*ಲೈಂಗಿಕ ದೌರ್ಜನ್ಯ ಮತ್ತು ಹಿಂಸೆ ಮನುಷ್ಯನಲ್ಲಿ ಇರಬಹುದಾದ ಸುಪ್ತಭಾವಗಳೇ?
ಅವಕಾಶ ಸಿಕ್ಕರೆ ಎಲ್ಲರೂ ಈ ಪ್ರಯತ್ನ ನಡೆಸುವರೇ? ಅಥವಾ ಇದೊಂದು ಮನಸ್ಥಿತಿಯೇ?
ಹೆಸರು ಊರು ತಿಳಿಸಿಲ್ಲ.
ಬಹು ಕುತೂಹಲಕರ ಮತ್ತು ಪ್ರಮುಖವಾದ ಪ್ರಶ್ನೆ ಇದು. ಲೈಂಗಿಕತೆಯಲ್ಲಿ ಮೇಲುನೋಟಕ್ಕೆ ಸ್ವಲ್ಪಮಟ್ಟಿನ ದೈಹಿಕ ಹಿಂಸೆಯಿರುವಂತೆ ಕಾಣಿಸಬಹುದು. ಇಂತಹ ಪ್ರವೃತ್ತಿಯನ್ನು ಸಾಕಷ್ಟು ಕಾಡುಪ್ರಾಣಿಗಳಲ್ಲಿ ಗುರುತಿಸಬಹುದು. ಉದಾಹರಣೆಗೆ ಹುಲಿಗಳು ಮಿಲನದ ಸಂದರ್ಭದಲ್ಲಿ ಸಂಗಾತಿಯನ್ನು ಪರಚುತ್ತವೆ. ವಾಸ್ತವವಾಗಿ ಅಲ್ಲಿ ನಡೆಯುವುದು ಕೂಡ ಹಿಂಸೆಯಲ್ಲ. ಏಕೆಂದರೆ ಸಂಗಾತಿಗೆ ದೈಹಿಕ ನೋವನ್ನು ಉಂಟುಮಾಡುವ ಉದ್ದೇಶವಿರುವುದಿಲ್ಲ. ಇದು ಮಿಲನದ ಉನ್ಮಾದದಲ್ಲಿ ಇಬ್ಬರ ಒಪ್ಪಿಗೆಯಿಂದ ನಡೆಯುವ ಸಹನೀಯ ದೈಹಿಕ ಆಘಾತ ಮಾತ್ರ. ಈ ಪ್ರವೃತ್ತಿ ಸಹನೀಯ ಮಟ್ಟದಲ್ಲಿ ಮಾನವರಲ್ಲಿಯೂ ಕಾಣಿಸಬಹುದು. ಚುಂಬಿಸುವಾಗ ಹಗುರಾಗಿ ಕಚ್ಚುವುದು, ಪ್ರೀತಿಯಿಂದ ಕೊಡುವ ಏಟುಗಳು ಉಸಿರೆಳೆಯಲು ಅವಕಾಶವಿಲ್ಲದಂತೆ ಅಪ್ಪುವುದು ಮುಂತಾದವು ಸಹನೀಯ ಮಿತಿಯಲ್ಲಿ ಇಷ್ಟಪಟ್ಟು ಸ್ವೀಕರಿಸುವ ಹಿಂಸೆಗಳಾಗಿರಲು ಸಾಧ್ಯ. ಆದರೆ ಹಿಂಸೆಯೇ ಲೈಂಗಿಕ ಸುಖದ ಮೂಲ ಪ್ರೇರಣೆಯಾದಾಗ, ಹಿಂಸೆಯಿಲ್ಲದ ಲೈಂಗಿಕತೆ ಸಾಧ್ಯವೇ ಇಲ್ಲ ಎನ್ನಿಸಿದಾಗ, ಸಂಗಾತಿಯ ಒಪ್ಪಿಗೆಯಿಲ್ಲದೆ ಅಥವಾ ವಿರೋಧವಿದ್ದಾಗಲೂ ನಡೆಯುವ ಹಿಂಸೆ ಲೈಂಗಿಕ ದೌರ್ಜನ್ಯವಾಗುತ್ತದೆ. ಇದೊಂದು ರೀತಿಯ ಮಾನಸಿಕ ವಿಕೃತಿ. ಇಂತಹ ಮಾನಸಿಕ ವಿಕೃತಿ ಎಲ್ಲರಲ್ಲಿಯೂ ಇರುಬಹುದಾದ ಸಹಜ ಪ್ರವೃತ್ತಿಯಲ್ಲ. ಬಾಲ್ಯದ ಅನುಭವಗಳ ಆಧಾರದ ಮೇಲೆ ಆ ವ್ಯಕ್ತಿ ಕಟ್ಟಿಕೊಂಡಿರುವ ಸಂಬಂಧಗಳ ಮತ್ತು ಲೈಂಗಿಕತೆಯ ಮಾನಸಿಕ ಚಿತ್ರಣದ ಪರಿಣಾಮ ಇದು. ಇಂಥವರು ತಮ್ಮದೇ ದೈಹಿಕ ನೋವುಗಳಿಗೂ ಕಲ್ಲಾಗಿರುತ್ತಾರೆ. ಹಾಗಾಗಿ ಇತರರ ನೋವು ಇವರನ್ನು ತಲುಪುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳು ಬಾಲ್ಯದಲ್ಲಿ ಲೈಂಗಿಕ ಹಿಂಸಾಚಾರವೂ ಸೇರಿದಂತೆ ಬೇರೆಬೇರೆ ರೀತಿಯ ದೈಹಿಕ ಆಫಾತವನ್ನು ನೋಡುತ್ತ ಮತ್ತು ಅನುಭವಿಸುತ್ತ ವಿರೋಧಿಸಲಾಗದ ಅಸಹಾಯಕತೆಯಲ್ಲಿ ಬೆಳೆದಿರುತ್ತಾರೆ. ಇದು ನಮ್ಮ ಬುದ್ಧಿ ತರ್ಕಗಳಗಿಂತ ಬಹಳ ಆಳವಾಗಿ ದಾಖಲಾಗಿರುತ್ತದೆ. ಹಾಗಾಗಿ ಹಿಂಸೆ ಸಹಜವಾದದ್ದು ಅಥವಾ ಇರುವುದೇ ಹೀಗೆ ಎಂದು ಅನ್ನಿಸಬಹುದು. ಇಂತವರನ್ನು ಮಾನಸಿಕ ಚಿಕಿತ್ಸೆಯಿಂದ ಗುಣಪಡಿಸಬಹುದು.
*24ರ ಯುವತಿ. ನಾನು ಪ್ರೀತಿಸುವ ಹುಡುಗನು ಅಲ್ಪಾಯುಷಿ ಎಂದು ಜಾತಕದಲ್ಲಿ ಹೇಳಿದೆ. ನನಗೆ ಅದರಲ್ಲಿ ನಂಬಿಕೆಯಿಲ್ಲ. ನನ್ನ ತಾಯಿಗೆ ಜ್ಯೋತಿಶ್ಯಾಸ್ತ್ರದಲ್ಲಿ ನಂಬಿಕೆಯಿರುವುದರಿಂದ ಅವರು ಗೊಂದಲದಲ್ಲಿದ್ದಾರೆ. ಏನು ಮಾಡಬೇಕೆಂದು ತೋಚುತ್ತಿಲ್ಲ. ಸಲಹೆ ನೀಡಿ.
ಹೆಸರು ಊರು ತಿಳಿಸಿಲ್ಲ.
