ADVERTISEMENT

ಗರ್ಭಕಂಠ ಕ್ಯಾನ್ಸರ್ ತಡೆಯಬಹುದೇ?

ಡಾ.ಶಶಿಕಲಾ ಕ್ಷೀರಸಾಗರ
Published 29 ಜನವರಿ 2021, 19:30 IST
Last Updated 29 ಜನವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಪತ್ತೆಯಾಗದೆ ಕೊನೆಯ ಹಂತದಲ್ಲಿ ಗೊತ್ತಾಗುವ ಗರ್ಭಕಂಠ ಕ್ಯಾನ್ಸರ್ ಮಹಿಳೆಯರನ್ನು ಹೆಚ್ಚು ಕಾಡುವ ಕ್ಯಾನ್ಸರ್‌ಗಳಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಶೇ 99ರಷ್ಟು ಪ್ರಕರಣಗಳಲ್ಲಿ ಲೈಂಗಿಕ ಸಂಪರ್ಕದಿಂದ ಹರಡುವ ಎಚ್‌ಪಿವಿ (ಹ್ಯೂಮನ್‌ ಪ್ಯಾಪಿಲೋಮ ವೈರಸ್‌)ಯಿಂದ ಈ ಕ್ಯಾನ್ಸರ್‌ ಉಂಟಾಗುತ್ತದೆ. ಋತುಚಕ್ರದ ಮಧ್ಯೆ ಹಾಗೂ ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವ, ದುರ್ವಾಸನೆಯಿಂದ ಕೂಡಿದ ಯೋನಿ ಸ್ರಾವ, ಬೆನ್ನು ಅಥವಾ ಹೊಟ್ಟೆ ನೋವು ಇದರ ಲಕ್ಷಣಗಳಾದರೂ, ಕೆಲವೊಮ್ಮೆ ಈ ಯಾವುದೇ ಲಕ್ಷಣ ಕಾಣಿಸದೇ ಇರಬಹುದು. ಹದಿಹರೆಯದಲ್ಲೇ ಹುಡುಗಿಯರು ಎಚ್‌ಪಿವಿ ಲಸಿಕೆಯನ್ನು ಪಡೆಯುವುದು ಮತ್ತು ನಿಯಮಿತವಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ ಗರ್ಭಕಂಠ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

2006ರಿಂದಲೇ ಎಫ್‌ಡಿಎ ಅನುಮೋದಿತ ಕ್ವಾಡ್ರಿವೆಲೆಂಟ್ ಲಸಿಕೆಗಳು ಲಭ್ಯವಿದ್ದು, ಇವು ಕೆಲವೊಂದು ಮಾದರಿಯ ಎಚ್‌ಪಿವಿಯಿಂದ ಬರುವ ಗರ್ಭಕಂಠ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಅಂದರೆ ಲಸಿಕೆಯಿಂದ ಈ ಕ್ಯಾನ್ಸರ್‌ ಬರದಂತೆ ತಡೆಗಟ್ಟಬಹುದಾದ ಸಾಧ್ಯತೆ ಶೇ 70– 90ರಷ್ಟು.

ಗರ್ಭಕಂಠ ಕ್ಯಾನ್ಸರ್ ಹೆಚ್ಚು ಅಪಾಯಕಾರಿಯಾಗದಂತೆ ತಡೆಯುವ ಮಾರ್ಗಗಳೂ ಇವೆ. ಮೊದಲ ಮಾರ್ಗವೆಂದರೆ ಆಕ್ರಮಣಕಾರಿ ಕ್ಯಾನ್ಸರ್ ಆಗುವ ಮುನ್ನ ಕ್ಯಾನ್ಸರ್ ಅನ್ನು ಪತ್ತೆ ಮಾಡುವುದು ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು. ಇನ್ನೊಂದು ಅದು ಬರದಂತೆ ನೋಡಿಕೊಳ್ಳುವುದು. ಅಂದರೆ ಲಸಿಕೆಯನ್ನು ನೀಡುವುದು. ಈ ಬಗ್ಗೆ ಮಹಿಳೆಯರಲ್ಲಿ ಸಾಕಷ್ಟು ಅರಿವು ಮೂಡಿಸಬೇಕಾದ ಅಗತ್ಯವಿದೆ.

