ಹೆಸರು ಸುರೇಶ್ ಬಾಬು. ವಯಸ್ಸು 61. ಇಂಟರ್‌ಸ್ಟಿಶಿಯಲ್ ಲಂಗ್ ಡಿಸೀಸ್ (ಐಎಲ್‌ಡಿ) ಎಂಬ ಶ್ವಾಸಕೋಶ ಕಾಯಿಲೆಯಿಂದ ನರಳುತ್ತಿದ್ದರು. ಪ್ರತಿ ನಿಮಿಷ 15 ಲೀಟರ್‌ನಷ್ಟರಂತೆ ದಿನದ 24 ಗಂಟೆಯೂ ಆಮ್ಲಜನಕದ ನೆರವಿನಿಂದ (ಕೃತಕ ಉಸಿರಾಟ ವ್ಯವಸ್ಥೆ) ಉಸಿರಾಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈನ ಗ್ಲೆನ್‌ಈಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೃತಕ ಉಸಿರಾಟ ವ್ಯವಸ್ಥೆಯೊಂದಿಗೆ ದಾಖಲಿಸಲಾಗಿತ್ತು.
ಇದೇ ಕಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ 62ರ ವಯಸ್ಸಿನ ಜಯಂತ್ ಶಾ ಕೂಡ ಅದೇ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಬ್ಬರಿಗೂ ಶ್ವಾಸಕೋಶಗಳನ್ನು ಕಸಿ ಮಾಡಿ ಬೆಂಗಳೂರಿನ ವೈದ್ಯರು ಹೊಸ ಜೀವನವನ್ನು ನೀಡಿದ್ದಾರೆ.
ಈ ಇಬ್ಬರೂ ರೋಗಿಗಳನ್ನು ಚೆನ್ನೈನಿಂದ ಬೆಂಗಳೂರಿನ ಬಿಜಿಎಸ್ ಗ್ಲೆನ್‌ಈಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಕರೆಸಿಕೊಂಡು ಎರಡು ದಿನಗಳ ಅಂತರದಲ್ಲಿ ಇಲ್ಲಿನ ವೈದ್ಯರ ತಂಡ ಯಶಸ್ವಿಯಾಗಿ ಶ್ವಾಸಕೋಶಗಳನ್ನು ಕಸಿ ಮಾಡಿದೆ. ರಾಜ್ಯದಲ್ಲಿ ಶ್ವಾಸಕೋಶವನ್ನು ಯಶಸ್ವಿಯಾಗಿ ಕಸಿ ಮಾಡಿರುವುದು ಇದೇ ಮೊದಲು. ಅದೂ ಇಬ್ಬರೂ ರೋಗಿಗಳ ತಲಾ ಎರಡೆರಡು ಶ್ವಾಸಕೋಶ ಕಸಿ ಮಾಡಿದ್ದಾರೆ.
ಐಸೂರಿನ ಇಬ್ಬರು ಯುವಕರು ಅಪಘಾತಕ್ಕೀಡಾಗಿದ್ದರು. ಅವರ ಮಿದುಳು ನಿಷ್ಕ್ರಿಯವಾಗಿತ್ತು. ಕುಟುಂಬದವರು ಅಂಗಾಂಗ ದಾನಕ್ಕೆ ಮುಂದಾದರು. ಆಗ ಸರ್ಕಾರಿ ನಿಮಯಮಳ ಪ್ರಕಾರ ಸರದಿಯಲ್ಲಿರುವವರಿಗೆ ಈ ಅವಕಾಶ ಮೊದಲು ದೊರೆಯುತ್ತದೆ. ಆ ಪ್ರಕಾರ ಈ ಇಬ್ಬರು ಹಿರಿಯರಿಗೆ ಈ ಅವಕಾಶ ದೊರೆಯಿತು ಎನ್ನುತ್ತಾರೆ ಈ ಕಸಿ ಶಸ್ತ್ರಚಿಕಿತ್ಸೆಯ ತಂಡದಲ್ಲಿದ್ದ ಸರ್ಜನ್ ಡಾ. ಬಿ.ವಿ. ಭಾಸ್ಕರ್.
ನೆರವಾದ ‘ಗ್ರೀನ್ ಕಾರಿಡಾರ್’
ಮೈಸೂರಿನಿಂದ ಬೆಂಗಳೂರಿಗೆ 140 ಕಿ.ಮೀ. ಈ ಎರಡೂ ಪ್ರಕರಣಗಳಲ್ಲಿ ತ್ವರಿತವಾಗಿ ಮೈಸೂರಿನಿಂದ ಶ್ವಾಸಕೋಶವನ್ನು ಸುರಕ್ಷಿತವಾಗಿ ತಂದು ಕಸಿ ಮಾಡಲು ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ನೆರವಿಗೆ ಬಂದಿದೆ.
