ಭ್ರಮರಿ ಪ್ರಾಣಾಯಾಮವು ವಿಶಿಷ್ಟ ಶಬ್ದದೊಂದಿಗೆ ಉಸಿರನ್ನು ಬಿಡುವ ಕ್ರಮವಾಗಿದೆ. ವೈರಾಣುಗಳು ಹಾಗೂ ತತ್ಸಂಬಂಧಿತವಾದ ಆತಂಕಗಳು ಕಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಅತ್ಯಗತ್ಯವಾಗಿ ಭ್ರಮರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು.
ವಿಶೇಷತೆಗಳು
‘ಭ್ರಮರ’ ಎಂದರೆ ಕಪ್ಪು ಬಣ್ಣದ ದುಂಬಿ. ಅದು ಕಡಿಮೆ ಆವರ್ತನದ ಹಾಗೂ ಸ್ತರದ, ‘ಹಂ’ ಎಂಬ ಶಬ್ದವನ್ನು ಮಾಡುತ್ತದೆ. ಅದೇ ರೀತಿಯ ಶಬ್ದವನ್ನು ರೇಚಕಕ್ರಿಯೆಯಲ್ಲಿ (ಉಸಿರನ್ನು ಬಿಡುವಾಗ) ಅಳವಡಿಸಿಕೊಳ್ಳುವುದು ಭ್ರಮರಿ ಪ್ರಾಣಾಯಾಮದ ಕ್ರಮವಾಗಿದೆ.
ಇದರಲ್ಲಿನ ಆವರ್ತನವು ಸುಮಾರು 160 ಹರ್ಟ್ಸ್‌ನಿಂದ 260 ಹರ್ಟ್ಸ್‌ವರೆಗೆ ಇರುತ್ತದೆ. ಗಂಡಸರಲ್ಲಿ ಆವರ್ತನವು ಕಡಿಮೆಯಿರುತ್ತದೆ; ಹೆಂಗಸರಲ್ಲಿ ಹೆಚ್ಚಿರುತ್ತದೆ.
‘ಹಂ’ ಶಬ್ದದ ಉಚ್ಚಾರಣೆಯಿಂದ ರಕ್ತದಲ್ಲಿನ ನೈಟ್ರಿಕ್ ಆಕ್ಸೈಡ್‍ನ ಪ್ರಮಾಣವು ಹಲವು ಪಟ್ಟು ಹೆಚ್ಚುತ್ತದೆ; ನೈಟ್ರಿಕ್ ಆಕ್ಸೈಡ್ ಆಂತರಿಕವಾಗಿಯೇ ಉತ್ಪನ್ನಗೊಳ್ಳುತ್ತದೆ. ಇದು ವೈರಾಣು ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ; ಆಂತರಿಕ ಉರಿಯೂತವನ್ನು ಶಮನಗೊಳಿಸುತ್ತದೆ.
ಗಮನಿಸಬೇಕಾದ ಅಂಶಗಳು
ಆರಂಭಿಕ ಹಂತದಲ್ಲಿ ಈ ಕ್ರಮಗಳನ್ನು ಅಭ್ಯಾಸ ಮಾಡುವಾಗ, ಎಡಗೈಯನ್ನು ಎದೆಯ ಮೇಲೂ ಹಾಗೂ ಬಲಗೈಯನ್ನು ಉದರದ ಮೇಲೂ ಇರಿಸಿಕೊಳ್ಳುವುದು ಅಪೇಕ್ಷಣೀಯ.
ಉಸಿರನ್ನು ಬಿಡುವ ಅವಧಿ, ಉಸಿರನ್ನು ತೆಗೆದುಕೊಳ್ಳುವ ಅವಧಿಯಷ್ಟಾದರೂ ಇರಬೇಕು.
‘ಹಂ’ ಶಬ್ದದ ಅನುರಣನ(ಶಬ್ದದ ಧ್ವನಿತರಂಗ)ವನ್ನು ಮಿದುಳಿನ ಭಾಗದಲ್ಲಿ, ವಿಶೇಷವಾಗಿ ತಲೆಬುರುಡೆಯ ಮಧ್ಯಭಾಗದಲ್ಲಿ ಗಮನಿಸಬೇಕು.
ಮಾಡುವ ವಿಧಾನ
ಭ್ರಮರಿ ಪ್ರಾಣಾಯಾಮದಲ್ಲಿ ಅನೇಕ ರೀತಿಗಳು ಇವೆಯಾದರೂ, ಈ ಲೇಖನದಲ್ಲಿ ಸರಳ ಕ್ರಮವೊಂದನ್ನು ವಿವರಿಸಲಾಗಿದೆ.
ಕುರ್ಚಿಯ ಮೇಲೆ ಅಥವಾ ದಿಂಬಿನ ಮೇಲೆ ನೇರವಾಗಿ ಕುಳಿತುಕೊಳ್ಳಿ; ಎದೆಯ ಭಾಗ ಮೇಲಕ್ಕೆತ್ತಿ.
