ADVERTISEMENT

ಮಗು ಉಸಿರುಗಟ್ಟುತ್ತಿದೆಯೆ?...

ಡಾ.ಕೋಟ್ರೇಶ್ ಎಂ ಹರಪನಹಳ್ಳಿ
Published 17 ಆಗಸ್ಟ್ 2018, 19:30 IST
Last Updated 17 ಆಗಸ್ಟ್ 2018, 19:30 IST
Crying infant in white blanketಅಳುವ ಮಗು
Crying infant in white blanketಅಳುವ ಮಗು   

ನಮ್ಮ ಮಗು ಯಾವಾಗಲು ತುಂಬಾ ಲವಲವಿಕೆಯಿಂದ ಆಟ ಆಡುವುದು ಸಾಮಾನ್ಯವಾಗಿತ್ತು. ಆದರೆ ಒಂದು ದಿನ ಗೋಡೆಯ ಅಂಚಿಗೆ ತನ್ನ ಕಾಲನ್ನು ತಾಗಿಸಿಕೊಂಡು ಬಿದ್ದು, ಜೋರಾಗಿ ಏರು ಉಸಿರಲ್ಲಿ ಅಳಲು ಪ್ರಾರಂಭಿಸಿ ಮಗುವು ತನ್ನ ಏರುಸಿರಿಂದ ಮರುಕಳಿಸದೇ ಪ್ರಜ್ಞೆ ಕಳೆದುಕೊಂಡಿತು. ಆಗ ಮನೆಯ ಹಿರಿಯರು ಕಾಲಿನ ಬೆರಳು ಮತ್ತು ಕಿವಿಗಳನ್ನು ಎಳೆದಾಗ ಕೂಡಲೇ ಮಗುವಿನ ಏರುಸಿರು ಮರುಕಳಿಸಿ ಸಣ್ಣ ದನಿಯಲ್ಲಿ ಅಳುವನ್ನು ನಿಲ್ಲಿಸಿತು.

ಇದೇನು ದೊಡ್ಡ ಸಮಸ್ಯೆ ಇರಲಿಕ್ಕಿಲ್ಲವೆಂದು ನಾವು ನಿರ್ಲಕ್ಷ್ಯ ವಹಿಸಿದೆವು, ಆದರೆ ಮಗು ಮತ್ತೊಮ್ಮೆ ಬಿದ್ದು ಗಾಯ ಮಾಡಿಕೊಂಡಾಗ ಈ ಸಮಸ್ಯೆ ಪುನಃ ಮರುಕಳಿಸಿ ಈ ಉಸಿರುಗಟ್ಟುವಿಕೆ ನಮ್ಮ ಮನೆಯವರನ್ನೆಲ್ಲಾ ತುಂಬಾ ಚಿಂತೆಗೀಡುಮಾಡಿತು. ಮಗುವಿನ ಈ ಸಮಸ್ಯೆಯನ್ನು ಶಿಶುವೈದ್ಯರೊಂದಿಗೆ ದೀರ್ಘವಾಗಿ ಚರ್ಚಿಸಿದಾಗ ಹಲವಾರು ಅಂಶಗಳನ್ನು ಉಸಿರುಗಟ್ಟುವಿಕೆಯ ಬಗ್ಗೆ ತಿಳಿಸಿದರು.

ಉಸಿರುಗಟ್ಟುವಿಕೆಯು ಮಗುವಿನಲ್ಲಿರುವ ಅತಿಯಾದ ಕೋಪ, ತಕ್ಷಣದ ಅಘಾತ ಮತ್ತು ಅತಿಯಾದ ನೋವಿಗೆ ಒಳಗಾದಾಗ ಕಾಣಿಸಿಕೊಳ್ಳುವ ಸಮಸ್ಯೆ. ಉಸಿರುಗಟ್ಟುವಿಕೆಯಿಂದ ಬಳಲುತ್ತಿರುವ ಮಗು ಹೊರ ಹಾಕುವ ಉಸಿರನ್ನು ತಡೆದು ತನ್ನ ದೇಹವನ್ನು ತೆಳು ಬೂದುಬಣ್ಣಕ್ಕೆ ಅಥವಾ ನೀಲಿಬಣ್ಣಕ್ಕೆ ತಿರುಗಿಸಿಕೊಂಡು ಪ್ರಜ್ಞೆ ಕಳೆದುಕೊಳ್ಳುತ್ತದೆ.

ADVERTISEMENT

ಪ್ಯಾಲಿಡ್ ಮತ್ತು ಸೈನಾಟಿಕ್ ಎಂಬಎರಡು ಬಗೆಯ ಉಸಿರುಗಟ್ಟುವಿಕೆಯು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಪ್ಯಾಲಿಡ್ ಉಸಿರುಗಟ್ಟುವಿಕೆ ಮಗುವಿಗೆ ತಕ್ಷಣದ ನೋವು, ಗಾಯ ಮತ್ತು ತಲೆಗೆ ಏಟು ಬಿದ್ದಾಗ ಕಾಣಿಸಿಕೊಳ್ಳುತ್ತದೆ ಹಾಗೂ ಸೈನಾಟಿಕ ಉಸಿರುಗಟ್ಟುವಿಕೆಯು ಮಗುವಿಗೆ ಅತಿಯಾದ ಸಿಟ್ಟು ಮತ್ತು ಕೋಪದಿಂದ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಈ ಎರಡು ವಿಧದ ಸಮಸ್ಯೆಗಳಲ್ಲ್ಲಿ ಮಗುವು ಒಂದು ನಿಮಿಷದ ಒಳಗಾಗಿ ತನ್ನ ಪ್ರಜ್ಞೆಯನ್ನು ಪಡೆದುಕೊಳ್ಳುತ್ತದೆ. ಈ ಸಮಸ್ಯೆ ಮಗುವಿನ 6ರಿಂದ 7 ವರ್ಷ ವಯಸ್ಸಾಗುತ್ತಿದ್ದಂತೆ ಉಸಿರುಗಟ್ಟುವಿಕೆಯಿಂದ ಮುಕ್ತಗೊಳ್ಳುತ್ತದೆ.

