ಬೆಂಗಳೂರು: ಎಚ್‌ಆರ್‌ಸಿಟಿ (ಹೈ-ರೆಸಲ್ಯೂಶನ್ ಸಿಟಿ) ಸ್ಕ್ಯಾನ್ ಮಾಡಿಸಿಕೊಂಡ ಕೆಲವು ಕೋವಿಡ್ ರೋಗಿಗಳಿಗೆ ಅದೃಷ್ಟವಶಾತ್ ತಮ್ಮ ಆರಂಭಿಕ ಹಂತದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಡ್ಡೆಗಳ ಬಗ್ಗೆ ತಿಳಿಯುತ್ತಿದ್ದು, ಇದರಿಂದ ಅವರಿಗೆ ಸಕಾಲಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ವೈದ್ಯರು ಹೇಳಿದ್ದಾರೆ.
ಶ್ವಾಸಕೋಶದ ಮೇಲೆ ಕೋವಿಡ್ ಸೋಂಕಿನ ಪರಿಣಾಮ ತಿಳಿಯಲು ಎಚ್‌ಆರ್‌ಸಿಟಿ ಸ್ಕ್ಯಾನ್‌ಗಳನ್ನು ಮಾಡಲಾಗುತ್ತದೆಯಾದರೂ, ಕೆಲವು ರೋಗಿಗಳಲ್ಲಿ ಆರಂಭಿಕ ಕ್ಯಾನ್ಸರ್ ಇರುವುದು ಇದರಿಂದ ಪತ್ತೆಯಾಗುತ್ತಿದೆ. ಹಾಗಾಗಿ, ಅವರಿಗೆ ಬೇಗ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಕ್ಯಾನ್ಸರ್‌ಗಳು ಎರಡನೇ ಹಂತದಲ್ಲಿ ಪತ್ತೆಯಾಗುತ್ತವೆ. ಆದರೆ, ಸ್ಕ್ಯಾನ್ ವೇಳೆ ಬೇಗ ಪತ್ತೆಯಾಗುತ್ತಿದೆ ಎನ್ನುತ್ತಾರೆ ವೈದ್ಯರು.
ಮಣಿಪಾಲ ಆಸ್ಪತ್ರೆಯಲ್ಲಿ ನಾಲ್ಕು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, ಪೀಪಲ್ ಟ್ರೀಯಲ್ಲಿ ಮೂರು, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ತಲಾ ಇಬ್ಬರು ರೋಗಿಗಳಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ.
‘ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ರೋಗಲಕ್ಷಣಗಳನ್ನು ಪ್ರದರ್ಶಿಸುವವರೆಗೂ, ಅವರ ಸ್ಥಿತಿಯನ್ನು ಪತ್ತೆ ಮಾಡಲಾಗುವುದಿಲ್ಲ. ಸುಸ್ತು ಕಂಡುಬಂದರೂ ಇತರ ಅಂಶಗಳು ಕಾರಣವಿರಬಹುದೆಂದು ಸುಮ್ಮನಾಗುತ್ತೇವೆ. ಅಂತಿಮ ಹಂತವನ್ನು ತಲುಪುವವರೆಗೂ ಪತ್ತೆಯಾಗುವುದಿಲ್ಲ. ಆದರೆ, ಎಕ್ಸ್-ರೇ ಅಥವಾ ಸಿಟಿ ಸ್ಕ್ಯಾನ್ ಮಾಡಿದಾಗ ಮಾತ್ರ ಅದು ಪತ್ತೆಯಾಗುತ್ತದೆ’ ಎಂದು ರಾಘವೇಂದ್ರ ಪೀಪಲ್ ಟ್ರೀ ಆಸ್ಪತ್ರೆಗಳು ಮತ್ತು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮಾಲೋಚಕ ಶ್ವಾಸಕೋಶ ತಜ್ಞ ಡಾ ವಿವೇಕ್ ಜಿ ಹೇಳಿದ್ದಾರೆ.
