ADVERTISEMENT

PV Web Exclusive: ಆತ್ಮವಿಶ್ವಾಸ ಹೆಚ್ಚಿಸುವ ಮಾತಿನ ಕ್ಯಾಪ್ಸೂಲ್‌

ಕೈ ಹಿಡಿದಳು ಗಾಯತ್ರಿ – 8

ಕೃಷ್ಣಿ ಶಿರೂರ
Published 27 ಡಿಸೆಂಬರ್ 2020, 6:51 IST
Last Updated 27 ಡಿಸೆಂಬರ್ 2020, 6:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೊದಲ ಕಿಮೊ ಆದ 12ನೇ ದಿನಕ್ಕೆ ಕೂದಲು ಉದುರಲು ನಾಂದಿಹಾಡಿತು. ಸ್ನಾನಕ್ಕೆ ನಿಂತಾಗ ತಲೆಗೆ ನೀರು ಹಾಕಿ, ಶಾಂಪು ಹಾಕಿ ಉಜ್ಜುತ್ತಲೇ ಕೈಯಲ್ಲಿ ಒಂದಷ್ಟು ಕೂದಲುಗಳು ಕಿತ್ತು ಬಂದವು. ಸ್ನಾನ ಮುಗಿಸಿ ತಲೆ ಬಾಚಿದರೆ ಜೊಂಪೆಜೊಂಪೆಯಾಗಿ ಕೂದಲು ಕಿತ್ತು ಬಿದ್ದವು. ಹೊಟ್ಟೆಯಲ್ಲೊಮ್ಮೆ ಸಂಕಟವಾಯ್ತು. ಅದಾದ ಒಂದು ವಾರದಲ್ಲೇ ತಲೆಯ ನೆತ್ತಿ ಕಾಣಲು ಶುರುವಿಟ್ಟಿತು. ಈ ಎಲ್ಲ ನನ್ನ ಸಂಕಟ ಕಳೆದ ವಾರ ಓದಿದ್ದೀರಿ. ಎರಡನೇ ಕಿಮೊ ವೇಳೆಗೆ ಏನಾಯ್ತು ಈಗ ಹೇಳುವೆ.

