ಕಿಮೊ ಜೊತೆಗಿನ ಹೋರಾಟದಲ್ಲಿ ಮೊದಲ ನಾಲ್ಕು ಕಿಮೊಗಿಂತಲೂ ನಂತರದ ನಾಲ್ಕು ಕಿಮೊಗಳು ನನಗೆ ಅಕ್ಷರಶಃ ನರಕ ದರ್ಶನ ಮಾಡಿಬಿಟ್ಟವು. ನಾಲ್ಕು ಪ್ರಮುಖ ನರಗಳ ಮೂಲಕ ಸಾಗಿದ ನಾಲ್ಕು ಕಿಮೊ ನನ್ನ ಎಡಗೈ ನರಗಳನ್ನೇ ಸುಟ್ಟು ಬಿಟ್ಟವು. ಕಿಮೊ ಅಡ್ಡಪರಿಣಾಮಗಳ ವೇದನೆಯನ್ನೂ ಮೀರಿ ಇಂಜೆಕ್ಷನ್‌ನಿಂದ ಕೈಗಳ ನರಗಳು ಬೆಂದು, ಅದರಿಂದಾದ ಯಾತನೆಗೆ ನಾನು ಸೋತು, ಅನುಭವಿಸಿದ ಪಡಿಪಾಟಲನ್ನು ಹಿಂದಿನ ವಾರ ಓದಿದ್ದಿರಿ. ಮುಂದೆ ಏನಾಯ್ತು ಅನ್ನೋದನ್ನು ಇಲ್ಲಿ ಓದಿ.
****
ಕಿಮೊಥೆರಪಿ, ಸರ್ಜರಿ, ರೆಡಿಯೊಥೆರಪಿ, ಹಾರ್ಮೊನ್ ಥೆರಪಿ ಈ ನಾಲ್ಕು ಘಟ್ಟಗಳಲ್ಲಿ ಕಿಮೊಥೆರಪಿಗೆ ಮುಕ್ತಾಯ ಹಾಡಿದೆ. ಕ್ಯಾನ್ಸರ್‌ನ ಸುದೀರ್ಘ ಚಿಕಿತ್ಸೆಯಲ್ಲಿ ಇದೊಂದು ಪ್ರಮುಖ ಘಟ್ಟ. ಅದನ್ನು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಮುಗಿಸಿದ ಖುಷಿಯಿತ್ತು. ಯುದ್ಧದಲ್ಲಿ ಅರ್ಧ ಯುದ್ಧ ಗೆದ್ದ ಭಾವ ಅದಾಗಲೇ ಮೂಡಿತ್ತು. ಎರಡನೇ ಘಟ್ಟ ಸರ್ಜರಿ.
ಮೇ 22ರಂದು ಪ್ರಸಾದ ಡಾಕ್ಟರ್‌ಅನ್ನು ಭೇಟಿ ಮಾಡಿದೆ. ಅವರು ಡಾ.ಚನ್ನಬಸಪ್ಪ ಕೋರಿ (ಆಂಕಾಲಜಿ ಸರ್ಜನ್) ಅವರಿಗೆ ಸರ್ಜರಿಗಾಗಿ ರೆಫರ್ ಮಾಡಿದ್ರು. ಜೊತೆಗೆ ಪೋರ್ಟ್ ಇದ್ದರೆ ನಾಳೆಯೇ ಸರ್ಜರಿ ಆಗುತ್ತೆ. ಯಾವುದಕ್ಕೂ ಡಾ.ಕೋರಿ ಅವರನ್ನು ಕೇಳಿ ಬನ್ನಿ ಅಂದರು. ಡಾ.ಪ್ರಸಾದ ಅವರ ಕ್ಯಾಬಿನ್‌ಗೆ ಸರಿಯಾಗಿ ಎದುರು ಡಾ. ಚನ್ನಬಸಪ್ಪ ಕೋರಿ ಅವರ ಕ್ಯಾಬಿನ್. ಅವರನ್ನು ಅವರ ಕ್ಯಾಬಿನ್‌ನಲ್ಲಿ ಭೇಟಿ ಮಾಡಿ ಪೋರ್ಟ್ ಕುರಿತು ಕೇಳಿದಾಗ ಅವರು ಫಾರ್ಮಸಿಯಲ್ಲಿ ವಿಚಾರಿಸಿ ಹೇಳುವೆ ಎಂದರು. ಸ್ವಲ್ಪ ಹೊತ್ತಿಗೆ ಪೋರ್ಟ್ ಇದೆ ಎಂದು ಹೇಳಿದ ಡಾ.ಕೋರಿ ಅವರು, ಮೇ 23ರಂದು ಮಧ್ಯಾಹ್ನ 2.30ಕ್ಕೆ ಸರ್ಜರಿಗೆ ಟೈಮ್ ಫಿಕ್ಸ್ ಮಾಡಿದ್ರು.
ಈ ಪೋರ್ಟ್ ಬಗ್ಗೆ ಒಂದಿಷ್ಟು ಹೇಳಲೇಬೇಕು. ಇದೇನು ಕೋಟೆ ಕೊತ್ತಲ ಎಂಬ ಅರ್ಥವಲ್ಲ. ಈಗಿನ ಐದು ರೂಪಾಯಿ ಗಾತ್ರದ ನಾಣ್ಯದ ಆಕಾರದಲ್ಲಿರುವ ಚಿಕ್ಕ ಉಪಕರಣವನ್ನು ಕುತ್ತಿಗೆಗಿಂತ ಕೆಳಗೆ ಎದೆ ಮೇಲಿನ ಮಾಂಸದ ಒಳಗೆ ಅಳವಡಿಸುವುದು. ಅದಕ್ಕೆ ಅಳವಡಿಸಿರುವ ಪೈಪ್‌ಗಳನ್ನು ನನ್ನ ನರವ್ಯೂಹಕ್ಕೆ ಜೋಡಿಸುವರು. ಕೈಗಳ ನರಗಳು ಸೂಕ್ಷ್ಮವಿರುವ ರೋಗಿಗಳಿಗೆ ಈ ಪೋರ್ಟ್ ಕ್ಯಾನುಲಾ ರೂಪದಲ್ಲಿ ಕೆಲಸ ನಿರ್ವಹಿಸುತ್ತದೆ. ಕೈಗಳ ನರಗಳ ಮೂಲಕ ಸಾಗುವ ಇಂಜೆಕ್ಷನ್‌ಗಳು ಈ ಪೋರ್ಟ್ ಮೂಲಕ ದೇಹವನ್ನು ಸೇರುತ್ತವೆ. ನನಗೆ ಬಲಭಾಗದ ಸ್ತನದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಿರುವುದರಿಂದ ಇದಕ್ಕೆ ನಿಗದಿ ಪಡಿಸಿದ ಎಡ ಭಾಗದಲ್ಲಿ ಕುತ್ತಿಗೆ ಕೆಳಗೆ ಎದೆಯ ಮೇಲೆ ಕೊಯ್ದು ಒಳಸೇರಿಸಿದ ಮೇಲೆ ಅದಕ್ಕೆ ಮೇಲಿನಿಂದ ಹೊಲಿಗೆ ಹಾಕಲಾಗುವುದು. ಸ್ತನದ ಸರ್ಜರಿ ಆಗಿರೋದ್ರಿಂದ ಈ ಪೋರ್ಟ್ ಅಳವಡಿಸುವುದು ಗೌಣವಾಯಿತು. ಇಲ್ಲಾಂದ್ರೆ ಅದೂ ಕೂಡ ದೊಡ್ಡ ಸರ್ಜರಿಯೇ ಆಗುತ್ತಿತ್ತು. ಒಟ್ಟು ಈ ಪೋರ್ಟ್ ಮೂಲಕ ನನಗೆ ಮತ್ತೆ 18 ಇಂಜೆಕ್ಷನ್‌ಗಳು ದೇಹವನ್ನು ಸೇರಬೇಕಿತ್ತು. 21 ದಿನಗಳಿಗೆ ಒಂದರಂತೆ ಒಂದು ವರ್ಷದ ಇಂಜೆಕ್ಷನ್ ಸರಣಿ ಅದಾಗಿತ್ತು. ಅಷ್ಟೂ ಇಂಜೆಕ್ಷನ್ ಕೈಗಳ ನರಗಳ ಮೂಲಕ ಸಾಗುವುದು ಅಸಾಧ್ಯದ ಮಾತು. ನಾನು ಕಿಮೊ ತೆಗೆದುಕೊಳ್ಳುವಾಗ ಕೆಲವರಿಗೆ ಎದೆಯ ಭಾಗಕ್ಕೆ ಇಂಜೆಕ್ಷನ್ ಕನೆಕ್ಟ್ ಮಾಡುತ್ತಿದ್ದಿದ್ದನ್ನು ಗಮನಿಸಿದ್ದೆ. ಆದರೆ ಅದು ಯಾಕೆ, ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದು ಈಗ ಅನ್ನೋದು ಮನದಟ್ಟಾಯಿತು.
