ಏನಿದು ಗರ್ಭಕಂಠದ ಕ್ಯಾನ್ಸರ್? ಒಂದು ವೇಳೆ ಈ ಕ್ಯಾನ್ಸರ್ ಆವರಿಸಿದರೆ ಲಕ್ಷಣಗಳು ಗೋಚರಿಸುವುದಿಲ್ಲವೇ? ಇದನ್ನು ತಡೆಗಟ್ಟಬಹುದೇ? ಈ ಕುರಿತು ವೈದ್ಯರು ಹೇಳೋದೇನು ಎಂದು ತಿಳಿಯೋಣ.
ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು ಅದು ಯೋನಿಯೊಂದಿಗೆ ಸಂಪರ್ಕಿಸುತ್ತದೆ. HPV ಎಂದು ಕರೆಯಲ್ಪಡುವ ಮಾನವ ಪ್ಯಾಪಿಲೋಮ ವೈರಸ್‌ನ ವಿವಿಧ ತಳಿಗಳು ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿರುತ್ತವೆ. ಗರ್ಭಕಂಠದ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಂಡರೆ ಸಮಸ್ಯೆಯನ್ನು ಹತೋಟಿಗೆ ತರಬಹುದು ಎಂದು ಹೇಳುತ್ತಾರೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಸ್ರೀರೋಗ ತಜ್ಞೆ ಡಾ. ಶ್ರೀಜಾ ರಾಣಿ ವಿ.ಆರ್.
ಕ್ಯಾನ್ಸರ್ ಸಂಭವಿಸುವ ಮುನ್ನ ಗರ್ಭಕಂಠದಲ್ಲಿ ಆಗುವ ಬದಲಾವಣೆಗಳನ್ನು ಸ್ಕ್ರೀನಿಂಗ್ ಮೂಲಕ ಮಾತ್ರವೇ ಪತ್ತೆಹಚ್ಚಲು ಸಾಧ್ಯ. ಗರ್ಭಕಂಠದ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕ್ರಮೇಣವಾಗಿ ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು ಕಂಡುಬರುತ್ತವೆ. ಕ್ಯಾನ್ಸರ್ ತೀವ್ರತೆಯು ಗಾತ್ರ, ಹರಡುವಿಕೆ ಮತ್ತು ಒಟ್ಟಾರೆ ಆರೋಗ್ಯದಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ವೈದ್ಯೆ ಡಾ. ಶ್ರೀಜಾ ರಾಣಿ ಹೇಳಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು?
ಗರ್ಭಕಂಠದ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಯೋನಿಯಲ್ಲಿ ರಕ್ತಸ್ರಾವ, ಸಂಭೋಗದ ಸಮಯದಲ್ಲಿ ನೋವು, ಹೊಟ್ಟೆಯ ಕೆಳಭಾಗದಲ್ಲಿ ಅಸಹಜತೆ ಕಂಡುಬಂದಲ್ಲಿ ನಿರ್ಲಕ್ಷಿಸಬಾರದು ಎಂದು ವೈದ್ಯೆ ಶ್ರೀಜಾ ರಾಣಿ ಹೇಳುತ್ತಾರೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಕ್ರಮಗಳೇನು?
ಗರ್ಭಕಂಠದ ಕ್ಯಾನ್ಸರ್ ಅನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಮೂಲಕ ಮಾತ್ರ ತಡೆಗಟ್ಟಲು ಸಾಧ್ಯ. ಹೀಗಾಗಿ 25ರಿಂದ 64ವರ್ಷ ವಯೋಮಿತಿಯೊಳಗಿನ ಮಹಿಳೆಯರಲ್ಲಿ ನಿಯಮಿತ ಪ್ಯಾಪ್ಸ್ಮಿಯರ್ (Pap Smear Test) ಅಥವಾ ಎಚ್‌ಪಿವಿ ಟೆಸ್ಟಿಂಗ್ (HPV Testing) ಪರೀಕ್ಷೆಗಳ ಮೂಲಕ ಮಾತ್ರ ರೋಗಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಬಹುದು. ಆದಾಗ್ಯೂ 12ರಿಂದ 13ವರ್ಷ ವಯೋಮಿತಿಯ ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡುವ ಮೂಲಕ ಎಚ್‌ಪಿವಿ ಪ್ರೇರಿತ ಕ್ಯಾನ್ಸರ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಶ್ರೀಜಾ ರಾಣಿ ಸಲಹೆ ನೀಡಿದ್ದಾರೆ.
ವೈದ್ಯಕೀಯ ವಿಚಾರಗಳ ಹೊರತಾಗಿಯೂ ನೀವು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕವೂ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು HPVಯಿಂದ ಉಂಟಾಗುತ್ತವೆ. HPV ಲೈಂಗಿಕ ಸಂಪರ್ಕದ ಮೂಲಕ ಹರಡುವ ಸಾಮಾನ್ಯ ವೈರಸ್. ಈ ಹಿನ್ನೆಲೆಯಲ್ಲಿ HPV ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಕಾಂಡೋಮ್‌ಗಳನ್ನು ಬಳಸುವುದು, ಧೂಮಪಾನ ತ್ಯಜಿಸುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ ಶ್ರೀಜಾ ರಾಣಿ ತಿಳಿಸುತ್ತಾರೆ.
ಜನರಲ್ಲಿ ಅರಿವು ಮೂಡಿಸುವುದು ಅಗತ್ಯ
ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಜನರಲ್ಲಿ ಅರಿವು ಮೂಡಿಸುವುದು ಮತ್ತು ಪೂರ್ವಭಾವಿ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಲ್ಲಿ ಮಾತ್ರ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ ಎಂದು ಶ್ರೀಜಾ ರಾಣಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.