ADVERTISEMENT

ಮನಸ್ಸಿನ ಆಳ ವಿಶ್ರಾಂತಿಗೆ ಧ್ಯಾನ

ಗೋಪಾಲಕೃಷ್ಣ ದೇಲಂಪಾಡಿ
Published 5 ಜನವರಿ 2020, 19:30 IST
Last Updated 5 ಜನವರಿ 2020, 19:30 IST
   

ಪತಂಜಲಿ ಮುನಿಗಳ ಅಷ್ಟಾಂಗ ಯೋಗದ ಪ್ರಕಾರ ಧ್ಯಾನ ಏಳನೇ ಹಂತ. ಯಮ, ನಿಯಮ, ಆಸನ, ಪ್ರಾಣಾಯಾಮ ಪ್ರತ್ಯಾಹಾರ ಬಾಹ್ಯ ಅಂಗಗಳಾಗಿದೆ. ಧಾರಣ ಧ್ಯಾನ ಮತ್ತು ಸಮಾಧಿ ಆಂತರಿಕ ಅಂಗಗಳಾಗಿದೆ. ಧ್ಯಾನ ಅಭ್ಯಾಸದ ಮುಂಚೆ ಯಮ, ನಿಯಮವನ್ನು ಆಚರಿಸಿ ಆಸನಗಳ ಅಭ್ಯಾಸ ಮಾಡಿ.

ಪ್ರಾಣಾಯಾಮ ಕಲಿತು ಸಾಧನೆ ಮಾಡಿ (ಕಲ್ಮಶಗಳನ್ನು ತೊಡೆದು ಹಾಕಲು) ಮತ್ತು ಪಂಚೇಂದ್ರಿಯಗಳ ಮೇಲೆ ಹತೋಟಿಸಿ ಸಾಧಿಸಿ (ಪ್ರತ್ಯಾಹಾರ)ಏಕಾಗ್ರತೆ ಸ್ಥಿರತೆ ತಂದು ಧ್ಯಾನಕ್ಕೆ ಸಾಗಬೇಕು. ಸ್ವಾಭಾವಿಕವಾಗಿ ಒಮ್ಮೆ ಮನಸ್ಸು ಧ್ಯಾನ ಮಾಡಿದರೆ ಮನಸ್ಸಿನ ಏರಿತಳಿತಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಏಕಾಗ್ರತೆ ಮತ್ತು ಧ್ಯಾನವು ಗಮನ ಕೇಂದ್ರೀಕರಿಸುತ್ತದೆ. ಆಂತರಿಕ ವಿಷಯಗಳಾದ ಉಸಿರು, ಹೃದಯ, ನಾಸಾಗ್ರ, ಭ್ರೂಮಧ್ಯೆ ಇತ್ಯಾದಿ ಹಾಗೂ ಬಾಹ್ಯ ವಿಷಯಗಳಾದ ಓಂಕಾರ, ನಕ್ಷತ್ರ, ಚಂದ್ರ, ಇಷ್ಟದೇವತಾ ಚಿತ್ರ, ಪ್ರತಿಮೆ, ಇತ್ಯಾದಿಗಳನ್ನು ಉಪಯೋಗಿಸಿ ಧ್ಯಾನ ಮಾಡಲಾಗುತ್ತದೆ.

