ADVERTISEMENT

ಲೈಂಗಿಕ ಕ್ರಿಯೆ ವೇಳೆ ಹರಡುವ ವೈರಾಣು ಸೋಂಕು: ತಡೆಗೆ ಇದೆ ಲಸಿಕೆ

ಡಾ.ಸ್ಮಿತಾ ಜೆ ಡಿ
Published 20 ಡಿಸೆಂಬರ್ 2022, 13:30 IST
Last Updated 20 ಡಿಸೆಂಬರ್ 2022, 13:30 IST
   

ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗುತ್ತಿರುವ ಕಾಯಿಲೆಯೆಂದರೆ ಅದು ಕ್ಯಾನ್ಸರ್.ಕ್ಯಾನ್ಸರ್‌ ಅನ್ನು ಏಡಿ ಕಾಯಿಲೆಯೆಂದು ಕರೆಯುವುದುಂಟು. ಕ್ಯಾನ್ಸರ್ ಪದಕ್ಕೆ ಗ್ರೀಕ್ ಭಾಷೆಯಲ್ಲಿ 'ಏಡಿ' ಎಂಬ ಅರ್ಥವಿದೆ.

ಈ ಕಾಯಿಲೆಗೆ ಬದಲಾದ ಜೀವನಶೈಲಿ, ಆಹಾರಾಭ್ಯಾಸಗಳು, ರಾಸಾಯನಿಕಗಳ ಬಳಕೆ, ವಿಕಿರಣಗಳು, ಅಪೌಷ್ಟಿಕತೆ ಇವೆಲ್ಲವೂ ಕಾರಣವೆನ್ನಬಹುದು. ಇವುಗಳ ಜೊತೆಗೆ ಧೂಮಪಾನ, ಮದ್ಯ ಸೇವನೆ, ಆನುವಂಶಿಕತೆಯೂ ಕಾರಣವಾಗಬಹುದು. ಅದೇ ರೀತಿ, ಕ್ಯಾನ್ಸರ್‌ಗೆ ಕೆಲವು ವೈರಾಣುವಿನ ಸೋಂಕು ಸಹ ಕಾರಣವಾಗಬಹುದು ಎಂಬುದು ಬಹು ಜನರಿಗೆ ತಿಳಿಯದ ಸಂಗತಿ.ಅದನ್ನು ಹೆಚ್.ಪಿ.ವಿ. ವೈರಾಣು (HUMAN PAPILOMA VIRUS) ಸೋಂಕು ಎಂದು ಕರೆಯಲಾಗುತ್ತದೆ. ಇಂತಹ ಸೋಂಕು ತಡೆಯಲು ಲಸಿಕೆ ಲಭ್ಯವಿದೆ.

ವೈರಾಣುವಿನಿಂದ ಸೋಂಕಿತ ಜೀವಕೋಶಗಳು ಮಿತಿಮೀರಿ ಅಪಾರ ಸಂಖ್ಯೆಯಲ್ಲಿ ಉಲ್ಬಣಗೊಂಡಾಗ ಕ್ಯಾನ್ಸರ್‌ಗೆ ಕಾರಣವಾಗಬಹುದು. ಯುವ ಜನರಲ್ಲಿ ಈ ವೈರಾಣುವಿನ ಸೋಂಕನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಲೈಂಗಿಕ ಕ್ರಿಯೆಯ ಮೂಲಕ ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದಾಗಿದೆ. ಪ್ರಪಂಚದ ಮೂರನೇ ಅತಿ ಸಾಮಾನ್ಯವಾದ ಸರ್‌ವಿಕ್ಸ್ ಕ್ಯಾನ್ಸರ್ ತಡೆಯಲೆಂದೇ ಹ್ಯೂಮನ್ ಪಪಿಲೋಮಾ ವೈರಸ್ (ಹೆಚ್‌ಪಿವಿ) ಲಸಿಕೆ ಪರಿಣಾಮಕಾರಿಯಾಗಿದೆ.

