ADVERTISEMENT

ಪಿಎಂ2.5 ದೂಳಿನ ಕಣ ಅಸ್ತಮಾಗೆ ಮೂಲ ಕಾರಣ: 2019ರ ಪ್ರಕರಣದ ಬೆನ್ನು ಹತ್ತಿದ ಅಧ್ಯಯನ

ಪಿಟಿಐ
Published 28 ಅಕ್ಟೋಬರ್ 2024, 10:59 IST
Last Updated 28 ಅಕ್ಟೋಬರ್ 2024, 10:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಹಾನಗರಗಳಲ್ಲಿ ಪಿಡುಗಾಗಿರುವ ಮಾಲಿನ್ಯ ಹಾಗೂ ಅದರಿಂದ ಹೆಚ್ಚುತ್ತಿರುವ ಅಸ್ತಮಾ ಪ್ರಕರಣಗಳ ಕುರಿತು ಅಧ್ಯಯನ ನಡೆಸಿರುವ ತಜ್ಞರ ತಂಡ, ದೂಳಿನಲ್ಲಿ ಬೆರೆತಿರುವ ಅತಿ ಸಣ್ಣ ಕಣಗಳಾದ ಪಿಎಂ2.5 ಈ ಸಮಸ್ಯೆಗೆ ಮೂಲ ಕಾರಣ ಎಂದಿದೆ.

2019ರಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲಾದ ಅಸ್ತಮಾ ಪ್ರಕರಣಗಳ ಮೂರನೇ ಒಂದರಷ್ಟಕ್ಕೆ ಪಿಎಂ2.5 ದೂಳಿನ ಕಣವೇ ಮುಖ್ಯ ಕಾರಣ ಎಂದು ಸಾಕ್ಷಿ ಸಹಿತ ಸಂಶೋಧಕರ ತಂಡ ತನ್ನ ವರದಿಯಲ್ಲಿ ಹೇಳಿದೆ.

2019ರಿಂದ 2023ರವರೆಗೆ ಈ ಕುರಿತು 22 ರಾಷ್ಟ್ರಗಳಲ್ಲಿ ಒಟ್ಟು 68 ಅಧ್ಯಯನಗಳು ನಡೆದಿವೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚಾಗಿ ಪಿಎಂ2.5 ದೂಳಿನ ಕಣದಿಂದ ಅಸ್ತಮಾ ಹೆಚ್ಚಾಗಿರುವುದನ್ನು ಈ ಅಧ್ಯಯನಗಳು ದಾಖಲಿಸಿವೆ. ಇದರನ್ವಯ ಪ್ರತಿ ಘನ ಮೀಟರ್‌ನಲ್ಲಿ ಹತ್ತು ಮೈಕ್ರೊಗ್ರಾಂನಷ್ಟು ಪಿಎಂ2.5 ಹೆಚ್ಚಳವಾಗಿದೆ. ಇದರಿಂದ ಮಕ್ಕಳಿಂದ ವೃದ್ಧರವರೆಗೂ ಅಸ್ತಮಾ ಶೇ 21ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

‘ಉಸಿರಾಟದ ಸಮಸ್ಯೆ, ಕೆಮ್ಮು ಹಾಗೂ ಉಬ್ಬಸದಂತ ಲಕ್ಷಣಗಳು ಹೆಚ್ಚಾಗಿದ್ದು, ಇದು ಜೀವನಶೈಲಿಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 2019ರಲ್ಲಿ ಜಗತ್ತಿನ ಮೂರನೇ ಒಂದರಷ್ಟು ಅಸ್ತಮಾ ಪ್ರಕರಣಗಳಲ್ಲಿ ಪಿಎಂ2.5 ದೂಳಿನ ಕಣಗಳ ಪಾತ್ರವೇ ಹೆಚ್ಚು. ಹಾಲಿ ಇದ್ದ 6.35 ಕೋಟಿ ಅಸ್ತಮಾ ಪ್ರಕರಣಗಳಲ್ಲಿ 1.14 ಹೊಸ ಪ್ರಕರಣಗಳು ಈ ಅವಧಿಯಲ್ಲಿ ದಾಖಲಾಗಿದ್ದವು’ ಎಂದು ಮ್ಯಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್ ಫಾರ್‌ ಕೆಮಿಸ್ಟ್ರಿಯ ಸಂಪಾದಕ ರ‍್ಯೂಜಿಂಗ್‌ ನಿ ಹೇಳಿದ್ದಾರೆ.