ನಿಮಗೆ ಜ್ಯೋತಿಶ್ಯಾಸ್ತ್ರದಲ್ಲಿ ನಂಬಿಕೆಯಿಲ್ಲ ಎಂದು ಹೇಳಿದ್ದೀರಿ. ಹಾಗಿದ್ದರೂ ಹುಡುಗನ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಲು ಅವಕಾಶ ಕೊಟ್ಟಿದ್ದೀರಲ್ಲವೇ? ಈಗ ಜಾತಕವನ್ನು ನಂಬದಿದ್ದರೂ ತಾಯಿಯ ಭಯ ಗೊಂದಲಗಳನ್ನು ವಿರೋಧಿಸಿ ನಡೆದರೆ ಅವರಿಗೆ ನೋವುಂಟು ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೀರಿ. ನಿಮ್ಮ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುತ್ತಿಲ್ಲ, ಆದರೆ ಬೇರೆಯವರ ನಿರ್ಧಾರಗಳನ್ನು ಒಪ್ಪಿಕೊಳ್ಳಲೂ ಆಗುತ್ತಿಲ್ಲ- ಇದು ನಿಮ್ಮ ದ್ವಂದ್ವವಲ್ಲವೇ? ನಿಮ್ಮ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಂಡು ಅದರ ಸೋಲು ಗೆಲುವುಗಳ ಜವಾಬ್ದಾರಿಯನ್ನು ನೀವೇ ಹೊರುವುದಕ್ಕೆ ಸಿದ್ಧರಾಗಬೇಕು. ನಿಮ್ಮ ಆಯ್ಕೆಗಳು ತಾಯಿಯ ವಿರುದ್ಧವಾಗಿಲ್ಲ ಎಂದು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿ. ಹಾಗೊಮ್ಮೆ ಸಾಧ್ಯವಾಗದಿದ್ದರೂ ಅವರೊಡನೆ ಒಳ್ಳೆಯ ಸಂಬಂಧ ಮುಂದುವರಿಸಲು ಬೇಕಾದಷ್ಟು ಇತರ ದಾರಿಗಳಿವೆ. ಮೂಲ ಪ್ರಶ್ನೆ ಅನಗತ್ಯವಾಗಿ ಜಾತಕವನ್ನು ತೋರಿಸಿ ನಿಮ್ಮೊಳಗೆ ಆಹ್ವಾನಿಸಿಕೊಂಡಿರುವ ಭಯವನ್ನು ಏನು ಮಾಡುತ್ತೀರಿ ಎನ್ನುವುದು. ಅದನ್ನು ನಿಭಾಯಿಸುವುದು ಸಾಧ್ಯವಿದ್ದರೆ ನಿರ್ಧಾರಗಳು ಸುಲಭ.
*24ರ ಯುವಕ. ನಿತ್ಯ ಹಸ್ತಮೈಥುನ ಮಾಡಿಕೊಳ್ಳಬೇಕೆನಿಸುತ್ತದೆ. ಶೀಘ್ರಸ್ಖಲನದ ಸಮಸ್ಯೆಯೂ ಇದೆ. ಪರಿಹಾರವೇನು.
ಹೆಸರು ಊರು ತಿಳಿಸಿಲ್ಲ.
ಹಸ್ತಮೈಥುನದಿಂದ ದೈಹಿಕ ತೊಂದರೆಗಳಾಗುವುದಿಲ್ಲ ಎಂದು ಈ ಅಂಕಣದಲ್ಲಿ ಹಲವಾರು ಬಾರಿ ಉತ್ತರಿಸಲಾಗಿದೆ. ನಿಮ್ಮನ್ನು ಕಾಡುತ್ತಿರುವುದು ಹಸ್ತಮೈಥುನ ಕುರಿತಾದ ಅನಗತ್ಯ ಆತಂಕ ಮತ್ತು ತಪ್ಪುತಿಳುವಳಿಕೆಗಳು ಮಾತ್ರ. ಶೀಘ್ರಸ್ಖಲನ ಕೂಡ ನಿಮ್ಮ ಆತಂಕದ ಪರಿಣಾಮ. ಶೀಘ್ರಸ್ಖಲನದ ಕುರಿತಾಗಿ ನೀವು ಯೋಚಿಸಬೇಕಾಗಿರುವುದ ಸಂಗಾತಿಯ ಜೊತೆ ಲೈಂಗಿಕ ಸುಖವನ್ನು ಹಂಚಿಕೊಳ್ಳಲು ಅಡ್ಡಿಯಾದಾಗ ಮಾತ್ರ. ಹಾಗಾಗಿ ಮದುವೆಯಾದ ಮೇಲೆ ಇದು ಸಮಸ್ಯೆ ಎನ್ನಿಸಿದರೆ ಇಬ್ಬರೂ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಬಹುದು. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಔಷಧಗಳನ್ನು ಬಳಸಿ ಮೋಸಹೋಗಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.