*****

ಅಂತೂ ಮೊದಲ ಕಿಮೊ ತಗೊಂಡು 21 ದಿನಗಳು ಕಳೆದಿದ್ದವು. ಎರಡನೇ ಕಿಮೊಗೆ ಮನಸ್ಸು ಸಜ್ಜಾಯಿತು. ಡಿ.23ಕ್ಕೆ ಎರಡನೇ ಕಿಮೊಗೆ ದಿನ ನಿಗದಿಯಾಗಿತ್ತು. ಬೆಳಿಗ್ಗೆ 8ಕ್ಕೆ ಹೋಗಿ ಗಿರೀಶ ಟೋಕನ್‌ ತಂದರೂ ಪಾಳಿಯಲ್ಲಿ 6ನೇ ನಂಬರ್‌ ಇತ್ತು. ಹಿಂದಿನ ಕಿಮೊ ಒಂದು ಪಾಠ ಕಲಿಸಿತ್ತು. ಟೋಕನ್‌ಗಾಗಿ ಬೆಳಿಗ್ಗೆ 8ಕ್ಕೆ ಹೋಗಿ ಪಾಳಿಯಲ್ಲಿ ನಿಂತರೆ ಆರಂಭದ ನಂಬರ್ ಸಿಗುತ್ತದೆ ಎಂದು. ಅದಕ್ಕಾಗಿಯೇ ದೂರದೂರಿನವರು ನಸುಕಿನ 5, 6 ಗಂಟೆಗೇ ಬಂದು ನಿಲ್ಲುವವರೂ ಇದ್ದರು ಅನ್ನೋದು ತಿಳಿಯಿತು. ಕಿಮೊ ಇಂಜೆಕ್ಷನ್‌ ಪ್ಲಾನ್‌ ಮಾಡೋ ಡಾ.ಪ್ರಸಾದ ಬೆಳಿಗ್ಗೆ 10ಕ್ಕೆ ಕ್ಯಾಬಿನ್‌ಗೆ ಬರುವುದರಿಂದ ಬೇಗ ಬಂದು ಪಾಳಿಯಲ್ಲಿ ನಿಂತರೆ ಬೇಗ ಇಂಜಕ್ಷನ್‌ ತೆಗೆದುಕೊಂಡು ಮನೆ ದಾರಿ ಹಿಡಿಯಬಹುದು. ತಮ್ಮನ್ನು ಬೇಗ ಕರಿತಾರೆ, ಇಂಜೆಕ್ಷನ್‌ ತೆಗೆದುಕೊಳ್ಳಲು ಬೆಡ್‌ ಸಿಗತ್ತೆ. ಇಲ್ಲಾಂದ್ರೆ ಆರಾಮದಾಯಕ ಕುರ್ಚಿಯಲ್ಲಿ ಕುಳಿತು ಇಂಜೆಕ್ಷನ್‌ ಏರಿಸ್ಕೋಬೇಕಾಗುತ್ತದೆ ಅನ್ನೋದು ದೂರದಿಂದ ಬರುವವರ ಲೆಕ್ಕಾಚಾರ. ಕೆಲವರಿಗೆ ಒಂದೆರಡು ಗಂಟೆಗಳಲ್ಲಿ ಇಂಜೆಕ್ಷನ್‌ ಮುಗಿದರೆ ಕೆಲವರಿಗೆ ನಾಲ್ಕೈದು ತಾಸು ಬೇಕು. ನನಗಂತೂ ಬರೋಬ್ಬರಿ ಎಂಟು ತಾಸು ಬೇಕು. ಅದಕ್ಕೆ ಅಷ್ಟು ಹೊತ್ತು ಬೆಡ್‌ ಮೇಲೆ ಆರಾಮಾಗಿ ಮಲ್ಕೊಂಡು ಇಂಜೆಕ್ಷನ್‌ ತಗೋಬಹುದು ಎನ್ನೋದು ನನ್ನದೂ ಲೆಕ್ಕಾಚಾರವೇ. ಏನಿಲ್ಲ ಅಂದ್ರು 11 ಗಂಟೆಗೆ ನನ್ನ ನಂಬರ್‌ ಬರಬಹುದು ಎಂಬ ಆಲೋಚನೆಯಲ್ಲಿ 10 ಗಂಟೆಗೆ ರೆಡಿಯಾದೆ. ತಲೆಯ ಮೇಲಿನ ಮುಕ್ಕಾಲು ಭಾಗ ಕೂದಲು ಉದುರಿತ್ತು.ಡಿಸೆಂಬರ್‌ ಚಳಿ ಬೇರೆ. ಸ್ವೆಟರ್‌ ಧರಿಸಿ, ಪರ್ಪಲ್‌ ಕಲರ್‌ ವುಲನ್‌ ಟೋಪಿ ತಲೆಗೆ ಹಾಕಿಕೊಂಡು, ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ನಮ್ಮ ಸ್ಕೂಟರ್‌ ಏರಿ ಹುಮ್ಮಸ್ಸಿನಿಂದ ಆಸ್ಪತ್ರೆಗೆ ಹೊರಟಾಯ್ತು. ಆಸ್ಪತ್ರೆಯಲ್ಲಿ ನನ್ನ ಚಿಕ್ಕಮ್ಮ ಜೊತೆಗಿರಲು ಶಿರಸಿಯಿಂದ ಬಂದರು. ಆಸ್ಪತ್ರೆಗೆ ನಮ್ಮ ಮನೆಯಿಂದ 8 ನಿಮಿಷದ ದಾರಿ. ಆಸ್ಪತ್ರೆಗೆ ಬಂದು ನೋಡಿದರೆ ಆಗಲೇ 3 ನಂಬರ್‌ ಕರೆದಾಗಿತ್ತು. ಕುಳಿತುಕೊಳ್ಳಲು ಬೇರೆ ಸೀಟ್‌ ಇರ್ಲಿಲ್ಲ. ಇರೋವೆಲ್ಲ ಭರ್ತಿಯಾಗಿದ್ದವು. ಒಬ್ಬರು ಎದ್ದು ಹೋದ ಮೇಲೆ ಆ ಕುರ್ಚಿಯಲ್ಲಿ ಕುಳಿತು ಟೋಕನ್‌ ತೆಗೆದೆ. ನಂಬರ್‌ 6, ತಿರುಗಿಸಿದರೆ 9. ಯಾವುದು ಸರಿ, ಆರೋ, ಒಂಬತ್ತೋ....? ಇರಲಿ; ನಂಬರ್‌ ಜೊತೆಗೆ ಹೆಸರು ಕರಿತಾರೆ. ಹೋದರಾಯ್ತು ಎಂದು ಕುಳಿತೆ. 5 ನಂಬರ್‌ ಮುಗಿಯಿತು. ಡಿಜಿಟಲ್‌ ಅನೌನ್ಸಮೆಂಟ್‌ನಲ್ಲಿ ಟೋಕನ್‌ ನಂಬರ್‌ 6 ಎಂದಿತು. ನರ್ಸ್‌ ಬಂದು, ಕೃಷ್ಣಿ... ಎಂದು ಕರೆದರು. ಮಿಸ್ಟರ್‌ ಬೀನ್‌ ಸ್ಟೈಲ್‌ನಲ್ಲಿ ಎದ್ದು ಡಾಕ್ಟರ್‌ ಕ್ಯಾಬಿನ್‌ಗೆ ಹೋದೆ.