ಜುಲೈ 5ರಂದು ಈ ವ್ಯವಸ್ಥೆ ಮೂಲಕ ಕೇವಲ 70 ನಿಮಿಷಗಳಲ್ಲಿ ಶ್ವಾಸಕೋಶವನ್ನು ಬೆಂಗಳೂರಿಗೆ ತರಲಾಯಿತು. ಇದೇ ವೇಳೆಗೆ ರೋಗಿ ಸುರೇಶ್ ಬಾಬು ಅವರನ್ನು ಚೆನ್ನೈನಿಂದ ಬೆಂಗಳೂರಿನ ಬಿಜೆಎಸ್‌ಗೆ ಕರೆತರಲಾಗಿತ್ತು. ಶ್ವಾಸಕೋಶ ಆಸ್ಪತ್ರೆ ತಲುಪಿದ 4 ಗಂಟೆ 30 ನಿಮಿಷದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಎರಡೂ ಶಾಸ್ವಕೋಶಗಳನ್ನು ಕಸಿ ಮಾಡಲಾಯಿತು ಎಂದು ಅವರು ವಿವರಿಸಿದರು.
ಇದೇ ರೀತಿ ಜುಲೈ 7ರಂದು ಮೈಸೂರಿನ ಮತ್ತೊಬ್ಬ ವ್ಯಕ್ತಿ ಅಂಗಾಂಗ ದಾನ ಮಾಡುತ್ತಿರುವ ಕುರಿತು ಅಲರ್ಟ್ ಮೆಸೇಜ್ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬೆಂಗಳೂರಿನ ಬಿಜಿಎಸ್ ವೈದ್ಯರ ತಂಡ, ಚೆನ್ನೈ ಆಸ್ಪತ್ರೆಯಲ್ಲಿ ಹೊರರೋಗಿಯಾಗಿದ್ದ ಜಯಂತ್ ಶಾ ಅವರಿಗೆ ತ್ವರಿತವಾಗಿ ಬೆಂಗಳೂರಿಗೆ ಬರುವಂತೆ ತಿಳಿಸಿತು. ಇದೇ ವೇಳೆ ಮತ್ತೊಂದು ವೈದ್ಯರ ತಂಡ ಮೈಸೂರಿಗೆ ಹೋಗಿ ನಿಯಮಗಳ ಅನ್ವಯ ದಾನಿಯಿಂದ ಶ್ವಾಸಕೋಶ ಪಡೆದುಕೊಂಡು ಬೆಂಗಳೂರಿನತ್ತ ಹೊರಟಿತು. ಗ್ರೀನ್ ಕಾರಿಡಾರ್ ನೆರವಿನಿಂದ 90 ನಿಮಿಷಗಳಲ್ಲಿ ಈ ತಂಡ ಬೆಂಗಳೂರಿನ ಆಸ್ಪತ್ರೆ ತಲುಪಿತು. 5 ಗಂಟೆ ಅವಧಿಯಲ್ಲಿ ಮಾಡಿ ಯಶಸ್ವಿಯಾಗಿ ಶ್ವಾಸಕೋಶಗಳನ್ನು ಕಸಿ ಮಾಡಿತು ಎಂದು ತಿಳಿಸುತ್ತಾರೆ.
ಈಗ ಈ ಇಬ್ಬರು ರೋಗಿಗಳು ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮೊದಲಿನಂತೆ ಸುಗಮವಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈಗ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಬೇಕಿಲ್ಲ ಎಂದರು.
ವೈದ್ಯರ ತಂಡ
ಕಸಿ ಮಾಡಿದ ತಂಡದಲ್ಲಿ ಐವರು ಸರ್ಜನ್‌ಗಳಿದ್ದರು. ಅವರಲ್ಲಿ ಡಾ. ಬಿ.ವಿ.ಭಾಸ್ಕರ್ ಮತ್ತು ಡಾ. ಮಧುಸೂದನ್ ಬೆಂಗಳೂರಿನವರು. ಬಿಜಿಎಸ್‌ನ ಕಾರ್ಡಿಯಾಕ್ ಸರ್ಜರೀಸ್ ಅಂಡ್ ಥೊರಾಸಿಸ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್ ಅತ್ತಾವರ್ ಅವರ ಮಾರ್ಗದರ್ಶನದಲ್ಲಿ ಈ ಕಸಿ ಶಸ್ತ್ರಚಿಕಿತ್ಸೆ ನಡೆಯಿತು. ಒಟ್ಟಾರೆ 15 ವೈದ್ಯರ ತಂಡ ಯಶಸ್ವಿಯಾಗಿ ಈ ಕಾರ್ಯ ನಡೆಸಿದೆ.