ಮನೆಗೆ ಬಂದು ಊಟ ಮಾಡಿ ಮಧ್ಯಾಹ್ನವೇ ಎಡ್ಮಿಟ್ ಆಗಲು ಸಿದ್ಧಳಾದೆ. ಅಮ್ಮನಿಗೆ ಕಾಲಿಗೆ ಬಿದ್ದು ಏಳುತ್ತಲೇ ಅಮ್ಮನಿಗೆ ಎಲ್ಲಿಲ್ಲದ ದುಃಖ ಉಮ್ಮಳಿಸಿ ಬಂತು. ತಬ್ಬಿಕೊಂಡು ಅಳೋಕೆ ಶುರು ಮಾಡಿದಳು. ಏನು ಆಗಲ್ಲ ಅಮ್ಮ ಅಂದರೂ ಅವಳ ಅಳು ನಿಲ್ತಿರಲಿಲ್ಲ. ‘ನೀನು ಧೈರ್ಯವಾಗಿರು. ಒಂದೊಪ್ಪತ್ತು ಸ್ವಲ್ಪ ತ್ರಾಸ್ ಆಗಬಹುದು. ನೀನೇನು ಯೋಚನೆ ಮಾಡಬೇಡಾ’ ಎಂದು ಸಮಾಧಾನ ಮಾಡಿದರೂ ಅಮ್ಮನ ಅಳು ನಿಲ್ತಾನೆ ಇಲ್ಲ. ನನಗೆ ಸ್ವಲ್ಪ ಸಿಟ್ಟೇ ಬಂತು. ‘ಏನಮ್ಮ ನೀನು, ಆಸ್ಪತ್ರೆಗೆ ಹೋಗೋ ಮುಂದೆ ಹೀಗಾ ಮಾಡೋದು’ ಎಂದು ಸಿಟ್ಟಿನಿಂದಲೇ ಹೇಳಿದೆ. ಹಾಗೇ ಹೊರಟು ಬಿಟ್ಟೆ. ಆಸ್ಪತ್ರೆಗೆ ಬಂದ ಮೇಲೆ ಸೆಮಿ ಡಿಲಕ್ಸ್ ರೂಂ ಸೇರಿಕೊಂಡೆ. ಮಲಗಿದಲ್ಲೇ ಅಮ್ಮ ನೆನಪಾದಳು. ‘ಛೇ, ಅಮ್ಮನಿಗೆ ನಾನು ಹಾಗೇ ಬೈಯ್ದು ಬರಬಾರದಿತ್ತು. ಎಷ್ಟಾದರೂ ಹೆತ್ತ ಕರುಳಲ್ಲವೆ? ಅವಳಿಗೆ ಹಾಗೇ ವೇದನೆ ಆಗೋದು ಸಹಜವೇ’ ಎಂದು ಪಶ್ಚಾತ್ತಾಪವಾಯಿತು.
