ADVERTISEMENT

ಕಣ್ಣಿಗಿರಲಿ ಕಾಳಜಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:30 IST
Last Updated 19 ಏಪ್ರಿಲ್ 2019, 19:30 IST
madre poniendo colirio en los ojos a su hijaHealth
madre poniendo colirio en los ojos a su hijaHealth   

ಆರು ವರ್ಷದ ಬಾಲಕ ಮೋಹನ ಆಟವಾಡುವಾಗ ಕಣ್ಣಿಗೆ ಕೋಲು ತಾಗಿಸಿಕೊಂಡಿದ್ದ. ಏನೋ ಕೆಂಪಾಗಿದೆ ಕಡಿಮೆ ಆಗುತ್ತದೆ ಬಿಡು ಎಂದು ತಂದೆ ತಾಯಿ ಮನೆಯಲ್ಲಿದ್ದ ಯಾವುದೋ ಕಣ್ಣಿನ ಔಷಧಿಯ ಹನಿ ಹಾಕಿ ಸುಮ್ಮನಾಗಿದ್ದರು. ಮೂರು ದಿನಗಳ ಬಳಿಕ ಮೋಹನನ ಕಣ್ಣಲ್ಲಿ ನೀರಿಳಿಯುವುದು, ನೋವಾಗುವುದು ಹೆಚ್ಚಾಗಿ, ದೃಷ್ಟಿಯೂ ಕಡಿಮೆಯಾಗಿತ್ತು. ಆಗ ಆಸ್ಪತ್ರೆಗೆ ಕರೆತರಲಾಗಿ ಪರೀಕ್ಷಿಸಿದಾಗ ಅವನ ಕಣ್ಣಿನ ಕಪ್ಪು ಗುಡ್ಡೆಗೆ ಹುಣ್ಣಾಗಿಬಿಟ್ಟಿತ್ತು. ಹೇಗೂ ಕಣ್ಣಿನದ್ದೇ ಎಂದು ಹಾಕಿದ್ದ ಔಷಧಿ ಅವನ ಅಜ್ಜನ ಕಣ್ಣಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆಯಾದಾಗ ಕೊಟ್ಟಿದ್ದಾಗಿತ್ತು. ಅದರಲ್ಲಿ ಸ್ಟಿರಾಯಿಡ್ ಇದ್ದಿದ್ದರಿಂದ ಕಣ್ಣಿನ ಹುಣ್ಣು ಉಲ್ಬಣವಾಗಿತ್ತು.

ಎಷ್ಟೋ ಸಲ ವಿದ್ಯಾವಂತರೆನ್ನಿಸಿಕೊಂಡವರೂ ಹೀಗೆ ಮಾಡುವುದಿದೆ. ಬೇರೆ ಯಾರಿಗೋ ಯಾವುದೋ ಲಕ್ಷಣಗಳಿಗೆ ಕೊಟ್ಟಿದ್ದ ಔಷಧವನ್ನು ಇನ್ನೊಬ್ಬರಿಗೆ ಬಳಸಿ ಗಂಭೀರ ಸಮಸ್ಯೆಗಳಿಗೆ ಒಳಗಾಗುವುದಿದೆ. ಕಣ್ಣಿಗೆ ಬಳಸುವ ಔಷಧಗಳಲ್ಲೂ ಬೇರೆ ಬೇರೆ ವಿಧಗಳಿದ್ದು ಅವುಗಳನ್ನು ವೈದ್ಯರ ಸಲಹೆಯ ಮೇರೆಗೇ ಉಪಯೋಗಿಸಬೇಕು.

