ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗುತ್ತಿರುವ ಕಾಯಿಲೆಯೆಂದರೆ ಅದು ಕ್ಯಾನ್ಸರ್. ಬದಲಾದ ಜೀವನಶೈಲಿ, ಆಹಾರಾಭ್ಯಾಸಗಳು, ರಾಸಾಯನಿಕಗಳ ಬಳಕೆ, ವಿಕಿರಣಗಳು, ಅಪೌಷ್ಟಿಕತೆ ಇವೆಲ್ಲವೂ ಕ್ಯಾನ್ಸರ್ ಉಂಟಾಗಲು ಕಾರಣವೆನ್ನಬಹುದು. ಜತೆಗೆ ಧೂಮಪಾನ, ಮದ್ಯಪಾನ, ಸ್ವಲ್ಪ ಮಟ್ಟಿಗೆ ಆನುವಂಶೀಕತೆಯೂ ಕಾರಣ.
ಆದರೆ, ಕ್ಯಾನ್ಸರ್‌ಗೆ ಕೆಲವು ವೈರಾಣುವಿನ ಸೋಂಕು ಕಾರಣವಾಗಬಹುದು ಎಂಬುದು ಬಹು ಜನರಿಗೆ ತಿಳಿಯದ ಸಂಗತಿ. ಅದನ್ನು ಎಚ್.ಪಿ.ವಿ. ವೈರಾಣು (HUMAN PAPILOMA VIRUS) ಸೋಂಕು ಎಂದು ಕರೆಯಲಾಗುತ್ತದೆ. ಈ ವೈರಾಣುವಿನ ಸೋಂಕು ಉಂಟಾದರೆ ಬಾಯಿ ( oral) ಮತ್ತು ಗರ್ಭಕಂಠ ( cervix) ಕ್ಯಾನ್ಸರ್ ಉಂಟಾಗುತ್ತದೆ.
ಲೈಂಗಿಕ ಕ್ರಿಯೆಯ ಮೂಲಕವೂ ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಪ್ರಪಂಚದ ಮೂರನೇ ಅತಿ ಸಾಮಾನ್ಯ ಎನಿಸಿರುವ ಗರ್ಭಕಂಠ ಕ್ಯಾನ್ಸರ್ ತಡೆಯಲು ಹ್ಯೂಮನ್ ಪಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆ ಪರಿಣಾಮಕಾರಿ.
ಯಾರು ಈ ಲಸಿಕೆಯನ್ನು ಪಡೆಯಬಹುದು?
* ಎಲ್ಲಾ 11 ರಿಂದ 12 ವರ್ಷದ ಮಕ್ಕಳು ಈ ಲಸಿಕೆಯನ್ನು ತೆಗೆದುಕೊಳ್ಳುವುದು ಸೂಕ್ತ.
* 26 ವರ್ಷದ ಕೆಳಗಿನ ವಯಸ್ಕರೂ ಈ ಲಸಿಕೆಯನ್ನು ಪಡೆಯಬಹುದಾಗಿದೆ.
* 11 ರಿಂದ 12 ವರ್ಷದಲ್ಲಿ ಮೊದಲನೆ ಡೋಸ್ ಅನ್ನು ಪಡೆಯಬಹುದು.
* 15 ವರ್ಷದ ಒಳಗಿನವರಲ್ಲಿ ಎರಡು ಡೋಸ್‌ಗಳು, 15 ರಿಂದ 26 ವರ್ಷದವರಿಗೆ ಮೂರು ಡೋಸ್ ಲಸಿಕೆಯ ಅವಶ್ಯಕತೆಯಿರುತ್ತದೆ.
* ಆಂತರಿಕ ರೋಗ ನಿರೋಧಕ ಶಕ್ತಿ ಕಡಿಮೆಯಿರುವ 9 ರಿಂದ 26 ವರ್ಷದವರಲ್ಲಿ ಮೂರು ಡೋಸ್‌ಗಳ ಅವಶ್ಯಕತೆಯಿರುತ್ತದೆ.
* 27 ವರ್ಷ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾದರೂ ಉಪಯೋಗ ಕಡಿಮೆಯಿದ್ದು ವೈದ್ಯರ ಸಮಾಲೋಚನೆ ಅವಶ್ಯಕತೆಯಿರುತ್ತದೆ.
ಯಾರು ಈ ಲಸಿಕೆ ಪಡೆಯಬಾರದು?
ತೀವ್ರ ರೀತಿಯ ಅಲರ್ಜಿಗಳಿಂದ ಬಳಲುತ್ತಿರುವವರು, ಈಸ್ಟ್‌ನ (ಶಿಲೀಂಧ್ರ) ಅಲರ್ಜಿ ಹೊಂದಿರುವವರು, ಗರ್ಭಿಣಿಯರು ಈ ಲಸಿಕೆ ಪಡೆಯದಿರುವುದು ಉತ್ತಮ.
ಅಡ್ಡಪರಿಣಾಮಗಳು
ಲಸಿಕೆ ಪಡೆದ ಜಾಗ ಕೆಂಪಾಗುವುದು, ಊದಿಕೊಳ್ಳುವುದು, ಜ್ವರ, ತಲೆಬಾಧೆ, ಸುಸ್ತು, ಮಾಂಸಖಂಡಗಳ ನೋವುಗಳು ಸಾಮಾನ್ಯವಾಗಿದ್ದು ಭಯಪಡುವ ಅಗತ್ಯವಿಲ್ಲ.
ಅಧ್ಯಯನ ಏನು ಹೇಳುತ್ತೆ?
ಅಧ್ಯಯನಗಳ ಪ್ರಕಾರ ಈ ಲಸಿಕೆಯು ಶೇ 90 ರಷ್ಟು ಎಚ್.ಪಿ.ವಿ ವೈರಾಣುವಿನ ಸೋಂಕಿನಿಂದ ಉದ್ಭವಿಸಬಹುದಾದ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ತಡೆಯುತ್ತದೆ..
2006ರಲ್ಲಿ ಪ್ರಥಮವಾಗಿ ಈ ಲಸಿಕೆಯ ಪ್ರಯೋಗವನ್ನು ಮಾಡಲಾಗಿದ್ದು, ಶೇ 86 ರಷ್ಟು ಯುವ ಜನರಲ್ಲಿ ಉದ್ಭವಿಸುವ ಜನನೇಂದ್ರಿಯದ ವಾರ್ಟ್‌ಗಳನ್ನು ಕಡಿಮೆಮಾಡಬಹುದಾಗಿದೆ. ಹೆಂಗಸರಲ್ಲಿ ಸಾಮಾನ್ಯವಾಗಿ ಕಂಡುಬರುವ ಗರ್ಭಕಂಠ(cervix) ಕ್ಯಾನ್ಸರ್‌ಗಳನ್ನು ತಡೆಯಬಹುದಾಗಿದೆ. ಈ ಲಸಿಕೆಯು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದು ಜನರು ಇದರ ಉಪಯೋಗವನ್ನು ಪಡೆಯಬಹುದು.
(ಲೇಖಕಿ: ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.