ಐಎಲ್‌ಡಿ ರೋಗದ ಕುರಿತು
ಶ್ವಾಸಕೋಶ ಸಂಬಂಧಿ ಮಾರಕ ರೋಗ ಐಎಲ್‌ಡಿ. ಈ ಕಾಯಿಲೆ ವಂಶವಾಹಿನಿಯಿಂದ ಬರಬಹುದು. ಹಾನಿಕಾರಕ ಧೂಳಿನ ಕಣ, ಪಾರಿವಾಳದ ಹಿಕ್ಕೆ ಸೇರಿದಂತೆ ಇತರೆ ವಸ್ತುಗಳಿಂದಲೂ ಕಾಣಿಸಿಕೊಳ್ಳಬಹುದು. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಜತೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆಗಳಿಗೆ ದೇಹ ಸ್ಪಂದಿಸುವುದಿಲ್ಲ. ಇದರ ಪರಿಣಾಮ ಶ್ವಾಸಕೋಶ ವೈಫಲ್ಯವಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಇದರ ಪ್ರಮುಖ ಲಕ್ಷಣ ಒಣಕೆಮ್ಮು, ಉಸಿರಾಟದ ಬಳಲಿಕೆ. ದೇಶದಲ್ಲಿ ಪ್ರತಿ ವರ್ಷ ಇಂಥ 10 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಶ್ವಾಸಕೋಶ ಕಸಿ ಮಾಡಿಸಿಕೊಳ್ಳುವುದೇ ಪರಿಹಾರ. ಇದಕ್ಕೆ ಚಿಕಿತ್ಸಾ ವೆಚ್ಚಾ ಅಂದಾಜು ₹ 35 ಲಕ್ಷ ಎಂದು ವೈದ್ಯ ಭಾಸ್ಕರ್ ಮಾಹಿತಿ ನೀಡಿದರು.
ಎದುರಾದ ಸವಾಲುಗಳು
* ಅಂಗಾಂಗ ದಾನ ಮಾಡಿದ ಆರು ಗಂಟೆಗಳೊಳಗೆ ಶಸ್ತ್ರಚಿಕಿತ್ಸೆ ಆಗಬೇಕು.
* ಈ ಅವಧಿಯೊಳಗೆ ಚೆನ್ನೈನಿಂದ ರೋಗಿಯನ್ನು ಬೆಂಗಳೂರಿಗೆ ಕರೆತರಬೇಕಾದದ್ದು. ಅದೇ ವೇಳೆ ಮೈಸೂರಿನಲ್ಲಿ ವೈದ್ಯರ ತಂಡ ಅಂಗಾಂಗ ದಾನ ಮಾಡಿದ ವ್ಯಕ್ತಿಯ ಶ್ವಾಸಕೋಶವನ್ನು ತೆಗೆದುಕೊಳ್ಳಬೇಕಾದದ್ದು.
* ಗ್ರೀನ್‌ಕಾರಿಡಾರ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟುಬೇಗ ಶ್ವಾಸಕೋಶವನ್ನು ಬೆಂಗಳೂರಿಗೆತಲುಪಿಸುವುದು.
ಏನೇನು ಹೊಂದಿಕೆಯಾಗಬೇಕು?
* ಅಂಗಾಂಗ ದಾನ ಮಾಡುವ ವ್ಯಕ್ತಿ ಮತ್ತು ಕಸಿ ಮಾಡಿಸಿಕೊಳ್ಳುವ ರೋಗಿಯ ರಕ್ತದ ಗುಂಪಿನ ಮಾದರಿ ಹೊಂದಿಕೆಯಾಗಬೇಕು.
* ತೂಕ ಮತ್ತು ಎತ್ತರದಲ್ಲಿ ಸಮ ಅಥವಾ ಶೇ 20ರಷ್ಟು ವ್ಯತ್ಯಾಸವಿದ್ದರೂ ಕಸಿ ಮಾಡಬಹುದು. ಅದಕ್ಕಿಂತ ಹೆಚ್ಚು ವ್ಯತ್ಯಾಸವಿದ್ದರೆ ಕಸಿ ಮಾಡಲಾಗದು.
*
-ಡಾ. ಬಿ.ವಿ.ಭಾಸ್ಕರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.