ನೀಲಿಚಿತ್ರಗಳ ಆಕರ್ಷಣೆಯಿಂದ ಹೊರಬರುವುದು ಹೇಗೆ – ಇದು ನನಗೆ ಬರುವ ಪತ್ರಗಳಲ್ಲಿನ ಸಾಮಾನ್ಯ ಪ್ರಶ್ನೆ. ಅಂದರೆ ನೀಲಿಚಿತ್ರಗಳ ವೀಕ್ಷಣೆಯ ತಮ್ಮ ಪ್ರವೃತ್ತಿಯ ಕುರಿತಾಗಿ ಅವರಲ್ಲಿ ಆಳವಾದ ಪಾಪಪ್ರಜ್ಞೆಯಿದೆ ಎಂದಾಯಿತಲ್ಲವೇ? ಹಾಗಿದ್ದರೂ ಅದರ ಆಕರ್ಷಣೆಯಿಂದ ಬಿಡಿಸಿಕೊಳ್ಳಲು ಕಷ್ಟಪಡುತ್ತಿರುತ್ತಾರೆ. ಇಲ್ಲೇನು ನಡೆಯುತ್ತಿದೆ?
ಇವತ್ತು ಎಲ್ಲರ ಕೈಯಲ್ಲಿ ಇರುವ ಮೊಬೈಲ್ ಪೋನ್‌ಗಳು ಅರೆಕ್ಷಣದಲ್ಲಿ ಅಂತರ್ಜಾಲದ ಮೂಲಕ ಜಗತ್ತನ್ನು ತೋರಿಸುತ್ತದೆ. ಸುತ್ತಲಿನ ಜಗತ್ತಿನಲ್ಲಿ ಪಡೆದುಕೊಳ್ಳಲು ಸಾಧ್ಯವಾಗದ ಎಲ್ಲವೂ ಅಂತರ್ಜಾಲದಲ್ಲಿ ಕನಸುಗಳ ಮೂಲಕ ಸಿಗುತ್ತಿದೆ. ಹಾಗಾಗಿ ಅದರ ಆಕರ್ಷಣೆ ಅಪರಿಮಿತ. ಜಗತ್ತಿನ ಯಾವ ರಾಷ್ಟ್ರಕ್ಕೂ ನೀಲಿಚಿತ್ರಗಳ ಲೈಂಗಿಕ ಜಗತ್ತನ್ನು ಹಿಡಿತದಲ್ಲಿ ಇಡಲು ಸಾಧ್ಯವಾಗಿಲ್ಲ.
ನೀಲಿಚಿತ್ರಗಳಿಗೆ ಕಾನೂನಿನಲ್ಲಿ ನಿಷೇಧವಿದ್ದರೂ ಜಾರಿಮಾಡುವುದು ಮಾತ್ರ ಸಾಧ್ಯವಾಗಿಲ್ಲ. ಅಂತರ್ಜಾಲವನ್ನು ಹಿಡಿತದಲ್ಲಿಡುವುದು ಸದ್ಯಕ್ಕಂತೂ ಅಸಾಧ್ಯ. ನೀಲಿಜಗತ್ತಿಗೆ ಕೇವಲ ಯುವಜನತೆ ಆಕರ್ಷಿತರಾಗಿ ದಾರಿತಪ್ಪುತ್ತಿದ್ದಾರೆ ಎನ್ನುವುದು ಅವರ ಮೇಲೆ ಮಾಡುವ ಅಪಾದನೆಯೇ ಹೊರತು ವಾಸ್ತವವಲ್ಲ. ಎಲ್ಲಾ ವಯಸ್ಸು ಎಲ್ಲಾ ವರ್ಗದ ಜನರೂ ಇದರ ಆಕರ್ಷಣೆಯಿಂದ ಹೊರತಾಗಿಲ್ಲ. ಪುರುಷರು ನೀಲಿಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ ಎನ್ನುವುದು ನಿಜವಾದರೂ ಮಹಿಳೆಯರೂ ಕೂಡ ಇದರ ಸೆಳೆತಕ್ಕೆ ಒಳಗಾಗುವುದು ಅಸಹಜವೇನಲ್ಲ. ಹಾಗಾಗಿ ಪರಿಹಾರಗಳನ್ನು ಹುಡುಕುವಾಗ ನಿಯಂತ್ರಣದ ಕಡೆ ಹೆಚ್ಚಿನ ಗಮನ ಹರಿಸಿದರೆ ಎಲ್ಲರನ್ನೂ ದೂಷಿಸುವುದೊಂದೇ ಉತ್ತರವಾಗುತ್ತದೆ.