ಕಣ್ಣುಗಳನ್ನು ಮೃದುವಾಗಿ ಮುಚ್ಚಿ.ಹಸ್ತಗಳನ್ನು ಮಂಡಿಯ ಮೇಲೆ ಮೇಲ್ಮುಖವಾಗಿರಿಸಿ; ಹೆಬ್ಬೆರಳು ಮತ್ತು ತೋರ್ಬೆರಳುಗಳ ತುದಿಗಳು ಪರಸ್ಪರ ಸ್ಪರ್ಶದಲ್ಲಿರಲಿ.ಉದರ ಆಧಾರಿತ ಉಸಿರಾಟವನ್ನು ಮಾಡಬೇಕು.ಉಸಿರನ್ನು ತೆಗೆದುಕೊಳ್ಳುತ್ತಾ, ಉದರದ ಭಾಗ ಸುತ್ತಲೂ ಸಂಪೂರ್ಣವಾಗಿ ಹಿಗ್ಗಬೇಕು ಹಾಗೂ ಉಸಿರನ್ನು ಬಿಡುತ್ತಾ ಸಂಕುಚನಗೊಳ್ಳಬೇಕು.ಎದೆಯ ಗೂಡು ಸಾಧ್ಯವಾದಷ್ಟು ನಿಶ್ಚಲವಾಗಿರಬೇಕು.
ಉಸಿರನ್ನು ತೆಗೆದುಕೊಂಡು, ಉಸಿರನ್ನು ಬಿಡುತ್ತಾ, ‘ಹಂ’ ಶಬ್ದವನ್ನು ಆಂತರಿಕವಾಗಿ ಉಚ್ಚರಿಸಬೇಕು.
‘ಹಂ’ ಶಬ್ದೋಚ್ಚಾರಣೆಯ ಕಂಪನಗಳನ್ನು ವಿಶೇಷವಾಗಿ ಮಿದುಳಿನ ಭಾಗದಲ್ಲಿ ಗಮನಿಸಿ.
ಸುಮಾರು 10-15 ನಿಮಿಷ ಅಭ್ಯಾಸ ಮಾಡಿ.
ಉಪಯೋಗಗಳು
l ಭ್ರಮರಿ ಪ್ರಾಣಾಯಾಮವು ಮನಸ್ಸಿನ ಪ್ರಶಾಂತತೆಗೆ ಸಹಕಾರಿ.
l ಸರಿಯಾಗಿ ನಿದ್ರೆ ಬಾರದಿರುವುದು ಹಾಗೂ ನಿನಿದ್ರತೆಯ ಸಮಸ್ಯೆಗಳಿಗೆ ಇದು ಉಪಯುಕ್ತ.
l ಮಾನಸಿಕ ಒತ್ತಡ, ಆತಂಕ ಇವುಗಳಿಂದ ದೂರವಿರುವಲ್ಲಿ ಇದು ಸಹಕಾರಿ.
l ಶಸ್ತ್ರಚಿಕಿತ್ಸೆಯ ನಂತರದ ಪುನಶ್ಚೇತನದ ಸಮಯದಲ್ಲಿ ಇದು ಗಮನೀಯ ಪಾತ್ರವನ್ನು ವಹಿಸಬಲ್ಲದು.
l ಗರ್ಭಾವಸ್ಥೆ ಮತ್ತು ಜನ್ಮಪ್ರಕ್ರಿಯೆಯಲ್ಲೂ ಇದು ಬಹಳ ಉಪಯುಕ್ತವೆಂದು ಅನೇಕ ಸಂಶೋಧನೆಗಳು ತಿಳಿಸುತ್ತವೆ.
l ಗಂಟಲಿನ ಆರೋಗ್ಯಕ್ಕೂ ಇದು ಪೋಷಕ. ನಮ್ಮ ಧ್ವನಿಯು ಸೊಗಸಾಗುತ್ತದೆ.
l ಈ ಪ್ರಾಣಾಯಾಮವು ಗರ್ಭಿಣಿ ಸ್ತ್ರೀಯರಿಗೆ ಬಹಳ ಉಪಯುಕ್ತ.
ಒಟ್ಟಾರೆ, ಭ್ರಮರಿ ಪ್ರಾಣಾಯಾಮವು ಮನಸ್ಸು ಹಾಗೂ ನರಮಂಡಲದ ಮೇಲೆ ಹಿತವಾದ ಪರಿಣಾಮವನ್ನು ಉಂಟುಮಾಡಿ, ಮನೋದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ.ಯಾವ ಸಮಯದಲ್ಲಾದರೂ ಇದನ್ನು ಮಾಡಬಹುದು. ವಿಶೇಷವಾಗಿ ಬೆಳಗಿನ ಜಾವ ಹಾಗೂ ರಾತ್ರಿ ಮಲಗುವ ಮುನ್ನ ಇದರ ಅಭ್ಯಾಸವನ್ನು ಮಾಡುವುದರಿಂದ ಉತ್ತಮ ಪರಿಣಾಮಗಳನ್ನು ಪಡೆಯಬಹುದು.
–ಲೇಖಕರು: ಯೋಗಗುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.