ADVERTISEMENT

ನಕಲಿ ಔಷಧಿಗಳಿವೆ ಎಚ್ಚರ!

ಕರವೀರಪ್ರಭು ಕ್ಯಾಲಕೊಂಡ
Published 23 ಸೆಪ್ಟೆಂಬರ್ 2024, 23:39 IST
Last Updated 23 ಸೆಪ್ಟೆಂಬರ್ 2024, 23:39 IST
<div class="paragraphs"><p>ಔಷಧಿ (ಪ್ರಾತಿನಿಧಿಕ ಚಿತ್ರ)</p></div>

ಔಷಧಿ (ಪ್ರಾತಿನಿಧಿಕ ಚಿತ್ರ)

   

ಗೆಟ್ಟಿ ಇಮೇಜಸ್

ಔಷಧಿಗಳೆಂದರೆ ಕೇವಲ ಆಂಗ್ಲಪದ್ಧತಿಯ ಔಷಧಿಗಳಲ್ಲ. ಇದರಲ್ಲಿ ಇತರ ಪದ್ಧತಿಯ ಔಷಧಿಗಳು ಅಡಕವಾಗುತ್ತವೆ. ಎಲ್ಲ ಪದ್ಧತಿಯಲ್ಲಿಯೂ ಈ ನಕಲಿ ಔಷಧಿಗಳಿದ್ದು, ಈ ಬಗ್ಗೆ ಜನಸಾಮಾನ್ಯರು ಎಚ್ಚರಿಕೆಯಿಂದ ಇರಲೇಬೇಕು. ಇಲ್ಲದೇ ಹೋದರೆ ಆರೋಗ್ಯ ವಿಚಾರದಲ್ಲಿ ಬಹುದೊಡ್ಡ ಅನಾಹುತಗಳನ್ನೇ ಎದುರಿಸಬೇಕಾದೀತು !

ADVERTISEMENT

ನಕಲಿ ಔಷಧಿಗಳೆಂದರೆ ಔಷಧಿಯ ಹೆಸರು ಒಂದು. ಆದರೆ, ಅದರಲ್ಲಿ ಆ ಔಷಧಿಯ ಗುಣವೇ ಇರುವುದಿಲ್ಲ. ಔಷಧಿಯ ಮೇಲೆ ಒಳ್ಳೆಯ ಹೆಸರು, ಕಂಪನಿಯ ಹೆಸರು ಎಲ್ಲವೂ ಇರುತ್ತದೆ. ಅಸಲಿಗೆ ಹೋಲಿಸಿದರೆ ಯಾವ ತರದ ಭಿನ್ನತೆಯೂ ಇರುವುದಿಲ್ಲ. ಇಂಥದ್ದನ್ನು ಪರೀಕ್ಷೆಗೆ ಒಳಪಡಿಸಿದಾಗ, ಆ ಹೆಸರಿನ ಔಷಧವೇ ಇರುವುದಿಲ್ಲ ಎಂದು ತಿಳಿಯುತ್ತದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಔಷಧಿಗಳ ಬಗ್ಗೆ ಔಷಧ ನಿಯಂತ್ರಣ ಮತ್ತು ಮಾರಾಟ ಮಂಡಳಿಯು ಆಗಾಗ್ಗೆ ಮಾಡುವ ತಪಾಸಣೆಯಲ್ಲಿ ಇದನ್ನು ತಿಳಿಯಬಹುದು.

ಕೆಲವೊಮ್ಮೆ ಉತ್ತಮ ಫಲಿತಾಂಶ ಕೊಡುವ ಪ್ರತಿಷ್ಠಿತ ಕಂಪನಿಯ ಔಷಧಿಯನ್ನು ನಕಲು ಮಾಡಲಾಗುತ್ತದೆ. ಆಕಾರ, ಬಣ್ಣ, ಗಾತ್ರ, ತೂಕ, ವಾಸನೆ ಇವುಗಳಲ್ಲಿ ಯಾವ ವ್ಯತ್ಯಾಸವೂ ಇರದು. ಆದರೆ, ಆ ಔಷಧಿಯಲ್ಲಿ ಇರಬೇಕಾದ ಅಂಶವೇ ಇರುವುದಿಲ್ಲ. ಔಷಧಿಗೆ ಬದಲಾಗಿ ಬೂದಿ, ಸುಣ್ಣ, ಹಾಲಿನ ಪುಡಿಯಂಥ ವಸ್ತುಗಳನ್ನು ಬಳಸಲಾಗುತ್ತದೆ.

ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳ ಔಷಧಿಯನ್ನು ಖರೀದಿಸಲಾಗುತ್ತದೆ. ಅತಿ ಕಡಿಮೆ ಬೆಲೆಯ ಔಷಧಿಯನ್ನು ಸರ್ಕಾರವೇ ಖರೀದಿಸುತ್ತದೆ. ಇಂಥ ಸಮಯದಲ್ಲಿ ಕೆಲವು ಸಮಾಜವಿದ್ರೋಹ ಶಕ್ತಿಗಳು ಕಳಪೆ ಮಟ್ಟದ ಔಷಧಿಗಳನ್ನು ತಯಾರಿಸಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ. ಈ ವಿಚಾರದಲ್ಲಿ ಜನರ ಜೀವಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಇನ್ನೊಂದು ಕಾರಣವೆಂದರೆ ಅರ್ಹತೆಯನ್ನು ಪಡೆಯದೇ ಇದ್ದವರು ಔಷಧ ಅಂಗಡಿಗಳ ಮಾಲೀಕರಾಗಿರುವುದು.

ದುಷ್ಪರಿಣಾಮಗಳು

* ಟೈಫಾಯ್ಡ್ ರೋಗಕ್ಕೆ ಹೆಸರಾಂತ ಕಂಪನಿಯೊಂದು ಒಳ್ಳೆಯ ಪರಿಣಾಮಕಾರಿ ಔಷಧಿಯನ್ನು ತಯಾರಿಸಿರುತ್ತದೆ. ಆದರೆ, ಅದೇ ಹೆಸರಿನಲ್ಲಿ ನಕಲಿ ಕಂಪನಿಯೊಂದು ಔಷಧಿಯನ್ನು ಮಾರುಕಟ್ಟೆಗೆ ಬಿಡುತ್ತದೆ. ರೋಗಿಯೊಬ್ಬರು ಈ ಔಷಧಿಯನ್ನು ಉಪಯೋಗಿಸಿಯೂ ಫಲಿತಾಂಶ ದೊರೆಯದೇ ಇದ್ದಾಗ, ಔಷಧಿ ನೀಡಿದ ವೈದ್ಯರ ವಿರುದ್ಧ ಆಕ್ರೋಶ ತೋರ್ಪಡಿಸಬಹುದು. ಇಲ್ಲಿ ಔಷಧಿ ಅಂಗಡಿಯವರು ಹಣ ಮಾಡುತ್ತಾರೆ. ಈ ಔಷಧಿಯಲ್ಲಿ ಹಿಟ್ಟು, ಅರಿಶಿನ ಪುಡಿ, ಸಕ್ಕರೆಯ ಅಂಶ ಇರುವುದರಿಂದ ರೋಗ ಕಡಿಮೆಯಾಗುವುದಿಲ್ಲ.

* ಹೃದಯಕ್ಕೆ ಸಂಬಂಧಿಸಿದಂತೆ ನಕಲಿ ಔಷಧಿಗಳ ಸೇವನೆ ಮಾಡಿದರೆ, ರೋಗ ಮತ್ತಷ್ಟು ಉಲ್ಬಣಗೊಂಡು ಸಾಯುವ ಪರಿಸ್ಥಿತಿ ಬರಬಹುದು.

ರಕ್ಷಣೆ ಹೇಗೆ ?

* ಔಷಧಿ ಖರೀದಿಸುವಾಗ ಅದರ ಮೇಲೆ ನಮೂದಾಗಿರುವ ಔಷಧಿ ತಯಾರದ ದಿನಾಂಕ, ಅದರ ಅವಧಿ ಮುಗಿಯುವ ದಿನಾಂಕಗಳನ್ನು ಖಚಿತಪಡಿಸಿಕೊಳ್ಳಬೇಕು .

* ಬಾಟಲಿ ಒಡೆದಿದ್ದರೆ, ಗುಳಿಗೆಗಳು ಹೊರಬಂದಿದ್ದರೆ ಆ ಔಷಧಿಯನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು.

* ಔಷಧಿಗಳನ್ನು ಖರೀದಿಸಬೇಕಾದರೆ ವೈದ್ಯರ ಪ್ರಿಸ್ಕ್ರಿಪ್ಶನ್ ಕಡ್ಡಾಯವಾಗಿ ಇರಬೇಕು. ಸ್ವಯಂ ಔಷಧೋಪಚಾರ ಮಾಡಿಕೊಳ್ಳಬಾರದು.

* ಔಷಧಿ ಖರೀದಿಸಿದಾಗ ಕಡ್ಡಾಯವಾಗಿ ಬಿಲ್ ಪಾವತಿ ಪಡೆಯಬೇಕು. ಅದನ್ನು ಸುರಕ್ಷಿತವಾಗಿ ಇಡಬೇಕು. ಔಷಧ ಸೇವಿಸಿದ ನಂತರ ತೊಂದರೆ ಕಂಡರೆ ತಕ್ಷಣ ವೈದ್ಯರಿಗೆ ತಿಳಿಸಬೇಕು.

* ಖಾಲಿಯಾದ ಔಷಧಿ ಬಾಟಲಿ, ಉಳಿದ ಮದ್ದುಗಳನ್ನು ತಪ್ಪದೇ ನಾಶಪಡಿಸಬೇಕು. ಯಾವುದೇ ಸಂಶಯ ಬಂದರೂ ಔಷಧ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.