ನೀಲಿಚಿತ್ರಗಳ ವೀಕ್ಷಣೆ ವ್ಯಸನವಾಗುವುದನ್ನು(ಅಡಿಕ್ಷನ್) ತಡೆಯುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕು. ಈ ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವವರನ್ನು ಮಾನಸಿಕವಾಗಿ ದುರ್ಬಲವಾಗಿರುವವರು ಎನ್ನುವುದು ಹಿಂದಿನ ಚಿಂತನೆಯಾಗಿತ್ತು. ಆದರೆ ಆಧುನಿಕ ಮನೋಚಿಕಿತ್ಸೆ ಇದನ್ನು ಬೇರೆಯ ರೀತಿಯಲ್ಲಿ ನೋಡುತ್ತದೆ. ನಮ್ಮೊಳಗಿನ ಯಾವುದೋ ಅಸಮಾಧಾನ, ನೋವುಗಳನ್ನು ಮರೆಯಲು ನಶೆಯ ವಸ್ತುಗಳನ್ನು ಬಳಸಿದಾಗ ನೋವು ತಾತ್ಕಾಲಿಕವಾಗಿ ಮರೆಯಾಗುತ್ತದೆ. ಹೀಗೆ ತಾತ್ಕಾಲಿಕ ನೋವು ನಿವಾರಕವಾಗಿ ಪ್ರಾರಂಭವಾಗುವ ಇವುಗಳ ಆಕರ್ಷಣೆ ನಿಧಾನವಾಗಿ ಅರಿವಿಲ್ಲದಂತೆಯೇ ಜೀವಕ್ಕೆ ಕಂಟಕವಾಗುವ ವ್ಯಸನವಾಗುತ್ತದೆ. ಆಕರ್ಷಣೆಗೆ ಕಾರಣವಾಗಿರುವ ಮಾನಸಿಕ ನೋವಿಗೆ ಪರಿಹಾರ ಹುಡುಕದೆ ವ್ಯಸನವನ್ನು ಕೇವಲ ವ್ಯಕ್ತಿತ್ವದ ಸಮಸ್ಯೆಯಾಗಿ ಆಥವಾ ದೌರ್ಬಲ್ಯದ ಸಂಕೇತವಾಗಿ ಪರಿಗಣಿಸಿದರೆ ಪರಿಹಾರ ಗಳು ಸಾಧ್ಯವಿಲ್ಲ ಎಂದು ವ್ಯಸನ ಚಿಕಿತ್ಸೆಯಲ್ಲಿ ಸಾಕಷ್ಟು ವರ್ಷ ಕೆಲಸಮಾಡಿರುವ ಕೆನಡಾದ ವೈದ್ಯ, ಮನೋಚಿಕಿತ್ಸಕ ಬರಹಗಾರ ಡಾ. ಗಾಬೋರ್ ಮಾಟೆ ಹೇಳುತ್ತಾರೆ.