ಉಸಿರುಗಟ್ಟುವಿಕೆಯಿಂದ ಬಳಲುವ ಮಗುವಿನ ಲಕ್ಷಣಗಳು:

* ಮಗುವು ತನ್ನ ದೇಹವನ್ನು ಹಿಂದಕ್ಕೆ ಬಾಗಿಸಿ ಅಳುತ್ತದೆ.

*ಸಂಪೂರ್ಣ ದೇಹವನ್ನು ಬಿಗುವುಗೊಳಿಸಿಕೊಳ್ಳುತ್ತದೆ.

* ದೇಹವನ್ನು ನಡುಗಿಸುತ್ತದೆ.

* ದೇಹವು ಸಂಪೂರ್ಣವಾಗಿ ಬೆವರುತ್ತದೆ.

* ಮಗುವು ಮೂತ್ರವನ್ನು ವಿಸರ್ಜಿಸುತ್ತದೆ.

ತಡೆಗಟ್ಟುವಿಕೆ:

* ಉಸಿರುಗಟ್ಟಿದ ಮಗುವಿನ ಮುಖಕ್ಕೆ ಬಾಯಿಯಿಂದ ಊದುವುದರಿಂದ ತಡೆಗಟ್ಟಬಹುದು.

* ಮಗುವನ್ನು ಅಂಗಾತ ಮಲಗಿಸಿ ಗಾಳಿ ಬೀಸುವುದರಿಂದ.

* ಕಾಲಿನ ಬೆರಳುಗಳನ್ನು ಎಳೆಯುವುದರಿಂದ ಮತ್ತು ಪಾದಗಳನ್ನು ಹಸ್ತಗಳಿಗೆ ಉಜ್ಜುವುದರಿಂದ ತಡೆಗಟ್ಟಬಹುದಾಗಿದೆ.

ಮಗುವಿನ ಉಸಿರುಗಟ್ಟುವಿಕೆಯು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಕಾಣಿಸಿಕೊಳ್ಳಬಹುದು. ಇದನ್ನು ಪತ್ತೆ ಹಚ್ಚಲು ಯಾವುದೇ ಪರೀಕ್ಷೆಗಳಿಲ್ಲದ ಕಾರಣ ಪೋಷಕರು ವೈದ್ಯರ ಬಳಿ ಹೇಳಿಕೊಂಡಾಗ ಮಗುವಿನ ಲಕ್ಷಣಗಳನ್ನು ಆಲಿಸಿ ಮಗುವಿಗೆ ಸಿಟ್ಟು ಬಾರದಂತೆ ಮತ್ತು ಬಿದ್ದು ಗಾಯ ಮಾಡಿಕೊಳ್ಳದಂತೆ ಎಚ್ಚರ ವಹಿಸಲು ಸಲಹೆಯನ್ನು ನೀಡಬಹುದು. ಮಗುವಿನಲ್ಲಿ ಪದೇ ಪದೇ ಮೇಲಿನ ಲಕ್ಷಣಗಳು ಕಾಣಿಸಿಕೊಂಡರೆ ನರರೋಗ ಅಥವಾ ಹೃದಯತಜ್ಞರ ಸಲಹೆ ಪಡೆಯಲು ತಿಳಿಸಬಹುದು.

ಕೆಲವು ಅಧ್ಯಯನಗಳ ಅವಲೋಕಿಸಿದಾಗ ಅನೀಮಿಯಾದಿಂದ ಬಳಲುತ್ತಿರುವ ತಾಯಿಯಿಂದ ಮಗುವಿನ ಜನನವಾದಾಗ, ಮಗುವಿನಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದ ಅಥವಾ ದೇಹಕ್ಕೆ ಕಬ್ಬಿಣದ ಅಂಶದ ಕೊರತೆಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದುದರಿಂದ ಮಗುವಿಗೆ ನಿಯಮಿತವಾಗಿ ಹೆಚ್ಚಿನ ಪೋಷಕಾಂಶವಿರುವ ಆಹಾರವನ್ನು ಕೊಡುವುದರಿಂದ ಮಗುವನ್ನು ಯಾವುದೇ ಸಮಸ್ಯೆಗಳಿಲ್ಲದೇ ಬೆಳೆಸಲು ಸಹಾಯವಾಗುತ್ತದೆ. ಉಸಿರುಗಟ್ಟುವಿಕೆಯು ಸಮಸ್ಯೆಯಿಂದ ಬಳಲುತ್ತಿರುವ ಮಗುವು ಒಂದು ನಿಮಿಷದೊಳಗಾಗಿ ತನ್ನ ಪ್ರಜ್ಞೆಯನ್ನು ಪಡೆದುಕೊಳ್ಳದಿದ್ದಲ್ಲಿ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.