ADVERTISEMENT

ಆರೋಗ್ಯ: ಮೂಳೆಗಳ ಸವೆತವೇ...? ವ್ಯಾಯಾಮ, ಔಷಧ, ಆಹಾರ ಸೇವನೆಗೆ ಇಲ್ಲಿದೆ ಕ್ರಮ

ಡಾ.ವಿಜಯಲಕ್ಷ್ಮಿ ಪಿ.
Published 10 ಅಕ್ಟೋಬರ್ 2023, 0:39 IST
Last Updated 10 ಅಕ್ಟೋಬರ್ 2023, 0:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಈಗ ಮಕ್ಕಳಿಂದ ಮುದುಕರವರೆಗೂ ಹೆಚ್ಚಿನವರು ಹೇಳುವುದು: ’ನಮಗೆ ಮೈಕೈ ನೋವಿದೆ, ಕಾಲು ನೋವಿದೆ. ಮಂಡಿನೋವಿದೆ. ಸ್ವಲ್ಪ ಕೆಲಸ ಮಾಡಿದರೂ ಸುಸ್ತು ಆಗುತ್ತದೆ. ಇನ್ನು ಕೆಲವರು ಹೇಳುತ್ತಾರೆ: ’ನನಗೆ ವಾತ ಆಗಿದೆ.  ಗಂಟು ನೋಯುತ್ತೆ.’

ಈ ಸಮಸ್ಯೆಗಳಿಗೆ ಕಾರಣ ಏನು?

ADVERTISEMENT

ಅತಿಯಾದರೆ ಅಮೃತವೂ ವಿಷವೇ. ಒಳ್ಳೆಯದು ಎಂದು ಯಾವ ನಿತ್ಯಕರ್ಮಗಳನ್ನೇ ಆಗಲಿ ಅತಿಯಾಗಿ ಮಾಡಿದರೆ ಅಥವಾ ಕ್ರಮಬದ್ಧರಾಗದೇ ಇದ್ದರೆ ಅವು ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಬಹುದು. 

ಮೊದಲನೆಯದಾಗಿ ಹಸಿವಿರುವಾಗ ಆಹಾರವನ್ನು ಸೇವಿಸದೇ ಇರುವುದು, ಅಥವಾ ಅತಿ ಅಲ್ಪಾಹಾರವನ್ನು ಸೇವಿಸುವುದು – ಹೀಗೆ ಮಾಡುವುದು ಮೂಳೆಯ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಕಡಿತಗೊಳಿಸುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವ ಭರದಲ್ಲಿ ಕ್ರಮಬದ್ಧವಲ್ಲದ ಆಹಾರ ಕ್ರಮಗಳನ್ನು, ವ್ಯಾಯಾಮದ ವಿಧಾನಗಳನ್ನು ಅಳವಡಿಸಿಕೊಂಡು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಜಿಡ್ಡಿನಂಶವು ಹೃದಯಕ್ಕೆ ತೊಂದರೆ ಕೊಡುತ್ತದೆ ಎಂಬ ಭ್ರಮೆಯಲ್ಲಿ ಸಂಪೂರ್ಣವಾಗಿ ಜಿಡ್ಡನ್ನು ವರ್ಜಿಸುತ್ತಾರೆ. ಹೀಗೆ ಮಾಡುವುದರಿಂದ ಸಂಧಿ ಮತ್ತು ಮೂಳೆಗಳ ಚಲನೆ ಕುಂಠಿತಗೊಂಡು, ಮೂಳೆಗಳ ನೋವು ಕಾಣಿಸಿಕೊಳ್ಳುತ್ತದೆ.

ಅತಿಯಾದ ಶೀತ ವಾತಾವರಣದಲ್ಲಿರುವುದು, ಅತಿ ತಂಪಿನ ಆಹಾರಗಳ ಸೇವನೆ, ಕ್ಷಾರೀಯವಾದ, ತಂಪಾದ ಪಾನೀಯಗಳ ನಿರಂತರ ಸೇವನೆಯು ಮೂಳೆಗಳ ಸವೆತಕ್ಕೆ ಕಾರಣವಾಗುತ್ತದೆ.

ಹಗಲು-ರಾತ್ರಿ ಕೆಲಸ ಎಂದು ಅತ್ಯಲ್ಪ ನಿದ್ರೆ ಮಾಡುವುದು, ನಿದ್ರೆ ಬರುವಾಗಲೂ ನಿದ್ರೆಯನ್ನು ತಡೆಯುವುದು, ಹಗಲಿನಲ್ಲಿ ಅತಿಯಾಗಿ ನಿದ್ರೆ ಮಾಡುವುದು – ಇವೆಲ್ಲವೂ ದೇಹದಲ್ಲಿನ ವಾಯುವನ್ನು ಪ್ರಚೋದಿಸಿ ನೋವನ್ನು ಉತ್ಪತ್ತಿ ಮಾಡುತ್ತವೆ.

