ನಾವು ಹೆಚ್ಚು ಕಷ್ಟಪಡದೇ ಕಲಿತುಕೊಳ್ಳುವ ಪದಗಳೆಂದರೆ ಬೈಗುಳ. ಚಿಕ್ಕಂದಿನಿಂದ ಕೇಳಿಸಿಕೊಂಡು ಬೆಳೆದ ಹಲವಾರು ಬೈಗುಳಗಳು ನಮ್ಮ ನೆನಪಿನ ಡಿಕ್ಷನರಿಯಲ್ಲಿ ತಂತಾನೆ ಸೇರಿಕೊಂಡು ಬಿಟ್ಟಿರುತ್ತವೆ. ಸಂದರ್ಭಾನುಸಾರ ಸರಾಗವಾಗಿ ನಾಲಿಗೆಗೆ ಬಂದು ಬಿಟ್ಟಿರುತ್ತವೆ. ಆದರೂ ಬಯ್ಯುವಾಗ ನಾವು ಜಾಗ್ರತೆ ಮಾಡಿಕೊಳ್ಳಬೇಕಾಗುತ್ತದೆ. Taste your words before you serve them to others ಎನ್ನುವ ಮಾತಿದೆ. ನಮಗೆ ಯಾವ ಶಬ್ಧಗಳನ್ನು ಕೇಳಿಸಿಕೊಳ್ಳಲು ಕಷ್ಟವಾಗುತ್ತದೆಯೋ ಸಾಧ್ಯವಾದಷ್ಟು ಆ ಶಬ್ದಗಳನ್ನು ಉಪಯೋಗಿಸದಿರುವುದು ಒಳಿತು.
ಸಾಮಾನ್ಯವಾಗಿ ಅಮ್ಮಂದಿರ ಸಿಟ್ಟು, ಮಕ್ಕಳಿಗೆ ಮೂಲವಾಗಿರುತ್ತವೆ. ಕೆಲಸದ ಒತ್ತಡದಲ್ಲಿ ಅಸಹಾಯಕ ಜೀವಗಳೇ ಬೈಗುಳಗಳಿಗೆ ಬಲಿಯಾಗುತ್ತವೆ. ಕೆಲವೊಮ್ಮೆ ಬೈಯ್ಯುವುದು ಅನಿವಾರ್ಯವಲ್ಲದಿದ್ದರೂ ಒತ್ತಡದಲ್ಲಿ ಬಾಯಿಮೀರಿ ದಾಟಿರುತ್ತವೆ. ಮಕ್ಕಳ ಮೇಲಿನ ಪರಿಣಾಮ ಏನಾಗಬಹುದು ಗೊತ್ತೆ?
ಮಕ್ಕಳನ್ನು ಬೈಯುವಾಗ ಜಾಗ್ರತೆಯಿರಲಿ
ಬೆಳೆಯುವ ಮಕ್ಕಳಿಗೆ ಮೆಚ್ಚುಗೆ ಮಾತುಗಳು ಅವರ ಆತ್ಮ ವಿಶ್ವಾಸಕ್ಕೆ ಟಾನಿಕ್ ಇದ್ದ ಹಾಗೆ. ತಪ್ಪು ಮಾಡಿದಾಗ ಬೈದು ಸರಿದಾರಿಗೆ ತರಬೇಕು. ಮಕ್ಕಳು ಮೊದಲ ಸಲ ತಪ್ಪು ಮಾಡಿದಾಗ ನಾವು ಬಳಸುವ ಶಬ್ದಗಳು ಕಠೋರವಾಗಿರದಿರಲಿ. ಸರಿ ಯಾವುದು ತಪ್ಪು ಯಾವುದು ತಿಳಿಯದೆ ಮಾಡಿದ ತಪ್ಪುಗಳನ್ನು ಘೋರವಾಗಿ ಶಿಕ್ಷಿಸಿದರೆ ಅವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಪ್ರತಿ ಕೆಲಸ ಮಾಡುವಾಗ ಹೆದರುತ್ತಾರೆ. ಆ ಭಯದಲ್ಲಿ ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ. ಮಕ್ಕಳು ತಪ್ಪು ಮಾಡಿದಾಗ, ಸರಿ ಮಾಡುವುದು ಹೇಗೆಂದು ತಿಳಿಸಿಕೊಡಿ. ಯಾವುದೇ ಕಾರಣಕ್ಕೂ ನೀನು ಅಪ್ರಯೋಜಕ, ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ, ನೀನು ಉದ್ದಾರವಾಗಲ್ಲ, ನನಗೆ ಮುಖ ತೋರಿಸಬೇಡ, ನೀನು ಬದುಕಿರಲು ನಾಲಾಯಕ್ ಎನ್ನುವಂತಹ ವಾಕ್ಯಗಳನ್ನು ಬಳಸಬೇಡಿ. ಕೋಪದ ಭರದಲ್ಲಿ ಮಗುವಿನ ಆತ್ಮವಿಶ್ವಾಸವನ್ನು ಕೊಲ್ಲುವುದು ತರವಲ್ಲ.
