿಸುತ್ತೇವ., ಆಗಲೂ ದೀಪ ಹತ್ತಲಿಲ್ಲ. ಮತ್ತೆ ಮತ್ತೆ ಟ್ಯೂಬನ್ನೇ ಸರಿಪಡಿಸಲು ಪ್ರಯತ್ನಿಸಿದರೆ ದೀಪ ಹತ್ತೀತೆ?! ಆಗ ನಾವು ಮಾಡಬೇಕಾದ್ದು ‘ವೈರಿಂಗ್’ ವ್ಯವಸ್ಥೆಯಲ್ಲಿ, ವಿದ್ಯುತ್ ವ್ಯವಸ್ಥೆಯಲ್ಲಿ ಏನಾದರೂ ದೋಷವಿರಬಹುದೆ ಎಂಬುದನ್ನು ಗುರುತಿಸಿ, ಸರಿಪಡಿಸುವುದು. ದೇಹವೂ ಅಂತಹ ಒಂದು ವ್ಯವಸ್ಥೆ. ಅದರ ಆರೋಗ್ಯ ಹದಗೆಡುವುದಕ್ಕೆ ಹಲವು ಕಾರಣಗಳು. ‘ಗ್ಯಾಸ್ಟ್ರಿಕ್’ ಎಂದು ವೈದ್ಯರಿಂದ ವೈದ್ಯರಿಗೆ ಓಡುವವರಲ್ಲಿ, ಚೀಲಗಟ್ಟಲೆ ಗ್ಯಾಸ್ಟ್ರಿಕ್ ಮಾತ್ರೆಗಳನ್ನು ನುಂಗುವವರು, ಮತ್ತೆ ಮತ್ತೆ ‘ಎಂಡೋಸ್ಕೋಪ್ ಮಾಡಿಸಿ ‘ಎಲ್ಲಾ ನಾರ್ಮಲ್ ಇದೆಯಲ್ಲಾ?!’ ಎಂದು ಆಶ್ಚರ್ಯ ಪಡೆಯುವವರು ಮೊದಲು ಮಾಡಬೇಕಾದ್ದು ಪ್ರತಿ ವೈದ್ಯರೂ ಮೇಲಿಂದ ಮೇಲೆ ಹೇಳುವ ‘ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡುವ; ಕಾಫಿ/ಟೀ ಗಳನ್ನು ಪ್ರತಿದಿನ ಎರಡು ಬಾರಿಗೆ ಸೀಮಿತಗೊಳಿಸುವ’ ಜೀವನಶೈಲಿಯ ತಂತ್ರ.

ಆತಂಕಕ್ಕೆ ಸಂಬಂಧಿಸಿದ ಹಲವು ನಿರ್ದಿಷ್ಟ ಕಾಯಿಲೆಗಳು ‘ಡಾಕ್ಟರ್ ಶಾಪ್ಪಿಂಗ್’ ಅನ್ನು ವರ್ಷಗಟ್ಟಲೆ ಮುಂದುವರಿಸುವಂತೆ ಮಾಡಬಹುದು. ಕಾಯಿಲೆ ಬಂದೀತೆಂಬ ಭಯವೇ ಸಮಸ್ಯೆಯಾಗುವ ಆತಂಕ, ತನಗೆ ಮಾರಕವಾದ ಕಾಯಿಲೆ ಇದ್ದೇ ಇದೆಯೆಂಬ ನಂಬಿಕೆಯ ‘ಹೈಪೋಕಾಂಡ್ರಿಯಾಸಿಸ್’, ಹಿನ್ನೆಲೆಯಲ್ಲಿರುವ ಆತಂಕದಿಂದ ಉಂಟಾಗುವ ತಲೆನೋವು, ವಿವಿಧ ಮೈ–ಕೈನೋವುಗಳು, ಯಾವಾಗಲೂ ಇರುವ ಆತಂಕದ ಕಾಯಿಲೆ (Generalized anxiety disorder) – ಇವು ‘ಡಾಕ್ಟರ್ ಶಾಪ್ಪಿಂಗ್’ಗೆ ಕಾರಣವಾಗಬಹುದು. ತಾತ್ಕಾಲಿಕ ಉಪಶಮನ ನೀಡುವ ಔಷಧಗಳು, ವಿವಿಧ ಪರೀಕ್ಷೆಗಳು ನಿಜವಾದ ಆತಂಕ-ಖಿನ್ನತೆಗಳ ಉಪಶಮನಕಾರಿ ಚಿಕಿತ್ಸೆಗಳಿಗೆ ಅಡ್ಡಿಯಾಗಬಹುದು.

‘ಡಾಕ್ಟರ್ ಶಾಪ್ಪಿಂಗ್‌’ಗೆ ಕುಟುಂಬದವರೂ ತಮ್ಮ ಕೊಡುಗೆ ನೀಡಬಹುದು! ಒಂದೋ ರೋಗಿಯ ಜೊತೆಯಲ್ಲಿ ತಾವೂ ಮುಂದಾಗಿ ವಿವಿಧ ವೈದ್ಯರ ಬಳಿ ಕರೆದೊಯ್ಯುವುದು, ‘ಗೂಗಲ್ ಡಾಕ್ಟರ್’ ಬಳಿ ಹುಡುಕಿ ವೈದ್ಯಕೀಯ ಚಿಕಿತ್ಸೆಯನ್ನು ಮತ್ತಷ್ಟು ಗೊಂದಲಮಯವಾಗಿಸುವುದು, ಅಥವಾ ರೋಗಿಯ ಸಮಸ್ಯೆಗಳು ‘ನಿಜವಲ್ಲ’, ‘ಕೆಲಸದಿಂದ ತಪ್ಪಿಸಿಕೊಳ್ಳುವ ಕಾಯಿಲೆಯ ನಾಟಕ’, ‘ಯಾವ ವೈದ್ಯಕೀಯ ಸಲಹೆಯ ಅಗತ್ಯವೂ ಇಲ್ಲ’ ಎಂಬಂತೆ ದೂಷಿಸಬಹುದು. ರೋಗಿಯ ಸಮಸ್ಯೆಗಳನ್ನು ‘ನಿಜ’ ಎಂದು ಒಪ್ಪುವುದು, ಅದು ‘ಅಪಾಯಕರ’ವಲ್ಲ ಎಂದು ತಜ್ಞವೈದ್ಯರು ನಿರ್ಧರಿಸಿದ ನಂತರ ರೋಗಿ ಆ ಸಮಸ್ಯೆ ಮೇಲೆಯೇ ಗಮನ ಕೇಂದ್ರೀಕರಿಸದೆ ನಿತ್ಯದ ಚಟುವಟಿಕೆಗಳಲ್ಲಿ ತೊಡಗುವಂತೆ ಮೃದುವಾಗಿ, ದೃಢವಾಗಿ ಪ್ರೇರೇಪಿಸುವುದು ಅತ್ಯಗತ್ಯ.

‘ಡಾಕ್ಟರ್ ಶಾಪ್ಪಿಂಗ್’ನಲ್ಲಿ ತೊಡಗುವ ಬಹು ಜನರಿಗೆ ಖಿನ್ನತೆ, ಆತಂಕಗಳಿಗೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ ಎಂಬುದು ಗಮನಾರ್ಹ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.