ADVERTISEMENT

ತಾಯಿಗೆ ಕೊರೊನಾ ಸೋಂಕಿದ್ದರೂ ಸ್ತನ್ಯಪಾನ ಸೂಕ್ತವೇ?

ಆಗಸ್ಟ್‌ 1–7 ಸ್ತನ್ಯಪಾನ ಸಪ್ತಾಹ

ಡಾ.ವೀಣಾ ಭಟ್ಟ
Published 31 ಜುಲೈ 2020, 19:30 IST
Last Updated 31 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸ್ತನ್ಯಪಾನ ಒಕ್ಕೂಟ, ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮೊದಲಾದ ಸಂಸ್ಥೆಗಳು ‘ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲುಣಿಸಲು ಪ್ರಾರಂಭಿಸಿ. ಆರು ತಿಂಗಳವರೆಗೂ ಕೇವಲ ಸ್ತನ್ಯಪಾನ. ನಂತರವೂ ಸೂಕ್ತ ಪೂರಕ ಆಹಾರದೊಂದಿಗೆ ಎರಡು ವರ್ಷಗಳವರೆಗೆ ಎದೆಹಾಲುಣಿಸುವಿಕೆಯನ್ನು ಮುಂದುವರಿಸಬೇಕು’ ಎಂದು ಪ್ರತಿಪಾದಿಸುತ್ತವೆ. ‘ಆರೋಗ್ಯಕರ ಭೂಗ್ರಹಕ್ಕಾಗಿ ಸ್ತನ್ಯಪಾನ ಬೆಂಬಲಿಸಿ’ ಎಂಬುದು ಈ ವರ್ಷದ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯ. ಈ ಸಂದರ್ಭದಲ್ಲಿ ಎದೆಹಾಲಿನಿಂದ ಮಗುವಿಗೆ ಸಿಗುವ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ ಭದ್ರಾವತಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಭಟ್‌.

ಮನುಷ್ಯ ಸೇರಿದಂತೆ ಎಲ್ಲಾ ಸಸ್ತನಿಗಳು ತಮ್ಮ ಸಂತಾನ ಪೋಷಿಸಲು ನಿಸರ್ಗ ಕರುಣಿಸಿದ ವರ ಈ ಸ್ತನ್ಯಪಾನ. ಪರಿಪೂರ್ಣ ಪೌಷ್ಟಿಕ ಆಹಾರವಾದ ಇದರ ಪ್ರಯೋಜನ ಒಂದೇ, ಎರಡೇ! ರುಚಿಯಾದ, ಕ್ರಿಮಿರಹಿತ, ಪರಿಶುದ್ಧವಾದ, ಬಿಸಿ, ತಣ್ಣಗೆ ಮಾಡಬೇಕೆಂಬ ಗೋಜಿಲ್ಲದ, ಮಗುವಿಗೆ ಅಗತ್ಯವಿರುವಷ್ಟು ಸಾಂದ್ರತೆಯಲ್ಲಿರುವ ಅತ್ಯುತ್ಕೃಷ್ಟ ಆಹಾರ. ಮಗುವಿನ ಅಗತ್ಯಕ್ಕೆ ತಕ್ಕಂತೆ ಶರ್ಕರ, ಪಿಷ್ಠ ಹಾಗೂ ಪ್ರೊಟೀನ್‌ಗಳ ಅಂಶಗಳು ಇದರಲ್ಲಿ ಇರುತ್ತವೆ.

ಎದೆಹಾಲು ಮಕ್ಕಳಲ್ಲಿ ಕೆಮ್ಮು, ನೆಗಡಿ ಹಾಗೂ ಅಲರ್ಜಿಗಳನ್ನು, ವಾಂತಿ–ಭೇದಿ ಮತ್ತು ಜೀರ್ಣಾಂಗವ್ಯೂಹದ ಸೋಂಕನ್ನು ಕಡಿಮೆ ಮಾಡುತ್ತದೆ. ಸಮರ್ಪಕ ಮಲವಿಸರ್ಜನೆಗೆ ಸಹಾಯಕ. ಚರ್ಮಸೋಂಕು ಹಾಗೂ ಬಾಲ್ಯದಿಂದ ಕಾಡುವ ಕೆಲವು ಸೋಂಕುಗಳಿಂದ ರಕ್ಷಿಸಿ, ಶಿಶುಮರಣದ ದರವನ್ನು ಶೇ 20ರಷ್ಟು ಕಡಿಮೆ ಮಾಡುತ್ತದೆ. ಮಕ್ಕಳಲ್ಲಿ ಬರಬಹುದಾದ ಮಧುಮೇಹ, ಬೊಜ್ಜು, ಕ್ಯಾನ್ಸರ್‌ಗಳಿಂದ ರಕ್ಷಿಸುವ ತಾಕತ್ತು ಎದೆಹಾಲಿಗಿದೆ. ಮಗುವಿಗೆ ಹಾಲೂಡಿಸುವುದರಿಂದ ತಾಯಂದಿರಿಗೂ ಹಲವು ಪ್ರಯೋಜನಗಳಿವೆ. ಮಹಿಳೆಯರಲ್ಲಿ ರಕ್ತಸ್ರಾವ ಕಡಿಮೆ ಮಾಡಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಮೂಳೆಗಳನ್ನು ಗಟ್ಟಿಯಾಗಿಸಿ ಅನವಶ್ಯಕ ಬೊಜ್ಜನ್ನು ಕರಗಿಸುತ್ತದೆ. ಅವರಲ್ಲಿ ನಂತರದ ಗರ್ಭಧಾರಣೆಯು ಮುಂದೂಡಲ್ಪಡುತ್ತದೆ. ಸ್ತನ, ಅಂಡಾಶಯ, ಗರ್ಭಕೋಶದ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ADVERTISEMENT