ಮಕ್ಕಳನ್ನು ಬಯ್ಯದೇ ಬೆಳೆಸುವುದು ಅತಿ ಕಷ್ಟ. ಅದರಲ್ಲೂ ಪ್ರತಿದಿನ ಬೆಳಿಗ್ಗೆ ಮಕ್ಕಳನ್ನು ಎಬ್ಬಿಸಿ, ರೆಡಿ ಮಾಡಿ, ತಿನ್ನಿಸಿ ಶಾಲೆಯ ವಸ್ತುಗಳನ್ನು ಒಟ್ಟು ಮಾಡಿ ಶಾಲೆಗೆ ಕಳಿಸುವಷ್ಟರಲ್ಲಿ ತಾಯಂದಿರ ತಾಳ್ಮೆ ಕಳೆದು ಹೋಗಿ ಹೆಚ್ಚಿನ ಮನೆಗಳಲ್ಲಿ ಬೈಗುಳ ತಾರಕಕ್ಕೇರಿರುತ್ತದೆ. ಮಕ್ಕಳು ಶಾಲೆಗೆ ಹೋದ ತಕ್ಷಣ ಉಸ್ಸಪ್ಪಾ ಎಂದು ಕೂತು, ಮಕ್ಕಳಿಗೆ ಬೈದು ಕಳಿಸಿದ್ದನ್ನು ನೆನೆದು ಮತ್ತೆ ಕಣ್ಣೀರಾಗುತ್ತಾರೆ. ಬಹುಶಃ ಮನೆಯ ಜವಾಬ್ದಾರಿಗಳನ್ನು ಮಕ್ಕಳ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದೀನೋ ಇಲ್ಲವೋ ಎನ್ನುವ ಆತಂಕ. ಮಕ್ಕಳು ಸರಿಯಾಗಿ ಬೆಳೆಯುತ್ತಿಲ್ಲವೇನೋ ಎನ್ನುವ ಭಯ. ಮನೆಯ ಎಲ್ಲ ಕೆಲಸಗಳನ್ನು ನಾನೊಬ್ಬಳೇ ಮಾಡುತ್ತಿದ್ದೇನೆ. ಇತರರು ಸಹಾಯ ಮಾಡುತ್ತಿಲ್ಲವೆನ್ನುವ ಅಸಹನೆ. ಎಲ್ಲ ಕೆಲಸಗಳನ್ನು ಮುಗಿಸಿ ತಾನೂ ಕೆಲಸಕ್ಕೆ ಹೊರಡಬೇಕಾದ ಅನಿವಾರ್ಯತೆ. ಎಲ್ಲ ಒತ್ತಡಗಳು ಒಟ್ಟಾದಲ್ಲಿ ಪರಿಣಾಮ ಬೈಗುಳಗಳು.
ಪೋಷಕರಿಗೆ ಕೆಲವು ಸಲಹೆಗಳು
* ಮಕ್ಕಳ ಪ್ರತಿಯೊಂದು ಕೆಲಸಗಳನ್ನು ನೀವೇ ಮಾಡದೆ ಆಯ್ದ ಕೆಲಸಗಳನ್ನು ಅವರೇ ಮಾಡಿಕೊಳ್ಳಲಿ.
* ಮನೆಯ ಇತರ ಸದಸ್ಯರ ಸಹಕಾರ ಪಡೆದುಕೊಳ್ಳಿ. ನಿಮಗೆ ಯಾವ ರೀತಿಯ ಸಹಕಾರ ಬೇಕು ಎಂದು ಸ್ಪಷ್ಟವಾಗಿ ತಿಳಿಸಿ.
* ಎಲ್ಲಾ ಕೆಲಸಗಳನ್ನು ಮನೆಯ ಸದಸ್ಯರ ಜೊತೆ ಹಂಚಿಕೊಳ್ಳಿ.
* ಇತರ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಹೋಲಿಸಿ ಆತಂಕ ಬೇಡ
ಬೈಗುಳ ಮತ್ತು ಮಕ್ಕಳ ಮನಸ್ಸು
* ಮನಸ್ಸನ್ನು ನೋಯಿಸುವ ಮತ್ತು ನಿಂದಿಸುವ ಬೈಗುಳ 'ಭಾವನಾತ್ಮಕ ಶೋಷಣೆ'ಯಾಗುತ್ತದೆ.
* ನಿರಂತರ ಬೈಗುಳ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.