ಸ್ವಯಂ ವೈದ್ಯ ಸಲ್ಲದು

ADVERTISEMENT

ಕಣ್ಣಿನ ತುರಿಕೆ – ಅಲರ್ಜಿ ಇತ್ತೀಚೆಗೆ ಸಾಮಾನ್ಯ ಸಮಸ್ಯೆ. ಕೆಲವರು ತಾವೇ ಔಷಧ ಅಂಗಡಿಯಿಂದ ಹನಿಯ ಬಾಟಲಿ ಕೊಂಡು ಹಾಕಿಕೊಳ್ಳುತ್ತಾರೆ. ಕೆಲವೇ ದಿನ ಹಾಕಿ ನಿಲ್ಲಿಸಬೇಕಾದ ಔಷಧವನ್ನು ವರ್ಷಗಟ್ಟಲೇ ಆಗಾಗ ಹಾಕುತ್ತಲೇ ಇದ್ದರೆ ಅಡ್ಡ ಪರಿಣಾಮವಾಗಬಹುದು. ಕಣ್ಣುಗಳಲ್ಲಿ ಒತ್ತಡ ಹೆಚ್ಚಾಗಿ ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ನರಗಳ ದೌರ್ಬಲ್ಯ ಉಂಟಾಗಬಹುದು.

ಪಂಚೇಂದ್ರಿಯಗಳಲ್ಲಿ ಮುಖ್ಯವಾದ ಸೂಕ್ಷ್ಮವೂ ಆದ ಕಣ್ಣುಗಳಿಗೆ ಸ್ವಯಂವೈದ್ಯ ಸರ್ವಥಾ ಸಲ್ಲದು. ಯಾವುದೇ ಔಷಧವನ್ನಾದರೂ ಎಷ್ಟು ಸಲ ಹಾಕಬಹುದು, ಎಷ್ಟು ದಿನಗಳವರೆಗೆ ಹಾಕಬಹುದು ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳಬೇಕು.

ಕಣ್ಣಿನಲ್ಲಿ ನೀರಿನಂಶ ಹೆಚ್ಚಾಗುವ (ಡ್ರೈ ಐ) ಸಮಸ್ಯೆಗೆ ಸರಳವಾದ ಔಷಧಗಳನ್ನು ಕೆಲವರು ಆಗಾಗ ಹಾಕುತ್ತಲೇ ಇರುತ್ತಾರೆ. ಇದನ್ನು ಹಾಕುವುದರಿಂದ ಮೋತಿಬಿಂದು ಬರುವುದಿಲ್ಲವೆಂಬ ತಪ್ಪು ಕಲ್ಪನೆಯಿಂದ ಹೀಗೆ ಮಾಡುವುದಿದೆ. ಆದರೆ ಬಹುಕಾಲ ಬಳಸಿದಾಗ ಔಷಧ ಹನಿಯ ಬಾಟಲಿಯೊಳಗೇ ಶಿಲೀಂಧ್ರ ಸೋಂಕಾದರೆ ಅದು ಅವರ ಕಣ್ಣುಗಳಿಗೆ ಹರಡಿ ತೀವ್ರ ತೊಂದರೆಯಾಗಬಹುದು.

ಯಾವುದೇ ಕಣ್ಣಿನ ಔಷಧವನ್ನಾದರೂ ಮುಚ್ಚಳ ತೆಗೆದ ಒಂದು ತಿಂಗಳ ಒಳಗೇ ಬಳಸಬೇಕೆಂದು ಅದರ ಮೇಲೆ ಸೂಚನೆ ಕೊಟ್ಟಿರುತ್ತಾರೆ. ಅನಗತ್ಯವಾಗಿ ಯಾವುದೇ ಔಷಧಗಳನ್ನು ಹಾಕಬಾರದು.

