ಗರ್ಭ ಧಾರಣೆಯ ನಂತರ ಹಾರ್ಮೋನ್ ಬದಲಾವಣೆಯಿಂದಾಗಿ ಸಹಜವಾಗಿಯೇ ಗರ್ಭಿಣಿಯಲ್ಲಿ ಹಲವಾರು ದೈಹಿಕ ಬದಲಾವಣೆಗಳಾಗುತ್ತವೆ. ಕೆಲವರಿಗೆ ವಸಡು ಊದಿಕೊಳ್ಳುತ್ತದೆ. ಕಬ್ಬಿಣದ ಅಂಶದ ಕೊರತೆಯಿಂದಾಗಿ ರಕ್ತಹೀನತೆ ತಲೆದೋರಬಹುದು. ಮಲಬದ್ಧತೆಯಂತೂ ಗರ್ಭಿಣಿಯರಲ್ಲಿ ಸಾಮಾನ್ಯ. ಇಂತಹ ಸಮಸ್ಯೆಗಳಿಗೆಲ್ಲ ರಾಮಬಾಣ ಒಣ ದ್ರಾಕ್ಷಿ.
ಇದರಲ್ಲಿರುವ ಅಧಿಕ ಪ್ರಮಾಣದ ಕ್ಯಾಲ್ಸಿಯಂ, ಒಲಿಯನೋಲಿಕ್ ಆಮ್ಲ ಹಲ್ಲು ಹಾಗೂ ವಸಡಿನ ಆರೋಗ್ಯವನ್ನು ಕಾಪಾಡುತ್ತದೆ.
ಮಲಬದ್ಧತೆಗೆ ಒಣ ದ್ರಾಕ್ಷಿಯಿಂದ ಪರಿಹಾರ ಲಭ್ಯ. ಇದರಲ್ಲಿರುವ ಅಧಿಕ ಪ್ರಮಾಣದ ನಾರಿನಂಶ ದೇಹದಲ್ಲಿರುವ ನೀರನ್ನು ಹೀರಿಕೊಂಡು ಲ್ಯಾಕ್ಸೇಟಿವ್ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಮಲವಿಸರ್ಜನೆ ಯಾವ ಅಡೆತಡೆಯೂ ಇಲ್ಲದೇ ಆರಾಮವಾಗಿ ಆಗುತ್ತದೆ.
ಗರ್ಭಿಣಿಯಾದಾಗ ಹಲವಾರು ಬದಲಾವಣೆಗಳು ಉಂಟಾಗುವುದರಿಂದ ಕ್ಯಾನ್ಸರ್‌ಕಾರಕ ಅಂಶಗಳೂ ಜಾಸ್ತಿಯಾಗಬಹುದು. ಒಣ ದ್ರಾಕ್ಷಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶವು ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ‍್ಯಾಡಿಕಲ್ಸ್ ವಿರುದ್ಧ ಹೋರಾಡುತ್ತದೆ.
ಒಣ ದ್ರಾಕ್ಷಿಯು ತಾಯಿಗೆ ಮಾತ್ರವಲ್ಲ, ಮಗುವಿಗೆ ಕೂಡ ರಕ್ಷೆ ನೀಡುತ್ತದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಜಾಸ್ತಿ ಇರುವುದರಿಂದ ಮಗುವಿನ ಎಲುಬು ಗಟ್ಟಿಯಾಗಲು ನೆರವಾಗುತ್ತದೆ. ಹೀಗಾಗಿ ಗರ್ಭಿಣಿಯರು ಇದನ್ನು ಸೇವಿಸುವುದು ಅಗತ್ಯ.
ಹಾಗಂತ ಇದನ್ನು ಎಷ್ಟು ಸೇವಿಸಬೇಕು ಎಂಬ ಪ್ರಶ್ನೆ ಏಳಬಹುದು. ನಿತ್ಯ ರಾತ್ರಿ ಒಂದು ಹಿಡಿ (ಒಳ ಮುಷ್ಟಿ) ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ, ಬೆಳಿಗ್ಗೆ ಅದನ್ನು ತಿನ್ನುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.