ಕೋವಿಡ್ ಸೋಂಕಿತರನ್ನು ತಪಾಸಣೆಗೆ ಒಳಪಡಿಸಿದಾಗ ಹಲವರಲ್ಲಿ ಟ್ಯೂಮರ್ ಇರುವುದು ಪತ್ತೆಯಾಗಿವೆ ಎಂದು ಶ್ವಾಸಕೋಶ ತಜ್ಞರು ತಿಳಿಸಿದ್ದಾರೆ. ಪೀಪಲ್ ಟ್ರೀನಲ್ಲಿ ಅವರ ಇಬ್ಬರು ರೋಗಿಗಳಿಗೆ ಹಂತ ಮೂರು ಮತ್ತು ಮುಂದುವರಿದ ಹಂತದ ಕ್ಯಾನ್ಸರ್ ಕಂಡುಬಂದಿತ್ತು ಎಂದು ಅವರು ಹೇಳಿದ್ದಾರೆ.
‘ಮೂರನೇ ಹಂತದ ಕ್ಯಾನ್ಸರ್ ರೋಗಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ತೆಗೆಯಲಾಗುತ್ತದೆ. ಫಿನೋಟೈಪ್ ಆಧರಿಸಿ, ನಾವು ಕೀಮೋಥೆರಪಿಯನ್ನು ಒದಗಿಸುತ್ತೇವೆ. ಮುಂದುವರಿದ ಹಂತಗಳಲ್ಲಿ, ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದಿಲ್ಲ ಮತ್ತು ನಾವು ಅವರ ನೋವನ್ನು ಕಡಿಮೆ ಮಾಡಲು ಮತ್ತು ರೋಗಲಕ್ಷಣದ ಪರಿಹಾರವನ್ನು ಒದಗಿಸಲು ಔಷಧಿಯನ್ನು ಮಾತ್ರ ನೀಡಬಹುದು,’ಎಂದು ಅವರು ಹೇಳಿದರು.
65 ಕ್ಕಿಂತ ಹೆಚ್ಚಿನ ವಯಸ್ಸಿನ ನಾಲ್ಕು ರೋಗಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡುಬಂದಿದೆ. ಅವರಲ್ಲಿ ಇಬ್ಬರು ಮಹಿಳೆಯರು ಮೂಲತಃ ಕೋವಿಡ್ ರೋಗಿಗಳಾಗಿ ಅಡ್ಮಿಟ್ ಆಗಿದ್ದವರು ಎಂದು ಡಾ , ಮಣಿಪಾಲ್ ಆಸ್ಪತ್ರೆಯ ವೈದ್ಯ ಸತ್ಯನಾರಾಯಣ ಮೈಸೂರು ತಿಳಿಸಿದ್ದಾರೆ.
‘ಒಬ್ಬ ಮಹಿಳೆ ಕ್ಯಾನ್ಸರ್‌ನ ಅಂತಿಮ ಹಂತದಲ್ಲಿದ್ದಳು. ಆದರೆ, ಅವರಿಗೆ ಯಾವುದೇ ಲಕ್ಷಣಗಳಿರಲಿಲ್ಲ’ಎಂದು ಡಾ ಸತ್ಯನಾರಾಯಣ ಹೇಳಿದರು.
‘ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಸಾಮಾನ್ಯವಾಗಿ ಎದೆ ನೋವು, ವಿವರಿಸಲಾಗದ ಕೆಮ್ಮು, ಕೆಲವು ನರವೈಜ್ಞಾನಿಕ ಲಕ್ಷಣಗಳು ಮತ್ತು ನರಸ್ನಾಯು ದೌರ್ಬಲ್ಯದಂತಹ ವಿಭಿನ್ನ ಲಕ್ಷಣಗಳನ್ನು ಹೊಂದಿರುತ್ತಾರೆ. ಇನ್ನೊಬ್ಬ ರೋಗಿಯು, ಬದುಕುಳಿಯುವ ಸಾಧ್ಯತೆಗಳು ಉತ್ತಮವಾಗಿದ್ದು, ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. 2ನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ಗೆ ಕೀಮೋಥೆರಪಿಯನ್ನು ಇನ್ನಷ್ಟೆ ಆರಂಭಿಸಬೇಕಿದೆ’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.