ಪ್ರಸವಪೂರ್ವದಲ್ಲೇ ಗರ್ಭಿಣಿಯರ ತಪಾಸಣೆ ಸರಿಯಾಗಿ ಆಗದಿದ್ದರೆ, ಆಪ್ತಸಮಾಲೋಚನೆ ದೊರಕದಿದ್ದಲ್ಲಿ ಗರ್ಭಿಣಿಯರು ದೈಹಿಕವಾಗಿ, ಮಾನಸಿಕವಾಗಿ ಸ್ತನ್ಯಪಾನ ಮಾಡಿಸಲು ಸಿದ್ಧರಾಗದೇ ಇರಬಹುದು. ಪ್ರಸವಪೂರ್ವದಲ್ಲಿ ಪೌಷ್ಟಿಕ ಆಹಾರ ಸೇವನೆ, ಸ್ನಾನಕ್ಕೂ ಮೊದಲು ಎದೆತೊಟ್ಟನ್ನು ನೀವಿಕೊಳ್ಳುವುದು ಇತ್ಯಾದಿ ಮಾಡಬೇಕು. ಹೆರಿಗೆಯಾದ ತಕ್ಷಣವೇ ಅಥವಾ ಒಂದು ಗಂಟೆಯೊಳಗಾಗಿ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು. ಹಾಲು ಸಾಲುವುದೇ ಇಲ್ಲ ಅಥವಾ ಉದ್ಯೋಗದ ಕಾರಣಕ್ಕಾಗಿ, ಎದೆತೊಟ್ಟು ಸೀಳುವಿಕೆ ಅಥವಾ ಬಾವು ಬರುವುದು ಇತ್ಯಾದಿ ತೊಂದರೆಗಳಾದಾಗ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು ಸೂಕ್ತಭಂಗಿಯಲ್ಲಿ ಹಾಲುಣಿಸಬೇಕು.

ಕೋವಿಡ್-19 ಹಾಗೂ ಸ್ತನ್ಯಪಾನ
ಎದೆಹಾಲಿನಿಂದ ಕೊರೊನಾ ಸೋಂಕು ಹರಡುವುದಿಲ್ಲ ಮತ್ತು ತಾಯಿಗೇನಾದರೂ ಕೋವಿಡ್ ವೈರಸ್ ಸೋಂಕಿದ್ದು ರೋಗಲಕ್ಷಣವಿಲ್ಲದಿದ್ದಲ್ಲಿ ತಾಯಿಯೊಡನೆ ಮಗುವನ್ನಿಟ್ಟು ಮಗುವಿಗೆ ಎದೆಹಾಲುಣಿಸಬೇಕು ಮತ್ತು ಮಾಸ್ಕ್ ಧರಿಸಿ ಎದೆಹಾಲುಣಿಸುವುದು, ಪದೇಪದೇ ಸೋಪಿನಿಂದ ಕೈ ತೊಳೆದುಕೊಳ್ಳುವುದು ಇತ್ಯಾದಿ ಸ್ವಚ್ಛತೆಯ ನಿಯಮಗಳನ್ನು ಪಾಲಿಸಬೇಕು. ತಾಯಿಗೇನಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿದ್ದು ತೀವ್ರ ನಿಗಾ ಘಟಕದಲ್ಲಿ ಇಡಬೇಕಾದ ಪರಿಸ್ಥಿತಿ ಬಂದರೆ, ತಾಯಿ ಮಗುವನ್ನು ಬೇರೆ ಇಟ್ಟು ತಾಯಿಯ ಎದೆಹಾಲನ್ನು ಹಿಂಡಿ ಮಗುವಿಗೆ ಹಾಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.