ಸಂಜೆ, ಡಾ.ನಿತೇಷ್ (ಅರಿವಳಿಕೆ ತಜ್ಞ) ನನ್ನ ಬಿಪಿ, ಶುಗರ್, ಥೈರಾಯ್ಡ್ ಸಹಿತ ಏನೇನು ಬೇಕೋ ಅದನ್ನೆಲ್ಲ ಚೆಕ್ ಮಾಡಿ ರಿಪೋರ್ಟ್ ಕೊಟ್ರು. 23ರ ಬೆಳಿಗ್ಗೆ 7.30ರೊಳಗೆ ಬ್ರೆಕ್‌ಫಾಸ್ಟ್ ಮುಗಿಸಿದೆ. 9 ಗಂಟೆಗೆ ಹಾರ್ಟ್ ಇಕೊ ಸ್ಕ್ಯಾನ್ ಮಾಡಿದ್ರು. ಫಸ್ಟ್ ಕ್ಲಾಸ್ ರಿಪೋರ್ಟ್ ಅಂದ್ರು. ಮಧ್ಯಾಹ್ನ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲು ನನ್ನನ್ನು ಅಣಿಗೊಳಿಸಲಾಯಿತು. ಗೌನ್‌ನೊಳಗೆ ತೂರಿಕೊಂಡ ನನಗೆ ವೀಲ್‌ಚೇರ್‌ನಲ್ಲಿ ಕುಳಿತುಕೊಳ್ಳಲು ಸಿಸ್ಟರ್ ಹೇಳಿದರು. ಪರ್ವಾಗಿಲ್ಲ ನಡ್ಕೊಂಡೇ ಬರ್ತೀನಿ ಅಂತ ಹೇಳಿದೆ. ಸರಿ ಅಂದ್ರು. ಆಪರೇಷನ್ ಥಿಯೇಟರ್ ಒಳಗೆ ನಾನು ಹೆಜ್ಜೆಯಿಟ್ಟಾಗ ಮಧ್ಯಾಹ್ನ 2 ಗಂಟೆ. ನನಗೇನು ಅಲ್ಲಿ ಕಿಂಚಿತ್ತು ಭಯವಾಗಲಿಲ್ಲ. ಧೈರ್ಯದಿಂದ, ಅಷ್ಟೇ ಸಹಜ ಮನಃಸ್ಥಿತಿಯಲ್ಲಿ ಇದ್ದೆ. ಎಲ್ಲ ಕಡೆ ಆಪರೇಷನ್ ಯಂತ್ರ, ಲೈಟ್‌ಗಳದ್ದೇ ಕಾರುಬಾರು. ಸುತ್ತಲೂ ಒಮ್ಮೆ ಕಣ್ಣಾಯಿಸಿದೆ. ನನ್ನ ಆಪರೇಷನ್ ಮಾಡುವ ಯಂತ್ರದ ಕೆಳಗೆ ಇದ್ದ ಬೆಡ್ ಸುತ್ತಲೂ ಅಗತ್ಯ ಶಸ್ತ್ರಚಿಕಿತ್ಸಾ ಪರಿಕರಗಳನ್ನು ಅತ್ಯಂತ ನೀಟಾಗಿ ಪೇರಿಸಿಟ್ಟಿದ್ದರು. ಬೆಡ್ ಮೇಲೆ ಮಲಗಲು ಹೇಳಿದರು. ರೈಟ್ ಸೈಡಾ ಎಂಬ ಪ್ರಶ್ನೆಗೆ ಹೌದು ಎಂದೆ. ತಕ್ಷಣಕ್ಕೆ ಕೊಂಚ ಗಲಿಬಿಲಿಗೊಳಗಾದೆ. ಎಷ್ಟೋ ಕಡೆ ನೈಜ ಘಟನೆಗಳು ನೆನಪಾದವು. ಬಲಭಾಗದ ಬದಲು ಎಲ್ಲಿಯಾದರೂ ಎಡಭಾಗಕ್ಕೆ ಕತ್ತರಿ ಹಾಕಿಬಿಟ್ಟರೆ ಎಂಬ ದಿಗಿಲಷ್ಟೆ. ಆರಂಭದಲ್ಲಿ ಮಾಡಿದ್ದ ಮ್ಯಾಮೊಗ್ರಾಂ, ಸ್ಕ್ಯಾನಿಂಗ್ ಪ್ರಕಾರ ನನಗೆ ಎರಡೂ ಸ್ತನಗಳಲ್ಲೂ ಸರ್ಜರಿ ಆಗಬೇಕಿತ್ತು. ಆದರೆ ಎಡಭಾಗದ ಸ್ತನದಲ್ಲಿದ್ದ ಗಂಟು ತಾನಾಗಿಯೇ ಕರಗಿ ಹೋಗಿದ್ದರಿಂದ ಅಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರಲಿಲ್ಲ. ಮಲಗಿದ ನಂತರ ಕೈಗಳನ್ನು ಹೇಗಿಡಬೇಕು ಎಂದು ನಿರ್ದೇಶನ ಕೊಟ್ಟಂತೆ ಇಟ್ಟೆ. ಆಕ್ಸಿಜನ್ ಮಾಸ್ಕ್ ಹಾಕಿದರು. ಮುಖ ಸಮೇತ ದೇಹದ ಮೇಲೆ ಬೆಡ್‌ಶೀಟ್ ಹೊದೆಸಿದರು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಆಂಕಾಲಜಿ ಸರ್ಜನ್ ಡಾ.ಕೋರಿ ಅವರು ‘ಹಾಯ್ ಕೃಷ್ಣಿ’ ಅಂದರು. ನಾನು ಬೆಡ್‌ಶೀಟ್ ಒಳಗಿನಿಂದಲೇ ‘ಹಾಯ್ ಡಾಕ್ಟರ್’ ಅಂದೆ. ‘ಈಗ ನಿಮ್ಗೆ ಅನಸ್ತೇಷಿಯಾ ಕೊಡ್ತೇವೆ. ಎರಡು ಸರ್ಜರಿ ಆಗಲಿದೆ. ಒಂದು ಬ್ರೆಸ್ಟ್ ಸರ್ಜರಿ, ಇನ್ನೊಂದು ಗೊತ್ತಲ್ಲ. ಪೋರ್ಟ್ ಹಾಕೋದು’ ಎಂದರು. ಆಯ್ತು ಅಂದು ಮುಸುಕಿನೊಳಗಿಂದಲೇ ತಲೆಯಾಡಿಸಿದೆ.