ಲೈಂಗಿಕ ಆಕರ್ಷಣೆಗಳು ಸಹಜವಾದದ್ದು. ವಾಸ್ತವದಲ್ಲಿ ಲೈಂಗಿಕತೆಯನ್ನು ಆನಂದಿಸಲು ಸಮಯವಿನ್ನೂ ಸೂಕ್ತವಾಗಿಲ್ಲದಿ ದ್ದಾಗ ಕನಸುಗಳಲ್ಲಿ ಸಂತೋಷಪಡುವುದೂ ಮನುಷ್ಯ ಸಹಜ. ಆರೋಗ್ಯಕರ ಲೈಂಗಿಕತೆಯ ಎಲ್ಲಾ ವಿಚಾರಗಳೂ ನಮ್ಮಲ್ಲಿ ಮುಕ್ತವಾಗಿ ದೊರಕದಿರುವಾಗ ಅವುಗಳ ಕುರಿತಾದ ಕುತೂಹಲ ಕೂಡ ಅಷ್ಟೇ ಸಹಜ. ಇವತ್ತು ಅಂತರ್ಜಾಲದಲ್ಲಿ ಎಲ್ಲವೂ ದೊರೆಯುತ್ತಿರುವಾಗ ಯುವಜನತೆ ಅಲ್ಲಿ ತಮ್ಮ ಕುತೂಹಲ ತಣಿಸಿಕೊಳ್ಳುವುದನ್ನು ತಪ್ಪಿಸಲಾಗದು. ಲೈಂಗಿಕ ಆಕರ್ಷಣೆಗೆ ತಕ್ಷಣದ ಮಾನಸಿಕ ನೋವುಗಳನ್ನು ಮರೆಸುವ ಅದ್ಭುತ ಗುಣವಿದೆ. ಹಾಗಾಗಿ ತಮ್ಮ ನೋವು ಹಿಂಜರಿಕೆಗಳನ್ನು ಮರೆಯಲು ಯುವಕರು ಬೆರೆಳಂಚಿನಲ್ಲಿ ದೊರೆಯುವ ನೀಲಿಚಿತ್ರಗಳ ಜಗತ್ತನ್ನು ಆಶ್ರಯಿಸಿದರೆ ಅದನ್ನು ವ್ಯಸನವಾಗಿ ಅಂಟಿಸಿಕೊಳ್ಳುತ್ತಾರೆ.
ಸಾಮಾನ್ಯವಾಗಿ ಹೆಚ್ಚಿನ ಯುವಕರು ಹಸ್ತಮೈಥುನಕ್ಕೆ ಪೂರ್ವಪೀಠಿಕೆಯಾಗಿ ನೀಲಿಚಿತ್ರಗಳನ್ನು ಬಳಸುತ್ತಾರೆ. ಹಸ್ತಮೈಥುನಕ್ಕೆ ಅಗತ್ಯವಿರುವುದು ಒಂದು ರಮ್ಯವಾದ ಕಲ್ಪನಾಲೋಕ. ಆದರೆ ತಮ್ಮೊಳಗಿನ ಪ್ರಕೃತಿದತ್ತ ಕಲ್ಪನಾಲೋಕವನ್ನು ಬಳಸದೆ ಹೊರಗಿನ ಪ್ರೇರಣೆ ಗಳಿಗೆ ಒಡ್ಡಿಕೊಂಡಾಗ ಅವು ನಿಧಾನವಾಗಿ ನಶೆಯಂತೆ ಅಂಟಿಕೊಳ್ಳುತ್ತವೆ. ಆಗ ಲೈಂಗಿಕ ಬಯಕೆಯಿಲ್ಲದಿದ್ದರೂ ನೋವನ್ನು ಮರೆಯಲು ಸುಲಭವಾಗಿ ಉದ್ರೇಕವನ್ನು ಮೂಡಿಸುವ ನೀಲಿಚಿತ್ರಗಳನ್ನು ಬಳಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನೀಲಿಚಿತ್ರಗಳನ್ನು ನಶೆಯಾಗಿ ಅಂಟಿಸಿಕೊಂಡಿರುವ ಯುವಕರಿಗೆ ನನ್ನ ಕೆಲವು ಸಲಹೆಗಳಿವೆ.
1. ಆಕರ್ಷಣೆ ಮೂಡಿದ ತಕ್ಷಣ ಮೊಬೈಲ್‌ಗೆ ಕೈಚಾಚದೆ 5 ನಿಮಿಷ ನಿಧಾನಿಸಿ. ನಿಮ್ಮ ದೇಹ ಮನಸ್ಸುಗಳಲ್ಲಿ ಕಾಣಿಸಿಕೊಳ್ಳುವ ಒತ್ತಡವನ್ನು ಗಮನಿಸಿ. ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡಿ. ನಂತರ ಕೆಳಗಿನ ಅಂಶಗಳನ್ನು ನೆನಪಿಸಿಕೊಳ್ಳಿ.