’ಉಸಿರಾಟದ ಮೂಲಕ ದೂಳಿನ ಅತಿ ಸಣ್ಣ ಕಣಗಳು ದೀರ್ಘಕಾಲದವರೆಗೆ ಶ್ವಾಸಕೋಶವನ್ನು ಸೇರಿದ ಪರಿಣಾಮ ಅಸ್ತಮಾ ಸಮಸ್ಯೆ ಹೆಚ್ಚಾಗಿದೆ. ‘ಒನ್‌ ಅರ್ಥ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಲೇಖನದ ಪ್ರಕಾರ, ಪಿಎಂ2.5 ದೂಳಿನ ಕಣಗಳು ದೇಹ ಹೊಕ್ಕು, ಶೇ 30ರಷ್ಟು ಅಸ್ತಮಾ ಪ್ರಕರಣಗಳು ಹೆಚ್ಚಾಗಿವೆ. ಇದರಲ್ಲಿ ಮಕ್ಕಳ ಸಂಖ್ಯೆಯೇ (ಶೇ 60ರಷ್ಟು) ದೊಡ್ಡದು. ಇದರಿಂದ ಶ್ವಾಸಕೋಶ ಸಮಸ್ಯೆ ಎದುರಿಸುವುದರ ಜತೆಗೆ, ಅತಿ ಚಿಕ್ಕ ವಯಸ್ಸಿನಲ್ಲೇ ರೋಗನಿರೋಧ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

‘ಅದರಲ್ಲೂ ಈ ಪಿಎಂ2.5 ದೂಳಿನ ಕಣಗಳಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಯು ಬಡ ಹಾಗೂ ಮಧ್ಯಮ ಆದಾಯ ಇರುವ ರಾಷ್ಟ್ರಗಳಲ್ಲೇ ಹೆಚ್ಚು. ಹಾಗೆಯೇ ಅಸ್ತಮಾದಿಂದ 1.2 ಲಕ್ಷ ಜನ ಮೃತಪಟ್ಟಿದ್ದಾರೆ. ಇವರಲ್ಲಿ ವಯಸ್ಕರೇ ಹೆಚ್ಚು. ಅದರಲ್ಲೂ ಭಾರತ ಮತ್ತು ಚೀನಾದಲ್ಲಿ ಅಸ್ತಮಾದಿಂದ ಬಳಲುತ್ತಿರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ’ ಎಂದು ಈ ಅಧ್ಯಯನ ಹೇಳಿದೆ.

‘ತಮ್ಮ ನೆಲದಲ್ಲೇ ಸೃಷ್ಟಿಯಾಗುತ್ತಿರುವ ಪಿಎಂ2.5 ದೂಳಿನ ಕಣದ ಸಮಸ್ಯೆಯ ಜತೆಗೆ, ಉತ್ತರ ಅಮೆರಿಕಾ ಹಾಗೂ ಪಶ್ಚಿಮ ಯುರೋಪ್‌ ಕೂಡಾ ಅಸ್ತಮಾ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದನ್ನು ತಡೆಗಟ್ಟಲು ನೀತಿ ನಿರೂಪಕರು ಅತ್ಯಂತ ಕಠಿಣ ಕಾನೂನನ್ನು ಜಾರಿಗೆ ತರಬೇಕಿದೆ. ಆದರೆ, ವೈಯಕ್ತಿಕವಾಗಿ ಮುಖಗವಸು ತೊಡುವುದು ಸದ್ಯಕ್ಕೆ ನಾವು ಕೈಗೊಳ್ಳಬಹುದಾದ ಪರಿಹಾರವಾಗಿದೆ’ ಎಂದು ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಕೆಮಿಸ್ಟ್ರಿಯ ನಿರ್ದೇಶಕ ಯುಫಾಂಗ್‌ ಚೆಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.