ಅನಸ್ತೇಷಿಯಾ ಇಂಜೆಕ್ಷನ್ ನನಗೆ ಹೊಸದಲ್ಲ. ಇಲ್ಲಿವರೆಗೆ ನಾಲ್ಕು ಬಾರಿ ತೆಗೆದುಕೊಂಡಿದ್ದೆ. ನಾನು ಏಳನೇ ತರಗತಿಯಿರುವಾಗ ಟಾನ್ಸಿಲ್ ಆಪರೇಷನ್ ವೇಳೆ, 10 ವರ್ಷಗಳ ಹಿಂದೆ ಎರಡು ಬಾರಿ ಮಿಸ್‌ಕ್ಯಾರಿ ಆದಾಗ, ನಂತರ ನನ್ನ ಮಗ ದಿಗಂತ ಹುಟ್ಟುವಾಗ ಸಿಸೇರಿಯನ್‌ಗಾಗಿ ಅನಸ್ತೇಷಿಯಾ ಕೊಟ್ಟಿದ್ದರು. ಒಂಥರಾ ಅದರಲ್ಲಿ ಹೆಚ್ಚಿನ ಅನುಭವವನೇ ನನ್ನಲ್ಲಿತ್ತು. ಈಗ ಆ ಇಂಜೆಕ್ಷನ್ ಚುಚ್ಚುತ್ತಲೇ ಯಾವುದೋ ಟನಲ್ ಒಳಗೆ ಸೊಯ್ಯನೆ ಜಾರಿ ವೇಗವಾಗಿ ಹೋದ ಅನುಭವ. ಅಷ್ಟೆ; ಕಡೆಗೆ ಎಲ್ಲವೂ ನಿಶ್ಶಬ್ದ. ಏನಾಯ್ತು, ಎಷ್ಟು ಹೊತ್ತಾಯ್ತು ಅನ್ನೋದು ಗೊತ್ತಾಗಲೇ ಇಲ್ಲ.
