ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಕ್ಲಾಸ್ ಎನ್ನುವ ಸಂಪ್ರದಾಯಹುಟ್ಟಿಕೊಂಡಿದೆ. ಇದರಿಂದ ಸಾಕಷ್ಟು ಜನರಲ್ಲಿ ಮೂಳೆ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ.
ಹೌದು, ಕಳೆದ ಎರಡು ವರ್ಷಗಳಿಂದ ಐಟಿ-ಬಿಟಿ ಸೇರಿದಂತೆ ಶೇ.50ರಷ್ಟು ಜನರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಿಂದಲೇ ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಎಲ್ಲದರ ಪರಿಣಾಮ ಮೂಳೆಗಳ ಮೇಲೆ ಬೀರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಮೊಣಕಾಲು, ಕೀಲು ನೋವು, ಬೆನ್ನು ನೋವು, ಸೊಂಟ ನೋವು, ಭುಜದ ನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ದೇಹಕ್ಕೆ ಅಗತ್ಯ ವ್ಯಾಯಾಮ ನೀಡದೇ ಇರುವುದು.ಆಹಾರ ಕ್ರಮ ಬದಲಾವಣೆ,ಜಂಕ್ ಫುಡ್ ಸೇವನೆ. ಇದರಿಂದ ಮೂಳೆಗಳು ಬಲ ಕಳೆದುಕೊಂಡು ಮೂಳೆ ಕಾಯಿಲೆಗಳ ಆಹ್ವಾನಕ್ಕೆ ನಾಂದಿಯಾಗಿದೆ.
‘ವಿಟಮಿನ್ ಡಿ’ಕೊರತೆ: ವರ್ಕ್ ಫ್ರಂ ಹೋಂ ಇಲ್ಲದೇ ಇದ್ದ ಸಂದರ್ಭದಲ್ಲಿ ಎಲ್ಲರೂ ಕಚೇರಿಗೆ ತೆರಳುತ್ತಿದ್ದರು. ಬೆಳಗ್ಗಿನ ಸಮಯದಲ್ಲಿ ಕೆಲಸಕ್ಕೆ ಹೋಗುತ್ತಿದ್ದರಿಂದ ಸೂರ್ಯನ ಕಿರಣಗಳು ಹೇರಳವಾಗಿ ದೇಹಕ್ಕೆ ಬೀಳುತಿತ್ತು. ಇದು ಮೂಳೆ ರೋಗಕ್ಕೆ ಮದ್ದಾಗಿತ್ತು. ಆದರೀಗ ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಭಾರತೀಯರಲ್ಲೂ ವಿಟಮಿನ್ ಡಿ ಕೊರತೆ ಕಾಡುತ್ತಿದ್ದು, ಮೂಳೆ ನೋವಿಗೆ ಕಾರಣವಾಗಿದೆ.
ಮಕ್ಕಳ ಭವಿಷ್ಯ ಆತಂಕಕಾರಿ: ಆನ್‌ಲೈನ ಕ್ಲಾಸ್‌ಗಳಿಂದಾಗಿ ಮಕ್ಕಳೆಲ್ಲಾ ಮನೆಯಿಂದಲೇ ಪಾಠ ಕಲಿಯುತ್ತಿದ್ದಾರೆ, ಇವರಿಗೆ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ, ಮನೆಯಲ್ಲಿ ವ್ಯಾಯಾಮವೂ ಇಲ್ಲ. ಇದರಿಂದ ಮಕ್ಕಳ ಮೂಳೆಗಳು ಸಹ ದುರ್ಬಲವಾಗುತ್ತಿವೆ. ಇದು ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈಗಾಗಲೇ ಸಾಕಷ್ಟು ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸಹ ಮಂಡಿನೋವು, ಬೆನ್ನು, ಭುಜ, ಮೊಣಕೈ, ಸೊಂಟ ನೋವಿಗೆ ಕಾರಣವಾಗಲಿದೆ.
ಪರಿಹಾರವೇನು?
ಲಾಕ್‌ಡೌನ್ ಮುಗಿದರೂ ಕಚೇರಿ, ಶಾಲೆಗಳು ಈಗಲೂ ತೆರೆದಿಲ್ಲ, ಅಲ್ಲಿಯವರೆಗೂ ಮನೆಯಲ್ಲೇ ಕೆಲ ಚಟುವಟಿಕೆಯಿಂದ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಮನೆಯಲ್ಲೇ ವ್ಯಾಯಾಮ ಪ್ರಾರಂಭಿಸಿ, ಕನಿಷ್ಠ 30 ನಿಮಿಷಗಳ ಕಾಲ ನಡೆಯುವ ಅಭ್ಯಾಸ ಮಾಡಿಕೊಳ್ಳಿ, ಕಾಲುಗಳಿಗೆ ಹೆಚ್ಚಿನ ವ್ಯಾಯಾಮ ಅಗತ್ಯ.
ಕುತ್ತಿಗೆಯನ್ನು ದಿನಕ್ಕೆ 5 ನಿಮಿಷಗಳವರೆಗೆ ತಿರುಗಿಸುತ್ತಿರಿ.ಭುಜಗಳ ವ್ಯಾಯಾಮ ಮಾಡುತ್ತಿರಿ. ಬೆನ್ನು ಮೂಳೆಗಾಗಿ 15 ರಿಂದ 20 ನಿಮಿಷಗಳ ಕಾಲ ವಿರುದ್ಧವಾಗಿ ಬಾಗಿ.ಇದು ಬೆನ್ನು ಮೂಳೆಯನ್ನು ಆರೋಗ್ಯವಾಗಿಡುತ್ತದೆ.
ತೀವ್ರತರವಾದ ನೋವಿಗೆ ವೈದ್ಯರನ್ನು ಭೇಟಿ ಮಾಡಿ
ಕೆಲವರಿಗೆ ಮೂಳೆ ನೋವುಗಳು ಸಾಮಾನ್ಯ ವ್ಯಾಯಮಕ್ಕೆ ಬಾಗುವುದಿಲ್ಲ. ಅತಿಯಾದ ನೋವು ಕಾಣಿಸಿಕೊಳ್ಳುತ್ತಿದ್ದರೆ, ಅಥವಾ ಊತ, ಕೀವು ತುಂಬಿರುವುದು ಗಮನಕ್ಕೆ ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
––––
ಲೇಖಕರು: ಡಾ. ರಘು ನಾಗರಾಜ್, ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಾ ತಜ್ಞರು, ಫೋರ್ಟಿಸ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.