ADVERTISEMENT

ಲಸಿಕೆ
11 ಅಥವಾ 12ನೇ ವಯಸ್ಸಿನಲ್ಲಿ ಬಾಲಕಿಯರಲ್ಲಿ ಎಚ್‌ಪಿವಿ ಲಸಿಕೆಯನ್ನು ಆರಂಭಿಸಬಹುದು. ಲಸಿಕೆಯನ್ನು 14 ವರ್ಷಕ್ಕಿಂತ ಮೊದಲೇ ಆರಂಭಿಸಿದರೆ ಕೇವಲ ಎರಡು ಡೋಸ್ ಲಸಿಕೆಯನ್ನು ಆರು ತಿಂಗಳ ಅವಧಿಯಲ್ಲಿ ನೀಡುವ ಅಗತ್ಯವಿದೆ. 14 ವರ್ಷ ಮೀರಿದ ಹೆಣ್ಣುಮಕ್ಕಳಿಗೆ ಮತ್ತು ಯುವತಿಯರಿಗೆ 6 ತಿಂಗಳ ಅವಧಿಯಲ್ಲಿ ಮೂರು ಡೋಸ್ ಎಚ್‌ಪಿವಿ ಲಸಿಕೆ ನೀಡುವುದನ್ನು ಶಿಫಾರಸು ಮಾಡಲಾಗಿದೆ.

ಈ ಲಸಿಕೆಗಳು ಕ್ಯಾನ್ಸರ್‌ಗೆ ಸಂಬಂಧಿಸಿದ ಎಚ್‌ಪಿವಿ ಸೋಂಕಿನಿಂದ ರಕ್ಷಣೆ ನೀಡುತ್ತವೆ. ಇದರ ಜೊತೆಗೆ ಗುದ ಮತ್ತು ಜೆನಿಟಲ್ ವಾರ್ಟ್‌ (ಲೈಂಗಿಕ ಚಟುವಟಿಕೆಯಿಂದ ಕಡಿಮೆ ಅಪಾಯಕಾರಿ ಎಚ್‌ಪಿವಿಯಿಂದ ಜನನಾಂಗ ಮತ್ತು ಗುದ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಗಂಟು– ಇದು ತುರಿಕೆ, ನೋವಿನಿಂದ ಕೂಡಿರುತ್ತದೆ)ಗಳಿಗೆ ಕಾರಣವಾಗುವ ಅಪಾಯಗಳನ್ನು ದೂರ ಮಾಡುತ್ತದೆ. ಈ ಲಸಿಕೆಗಳು ಎಚ್‌ಪಿವಿ ಸೋಂಕನ್ನು ತಡೆಗಟ್ಟುವಲ್ಲಿ ಕೆಲಸ ಮಾಡುತ್ತವೆಯೇ ಹೊರತು ಇರುವ ಸೋಂಕಿಗೆ ಚಿಕಿತ್ಸೆಯನ್ನು ನೀಡುವುದಿಲ್ಲ. ಈ ಕಾರಣಕ್ಕಾಗಿಯೇ ಹೆಚ್ಚು ಪರಿಣಾಮಕಾರಿಯಾಗಲು ಲೈಂಗಿಕ ಚಟುವಟಿಕೆಯ ಮೂಲಕ ಎಚ್‌ಪಿವಿ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಈ ಲಸಿಕೆ ಪಡೆಯುವುದು ಉತ್ತಮ.

ಲಸಿಕೆ ಹಾಕಿಸಿಕೊಂಡರೂ ಮಹಿಳೆಯರು ಪ್ಯಾಪ್ ಸ್ಮಿಯರ್/ ಎಚ್‌ಪಿವಿ-ಡಿಎನ್‌ಎ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ಯಾಪ್‌ ಸ್ಮಿಯರ್‌ ಪರೀಕ್ಷೆಯನ್ನು 21 ವರ್ಷಕ್ಕಿಂತ ಮೇಲ್ಪಟ್ಟ, ಲೈಂಗಿಕವಾಗಿ ಸಕ್ರಿಯವಾಗಿ ಇರುವ ಮಹಿಳೆಯರಲ್ಲಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ 65 ವರ್ಷ ವಯಸ್ಸಿನವರೆಗೂ ಮಾಡಿಸಬೇಕಾಗುತ್ತದೆ. ಅದೇ ರೀತಿ ಐದು ವರ್ಷಗಳಿಗೊಮ್ಮೆ ಎಚ್‌ಪಿವಿ-ಡಿಎನ್‌ಎ ಪರೀಕ್ಷೆ ಸಹ ಮಾಡಿಸಬಹುದು.

(ಲೇಖಕಿ: ಕನ್ಸಲ್ಟೆಂಟ್‌, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ,ವಿಕ್ರಂ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.