ಎಚ್ಚರ ಬಂದಾಗ ಅದೇ ಅನುಭವ ವಾಪಸ್ ನನ್ನ ಕರೆತಂದಿತು. ಕತ್ತಲ ಟನೆಲ್ ಒಳಗಿಂದ ಸೊಯ್ಯನೆ ವಾಪಸ್ ಬಂದು ದೊಪ್ಪನೆ ಬಿದ್ದ ಅನುಭವ. ಅರೆಬರೆ ಎಚ್ಚರ. ಇದ್ದದ್ದು ಐಸಿಯುನಲ್ಲಿ. ನನ್ನನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಶಿಫ್ಟ್ ಮಾಡಿದ್ದರು. ಬೆಡ್ ಮೇಲೆ ನಿಶ್ಚಲವಾಗಿ ಬಿದ್ದುಕೊಂಡಿದ್ದೆ. ಕೈಗೆ ಡ್ರಿಪ್ಸ್ ಪೈಪ್, ಸರ್ಜರಿ ಮಾಡಿದ ಜಾಗದಲ್ಲಿ ಅಳವಡಿಸಿದ್ದ ಡ್ರೈನೇಜ್ ಪೈಪ್, ಮುಖಕ್ಕೆ ಆಕ್ಸಿಜನ್ ಮಾಸ್ಕ್, ಕೈ ತೋರು ಬೆರಳಿಗೆ ಬಿಪಿ ತೋರಿಸುವ ಮಷಿನ್‌ಗೆ ಕನೆಕ್ಷನ್, ಹಾರ್ಟ್‌ಬೀಟ್ ತೋರಿಸೋ ಮಷಿನ್‌ಗೆ ಕನೆಕ್ಷನ್ ಒಂದೇ ಎರಡೇ.. ಪೂರ್ತಿ ದೇಹ ಒಂಥರಾ ಪೈಪ್‌ಗಳ ನಡುವೆ ಹುದುಗಿಕೊಂಡಂತಿತ್ತು. ಕತ್ತೊಂದನ್ನು ಬಿಟ್ಟರೆ ಮತ್ತೆನನ್ನೂ ಹೊರಳಿಸಲಾಗದ ಸ್ಥಿತಿ. ಐಸಿಯುನ ಪ್ರವೇಶ ಬಾಗಿಲಿಂದೇಚೆಗೆ ನನ್ನ ಬೆಡ್ ಮೊದಲನೆಯದು. ನನ್ನ ಎಡಬದಿಗೆ ಮತ್ತೆ ಮೂವರಿದ್ದರು. ನನಗೆ ಎಚ್ಚರ ಬಂದಿದ್ದು ತಿಳಿಯುತ್ತಲೇ ಮನೆಯವರು ಒಬ್ಬೊಬ್ಬರಾಗಿ ಬಂದು ನೋಡಿ ಹೋಗುತ್ತಿದ್ದರು. ನಾನು ತಲೆಯೊಂದೇ ಆಡಿಸುತ್ತಿದ್ದೆ. ಅಮ್ಮನ ಜೊತೆ ಮಗನೂ ಬಂದು ಹೋದ. ಅಜ್ಜಿಯ ಕೈ ಹಿಡಿದು ದೂರದಿಂದಲೇ ನನ್ನ ನೋಡಿದ. ಅದೇನೋ ಗೊತ್ತಿಲ್ಲ; ಮಗನ ನೋಡುತ್ತಲೇ ನನ್ನ ಕಣ್ಣಾಲಿಗಳು ಒದ್ದೆಯಾದವು. ಅಲ್ಲೆ ತಲೆಯಾಡಿಸಿದೆ.
ನನಗೆ ಎಚ್ಚರ ಬಂದಾಗ ಬಹುಶಃ ಸಂಜೆ 6.30 ಆಗಿತ್ತೇನೋ. ಹೊರಗೆ ಮಬ್ಬುಗತ್ತಲನ್ನು ಮಿಂಚು ಸಿಡಿಲಿನ ಬೆಳಕು ಸೀಳುತ್ತಿತ್ತು. ಗುಡುಗಿನ ಅಬ್ಬರವೂ ಜೋರಾಗಿಯೇ ಕೇಳುತ್ತಿತ್ತು. ಆದರೆ ಎಲ್ಲವೂ ಅಸ್ಪಷ್ಟ. ಕಾಫಿ ಬೇಕಾದ್ರೆ ಕೊಡಿ ಎಂದು ಬ್ರದರ್ ನಿರ್ದೇಶನ ಮಾಡ್ತಿದ್ರು. ನನ್ನ ಕೋ ಸಿಸ್ಟರ್ ಚಹಾ ತಂದು ನಾನು ಮಲಗಿದ್ದಲ್ಲೇ ಕುಡಿಸಿದಳು. ಒಂದು ಗುಟುಕು ಒಳಹೋಗುತ್ತಲೇ ವಾಂತಿಯಾಯಿತು. ವಾಂತಿಯಾಯಿತು ಎಂದು ಏಳೋ ಹಾಗೂ ಇರ್ಲಿಲ್ಲ. ಮಲಗಿದ್ದಲ್ಲಿಯೇ ಮುಖ ಓರೆ ಮಾಡಿ, ಬಾಯಿಗೆ ಇಟ್ಟ ಟ್ರೇನಲ್ಲಿ ವಾಂತಿ ಮಾಡಿದೆ. ಸ್ವಲ್ಪ ಹೊತ್ತು. ಮತ್ತೆ ನಿದ್ದೆಗೆ ಜಾರಿದೆ.