ADVERTISEMENT

ಡಾ. ಪ್ರಸಾದ ನನ್ನ ನೋಡುತ್ತಲೇ, ‘ಹೇಗಿದ್ದಿರಿ, ಫುಲ್‌ ಪ್ಯಾಕ್‌ ಆಗಿ ಬಂದೀದ್ದಿರಲ್ಲ’ ಎಂದರು. ಸೂಪರ್‌ ಆಗಿದ್ದಿನಿ ಸರ್‌ ಎಂದೆ. ಅವರು ಚೆಕ್‌ಅಪ್‌ ಮಾಡಿದರು. ‘ಟ್ಯೂಮರ್‌ ಸೈಜ್‌ ಕುಗ್ಗಿದೆ. ಮೊದಲ ಕಿಮೊದಲ್ಲೇ ಒಳ್ಳೆ ರಿಸಲ್ಟ್‌ ಸಿಕ್ಕಿದೆ’ ಎಂದಾಗ ಮನಸ್ಸಿಗೆ ಸಮಾಧಾನವೆನಿಸಿತು. ಆದರೆ ದೇಹದ ತೂಕ 2 ಕೆಜಿ ಹೆಚ್ಚಿತ್ತು! ಮೊದಲ ಕಿಮೊದಲ್ಲಿ ಒಳ್ಳೆ ರಿಸಲ್ಟ್‌ ಬರ್ಲಿಕ್ಕೆ ನಾನು ಅನುಸರಿಸುತ್ತಿದ್ದ ಗಾಯತ್ರಿ ಮುದ್ರೆ, ಧ್ಯಾನಗಳ ಪಾಲು ಹೆಚ್ಚೇ ಇದೆ. ಹಾಗೆ ನನ್ನ ವೇಟ್‌ ಹೆಚ್ಚಲು ಅಮ್ಮನ ವಿಶೇಷ ಕಾಳಜಿ.

ಬ್ಲಡ್‌ ಕೌಂಟ್ಸ್‌ ನೋಡಿದ ಮೇಲೆಯೇ ಇಂಜೆಕ್ಷನ್‌ ಕೊಡುವುದರಿಂದ ಬ್ಲಡ್‌ ಟೆಸ್ಟ್‌ ಮಾಡಿಸಲೇ ಬೇಕಿತ್ತು. ಬ್ಲಡ್‌ ಟೆಸ್ಟ್‌ ರಿಪೋರ್ಟ್‌ ನೋಡಿ ಕಿಮೊಗೆ ಗ್ರೀನ್‌ ಸಿಗ್ನಲ್‌ ಕೊಟ್ರು. ಮತ್ತೆ ಕ್ಯಾನುಲಾ ಹಾಕಿಸ್ಕೋಳ್ಳೊವಾಗ ಮತ್ತದೇ ವೇದನೆ. ಮನಸ್ಸನ್ನ ಗಟ್ಟಿ ಮಾಡ್ಕೊಂಡು ಕ್ಯಾನುಲಾ ಹಾಕಿಸಿಕೊಂಡೆ. ಬೆಡ್‌ ಖಾಲಿಯಿಲ್ಲ; ಸ್ವಲ್ಪ ವೇಟ್‌ ಮಾಡಿ ಎಂದ ಸಿಸ್ಟರ್‌, ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳಿದರು.