ದೃಷ್ಟಿ ಕುಂದಿಸುವ ವ್ಯಸನ

ಕಾಲೇಜು ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ಕಣ್ಣುಗಳು ಮಸುಕಾಗಿ ಕಾಣುತ್ತಿವೆ ಎಂದು ಬಂದಿದ್ದ. ಪರೀಕ್ಷಿಸಿದಾಗ ಶೇಕಡಾ ಐವತ್ತಕ್ಕೂ ಮೀರಿ ದೃಷ್ಟಿ ಕಡಿಮೆಯಾಗಿತ್ತು. ಕನ್ನಡಕದಿಂದಲೂ ದೃಷ್ಟಿ ಉತ್ತಮವಾಗುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ತಪಾಸಣೆಗಳನ್ನು ಮಾಡಿಸಿದಾಗ ಕಣ್ಣಿನ ಅಕ್ಷಿಪಟಲದ ಕೇಂದ್ರ ಭಾಗದಲ್ಲಿ ದ್ರವದ ಶೇಖರಣೆಯಾಗಿ ಊತ ಬಂದಿತ್ತು. ಹೆತ್ತವರಿಗೂ ತಿಳಿಯದಂತೆ ಗುಟ್ಕಾ ಮತ್ತು ಮಾದಕ ದ್ರವ್ಯದ ಸೇವನೆಯ ದುರಭ್ಯಾಸವನ್ನು ಆತ ಹೊಂದಿದ್ದ! ಇದರಿಂದಲೇ ಕಣ್ಣಿನಲ್ಲಿ ಈ ಬದಲಾವಣೆಗಳಾಗಿದ್ದವು.

ಗುಟ್ಕಾ, ಮಾದಕ ದ್ರವ್ಯ, ಮದ್ಯಪಾನ, ಧೂಮಪಾನಗಳು ಕಣ್ಣಿನ ನರದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತವೆ.

ಇನ್ನಿತರ ಲಕ್ಷಣಗಳೆಂದರೆ..

ಸದಾ ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು

ಕಣ್ಣುಗುಡ್ಡೆಯ ಅನಿಯಂತ್ರಿತ ಚಲನೆ

ಎರಡೆರಡು ಕಾಣುವುದು

ಇಲ್ಲದಿರುವ ಸಂಗತಿಗಳು ನಡೆಯುತ್ತಿರುವಂತೆ ಕಾಣುವುದು

ಬೆಳಕಿಗೆ ಕಣ್ಣುಗೊಂಬೆಯ ಚಲನೆಯಲ್ಲಿ ವ್ಯತ್ಯಾಸ

ವೈದ್ಯಕೀಯ ನೆರವಿನಿಂದ ಮಾದಕ ದ್ರವ್ಯಗಳ ಸೇವನೆಯನ್ನು ನಿಲ್ಲಿಸಿದಾಗ ಬಹುತೇಕ ಕಣ್ಣಿನ ತೊಂದರೆಗಳು ಕಡಿಮೆಯಾಗುತ್ತವೆ. ಜೀವಸತ್ವ ಭರಿತ ತರಕಾರಿಗಳ ಸೇವನೆಯಿಂದ, ಕಣ್ಣಿನ ನರವನ್ನು ಪುಷ್ಟಿ ಮಾಡುವ ಮಾತ್ರೆಗಳಿಂದ ತಾತ್ಕಾಲಿಕ ದೃಷ್ಟಿ ಸಮಸ್ಯೆಗಳನ್ನು ನಿವಾರಿಸಬಹುದು.

ತಪಾಸಣೆ ಅವಶ್ಯ

ದೀರ್ಘಕಾಲೀನ ದೈಹಿಕ ಕಾಯಿಲೆಗಳಿಗೆ ಬಹುಕಾಲದಿಂದ ಔಷಧಗಳ ಸೇವನೆ ಮಾಡುವವರು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಔಷಧದ ಅಡ್ಡ ಪರಿಣಾಮವಾಗಿಯೂ ಅಕ್ಷಿಪಟಲದಲ್ಲಿ ತೊಂದರೆಗಳಾಗಬಹುದು.

ಚರ್ಮದ ಕಾಯಿಲೆಗೆ, ಅಲರ್ಜಿಗೆ, ಅಸ್ತಮಾಕ್ಕೆ ಸ್ಟಿರಾಯಿಡ್ ಗುಳಿಗೆಗಳನ್ನು ಬಹುಕಾಲ ಸೇವಿಸುವವರಿಗೆ ಚಿಕ್ಕವಯಸ್ಸಿನಲ್ಲೇ ಮೋತಿಬಿಂದು ಆಗುವ ಸಾಧ್ಯತೆ ಇರುತ್ತದೆ.