* ಕೀಳರಿಮೆ, ಆತ್ಮ ನ್ಯೂನ್ಯತೆ, ಅಪರಾಧಿ ಪ್ರಜ್ಞೆ ಬೆಳೆಸುತ್ತದೆ.
* ಖಿನ್ನತೆ, ಆತಂಕ, ಗೀಳು, ಮನೋಬೇನೆಗಳಿಗೆ ದಾರಿ ಮಾಡಿಕೊಡಬಹುದು.
* ಆತ್ಮವಿಶ್ವಾಸದ ಖನಿಗಳಾಗಿಸಿ.
ಮಕ್ಕಳಿಗೆ ಬೈಗುಳ ಹೇಗಿರಬೇಕು
* ತಪ್ಪಿಗೆ ತಕ್ಕಂತೆ ಇರಲಿ.
* ಹಳೆಯ ತಪ್ಪುಗಳನ್ನು ನೆನಪಿಸುವುದು ಬೇಡ.
* ಮನೆಯ ಸದಸ್ಯರೆಲ್ಲಾ ಒಟ್ಟಿಗೆ ಸೇರಿ ಬಯ್ಯುವುದು ಬೇಡ.
* ಅನಿವಾರ್ಯವಾಗದಿದ್ದಲ್ಲಿ ಎಲ್ಲರ ಸಮ್ಮುಖದಲ್ಲಿ ಬಯ್ಯದಿರಿ.
* ಮಕ್ಕಳು ಮಾಡಿದ ತಪ್ಪನ್ನು ತಿದ್ದಿಕೊಂಡು ಸರಿಪಡಿಸಿಕೊಳ್ಳುವಷ್ಟು ಕೋಪ ತೋರಿಸಿ.
* ನಿಮ್ಮ ಬೈಗುಳ ಅವರಲ್ಲಿ ನಿರಂತರ ಭಯ ಹುಟ್ಟಿಸಿ ಹೆಚ್ಚು ತಪ್ಪುಗಳನ್ನು ಮಾಡಿಸದಿರಲಿ.
* ನಿಮ್ಮ ಬೈಗುಳ ಅವರ ಅಂತರಾತ್ಮದ ಧ್ವನಿಗಳಾಗಿ ಬಿಡುತ್ತವೆ. ‘ನೀನು ಅಪ್ರಯೋಜಕ, ನಿನ್ನಿಂದ ಏನೂ ಸಾಧನೆ ಮಾಡಲಾಗುವುದಿಲ್ಲ' ‘ನೀನು ನನಗೆ ತಕ್ಕನಾದ ಮಗನಲ್ಲ' ಈ ರೀತಿಯ ನೋವುಂಟು ಮಾಡುವ ಬೈಗುಳಗಳು ಸಲ್ಲ.
ಹೆತ್ತವರ ಮನಸ್ಥಿತಿ ಮತ್ತು ಬೈಗುಳ
ಹೆತ್ತವರ ಮನಸ್ಥಿತಿ ಸರಿ ಇಲ್ಲದಿದ್ದರೆ, ಅತಿಯಾಗಿ ಸುಸ್ತಾಗಿದ್ದರೆ, ದುಶ್ಚಟಗಳ ಅಭ್ಯಾಸವಿದ್ದರೆ, ಮಕ್ಕಳು ನಿತ್ಯ ಮಾಡುವ ಚಟುವಟಿಕೆಗಳಲ್ಲೇ ಹೆಚ್ಚು ತಪ್ಪುಗಳು ಕಾಣತೊಡಗುತ್ತವೆ. ಅಲಕ್ಷ್ಯ ಮಾಡಬಹುದಾದ ವಿಚಾರಗಳಿಗೂ ಮಕ್ಕಳನ್ನು ದೂಷಿಸುವಂತಾಗಬಹುದು. ಒಂದು ವೇಳೆ ನೀವು ಪದೇ ಪದೇ ತಾಳ್ಮೆ ಕಳೆದುಕೊಳ್ಳುವುದು ಮಕ್ಕಳಿಗೆ ಬಯ್ಯುವಂತಾಗುತ್ತಿದ್ದಾರೆ ನೀವು ಆಪ್ತ ಸಮಾಲೋಚನೆಯ ಸಹಾಯ ಪಡೆದುಕೊಳ್ಳಬಹುದು. ಮಹಿಳೆಯರಲ್ಲಿ ಚಿಕಿತ್ಸೆ ಪಡೆಯದ ಮಾನಸಿಕ ಸ್ಥಿತಿಗಳು, ರಕ್ತ ಹೀನತೆ, ಮುಟ್ಟಿನ ಸಂಬಂಧಿ ಮಾನಸಿಕ ಒತ್ತಡಗಳು ಹಾಗೆಯೇ ದಾಂಪತ್ಯವಿರಸ, ಕೌಟುಂಬಿಕ ಕಲಹಗಳು, ಅತ್ತೆ ಸೊಸೆ ಮನಸ್ತಾಪಗಳು, ಹೊಂದಾಣಿಕೆ ಸಮಸ್ಯೆಗಳು ಇತ್ಯಾದಿ ಕೋಪ ಹೆಚ್ಚಾಗಲು ಕಾರಣವಾಗಿರುತ್ತದೆ. ಅಸಹಾಯಕತೆಯಿಂದ ಕೂಡಿದ ಅವರ ಕೋಪ ಚಿಕಿತ್ಸೆಯಿಂದ ಗಣನೀಯವಾಗಿ ಕಡಿಮೆಯಾಗಬಹುದು.