2. ನೀಲಿಚಿತ್ರಗಳಲ್ಲಿ ನಟನೆಯಿರುತ್ತದೆಯೇ ಹೊರತು ಜೀವಂತಿಕೆಯಿರುವುದಿಲ್ಲ. ಅವುಗಳು ಪ್ಲಾಸ್ಟಿಕ್ ಹೂವುಗಳಂತೆ. ದೂರದಿಂದ ನೋಡಲು ಅತ್ಯಾಕರ್ಷಕ. ಆದರೆ ಹತ್ತಿರ ಹೋದಾಗ ತಿಳಿಯುವುದು ಆ ಹೂವುಗಳಲ್ಲಿ ನಿಜವಾದ ಹೂವಿನ ನವಿರು ನಾಜೂಕು ಸಹಜತೆ ಸುವಾಸನೆಗಳಿರುವುದಿಲ್ಲ.
3. ವಾಸ್ತವ ಜಗತ್ತಿನಲ್ಲಿ ಗಂಡು ಹೆಣ್ಣಿನ ಸಂಬಂಧದ ಭಾಗವಾಗಿ ಲೈಂಗಿಕತೆ ವ್ಯಕ್ತವಾಗುತ್ತದೆ. ಆದರೆ ನೀಲಿಚಿತ್ರಗಳಲ್ಲಿ ಸಂಬಂಧಗಳು ಪ್ರಸ್ತುತವಲ್ಲ. ಹಾಗಾಗಿ ಇವು ಅರೆಕ್ಷಣದ ಕನಸುಗಳು ಮಾತ್ರ, ದೀರ್ಘಕಾಲದಲ್ಲಿ ಉಳಿಯುವ ನಿಜವಲ್ಲ. ವೈವಾಹಿಕ ಜೀವನದಲ್ಲಿಯೂ ಇಂತಹ ಕನಸುಗಳಿಗೆ ಸ್ಥಾನವಿದೆ. ಆದರೆ ಅದನ್ನು ಅನುಭವಿಸಲು ದಾಂಪತ್ಯದ ಸಂಬಂಧ ಗಟ್ಟಿಯಾಗಿರಬೇಕು.
4. ಜೀವನದ ಪರಿಸ್ಥಿತಿಗಳು ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಬೀರುತ್ತಿರುವ ಪ್ರಭಾವಗಳ ಕುರಿತಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಇವತ್ತಿನ ವಾಸ್ತವದ ಕುರಿತಾದ ಅತೃಪ್ತಿ, ಭವಿಷ್ಯದ ಬಗೆಗಿನ ಆತಂಕಗಳು ಮುಂತಾದವು ನಿಮ್ಮೊಳಗೆ ಮೂಡಿಸುತ್ತಿರುವ ಮಾನಸಿಕ ತಲ್ಲಣ ಹಿಂಜರಿಕೆ ಅನಿಶ್ಚಿತತೆಗಳ ಕುರಿತಾಗಿ ಎಚ್ಚರಗೊಳ್ಳಿ. ನಿಮ್ಮ ಯಾವುದೋ ನೋವು ಕೀಳರಿಮೆಗಳನ್ನು ಮರೆಯುವುದಕ್ಕೆ ನೀಲಿಚಿತ್ರಗಳು ನೀಡುವ ತಾತ್ಕಾಲಿಕ ಸುಖದಲ್ಲಿ ಪರಿಹಾರ ಹುಡುಕುತ್ತಿದ್ದೀರಾ ಎಂದು ಯೋಚಿಸಿ. ಮಾನಸಿಕ ನೋವುಗಳಿಗೆ ಪರಿಹಾರಗಳನ್ನು ಮೊದಲು ಹುಡುಕಿ.
ನೀಲಿಚಿತ್ರಗಳು ವ್ಯಸನವಾಗಿ ಅಂಟಿಕೊಂಡಿದೆ ಎನ್ನಿಸಿದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.