ಅತಿಯಾದ ವ್ಯಾಯಾಮ

ನಿಯಮಿತವಲ್ಲದ ವ್ಯಾಯಾಮ; ಕ್ರಮವಿಲ್ಲದೆ, ಆಹಾರ ಜೀರ್ಣವಾಗುವ ಮೊದಲು, ಅಕಾಲದಲ್ಲಿ, ಏಕಾಂಗ ವೃದ್ಧಿಗಾಗಿ, ದೇಹ ದಷ್ಟಪುಷ್ಟವಾಗಲು ಮಾಡುವ ವ್ಯಾಯಾಮ, ಅತಿಯಾಗಿ ಈಜುವುದು,  ಓಡುವುದು,  ಅತಿ ದೂರ, ಅತಿಹೊತ್ತು ನಡೆಯುವುದು, ಅತಿ ಶ್ರಮದ ಕೆಲಸಗಳನ್ನು ನಿರಂತರವಾಗಿ ಮಾಡುವುದು, ಸದಾ ಅತಿಯಾದ ಬಿಸಿಲಿನಲ್ಲಿ ಶ್ರಮದ ಕೆಲಸ ಮಾಡುವುದು; ಸದಾ ಕುಳಿತಿರುವುದು; ಅಸಾಮಾನ್ಯ ಭಂಗಿಗಳಲ್ಲಿ ಕುಳಿತುಕೊಳ್ಳುವುದು, ಅಥವಾ ಮಲಗಿಕೊಳ್ಳುವುದು – ಇವೆಲ್ಲವೂ ಮೂಳೆಗಳ ಸವೆತಕ್ಕೆ ಕಾರಣವಾಗುತ್ತವೆ‌.‌

ಬಲವೃದ್ಧಿಗಾಗಿ, ದೇಹಬಲಕ್ಕೆ ಅನುಗುಣವಾಗಿ ನಿರಂತರ, ಶಿಸ್ತಾಗಿ, ನಿಯಮಿತವಾಗಿ ಮಾಡುವ ವ್ಯಾಯಾಮವು ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಲವು ಔಷಧಗಳನ್ನು ಕ್ರಮವರಿಯದೆ ಸೇವಿಸುವುದೂ ಮೂಳೆಗಳ ಸವೆತಕ್ಕೆ ಕಾರಣವಾಗಬಹುದು. ದೈಹಿಕ ರೋಗದಿಂದಲೋ, ಮಾನಸಿಕ ಒತ್ತಡದಿಂದಾಗಿಯೋ, ದೇಹದ ತೂಕ ವಿಪರೀತ ಕಡಿಮೆಯಾದರೆ, ಆಗಲೂ ಮೂಳೆಗಳ ಸವೆತಕ್ಕೆ, ಸಂಧಿಗಳ ಶೈಥಿಲ್ಯಕ್ಕೆ ಕಾರಣವಾಗುತ್ತದೆ; ಮೂಳೆ ಮತ್ತು ಸಂದುಗಳ ನೋವು ಹುಟ್ದಿಕೊಳ್ಳುತ್ತದೆ.

ಮಲ-ಮೂತ್ರಗಳು, ಹಸಿವೆ–ಬಾಯಾರಿಕೆಗಳು ಮುಂತಾದ ದೇಹದ ಸಹಜ ಪ್ರಕ್ರಿಯೆಗಳನ್ನು ತಡೆಯುವುದರಿಂದ ಮೂಳೆಗಳ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಅಪಘಾತದಿಂದ, ಅಭಿಘಾತದಿಂದ, ಕೆಲವು ಶಸ್ತ್ರಚಿಕಿತ್ಸೆಯಿಂದಾಗಿ, ಶಸ್ತ್ರಚಿಕಿತ್ಸೆಯ ನಂತರ ಸೇವಿಸುವ ಆಹಾರಗಳಿಂದಲೂ ಮೂಳೆಗಳ ದೃಢತೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಮೂಳೆ ಸವೆತ ತಡೆಯಲು ಏನು ಮಾಡಬಹುದು?

