ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಇದೀಗ ಸಾಮಾನ್ಯವಾಗಿಬಿಟ್ಟಿದೆ. ಆದರೆ ಪ್ರಾಣಕ್ಕೆ ಎರವಾಗುವ ಈ ರೋಗದ ಬಗ್ಗೆ ನಿರ್ಲಕ್ಷ್ಯ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಆರೋಗ್ಯದೆಡೆಗಿನ ಅಲ್ಪ ಅಸಡ್ಡೆ ಕೊನೆಗೆ ಸ್ತನ ಕ್ಯಾನ್ಸರ್ ಎಂಬ ಮಾರಕ ರೋಗವನ್ನು ಎದೆಗಪ್ಪಿಕೊಳ್ಳುವಂತೆ ಮಾಡುತ್ತಿದೆ. ಎದೆಯಲ್ಲಿ ಮೂಡು ಸ್ತನದಲ್ಲಾಗುವ ಬದಲಾವಣೆಯಿಂದ ಸ್ತನ ಕ್ಯಾನ್ಸರ್ ಎಂದು ಸ್ವಯಂ ಪರೀಕ್ಷಿಸಿಕೊಳ್ಳುವ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.
ವಂಶವಾಹಿ ತಿಳಿದುಕೊಳ್ಳಿ: ಸ್ತನ ಕ್ಯಾನ್ಸರ್ ವಂಶವಾಹಿಯಿಂದ ಬರಬಹುದಾದ ರೋಗವೆಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ತಾಯಿಯಿಂದ ಮಗಳಿಗೋ ಅಥವಾ ಅಜ್ಜಿಯಿಂದ ಮೊಮ್ಮಗಳಿಗೋ ಕ್ಯಾನ್ಸರ್ ಜೀನ್ ಹರಡಬಹುದು. ನಿಮ್ಮ ತಾಯಿಯ ಕುಟುಂಬ ವರ್ಗದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೆ ವಂಶವಾಹಿಯಿಂದ ಅದು ನಿಮಗೂ ತಗುಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ. ಹೀಗಿದ್ದ ಪಕ್ಷದಲ್ಲಿ ಆರು ತಿಂಗಳಿಗಾದರೂ ಸ್ತ್ರೀ ರೋಗ ತಜ್ಞರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಕ್ಯಾನ್ಸರ್ ಜೀನ್‌ಗೆ ಪ್ರಚೋದನೆ ಬೇಡ: ನಿಮ್ಮ ವಂಶಜರಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದ ಪಕ್ಷದಲ್ಲಿ ಕ್ಯಾನ್ಸರ್ ಪ್ರಚೋದಿಸುವ ಅಂಶಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕ್ಯಾನ್ಸರ್ ತಂದೊಡ್ಡಬಹುದಾದ ಆಹಾರವಿರಲಿ, ಧೂಮಪಾನವಿರಲಿ, ಈ ಕುರಿತು ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಮೊದಲೇ ವಂಶವಾಹಿ ರೂಪದಲ್ಲಿ ಗುಪ್ತವಾಗಿದ್ದ ಕ್ಯಾನ್ಸರ್ ಜೀನ್‌ಗೆ ನೀವು ಪ್ರಚೋದನೆ ನೀಡಿದಂತಾಗುತ್ತದೆ.
ಪತ್ತೆ ಮಾರ್ಗ ತಿಳಿಯಿರಿ: ಸ್ತನ ಕ್ಯಾನ್ಸರ್‌ನಲ್ಲಿ ಮೂರು ಹಂತಗಳಿವೆ. ಟ್ಯೂಮರ್, ನಾಡಲ್, ಮೆಟಾಸ್ಟಾಸಿಸ್. ಟ್ಯೂಮರ್ ಹಂತದಲ್ಲಿ ಸ್ತನ ಕ್ಯಾನ್ಸರ್ ಗಡ್ಡೆ ರೂಪದಲ್ಲಿದ್ದು, ಅದನ್ನು ಪತ್ತೆ ಹಚ್ಚಿದರೆ ಬದುಕುವ ಸಾಧ್ಯತೆ ಶೇಕಡ 90 ರಷ್ಟಿರುತ್ತದೆ. ನಾಡಲ್ ಹಂತದಲ್ಲಿ ಈ ಗಡ್ಡೆ ಒಡೆಯಲು ಆರಂಭಿಸಿರುತ್ತದೆ. ಕೊನೆಯ ಹಂತದಲ್ಲಿ ಗಡ್ಡೆ ಒಡೆದು ಹರಡಿಕೊಂಡುಬಿಟ್ಟಿರುತ್ತದೆ. ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಲ್ಲಿ ಇರುವ ದೊಡ್ಡ ತೊಂದರೆ ಎಂದರೆ ಇದು ಕಾಣಿಸಿಕೊಳ್ಳುವುದೇ ಬದುಕುವ ಸಾಧ್ಯತೆ 50% ಕಡಿಮೆಯಾದ ನಾಡಲ್ ಹಂತದಲ್ಲಿ. ಕೊನೆಯ ಹಂತದಲ್ಲಿ ಇದು ಮಾರಕವಾಗಬಹುದು.
ಸ್ವಯಂ ಚಿಕಿತ್ಸೆ: ಸ್ತನ ಕ್ಯಾನ್ಸರ್ ಆರಂಭಗೊಳ್ಳುವ ಸೂಚನೆ ಕಂಡು ಹಿಡಿಯುವ ಸುಲಭೋಪಾಯವೆಂದರೆ ಸ್ವಯಂ ತಪಾಸಣೆ ಮಾಡಿಕೊಳ್ಳುವುದು. ಪ್ರತಿಯೊಬ್ಬ ಮಹಿಳೆಯೂ ಇದಕ್ಕೆ ಹೊರತಾಗಿಲ್ಲ. ಸ್ನಾನ ಮಾಡುವಾಗಲೋ ಅಥವಾ ಬಟ್ಟೆ ಬದಲಾಯಿಸುವಾಗಲೋ ಆಗಾಗ್ಗೆ ಗಡ್ಡೆಯಿರುವ ಲಕ್ಷಣವನ್ನು ತಪಾಸಣೆ ನಡೆಸಿ. ವೃತ್ತಾಕಾರವಾಗಿ ಸ್ತನದ ಮೇಲೆ ಕೈಯ್ಯಾಡಿಸಿದಾಗ ಗಡ್ಡೆ ಇರುವಂತೆ ಕಂಡುಬಂದರೆ ತಡ ಮಾಡದೆ ತಕ್ಷಣವೇ ಸ್ತ್ರೀ ರೋಗ ತಜ್ಷರನ್ನು ಭೇಟಿ ಮಾಡಿ.
ಮುಟ್ಟಾದ ಸಂದರ್ಭ ಅಥವಾ ಅದಕ್ಕೆ ಮುನ್ನ ಸ್ವಲ್ಪ ಬದಲಾವಣೆ ಕಂಡು ಬರುವುದು ಸಹಜ. ಆದರೆ ಅದರ ಹೊರತೂ ಏನೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
- ಡಾ. ನಿತಿ ರೈಜಾಡಾ, ನಿರ್ದೇಶಕರು - ವೈದ್ಯಕೀಯ ಅಂಕಾಲಜಿ ಮತ್ತು ಹೆಮಟೋ-ಅಂಕಾಲಜಿ, ಫೋರ್ಟಿಸ್ ಆಸ್ಪತ್ರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.