ADVERTISEMENT

ಕೊರೊನಾ: ಒಂದಿಷ್ಟು ತಿಳಿಯೋಣ; ಕ್ಯಾನ್ಸರ್‌ ರೋಗಿಗಳು ಹೆಚ್ಚು ಜಾಗರೂಕರಾಗಿರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 19:50 IST
Last Updated 14 ಅಕ್ಟೋಬರ್ 2020, 19:50 IST
ಡಾ.ವಿನಯ್‌ ಮುತ್ತಗಿ, ರೆಡಿಯಾಲಜಿಸ್ಟ್‌ ಅಂಕಾಲಾಜಿ 
ಡಾ.ವಿನಯ್‌ ಮುತ್ತಗಿ, ರೆಡಿಯಾಲಜಿಸ್ಟ್‌ ಅಂಕಾಲಾಜಿ    

ಹುಬ್ಬಳ್ಳಿ: ಇತರ ಕಾಯಿಲೆಗಳಿಗೆ ಹೋಲಿಸಿದರೆ ಕ್ಯಾನ್ಸರ್‌ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ತೀರಾ ಕಮ್ಮಿಯಿರಲಿದೆ. ಆದ್ದರಿಂದ ಕ್ಯಾನ್ಸರ್‌ ರೋಗಿಗಳು, ಬಹು ಬೇಗ ಕೋವಿಡ್‌ಗೆ ತುತ್ತಾಗುತ್ತಾರೆ. ಈ ಕಾರಣಕ್ಕೆ ಕ್ಯಾನ್ಸರ್‌ ರೋಗಿಗಳು, ಕ್ಯಾನ್ಸರ್‌ನಿಂದ ಗುಣಮುಖರಾಗಿರುವವರು ಈ ಕಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದಿರುವುದು ಮುಖ್ಯ ಎನ್ನುತ್ತಾರೆ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್‌ ಕ್ಯಾನ್ಸರ್‌ ಸೆಂಟರ್‌ನ ರೆಡಿಯಾಲಜಿಸ್ಟ್‌ ಅಂಕಾಲಾಜಿ ಡಾ.ವಿನಯ್‌ ಮುತ್ತಗಿ.

ಕ್ಯಾನ್ಸರ್‌ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರದಿರುವುದರಿಂದ ಸೋಂಕಿನ (ಇನ್‌ಫೆಕ್ಷನ್‌) ತೀವ್ರತೆ‍ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಸೋಂಕಿಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಜನದಟ್ಟಣೆ ಇರುವ ಪ್ರದೇಶದಿಂದ ದೂರವಿರಬೇಕು.

ಕ್ಯಾನ್ಸರ್‌ ರೋಗಿಗಳಲ್ಲಿ ಕೋವಿಡ್‌ ದೃಢಪಟ್ಟರೆ ಅಂಥವರಿಗೆ ಎಲ್ಲ ಶಸ್ತ್ರಚಿಕಿತ್ಸೆಗಳನ್ನೂ ಮುಂದೂಡಲಾಗುವುದು. ಇದು ಅವಶ್ಯಕ ಕೂಡ. ಕೋವಿಡ್‌ ಚಿಕಿತ್ಸೆ ನಂತರವೇ ಅವರನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಗುವುದು. ಅಂಥ ಅವಧಿಯಲ್ಲಿ ರೋಗಿಗಳು ಕಾಯಿಲೆಯ ಉಲ್ಬಣತೆಯ ಬಗ್ಗೆ ಗಮನ ಹರಿಸಬೇಕು. ಉಲ್ಬಣಗೊಂಡಲ್ಲಿ ತಕ್ಷಣ ಸಂಬಂಧಪಟ್ಟ ವೈದ್ಯರ ಸಲಹೆ ಪಡೆಯುವುದು ಅವಶ್ಯ. ತುರ್ತು ಶಸ್ತ್ರಚಿಕಿತ್ಸೆ ಹಾಗೂ ವಿಕಿರಣ ಚಿಕಿತ್ಸೆ(ರೆಡಿಯೊಥೆರಫಿ)ಯನ್ನು ವೈದ್ಯಕೀಯ ಮುಂಜಾಗ್ರತೆಯಿಂದ ನಿರ್ವಹಿಸಲಾಗವುದು. ವಿಕಿರಣ ಚಿಕಿತ್ಸೆಯಿಂದ ಬಿಳಿರಕ್ತ ಕಣಗಳು ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಇನ್ನಷ್ಟು ಕುಗ್ಗಲಿದೆ.