ಬೈಸಿಕೊಳ್ಳುವುದು ಹೇಗೆ?
ಬೈಸಿಕೊಳ್ಳುವುದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ :-
* ಬೈಸಿಕೊಳ್ಳುವುದರ ಭಯದಲ್ಲಿ ನಾವು ಕೆಲಸಗಳನ್ನು ಮತ್ತಷ್ಟು ಜಾಗ್ರತೆಯಿಂದ, ವಿಭಿನ್ನವಾಗಿ ಮಾಡುವುದರಿಂದ ಉತ್ಕೃಷ್ಟತೆಯನ್ನು ಬೆಳೆಸಿಕೊಳ್ಳಬಹುದು.
* ನಾವು ಮಾಡಿದ ಕೆಲಸದಲ್ಲಿನ ಲೋಪವನ್ನು ಯಾರಾದರೂ ಖಂಡಿಸಿ ಬೈದರೆ, ಅದು ನಾವು ಆ ದಿನ ಮಾಡಿದ ಕೆಲಸದಲ್ಲಿನ ತಪ್ಪಿಗೆ ಬೈದದ್ದು ಎಂದು ಪರಿಗಣಿಸಬೇಕೇ ವಿನಃ, ನಮ್ಮ ವ್ಯಕ್ತಿತ್ವದ ಕುರಿತಾದ ವಿಶ್ಲೇಷಣೆಯಲ್ಲ ಎಂದು ತಿಳಿದುಕೊಳ್ಳಬೇಕು.
* ಅಕಾರಣವಾಗಿ ಯಾರಾದರೂ ಅವಮಾನಿಸಲೆಂದೇ ಬಯ್ಯುತ್ತಿದ್ದಾರೆ ಎಂದು ತಿಳಿದರೆ, ವಿಚಲಿತರಾಗಬೇಡಿ.
ನೀವು ಏನೇ ಮಾಡಿದರೂ ಒಳಿತನ್ನು ಗುರುತಿಸದೆ, ಎಲ್ಲದಕ್ಕೂ ಬೈಯುತ್ತಿರುವವರು ನಿಮ್ಮ ಸುತ್ತ ಇರಬಹುದು. ಅವರನ್ನು ಹಾಗೆಯೇ ಒಪ್ಪಿಕೊಳ್ಳಿ. ಅವರ ಕೋಪ - ಬೈಗುಳ ಅವರ ವ್ಯಕ್ತಿತ್ವವನ್ನು ಸೂಚಿಸುತ್ತದೆಯೇ ವಿನಃ ನಿಮ್ಮ ಕುರಿತಲ್ಲ. ಒಂದು ವೇಳೆ ನೀವು ಅಲಕ್ಷಿಸಿಯೂ ನಿಮಗೆ ಹಾನಿ ಮಾಡುವ ಹಾಗೆ ಅವರ ದೂಷಿಸುವ ಪ್ರವೃತ್ತಿ ಮುಂದುವರಿದರೆ ಸ್ಥಳ ಬದಲಾಯಿಸಿ.
ಬೈಯುವುದು ಬೈಸಿಕೊಳ್ಳುವುದು ಬದುಕಿನ ಭಾಗವೇ ಆಗಿರುವುದರಿಂದ ಪ್ರೀತಿಯ ಬೈಗುಳಗಳನ್ನು ಹೆಚ್ಚಿಸಿಕೊಳ್ಳೋಣ. ಯಾರಿಂದಲೂ ಬೈಸಿಕೊಳ್ಳದಂತೆ ಕೆಲಸ ಮಾಡೋಣ. ನಮ್ಮ ಕುರಿತಾದ ಕಾಳಜಿ ನಾವು ಮಾಡುತ್ತಿಲ್ಲವೆಂದು ಬಯ್ಯುವ ಸ್ನೇಹಿತರು, ಬಂಧುಗಳು ಇರುವಷ್ಟು ದಿನ ಬದುಕು ಸುಂದರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.