ಮಲೇರಿಯಾ ಕಾಯಿಲೆಗೆ ನೀಡುವ ಗುಳಿಗೆಗಳು ವರ್ಣಾಂಧತೆಯನ್ನು ಉಂಟುಮಾಡಬಹುದು. ದೃಷ್ಟಿಯ ವಿಸ್ತಾರದಲ್ಲಿ ಕುಂದುಂಟಾಗಬಹುದು.

ಫಿಟ್ಸ್ ಕಾಯಿಲೆಯ ಗುಳಿಗೆಗಳಿಂದ, ಸ್ತನ ಕ್ಯಾನ್ಸರಿನ ಚಿಕಿತ್ಸೆಯಿಂದ ದೃಷ್ಟಿ ಕಡಿಮೆಯಾಗಬಹುದು.

ಪುರುಷರಲ್ಲಿ ಪ್ರಾಸ್ಟೇಟ್ ತೊಂದರೆಗೆ ಬಳಸುವ ಮಾತ್ರೆಗಳಿಂದ ಪೊರೆ ಶಸ್ತ್ರಚಿಕಿತ್ಸೆಯ ಹಂತಗಳಲ್ಲಿ ತೊಂದರೆಗಳಾಗಬಹುದು.

ಯಾವುದೇ ಚಿಕಿತ್ಸೆ ಪಡೆಯುವಾಗ ಕಣ್ಣಿನ ತೊಂದರೆಗಳಾದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಕಣ್ಣಿನ ಚಿಕಿತ್ಸೆಯ ಸಮಯದಲ್ಲಿ ಇತರ ದೈಹಿಕ ಲಕ್ಷಣಗಳಿಗೆ ಸೇವಿಸುತ್ತಿರುವ ಔಷಧೋಪಚಾರಗಳನ್ನು ವೈದ್ಯರಿಗೆ ತಿಳಿಸುವುದೂ ಅಗತ್ಯ. ಅಡ್ಡ ಪರಿಣಾಮಗಳಾದಲ್ಲಿ ಅಂತಹ ಔಷಧಗಳಿಗೆ ಪರ್ಯಾಯಗಳನ್ನು ಸೂಚಿಸಲಾಗುತ್ತದೆ. ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದರ ಮೂಲಕ ಕಣ್ಣಿನ ಬದಲಾವಣೆಗಳನ್ನು ಪ್ರಾರಂಭದಲ್ಲಿಯೇ ಗುರುತಿಸಬಹುದು.

ಕಣ್ಣುಗಳು ದೇವರ ಎಂತಹ ಅದ್ಭುತ ಸೃಷ್ಟಿ ಎಂದರೆ ಅದರ ಸೂಕ್ಷ್ಮ ರಚನೆ- ಸಂಕೀರ್ಣ ಕಾರ್ಯವೈಖರಿಯನ್ನು ಇನ್ನೂ ಶೇಕಡಾ ನೂರರಷ್ಟು ತಿಳಿಯಲು ಸಾಧ್ಯವಾಗಿಲ್ಲ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಆಧುನಿಕ ತಂತ್ರಜ್ಞಾನ ಸೌಲಭ್ಯದ ಅತ್ಯುತ್ತಮ ಚಿಕಿತ್ಸೆ ಕಣ್ಣುಗಳಿಗೆ ಲಭ್ಯವಿದೆ. ಆದಾಗ್ಯೂ ಕಣ್ಣಿನ ಔಷಧಗಳ ಬಗ್ಗೆ ತಿಳಿವಳಿಕೆ ಹೊಂದುವುದು, ಮುನ್ನೆಚ್ಚರಿಕೆ ವಹಿಸುವುದು, ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಅಪೇಕ್ಷಣೀಯ.

(ಲೇಖಕಿ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ನೇತ್ರ ವೈದ್ಯೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.