ಅಲ್ಲೆ ಪಕ್ಕದ ರೂಮಿನಿಂದ ಮಗುವೊಂದು ಅಳುತ್ತಲೇ ಇತ್ತು. ನನ್ನ ಮನಸ್ಸು ಅಯ್ಯೋ ಎಂದಿತು. ಪಾಪ ಅದರ ತಾಯಿಗೆ ಕ್ಯಾನ್ಸರ್‌ ಆಗಿರಬಹುದು. ಅಮ್ಮನ ಬಿಟ್ಟಿರಲು ಒಲ್ಲೆ ಅನ್ನುತ್ತಿರಬಹುದು ಅಂದುಕೊಂಡೆ. ಅಲ್ಲೇ ಇದ್ದ ಸಿಸ್ಟರ್‌ಗೆ ಕೇಳಿದೆ. ಆ ಮಗುವಿಗೂ ಬ್ಲಡ್‌ ಕ್ಯಾನ್ಸರ್‌. ಕೈಗೆ ಇಂಜೆಕ್ಷನ್‌ ಕೊಡಲು ಕ್ಯಾನುಲಾ ಹಾಕಬೇಕಲ್ಲ. ಅದಕ್ಕೆ ಅಳ್ತಿದೆ ಅಂದರು. ಇದನ್ನು ಕೇಳಿ ನನ್ನ ಮನಸ್ಸು ವಿಲವಿಲ ಅಂದಿತು. ಸಂಕಟವಾಯಿತು. ಯಾಕಪ್ಪ ದೇವ್ರೆ ಮಗು, ಮಕ್ಕಳಿಗೆಲ್ಲ ಇಂಥ ಕಷ್ಟ ಕೊಡ್ತಿಯಾ. ದೊಡ್ಡವರಿಗಾದರೆ ಅರ್ಥ ಆಗುತ್ತೆ, ನೋವು ತಡೆಯುವ ಶಕ್ತಿಯೂ ಇರುತ್ತೆ. ಪಾಪ ಆ ಚಿಕ್ಕ ಮಗುವಿಗೆ ಯಾಕಿಂತ ಕಷ್ಟ ಅಂತ ಮನಸ್ಸು ನೊಂದುಕೊಂಡಿತು. ಮನಸ್ಸು ಒಂದಷ್ಟು ಹೊತ್ತು ಸ್ತಬ್ಧವಾಯಿತು. ಅಂತೂ ಇಂತು ಮಧ್ಯಾಹ್ನ 2.15ಕ್ಕೆ ಎರಡನೇ ಕಿಮೊ ಇಂಜೆಕ್ಷನ್‌ ದೇಹ ಸೇರಲು ಶುರುವಾಯ್ತು.

ಆಸ್ಪತ್ರೆಯಲ್ಲಿ ನಾವಿದ್ದ ವಾರ್ಡ್‌ನಲ್ಲಿ ಒಬ್ರು ಅಜ್ಜಿ ಅಡ್ಮಿಟ್‌ ಇದ್ರು. ಕಿರೆಸೂರಿನವರು. ಪಾರ್ವತೆವ್ವ ಅಂತ. ಬಿಂದಾಸ್‌ ಅಜ್ಜಿ. ಆಗಾಗ ಫೋನ್‌ನಲ್ಲಿ ಮಾತಾಡ್ತಾನೆ ಇದ್ರು. ಹೊಟ್ಟೆಯಲ್ಲಿ ಕ್ಯಾನ್ಸರ್‌ ಅನ್ನೋ ಕಾರಣಕ್ಕೆ ಟ್ರೀಟ್‌ಮೆಂಟ್‌ ನಡೆದು, ಮುಗಿದಿತ್ತು. ಸರ್ಜರಿ, ಕಿಮೊ ಮುಗಿದಿದ್ದರಿಂದ ತಲೆಯಲ್ಲಿ ಒಂದಿಂಚು ಉದ್ದದ ಬಿಳಿಬಿಳಿ ಕೂದಲು ಚಿಗುರೊಡೆದಿದ್ದವು. ಆದ್ರೂ ಆ ಅಜ್ಜಿ ಏನ್‌ ಬಿಂದಾಸ್‌ ಆಗಿದ್ರು ಅಂದ್ರೆ, ನನಗೆ ಒಳ್ಳೆ ಟೈಂಪಾಸ್‌. ಬಹುಶಃ ಮನೆಯಲ್ಲಿ ಅಜ್ಜಿಯದೇ ಆಡಳಿತವಿರ್ಬೇಕು. ಅದಕ್ಕೆ ಕಿವಿಗೆ ಫೋನ್‌ ಹಚ್ಕೊಂಡೆ ರಾಜ್ಯಭಾರ ಮಾಡ್ತಿತ್ತು. ಡಾಕ್ಟರ್‌ ಬಂದ್ರೂ ಕಾಯುವಂತೆ ಮಾಡ್ತಿತ್ತು. ಅಜ್ಜಿ ಮಾತಾಡೋವಾಗ ಬಳಸುತ್ತಿದ್ದ ಇಂಗ್ಲಿಷ್‌ ಶಬ್ದಗಳ ಪ್ರಯೋಗ ನನ್ನನ್ನು ಅಜ್ಜಿಗೆ ಇನ್ನಷ್ಟು ಹತ್ತಿರವಾಗಿಸಿತು.