ADVERTISEMENT

ಯಾರು ಈ ಲಸಿಕೆಯನ್ನು ಪಡೆಯಬೇಕು?
* ಎಲ್ಲಾ 11-12 ವರ್ಷದ ಮಕ್ಕಳು ಈ ಲಸಿಕೆಯನ್ನು ತೆಗೆದುಕೊಳ್ಳುವುದು ಸೂಕ್ತ.
* 26 ವರ್ಷದ ಕೆಳಗಿನ ವಯಸ್ಕರೂ ಸಹ ಈ ಲಸಿಕೆಯನ್ನು ಪಡೆಯಬಹುದಾಗಿದೆ.
* 11-12 ವರ್ಷದಲ್ಲಿ ಮೊದಲನೆಯ ಡೋಸ್‌ನ್ನು ಪಡೆಯಬಹುದಾಗಿದೆ.
* 15 ವರ್ಷದ ಒಳಗಿನವರಲ್ಲಿ ಎರಡು ಡೋಸ್‌ಗಳು, 15-26 ವರ್ಷದವರಿಗೆ ಮೂರು ಡೋಸ್ ಲಸಿಕೆಯ ಅವಶ್ಯಕತೆಯಿರುತ್ತದೆ.
* ಆಂತರಿಕ ರೋಗ ನಿರೋಧಕ ಶಕ್ತಿ ಕಡಿಮೆಯಿರುವ 9-26 ವರ್ಷದವರಲ್ಲಿ ಮೂರು ಡೋಸ್‌ಗಳ ಅವಶ್ಯಕತೆಯಿರುತ್ತದೆ.
* 27 ವರ್ಷ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾದರೂ ಸಹ ಉಪಯೋಗ ಕಡಿಮೆಯಿದ್ದು ವೈದ್ಯರ ಸಮಾಲೋಚನೆ ಅವಶ್ಯಕತೆಯಿರುತ್ತದೆ.

ಯಾರು ಈ ಲಸಿಕೆಯನ್ನು ಪಡೆಯಬಾರದು?
ತೀವ್ರ ರೀತಿಯ ಅಲರ್ಜಿಗಳಿಂದ ಬಳಲುತ್ತಿರುವವರು,ಈಸ್ಟ್‌ನ (ಶಿಲೀಂಧ್ರ) ಅಲರ್ಜಿ ಹೊಂದಿರುವವರು,ಗರ್ಭಿಣಿಯರು ಈ ಲಸಿಕೆ ಪಡೆಯದಿರುವುದು ಉತ್ತಮ.

ಈ ಲಸಿಕೆಯಿಂದಾಗುವ ಅಡ್ಡಪರಿಣಾಮಗಳು
ಲಸಿಕೆಯನ್ನು ಪಡೆದ ಜಾಗವು ಕೆಂಪಾಗುವುದು, ಊದಿಕೊಳ್ಳುವುದು, ಜ್ವರ, ತಲೆಬಾಧೆ, ಸುಸ್ತು, ಹೇಸಿಗೆ, ಮಾಂಸಖಂಡದ ನೋವುಗಳು ಸಾಮಾನ್ಯವಾಗಿದ್ದು ಭಯಪಡುವ ಅಗತ್ಯವಿಲ್ಲ.

ಅಧ್ಯಯನಗಳ ಪ್ರಕಾರ ಈ ಲಸಿಕೆಯು ಶೇ.90ರಷ್ಟು ಹೆಚ್.ಪಿ.ವಿ ವೈರಾಣುವಿನ ಸೋಂಕಿನಿಂದ ಉದ್ಭವಿಸಬಹುದಾದ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ತಡೆಯಬಹುದಾಗಿದೆ. 2006 ರಲ್ಲಿ ಪ್ರಥಮವಾಗಿ ಈ ಲಸಿಕೆಯ ಪ್ರಯೋಗವನ್ನು ಮಾಡಲಾಗಿದ್ದು ಶೇ. 86 ರಷ್ಟು ಯುವ ಜನರಲ್ಲಿ ಉದ್ಭವಿಸುವ ಜನನೇಂದ್ರಿಯದ ವಾರ್ಟ್‌ಗಳನ್ನು ಕಡಿಮೆಮಾಡಬಹುದಾಗಿದೆ. ಹೆಂಗಸರಲ್ಲಿ ಸಾಮಾನ್ಯವಾಗಿ ಕಂಡುಬರುವ ಸರ್‌ವಿಕ್ಸ್ (cervix) ಕ್ಯಾನ್ಸರ್‌ಗಳನ್ನು ಸಹ ತಡೆಯಬಹುದಾಗಿದೆ. ಈ ಲಸಿಕೆಯು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದು ಜನರು ಇದರ ಉಪಯೋಗವನ್ನು ಪಡೆಯಬಹುದಾಗಿದೆ.

___________________________________________________________________

ಲೇಖಕಿ:ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.