ಈಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಇನ್‌ಫ್ಲುಯೆನ್ಜಾದಂಥ ವೈರಾಣು ಸೋಂಕುಗಳು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜತೆಗೆ ಬರುವ ವೈರಾಣು ಜ್ವರಗಳೆಂದರೆ ಶೀತ, ಗ್ಯಾಸ್ಟ್ರೋಎಂಟರೈಟಿಸ್ (ಸಾಮಾನ್ಯವಾಗಿ ಹೊಟ್ಟೆ ಜ್ವರ ಎಂದು ಕರೆಯಲಾಗುತ್ತದೆ), ಕೈ, ಕಾಲು ಮತ್ತು ಬಾಯಿ ರೋಗ ಮತ್ತು ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಾಣುವಿನ ದಾಳಿಗೆ ತುತ್ತಾಗುತ್ತಾರೆ. ಇವು ಸಾಂಕ್ರಾಮಿಕವಾಗಿರುವುದರಿಂದ ಗಾಳಿ, ನೀರಿನಿಂದ ಬೇಗ ಹರಡುತ್ತದೆ.
ಜ್ವರ, ಆಯಾಸ, ಸೋರುವ ಅಥವಾ ಉಸಿರುಕಟ್ಟಿಕೊಳ್ಳುವ ಮೂಗು, ಕೆಮ್ಮು, ನೋಯುತ್ತಿರುವ ಗಂಟಲು, ಅತಿಸಾರ, ವಾಂತಿ ಮತ್ತು ಕೆಲವೊಮ್ಮೆ ಚರ್ಮದ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬೇಡಿ. ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಿ.
ವೈರಾಣು ಜ್ವರಕ್ಕೆ ಉತ್ತಮ ಆರೈಕೆಯಿಂದ ಬಹುಬೇಗ ಗುಣಮುಖರಾಗುತ್ತಾರೆ. ವಿಶ್ರಾಂತಿಯಿಂದ ಇರಬೇಕು. ಸೋಂಕಿಗೆ ತುತ್ತಾದ ಮಕ್ಕಳ ಮೂಗಿಗೆ ಡ್ರಾಪ್‌ಗಳನ್ನು ಹಾಕುವುದರಿಂದ ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಸುತ್ತಲಿನ ವಾತಾವರಣ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
ನಿಯಮಿತವಾಗಿ ಕೈ ತೊಳೆಯುವುದು, ಮಕ್ಕಳು ಕೆಮ್ಮುವಾಗ ಅಥವಾ ಸೀನುವಾಗ ಮುಖಕ್ಕೆ ಬಟ್ಟೆ ಅಡ್ಡ ಇಡುವುದನ್ನು ಕಲಿಸುವುದು, ಒಂದು ವೇಳೆ ಮಕ್ಕಳಲ್ಲಿ ಅನಾರೋಗ್ಯ ಕಂಡುಬಂದರೆ ಮನೆಯಲ್ಲಿ ಇರಿಸುವುದು. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಚುಚ್ಚುಮದ್ದುಗಳನ್ನು ಮಕ್ಕಳಿಗೆ ನೀಡುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಪೋಷಕರಿಗೆ ಕಿವಿಮಾತು: ಮಕ್ಕಳಿಗೆ ಅಗತ್ಯ ಕಾಳಜಿ, ಅಗತ್ಯ ವಿಶ್ರಾಂತಿ ಮತ್ತು ಉತ್ತಮ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪೋಷಕರು ನೋಡಿಕೊಳ್ಳಬೇಕು. ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಉತ್ತಮ ಆಹಾರ ಮುಖ್ಯವಾಗುತ್ತದೆ. ಒಂದು ವೇಳೆ ದೀರ್ಘಕಾಲದ ಜ್ವರ, ಉಸಿರಾಟದ ತೊಂದರೆ ಇದ್ದರೆ ತಜ್ಞವೈದ್ಯರನ್ನು ಸಂಪರ್ಕಿಸಬೇಕು.
ಲೇಖಕರು: ಮಕ್ಕಳ ತಜ್ಞ, ವಾಸವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.