ಆಪರೇಷನ್‌ ಮಾಡಿದ್ದ ಡಾಕ್ಟರ್‌ ಬಂದು ಚೆಕ್‌ಅಪ್‌ ಶುರುಮಾಡಿದರು. ಅಜ್ಜಿ ಹೇಗಿದ್ದೀರಿ ಎಂದು ಕೇಳುತ್ತಲೆ, ‘ಆರಾಮಿದ್ದಿನಿ ಡಾಕ್ಟ್ರೆ. ಬೆಳಿಗ್ಗೆ ಬಂದು ಹೋದ ಡಾಕ್ಟರ್ ನಂಗೆ ಐಲವ್‌ಯು ಅಂದ್ರು. ಬೇಗ ಹುಷಾರಾಗಿ ಹನಿಮೂನ್‌ಗೆ ಹೋಗೋಣ ಅಂತಾನು ಹೇಳಿದ್ದಾರೆ...’ ಅಜ್ಜಿ ಬಾಯಿಂದ ಈ ಮಾತು ಬರುತ್ತಿದ್ದಂತೆ ಅಲ್ಲಿದ್ದ ಕ್ಯಾನ್ಸರ್‌ ರೋಗಿ, ರೋಗಿಗಳ ಸಂಬಂಧಿ, ಸಿಬ್ಬಂದಿ ಎಲ್ಲರೂ ಗೊಳ್ಳೆಂದು ನಕ್ಕರು. ನನಗಂತೂ ಸ್ಫೂರ್ತಿಯ ಚಿಲುಮೆಯೆನಿಸಿಬಿಟ್ಟಿತು. ಅಂತೂ ಅಜ್ಜಿ ಜೊತೆ ಒಳ್ಳೆ ಟೈಂಪಾಸ್‌ ಆಯ್ತು. ಡಾಕ್ಟರ್‌ ಬೇರೆ ರೂಂಗೆ ವಿಸಿಟ್‌ಗೆ ಹೋದ ಮೇಲೆ, ಅಜ್ಜಿ ಹತ್ತಿರ ಕೇಳಿದೆ. ‘ಅಜ್ಜಿ ನೀವು ಎಷ್ಟನೇ ಕ್ಲಾಸ್‌ ತನಕ ಓದಿದ್ದಿರಿ’ ಎಂದೆ. ಸಾಲಿಗಿಲಿಗೊಗಿಲ್ಲವ್ವ ಅಂದ್ರು ಅಜ್ಜಿ. ಮತ್ ಹೇಗೆ ಇಷ್ಟೊಂದು ಇಂಗ್ಲಿಷ್‌ ಪದ ಬಳಸ್ತಿರಲ್ಲ ಅಂದೆ. ‘ಅದಾ... ನನ್ನ ಮೊಮ್ಮಕ್ಕಳು ಕಲಿಸ್ಯಾರ. ಅವು ಕೇಳಬೇಕಲ್ಲ’ ಅಂದ್ರು. ಅಜ್ಜಿ ಬಗ್ಗೆ ಹೆಮ್ಮೆ ಅನಿಸಿತು. ನನ್ನ ಅಜ್ಜಿನೂ ನೆನಪಾದ್ರು. ಅವರು ಕೂಡ ಸ್ಫೂರ್ತಿದಾಯಕ ಅಜ್ಜಿ. ಇಂಜೆಕ್ಷನ್‌ ಮುಗಿಯುವಾಗ ರಾತ್ರಿ 9.45 ಆಗಿತ್ತು. ಆಸ್ಪತ್ರೆಗೆ ಸಿಬ್ಬಂದಿಗೆ ಟಾಟಾ ಹೇಳಿ ಸ್ಕೂಟರ್‌ ಹತ್ಕೊಂಡು ಮನೆಗೆ ಬಂದಾಯ್ತು.

ನನ್ನ ಬರುವಿಕೆಯನ್ನೇ ಕಾಯುತ್ತಿದ್ದ ಅಮ್ಮನಿಗೆ ಡಾಕ್ಟರ್‌ ಏನು ಹೇಳಿದರು ಅನ್ನೋದನ್ನು ತಿಳಿಯುವ ಕುತೂಹಲ. ‘ಅಮ್ಮ, ಟ್ರೀಟ್‌ಮೆಂಟ್‌ ರಿಸಲ್ಟ್‌ ನೋಡಿ ಡಾಕ್ಟರ್‌ಗೇ ಆಶ್ಚರ್ಯವಾಯ್ತಮ್ಮ. ಒಳ್ಳೆ ರಿಸಲ್ಟ್‌ ಸಿಕ್ಕಿದೆ, ಗುಡ್‌’ ಅಂದ್ರಮ್ಮ’ ಅಂದಾಗ ಅಮ್ಮನಿಗೂ ಕೊಂಚ ನಿರಾಳ.