ಮೂಳೆಗಳ ಸವೆತಕ್ಕೆ ಕಾರಣವಾಗುವ ಅಂಶಗಳಿಂದ ದೂರ ಉಳಿದರೆ ಮೂಳೆಗಳ ರಕ್ಷಣೆಯಲ್ಲಿ ಇಡುವ ಮೊದಲ ಹೆಜ್ಜೆ. ನಿತ್ಯವೂ ಬೇಯಿಸಿದ ಆಹಾರಸೇವನೆ, ದೇಸೀ ಹಸುವಿನ ತುಪ್ಪ, ಮಜ್ಜಿಗೆ, ಹಾಲಿನ ಸೇವನೆ, ಹಾಲೊಡೆದ (whey) ನೀರಿನ ಸೇವನೆ,  ಖರ್ಜೂರ, ಅಂಜೂರ, ದ್ರಾಕ್ಷಿ ಮುಂತಾದ ಒಣಹಣ್ಣುಗಳ ಸೇವನೆ ಇವು ಮೂಳೆಗಳ ಸವೆತವನ್ನು ತಡೆಯುತ್ತದೆ. ನುಗ್ಗೆ ಸೊಪ್ಪು, ನುಗ್ಗೆಕಾಯಿ, ಬಸಳೆ, ಬೆಂಡೆ, ನೆಲ್ಲಿಕಾಯಿ, ಮಂಗರವಳ್ಳಿ – ಇವುಗಳ ಸೇವನೆ ಮೂಳೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಪದೇ ಪದೇ ಬಿಸಿ ಮಾಡಿ ಪುನಃ ಪುನಃ ಫ್ರಿಡ್ಜಿನಲ್ಲಿ ಶೇಖರಿಸಿಟ್ಟ ಆಹಾರವನ್ನು ಸೇವಿಸದಿರುವುದು ಒಳ್ಳೆಯದು.

ಎಳ್ಳೆಣ್ಣೆ, ಕೊಬ್ಬರಿಯೆಣ್ಣೆ, ತುಪ್ಪ, ಹರಳೆಣ್ಣೆಗಳನ್ನು ಸಮಪ್ರಮಾಣದಲ್ಲಿ ಬೆರೆಸಿ, ಓಮ, ವಾಯುವಿಡಂಗ, ಜೀರಿಗೆ ಇವುಗಳನ್ನು ಸೇರಿಸಿ ಒಗ್ಗರಣೆ ಮಾಡಿ, ಆ ಎಣ್ಣೆಯನ್ನು ನಿತ್ಯ ಅಭ್ಯಂಗ ಮಾಡುವುದರಿಂದ ಸಂದುನೋವು, ಮೂಳೆಗಳ ಸವೆತ ಆಗದಂತೆ ತಡೆಗಟ್ಟಬಹುದು. ಈ ಎಣ್ಣೆಯ ಮಿಶ್ರಣವನ್ನು ನೋವಿರುವ ಭಾಗಕ್ಕೆ ಹಚ್ಚಿ, ಬಿಸಿ ಶಾಖವನ್ನು ಕೊಡುವುದರಿಂದ ನೋವು ಕಡಿಮೆಯಾಗುತ್ತದೆ.

ಅತಿ ಕಹಿ ಸೇವನೆ ಸಲ್ಲ

ಮೂಳೆಗಳ ನೋವು, ಸಂಧಿನೋವು ಇರುವವರು ಅತಿ ಕಹಿಯಾದ ಪದಾರ್ಥಗಳಾದ ಹಾಗಲಕಾಯಿ, ಗೋರಿಕಾಯಿ, ಮೆಂತ್ಯ, ಬೇವಿನ ಸೊಪ್ಪಿನ ರಸವನ್ನು ನಿರಂತರವಾಗಿ ಔಷಧ ಅಥವಾ ಆಹಾರರೂಪದಲ್ಲಿ ಬಳಸಬಾರದು.

ದೇಹದ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸುವುದು, ತಿಂದ ಆಹಾರ ಜೀರ್ಣವಾಗುವ ಮೊದಲೇ ಆಹಾರವನ್ನು ಸೇವಿಸುವುದು, ಬಲ ಬರಬೇಕೆಂದು ಜಿಡ್ಡಿನ ಕಾಳುಗಳಾದ ಬಾದಾಮಿ, ಪಿಸ್ತಾಗಳ ಅತಿಯಾದ ಸೇವನೆಯಿಂದ ದೇಹದ ತೂಕ ಹೆಚ್ಚಿ, ಕಾಲುಗಳ ಮೇಲೆ ಭಾರ ಹೆಚ್ಚುತ್ತದೆ.  ಆಗಲೂ ಮಂಡಿಸವೆತ ಉಂಟಾಗಿ ಮಂಡಿನೋವು ಬರಬಹುದು. ಹಾಗಾಗಿ ದೇಹ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು. 

ತೂಕ ಕಡಿಮೆಯಾದರೂ ಹೆಚ್ಚಾದರೂ, ಮಂಡಿ, ಮತ್ತು ಇತರ ಸಂಧಿಗಳಲ್ಲಿರುವ ಜಿಡ್ಡಿನ ಅಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗದಂತೆ ಎಚ್ಚರ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.