ADVERTISEMENT

ಕೋವಿಡ್‌ ಬಾಧಿತ ಕ್ಯಾನ್ಸರ್‌ ರೋಗಿಗಳ ಆಹಾರ ಕ್ರಮದಲ್ಲಿ ಯಾವುದೇ ಪಥ್ಯ ಇರುವುದಿಲ್ಲ. ಶುಚಿಯಾದ, ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಅವಶ್ಯಕ. ಕಾಯಿಲೆಯ ಜೊತೆ ಜೊತೆಗೆ ಅದರ ಇತಿಮಿತಿಯಲ್ಲಿ ರೋಗಿಗೆ ಅನುಕೂಲವಾಗುವ ಎಲ್ಲ ಕಾರ್ಯ ನಿರ್ವಹಿಸಬಹುದು.

‌ಕ್ಯಾನ್ಸರ್‌ ಚಿಕಿತ್ಸೆಯಿಂದ ಗುಣಮುಖರಾದವರಲ್ಲಿ ಚಿಕಿತ್ಸೆಯಿಂದಾದ ಅಡ್ಡಪರಿಣಾಮಗಳು ಇರುವುದರಿಂದ ರೋಗನಿರೋಧಕ ಶಕ್ತಿ ಕುಗ್ಗಿರಲಿದೆ. ಹಾಗಾಗಿ ರೋಗಿಗಳಿಗೆ ತಿಳಿಸಿದ ಎಲ್ಲ ಸುರಕ್ಷಾ ಕ್ರಮಗಳನ್ನೂ ಅನುಸರಿಸುವುದು ಅವಶ್ಯ.

ಚಿಕಿತ್ಸೆಗಿಂತ ಮುಂಜಾಗ್ರತೆಯೇ ಮುಖ್ಯ

*ಕೋವಿಡ್‌ ಅಪಾಯಕಾರಿಯೆನಿಸಿರುವುದರಿಂದ ಸಾಮಾನ್ಯ ಜನರು, ಕ್ಯಾನ್ಸರ್‌ ಬಾಧಿತರು ಎಲ್ಲ ಬಗೆಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು.

*ಆರೋಗ್ಯದತ್ತ ಹೆಚ್ಚು ನಿಗಾಯಿಡಬೇಕು.

*ಸರಿಯಾದ ಸಮಯಕ್ಕೆ ಬಿಸಿಬಿಸಿಯಾದ ಆಹಾರ ಸೇವಿಸಬೇಕು.

*ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು.

*ಜನಸಂದಣಿ ಇರುವ ಪ್ರದೇಶದಿಂದ ದೂರವಿರಬೇಕು.

*ಮನೆಯಲ್ಲಿದ್ದಾಗ ಸಾಬೂನು ಬಳಸಿ ಕೈತೊಳೆಯಿರಿ, ಪ್ರಯಾಣದಲ್ಲಿದ್ದರೆ ಸ್ಯಾನಿಟೈಸರ್‌ ಬಳಸಿ.

*ಎಲ್ಲಕ್ಕಿಂತ ಮುಖ್ಯವಾಗಿ ಭಯದಿಂದ ಹೊರಗಿರಿ.

*ಆರೋಗ್ಯದಲ್ಲಿ ವ್ಯತ್ಯಯವಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.