ಇಂಜೆಕ್ಷನ್‌ ಮಾರನೇ ದಿನ(ಡಿ.24) ಏನೂ ವ್ಯತ್ಯಾಸ ಅನ್ನಿಸಲಿಲ್ಲ. ಡಿ.25ರ ರಾತ್ರಿ ಶುರುವಾಯ್ತು ನೋಡಿ. ಅಸಾಧ್ಯ ಕಾಲು ನೋವು, ಇಡೀ ಮೈಯೆಲ್ಲ ತುರಿಕೆಯೋ ತುರಿಕೆ. ಎಷ್ಟು ತುರಿಸಿಕೊಂಡರೂ ಸಮಾಧಾನವೇ ಅಗ್ತಿರಲಿಲ್ಲ. ಬಳಲಿಕೆ. ಕೆಲವು ಕಡೆ ಚರ್ಮ ಕಿತ್ತುಬರುವಷ್ಟು ತುರಿಸಿಕೊಳ್ಳುತ್ತಿದ್ದೆ. ಅದರಲ್ಲೂ ರಾತ್ರಿ ಮಲಗಿದ ಮೇಲೆ ತುರಿಕೆ ಬಲ ಜಾಸ್ತಿಯಾಗ್ತಿತ್ತು. ಅದಕ್ಕೂ ಮಾರನೇ ದಿನವೂ ಅದೇ ರೀತಿ ಕಾಲು ನೋವು. ಕಾಲು ಜೋಮು ಹಿಡಿದಂತಾಯಿತು. ಜೊತೆಗೆ ತುರಿಕೆ. ನಾಲಿಗೆಯಲ್ಲಿ ರುಚಿಯಿಲ್ಲ. ಊಟ ಸೇರದಿದ್ದರೂ ಅನಿವಾರ್ಯವಾಗಿ ಉಣ್ಣಲೇಬೇಕಿತ್ತು. ಅದರಲ್ಲೂ ಅಮ್ಮ ಟೈಮ್‌ಗೆ ಸರ್ರಿಯಾಗಿ ಬೇಯಿಸಿದ ಮೊಟ್ಟೆ ಹಿಡಿದು ಬರ್ತಿದ್ರು. ಅಮ್ಮನ ಆರೈಕೆ ಜೊತೆಜೊತೆಗೆ ಊರಿನಿಂದ ಬಂದ ಅಜ್ಜಿಯ (ಅಮ್ಮನ ಅಮ್ಮ) ಸಾಥ್‌ ಸೇರಿತು. ನಂಗೆ ತಿನ್ನಲೆಂದೆ ಊರಿನಿಂದ ಅತ್ತೆ ನಾಟಿಕೋಳಿ ಮೊಟ್ಟೆ ಕೊಟ್ಟುಕಳಿಸಿದ್ರು. ನಾನು ಮೂಗು ಮುರಿತಿದ್ದೆ. ಆದ್ರೂ ಅಮ್ಮ ಬಿಡ್ತಿರ್ಲಿಲ್ಲ. ರಾಗಿ ಗಂಜಿ, ಹಣ್ಣು ಎಲ್ಲವೂ ನಿರಂತರವಾಗಿ ಲೈನ್‌ಸೀರ್‌ ಬರ್ತಿದ್ವು. ಕಿಮೊ ತಗೊಂಡು 5 ದಿನದವರೆಗೆ ಊಟ ಮೆಚ್ಚದಿರುವುದು ಮಾಮೂಲು. ಇದ್ದಿದ್ದರಲ್ಲಿ ನನಗೆ ವಾಂತಿ ಆಗ್ತಿರ್ಲಿಲ್ಲ.