ಆರಂಭದಲ್ಲಿ ಚಿಕ್ಕ ಧ್ಯಾನ ಮಾಡಿ. ನಿಮಿಷಗಳ ಅಭ್ಯಾಸವನ್ನು ಕೆಲವು ವಾರ ಅಭ್ಯಾಸ ಮಾಡಿ. ಮನಸ್ಸು ಅಲೆದಾಡುತ್ತದೆ. ಆದರೂ ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನಿಸಿ ನಾನು ಪ್ರತಿದಿನ ಧ್ಯಾನ ಮಾಡುತ್ತೇನೆ ಎಂದು ದೃಢ ಸಂಕಲ್ಪ ಮಾಡಿ. ಎರಡು ನಿಮಿಷಗಳ ದೈನಂದಿನ ಗುರಿಯೊಂದಿಗೆ ಪ್ರಾರಂಭಿಸಿ ಕ್ರಮೇಣ ಹೆಚ್ಚಿಸುತ್ತಲೇ ಇರಿ. ನಿಗದಿತ ಸಮಯದಲ್ಲಿ ಧ್ಯಾನ ಮಾಡಲು ಪ್ರಯತ್ನಿಸಿ. ಸ್ವಚ್ಛವಾದ ಗಾಳಿ ಬೆಳಕು ಉತ್ತಮ ಪರಿಸರದಲ್ಲಿ ಧ್ಯಾನ ಮಾಡಿ. ಯಾವುದೇ ಒಂದು ದಿನವನ್ನು ಬಿಟ್ಟು ಬಿಡದಿರಲು (ಧ್ಯಾನವನ್ನು) ಪ್ರಯತ್ನಿಸಿ. ನೆಲದಲ್ಲಿ ಕುಳಿತು ಕೊಳ್ಳಲು ಕಷ್ಟವಾದರೆ ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಧ್ಯಾನ ಮಾಡಿ.

ADVERTISEMENT

ಆರಾಮದಾಯಕ ಉಡುಪುಗಳನ್ನು ಧರಿಸಿ. ಬೆನ್ನು ಕುತ್ತಿಗೆ ಶಿರಸ್ಸು ನೇರವಾಗಿರಲಿ. ನೆಲದಲ್ಲಿ ಕುಳಿತು ಧ್ಯಾನ ಮಾಡುವುದಾದರೆ ವಜ್ರಾಸನ, ಪದ್ಮಾಸನ, ವೀರಾಸನ, ಸುಖಾಸನ, ಸ್ವಸ್ತಿಕಾಸನ, ಯಾವುದಾದರೊಂದು ಭಂಗಿ ಮಾಡಿ. ಮನಸ್ಸನು ಒಂದು ವಸ್ತುವಿಗೆ ಸೀಮಿತಗೊಳಿಸಿ ತಲ್ಲಿನತೆ ತರಲು ಪ್ರಯತ್ನಿಸಿ.

ಧ್ಯಾನ ಒಂದು ಕೌಶಲ. ಫಿಟ್‌ನೆಸ್‌ ಎನ್ನುವುದು ದೇಹವನ್ನು ತರಬೇತಿ ಮಾಡುವ ವಿಧಾನದಂತೆಯೇ ಧ್ಯಾನವು ಮನಸ್ಸನ್ನು ತರಬೇತಿ ಮಾಡುವ ವಿಧಾನವಾಗಿದೆ. ಸಾಮಾನ್ಯವಾಗಿ ಧ್ಯಾನವನ್ನು ಪ್ರಾರಂಭಿಸಲು ಸುಲಭ ಮಾರ್ಗವೆಂದರೆ ಉಸಿರಾಟದ ಮೇಲೆ ಕೇಂದ್ರೀಕರಿಸುವುದು. ಧ್ಯಾನದ ಸಾಮಾನ್ಯ ವಿಧಾನಗಳಲ್ಲಿ ಒಂದು ಉದಾಹರಣೆ ಏಕಾಗ್ರತೆ. ಏಕಾಗ್ರತೆಯು ಧ್ಯಾನವು ಒಂದೇ ಬಿಂದುವನ್ನು ಕೇಂದ್ರೀಕರಿಸುವುದನ್ನು ಒಳಗೊಂಡಿರುತ್ತದೆ. ಉಸಿರಾಟವನ್ನು ಗಮನಿಸುವುದು, ಮಂತ್ರವನ್ನು ಪುನರಾವರ್ತಿಸುವುದು, ದೀಪದ ಜ್ವಾಲೆಯನ್ನು ನೋಡುವುದು, ಮಾಲೆಯ ಮಣಿಗಳನ್ನು ಎಣಿಸುವುದು ಇತ್ಯಾದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.