ಮತ್ತೆ ಎಚ್ಚರವಾಗಿದ್ದು ಬೆಳಗಿನ ಜಾವ 3.30ಕ್ಕೇ ಇರಬೇಕು. ಮೇಲಿಂದ ಮೇಲೆ ಡ್ರಿಪ್ಸ್ ದೇಹವನ್ನು ಸೇರುತ್ತಿದ್ದಿದ್ದರಿಂದ ಮೂತ್ರ ಒತ್ತರಿಸಿಕೊಂಡಿತ್ತು. ಆದರೆ ಎದ್ದು ಹೋಗುವಂತಿಲ್ಲ. ಹಿಂಸೆ ಅನಿಸುತ್ತಿತ್ತು. ಬಲಕ್ಕೆ ನೋಡಿದರೆ, ಡ್ಯೂಟಿಯಲ್ಲಿದ್ದ ಬ್ರದರ್ ಕುಂತಲ್ಲೇ ನಿದ್ದೆಗೆ ಜಾರಿದ್ದರು. ಹಲೋ ಬ್ರದರ್, ಹಲೋ ಸರ್ ಎಂದು ಕೂಗಿದೆ. ಅವರಿಗೆ ಎಚ್ಚರವಾಗಲೇ ಇಲ್ಲ. ಇರುವ ಶಕ್ತಿಯನ್ನೆಲ್ಲ ಸೇರಿಸಿ ಕರೆದೆ. ಏನು ಎಂದು ಕೇಳಿದರು. ‘ನನಗೆ ವಾಶ್‌ರೂಮ್ ಹೋಗ್ಬೇಕು, ಅರ್ಜೆಂಟ್’ ಎಂದೆ. ‘ಬೆಳಗಾಗೋವರೆಗೂ ಏಳುವಂತಿಲ್ಲ ಮೇಡಂ’ ಎಂದು ಅತ್ಯಂತ ಸಹಜವಾಗಿ ಹೇಳಿ ಮತ್ತೆ ನಿದ್ದೆಗೆ ಜಾರಿದರು. ಬೆಳಗಾಗೋವರೆಗೂ ಹೀಗೆ ಕಾಯೋದಾ... ಸಾಧ್ಯವೇ ಇರಲಿಲ್ಲ. ಮತ್ತೆ ಒಂದು ತಾಸು ಕಂಟ್ರೋಲ್ ಮಾಡಿಕೊಂಡೆ, ನಿದ್ದೆ ಬರಲೇ ಇಲ್ಲ. ಯಾತನೇ ತೀವ್ರಗೊಳ್ಳುತ್ತಲೇ ಹೋಯಿತು. ಏನೇನೆಲ್ಲ ನೆನಪಿಗೆ ಬಂದವು. ಒಂದೊಂದು ಕ್ಷಣವೂ ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂಬಂತೆನಿಸಿತು. ಮತ್ತೆ ಬ್ರದರ್ ಅನ್ನು ಕೂಗಿದೆ. ನಂತರ ಆಯಾ ಒಬ್ಬರು ಟ್ರೇ ಒಂದನ್ನು ತಂದರು. ಮಲಗಿದಲ್ಲೇ ಸೊಂಟ ಎತ್ತಿಸಿ ಕೆಳಗೆ ಇಟ್ಟರು. ಇಲ್ಲೇ ಮಾಡಿ ಅಂದರು. ನನಗೆ ಸುಸು ಬರಲೇ ಇಲ್ಲ. ಮತ್ತೆ ಟ್ರೈ ಮಾಡಿ ಅಂದರು. ಇಲ್ಲ ಆಯಮ್ಮ ನಂಗೆ ಹೀಗೆ ಆಗಲ್ಲ. ವಾಶ್‌ರೂಮ್‌ಗೆ ಕರ್ಕೊಂಡು ಹೋಗಿ ಎಂದು ಅಲವತ್ತುಕೊಂಡೆ. ಈಗ ಹೋಗೋಹಾಗಿಲ್ಲ. ಬೆಳಿಗ್ಗೆ 7 ಗಂಟೆ ವರೆಗೂ ಕಾಯಲೇ ಬೇಕು ಅಂದರು. ಅಬ್ಬಾ, 7 ಗಂಟೆವರೆಗೂ ಇದೇ ಯಾತನೇ ಅನುಭವಿಸಬೇಕಾ? ಇದಕ್ಕಿಂತ ಪ್ರಾಣ ಹೋಗಿದ್ದರೆ ಬೆಟರ್ ಅನ್ನಿಸಿತು. ಒಳಗೊಳಗೆ ಅದೆಷ್ಟು ನರಕಯಾತನೆ ಅನುಭವಿಸಿದ್ದೆನೋ ಅನ್ನೋದು ನನಗೆ ಮಾತ್ರ ಗೊತ್ತು. ಬೆಳಿಗ್ಗೆ 5.30ರ ನಂತರವಂತೂ ಇನ್ನು ನನ್ನಿಂದ ಸಾಧ್ಯವೇ ಇಲ್ಲ ಎಂದು ಕೂಗಿದೆ. ಐಸಿಯುನಲ್ಲಿ ನನ್ನವರ್ಯಾರೂ ಇರಲಿಲ್ಲ, ಐಸಿಯುನಿಂದ ಹೊರಗೆ ಚಿಕ್ಕಮ್ಮ, ಮಾಮಿ ಎಲ್ಲರೂ ಇದ್ರು. ಹೇಗಾದ್ರು ಮಾಡಿ ವಾಶರೂಮ್‌ಗೆ ಕರ್ಕೊಂಡು ಹೋಗಿ ಎಂದು ಪರಿಪರಿಯಾಗಿ ಕೇಳಿಕೊಂಡೆ. ಅಂತೂ ನನ್ನ ಕಾಟ ತಡೆಯಲಾಗದೆ 6 ಗಂಟೆಗೆ ಸಿಸ್ಟರ್ ನನ್ನ ಚಿಕ್ಕಮ್ಮನನ್ನು ಕರೆದುಕೊಂಡು ಬಂದರು. ದೇಹಕ್ಕೆ ಅಳವಡಿಸಿದ್ದ ಎಲ್ಲ ಪೈಪ್‌ಗಳನ್ನು ಡಿಸ್ ಕನೆಕ್ಟ್ ಮಾಡಿದರು. ಸರ್ಜರಿ ಜಾಗದಿಂದ ಕೆಟ್ಟ ರಕ್ತ ಹೋಗಲು ಅಳವಡಿಸಲಾಗಿದ್ದ ಡ್ರೈನೇಜ್ ಪೈಪ್ ಜೊತೆಗೆ ಒಯ್ಯಬೇಕಿತ್ತು. ಅದನ್ನೆಲ್ಲ ಚಿಕ್ಕಮ್ಮ ಹಿಡಿದುಕೊಂಡರು. ಆಯಾ ಹಿಡಿದು ನನ್ನನ್ನು ವಾಶರೂಮ್‌ಗೆ ಕರೆದೊಯ್ದರು. ಬರೋಬ್ಬರಿ ಹತ್ತು ನಿಮಿಷವೇ ಬೇಕಾಯ್ತು ಅಲ್ಲಿಂದ ಹೊರಬರಲು. ಅಂತೂ ಬದುಕಿದೆ ಎಂದಿತು ಮನ. ರಿಲ್ಯಾಕ್ಸ್ ಎನಿಸಿತು. ಬೆಡ್‌ನಿಂದ ವೀಲ್ ಚೇರ್ ಏರಿ ಕುಳಿತೆ. ನನಗ್ಯಾಕೊ ಐಸಿಯು ಉಸಾಬರಿಯೇ ಬೇಡವೆನಿಸಿತ್ತು. ಸಿಸ್ಟರ್ ಒಬ್ಬರು ಬಂದು ‘ನಿಮ್ಮನ್ನೀಗ ರೂಮ್‌ಗೆ ಶಿಫ್ಟ್ ಮಾಡ್ತೇವೆ’ ಎಂದಾಗ ಖುಷಿಯಾಯ್ತು. ಅಸಾಧ್ಯ ನೋವಿನ ನಡುವೆಯೂ ನಕ್ಕು ಆಯ್ತು ಸಿಸ್ಟರ್ ಎಂದೆ. ಬೆಳಿಗ್ಗೆ 7ಕ್ಕೆ ರೂಮ್‌ಗೆ ಶಿಫ್ಟ್ ಮಾಡಿದರು.
(ಮುಂದಿನ ವಾರ: ಕತ್ತರಿಸಿದ್ದ ಜಾಗ ಮುಚ್ಚಿದ್ದವು 58 ಪಿನ್‌ಗಳು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.