ADVERTISEMENT

ತಂಬಾಕು ಸೇವಿಸದಿದ್ದರೂ ಬಾಯಿ ಕ್ಯಾನ್ಸರ್ ಬರಬಹುದು ಎಚ್ಚರ!

ಪ್ರಜಾವಾಣಿ ವಿಶೇಷ
Published 21 ಜನವರಿ 2023, 8:44 IST
Last Updated 21 ಜನವರಿ 2023, 8:44 IST
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ   

ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್‌ ಅತಿಹೆಚ್ಚು ತಂಬಾಕು ಸೇವನೆ ಮಾಡುವವರು ಹಾಗೂ ಧೂಮಪಾನಿಗಳಲ್ಲಿ ಕಂಡು ಬರುತ್ತದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ, ಒಮ್ಮೆಯೂ ಧೂಮಪಾನ ಮಾಡದೆ, ತಂಬಾಕು ಸೇವಿಸದೇ ಇರುವವರಲ್ಲಿಯೂ ಬಾಯಿ ಕ್ಯಾನ್ಸರ್‌ ಬರಬಹುದು ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಹೌದು, ಜರ್ನಲ್ ಆಫ್ ಅಮೇರಿಕನ್ ಡೆಂಟಲ್ ಅಸೋಸಿಯೇಷನ್‌ ಪ್ರಕಟಿಸಿದ ಅಧ್ಯಯನದಲ್ಲಿ ತಂಬಾಕು ಸೇವನೆ ಮಾಡದೇ ಇದ್ದರೂ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಸೋಂಕಿನಿಂದ ಬಾಯಿ ಕ್ಯಾನ್ಸರ್‌ ಬರುವ ಸಾಧ್ಯತೆ ಎಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಸೇವನೆ, ಅತಿಯಾದ ಮದ್ಯ ಹಾಗೂ ಧೂಮಪಾನ ಸೇವನೆಯಿಂದ ಬಾಯಿ ಕ್ಯಾನ್ಸರ್‌ ಬರಲಿದೆ ಎಂದು ಹೇಳುತ್ತದೆ. ಈ ಕ್ಯಾನ್ಸರ್‌ನಿಂದ ತುಟಿ, ಒಸಡು ಹಾಗೂ ನಾಲಿಗೆ ಭಾಗದಲ್ಲಿ ಗಡ್ಡೆ ಬೆಳೆಯಲಿದೆ. ಇದೀಗ ಜರ್ನಲ್ ಆಫ್ ಅಮೇರಿಕನ್ ಡೆಂಟಲ್ ಅಸೋಸಿಯೇಷನ್‌ ಅವರ ಅಧ್ಯಯನದ ಮೂಲಕ ಎಚ್‌ಪಿವಿ ಸೋಂಕಿನಿಂದಲೂ ಬಾಯಿ ಕ್ಯಾನ್ಸರ್ ‌ಬರುವ ಸಾಧ್ಯತೆ ಹೆಚ್ಚಿದೆ.

ಏನಿದು ಎಚ್‌ಪಿವಿ ಸೋಂಕು:
ಎಚ್‌ಪಿವಿ, ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಮೂಲಕ ಹರಡುವ ಸೋಂಕಾಗಿದ್ದು, ಇದು ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದರೆ, ಈ ಸೋಂಕು ಕೇವಲ ಗರ್ಭಕಂಠದ ಕ್ಯಾನ್ಸರ್‌ ಅಷ್ಟೇ ಅಲ್ಲದೆ, ಬಾಯಿ ಕ್ಯಾನ್ಸರ್‌ಗೂ ಕಾರಣವಾಗಬಹುದು. ಕ್ಯಾನ್ಸರ್ ಎಪಿಡೆಮಿಯಾಲಜಿ, ಬಯೋಮಾರ್ಕರ್ಸ್ ಮತ್ತು ಪ್ರಿವೆನ್ಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಎಚ್‌ಪಿವಿ ಸೋಂಕು, ತಂಬಾಕು ಸೇವನೆಯಿಂದ ಉಂಟಾಗುವ ಬಾಯಿ ಕ್ಯಾನ್ಸರ್‌ಗಿಂತಲೂ ಮೂರುಪಟ್ಟು ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಈ ಸೋಂಕು ಹೊಂದಿರುವ ವ್ಯಕ್ತಿ, ತಂಬಾಕು ಸೇವನೆಯನ್ನು ಒಮ್ಮೆಯೂ ಮಾಡದಿದ್ದರೂ ಬಾಯಿ ಕ್ಯಾನ್ಸರ್‌ಗೆ ಒಳಗಾಗಬಹುದು.

ADVERTISEMENT

ಹಣ್ಣು-ತರಕಾರಿ ಸೇವನೆಯಿದ್ದರೆ ಬಾಯಿ ಕ್ಯಾನ್ಸರ್‌‌ಗೆ ತಡೆ
ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆಯು ಬಾಯಿ ಕ್ಯಾನ್ಸರ್ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಹಣ್ಣು-ತರಕಾರಿ ಸೇವನೆಯಿಂದ ಅತ್ಯಧಿಕ ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇದು ಬಾಯಿ ಕ್ಯಾನ್ಸರ್‌ನ ಕಣಗಳು ಬೆಳವಣಿಗೆ ಆಗದಂತೆ ಕಾಪಾಡಲಿವೆ. ಹೀಗಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಹಣ್ಣು-ತರಕಾರಿ ತಿನ್ನುವ ಅಭ್ಯಾಸ ಮಾಡಿಸುವುದು ಒಳಿತು. ಪ್ರತಿನಿತ್ಯ ನಿಮ್ಮ ಊಟದಲ್ಲಿ ಹಣ್ಣು-ತರಕಾರಿ ಇರುವಂತೆ ನೋಡಿಕೊಳ್ಳಿ.

ಇತರೆ ಕಾರಣಗಳು:
ಇದಷ್ಟೇ ಅಲ್ಲದೆ, ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ತುಟಿಯ ಜೀವಕೋಶಗಳು ಸಾಯುವ ಸಾಧ್ಯತೆ ಇದ್ದು, ಇದು ಕ್ಯಾನ್ಸರ್ ಕಣಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ಹೀಗಾಗಿ, ಬಿಸಿಲಿಗೆ ಹೋಗುವ ಮುನ್ನ ತುಟಿಯ ಆರೈಕೆಯನ್ನು ಮರೆಯಬೇಡಿ.

ಡಾ. ನಿತಿ ರೈಜಾಡಾ, ಹಿರಿಯ ನಿರ್ದೇಶಕಿ, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.