ಡಿ. 27. ತಲೆ ಮೇಲಿನ ಶೇ 97ರಷ್ಟು ಕೂದಲು ಉದುರಿ ಬಾಲ್ಡಿ ಆಗಿತ್ತು. ತಲೆ ಮಾತ್ರವಲ್ಲ; ಕಣ್ಣಿನ ಹುಬ್ಬು, ರೆಪ್ಪೆ, ಮೈಮೇಲೆ ಎಲ್ಲೆಲ್ಲಿ ಕೂದಲುಗಳಿವೆಯೋ ಎಲ್ಲವೂ ಕ್ಲೀನ್‌. ಅಜ್ಜಿ ತಲೆ ಮೇಲೆ ಕೈಯಾಡಿಸಿ, ‘ಮಗ ಕೂದಲು ಬರ್ತಿವೆ, ಕೈಗೆ ಚುಚ್ಚುತ್ತಿವೆ’ ಅಂದ್ರು. ಇಲ್ವೆ ಅಬಾ(ನಾನು ಅಜ್ಜಿಯನ್ನು ಕರೆಯೋದು ಹೀಗೆ), ಇನ್ನು ಕೂದಲು ಹುಟ್ಟಬೇಕು ಅಂದ್ರೆ ಕಿಮೊ ಮುಗಿದ ಮೇಲೆಯೇ. ಅಲ್ಲಿವರೆಗೂ ಹೀಂಗೆ ನೋಡು.. ಅಂತ ಕಣ್ಣು ಮಿಟಿಕಿಸಿದೆ. ಡಿ.28 ಸ್ವಲ್ಪ ಬೆಟರ್‌ ಫೀಲಿಂಗ್‌. ರಾತ್ರಿ ಮಲಗಿದಾಗ ಏನೇನೋ ಯೋಚನೆಗಳು... ಟ್ರೀಟ್‌ಮೆಂಟ್‌ ಶುರುವಾಗಿ ಒಂದೂವರೆ ತಿಂಗಳಷ್ಟೇ ಆಗಿದ್ದು. ಇನ್ನು ಇದೇ ಪರಿಸ್ಥಿತಿನ 6 ತಿಂಗಳು ಅನುಭವಿಸಬೇಕಲ್ಲ. ನಿಜಕ್ಕೂ ಇದೊಂದು ತಪಸ್ಸೇ ಸರಿ. ಅದೂ ಗೃಹಬಂಧಿಯಾಗಿ. ಪ್ರತಿನಿತ್ಯ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಕಚೇರಿಯಲ್ಲಿರುತ್ತಿದ್ದ ನನಗೆ ಈ ಸಂಗತಿ ಕಾಡಿದಾಗ ಮನಸ್ಸು ಅಧೀರವಾಗುತ್ತಿತ್ತು. ಆರು ತಿಂಗಳು ಅಂದರೆ ಒಂದೊಂದು ನಿಮಿಷವನ್ನೂ ನಾನು ವೇದನೆಯನ್ನು ಅನುಭವಿಸಿಯೇ ಕಳೆಯಬೇಕಿತ್ತು. ಅದರಲ್ಲೇ ಕೊಂಚ ಸಮಾಧಾನ...ದಿನಗಳು ಬೇಗಬೇಗ ಕಳೆದು ಹೋಗುತ್ತವೆ. ಐದು ತಿಂಗಳು ಯಾವ ಲೆಕ್ಕ... ಮನಸ್ಸು ಅಲ್ಲೇ ಸಂತೈಸುತ್ತಿತ್ತು. ಹೀಗೆ ಲಂಗುಲಗಾಮು ಇಲ್ಲದೆ ಓಡುವ ಮನಸ್ಸನ್ನು ಹಿಡಿದು, ನಿಲ್ಲಿಸಿ, ಕಟ್ಟಿಹಾಕಬೇಕಿತ್ತು. ಈ ಸಾಧನೆ ಅಷ್ಟು ಸುಲಭವಲ್ಲ. ಆದರೆ ನಾನು ಅದಾಗಲೇ ಗಾಯತ್ರಿ ಮುದ್ರೆ, ಯೋಗ, ಧ್ಯಾನ, ಪ್ರಾಣಾಯಾಮದ ಮೊರೆ ಹೋಗಿದ್ದರಿಂದ ಅವು ನನ್ನ ಪಾಲಿಗೆ ಸಹಾಯಕ್ಕೆ ಬಂದವು. ತುರಿಕೆ ಬಿಟ್ಟರೆ ಮತ್ತೇನು ತೊಂದರೆ ಕಾಡಲಿಲ್ಲ. 21 ದಿನಕ್ಕೆ ಒಂದು ಕಿಮೊದಂತೆ ಒಟ್ಟು 8 ಕಿಮೊಗೆ ಎಷ್ಟು ದಿನಗಳು ಬೇಕು ಅನ್ನೋ ಲೆಕ್ಕಾಚಾರವನ್ನ ಮನಸ್ಸು ಮಾಡುತ್ತಲೇ ಇತ್ತು.

ಡಿ.29 ಮನೆಗೆ ನಮ್ಮ ‘ಪ್ರಜಾವಾಣಿ’ ಸಂಪಾದಕರು, ಮಾಲೀಕರಾದ ಕೆ.ಎನ್.ಶಾಂತಕುಮಾರ ಸರ್‌, ಆಗಿನ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ ಸರ್, ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥರಾಗಿದ್ದ ಎಂ.ನಾಗರಾಜ ಸರ್‌ ಬಂದು ಆರೋಗ್ಯ ವಿಚಾರಿಸಿದರು. ಅವರು ಬಂದಾಗ ನಾನು ಎರಡನೇ ಕಿಮೊದಿಂದ ಚೇತರಿಸಿಕೊಂಡು ಎರಡು ದಿನಗಳಾಗಿದ್ದವು. ಅವರು ಅದುವರೆಗಿನ ನನ್ನ ಕ್ಯಾನ್ಸರ್‌ ಅನುಭವವನ್ನು ಆಲಿಸಿದರು. ಪ್ರತಿಯಾಗಿ ಒಂದಷ್ಟು ಧೈರ್ಯದ ಮಾತುಗಳನ್ನು ಆಡಿದರು. ಅವರ ಮಾತುಗಳು ನನ್ನ ಮನಸ್ಸಿಗೆ ಮತ್ತಷ್ಟು ಸ್ಥೈರ್ಯ ನೀಡಿದವು. ಆರೋಗ್ಯ ಕೆಟ್ಟು ನಿಂತಾಗ ಕುಟುಂಬದ ಸದಸ್ಯರು, ಸ್ನೇಹಿತರು, ಕೆಲಸ ಮಾಡುವ ಕಚೇರಿಯ ಮಾಲೀಕರು, ಸಹೋದ್ಯೋಗಿಗಳು ನೀಡುವ ಒಂದೊಂದು ಧೈರ್ಯದ ಮಾತೂ ಒಂದೊಂದು ಕ್ಯಾಪ್ಸೂಲ್‌ ಇದ್ದಂತೆ. ವೈದ್ಯರು ನಮ್ಮ ದೇಹಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಬಂಧು–ಬಳಗ, ಸ್ನೇಹಿತರು, ಸಹೋದ್ಯೋಗಿಗಳು ನಿಡುವ ಸಲಹೆಗಳು ನಮ್ಮಲ್ಲಿ ಆತ್ಮವಿಶ್ವಾಸ ತುಂಬಲಿವೆ. ಮನಸ್ಸಿಗೆ ಚೈತನ್ಯ ನೀಡಲಿದೆ. ಅದರಲ್ಲೂ ನಮ್ಮ ಸಂಪಾದಕರೇ ಬಂದಿದ್ದರು ಅಂದಾಗ ಆ ಚೈತನ್ಯದ ಪರ್ಸಂಟೇಜ್‌ ತುಸುಜಾಸ್ತಿಯೇ ಇತ್ತು. ಆ ಅನುಭವ ನನಗಂದು ಆಗಿತ್ತು.

30ರಂದು ಬೆಳಿಗ್ಗೆ ಸರಿಯಾಗಿ 6 ಗಂಟೆಗೆ ಎಚ್ಚರವಾಯ್ತು. ಪಾದದಲ್ಲಿ ಜೋಮು ಬಿಟ್ಟರೆ ಬಾಕಿಯೆಲ್ಲ ನಾರ್ಮಲ್‌. ಆದರೆ ರಾತ್ರಿ ಮಾತ್ರ ಏನೇನೋ ಯೋಚನೆಗಳು ತಲೆಯಲ್ಲಿ ಗಿರಿಗಿಟ್ಟಿ ಹೊಡೆಯುತ್ತಿದ್ದವು. ಎದ್ದು ಬರೆದಿದೋಣ ಅಂದ್ಕೊಂಡ್ರೆ ಏಳಲು ಆಲಸ್ಯ ಬಿಡ್ತಿರಲಿಲ್ಲ. ಬೆಳಿಗ್ಗೆ ಎದ್ದು ಬರೆಯೋಣ ಅಂತನ್ಕೊಂಡ್ರೆ ಬೆಳಿಗ್ಗೆ ಏನೇನೂ ನೆನಪಿನಲ್ಲಿರ್ತಿರಲಿಲ್ಲ. ತಲೆಯಲ್ಲಿ ಎಲ್ಲ ಖಾಲಿ ಖಾಲಿ.

ಅಂದು ಡಿಸೆಂಬರ್‌ 31, ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮಕ್ಕಳು 31ರ ಆಚರಣೆಯ ಗುಂಗಿನಲ್ಲಿದ್ದರು. ನನ್ನ ಮಗ, ಮಮ್ಮಿ ನೀನು ಬಾ ಅಂತ ಒಂದೇ ಸವನೆ ಹಟಮಾಡ್ತಿದ್ದ. ಅವನ ಒತ್ತಾಯಕ್ಕೆ ಸೋತು 31ರ ಪಾರ್ಟಿಗೆ ಬಂದೆ. ನಾನೂ ಮಕ್ಕಳ ಜೊತೆ ಎಂಜಾಯ್‌ ಮಾಡಿದೆ. ಮಕ್ಕಳೆಲ್ಲ ಡಾನ್ಸ್‌ ಮಾಡಿ ಕುಣಿದು ಕುಪ್ಪಳಿಸುತ್ತಿದ್ದರು. ಮಕ್ಕಳ ಮೋಜು ನೋಡುತ್ತ ನನ್ನನ್ನೇ ನಾನು ಮರೆತಿದ್ದೆ. ಅನಾರೋಗ್ಯ ದೂರವಾಗಿ ಸ್ವಸ್ಥ ಆರೋಗ್ಯದ ಹೊಸ ಭರವಸೆಯೊಂದಿಗೆ 2017ಅನ್ನು ಸ್ವಾಗತಿಸಿದೆ.

(ಮುಂದಿನವಾರ: ಬಿಚ್ಚಿಕೊಂಡ ನೆನಪಿನ ಸಂಚಿ)

ಇವುಗಳನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.