ತೂಕ ಇಳಿಸುವ ಉದ್ದೇಶವೇ ಈಗ ಬದಲಾಗಿದೆ. ಹಿಂದೆ ಸಪೂರ, ಸುಂದರ, ಬಳುಕುವ ದೇಹ ಎಂದೆಲ್ಲ ಬಿಂಬಿಸಿಕೊಳ್ಳಲು ಆಹಾರ ಸೇವನೆಯ ಪದ್ಧತಿಯನ್ನೇ ಬದಲಿಸಿಕೊಂಡು ತೂಕ ಇಳಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಆರೋಗ್ಯ, ಅದಕ್ಕೆ ಸರಿಯಾದ ದೇಹದ ತೂಕ ಅಥವಾ ಇರುವ ತೂಕ ಹೆಚ್ಚಾಗದಂತೆ ಉಳಿಸಿಕೊಳ್ಳಲು ಡಯಟ್ ಮೊರೆ ಹೋಗುವ ಟ್ರೆಂಡ್ ಶುರುವಾಗಿದೆ.
ಒಬ್ಬೊಬ್ಬರ ದೇಹಕ್ಕೂ ಒಂದೊಂದು ಬಗೆಯ ಡಯಟ್ ಪದ್ಧತಿ ಹೊಂದಿಕೊಳ್ಳಬಹುದು. ಅಂದರೆ ಬೇರೆ ಬೇರೆ ಜನಪ್ರಿಯ ಡಯಟ್ ಪದ್ಧತಿಗಳಲ್ಲಿ ವಿವಿಧ ರೀತಿಯ ಆಹಾರ ಸೇವನೆ ತ್ಯಜಿಸುವುದು ಒಂದು ಕಡೆ. ಆದರೆ ಎಲ್ಲ ಪದ್ಧತಿಗಳ ಮೂಲಮಂತ್ರವೆಂದರೆ ಅನಾರೋಗ್ಯಕರವಾಗಿ ತೂಕ ಇಳಿಯದಂತೆ ಜಾಗರೂಕತೆ ವಹಿಸುವುದು. ಸಂಸ್ಕರಿಸಿದ ಆಹಾರಕ್ಕೆ ಯಾವ ಪದ್ಧತಿಯಲ್ಲೂ ಜಾಗವಿಲ್ಲ. ಕೊಬ್ಬು ಹೆಚ್ಚಿಸುವ ಕಾರ್ಬೊಹೈಡ್ರೇಟ್‌ಗೆ ಕಡಿವಾಣವಿದ್ದರೆ ಒಳ್ಳೆಯದು. ಏನಿದ್ದರೂ ತಾಜಾ ತರಕಾರಿ, ಹಣ್ಣುಗಳು, ಬೇಳೆ– ಕಾಳುಗಳು, ಮೀನು– ಮೊಟ್ಟೆಯ ಸೇವನೆಗೆ ಆದ್ಯತೆ. ಉತ್ತಮ ಗುಣಮಟ್ಟದ ಇಡೀ ಧಾನ್ಯ, ಕಾಳುಗಳನ್ನು ಸೇವಿಸುವುದು ಅಗತ್ಯ ಎಂಬುದು ತಜ್ಞರ ಅಂಬೋಣ.
ಹಾಗೆಯೇ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಇನ್ನೊಂದು ಅಂಶವನ್ನು ಗಮನಿಸಿರಬಹುದು. ಕ್ಯಾಲರಿ ಲೆಕ್ಕ ಹಾಕುವುದು, ಸೇವಿಸುವ ಆಹಾರವನ್ನು ಅಳತೆ ಮಾಡುವುದು.. ಇವೆಲ್ಲ ಈಗ ಇಲ್ಲವೇ ಇಲ್ಲ. ಪೌಷ್ಟಿಕ ಆಹಾರದ ಆಯ್ಕೆ ಹಾಗೂ ನಮ್ಮ ಚಯಾಪಚಯ ಕ್ರಿಯೆಯ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ನಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ತಿನ್ನುವುದರ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ– ಹಸಿವನ್ನು ನಿಯಂತ್ರಿಸುವ ಮೂಲಕ ಹೆಚ್ಚು ತಿನ್ನಬೇಕು ಎಂಬ ಬಯಕೆಯನ್ನು ಬದಿಗೊತ್ತುವುದು ಇದರ ಹಿಂದಿನ ಉದ್ದೇಶ.
‘ಅಮೆರಿಕದ ಹಾರ್ವರ್ಡ್ ಮತ್ತು ಟಫ್ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನದ ಪ್ರಕಾರ ನಾವು ಸೇವಿಸುವ ಶೇ 40ರಷ್ಟು ಕ್ಯಾಲರಿ ಕಡಿಮೆ ಗುಣಮಟ್ಟದ ಕಾರ್ಬೊಹೈಡ್ರೇಟ್‌ನಿಂದ ಬಂದಿರುತ್ತದೆ. ಸಂಸ್ಕರಿಸಿದ ಧಾನ್ಯ, ಪಿಷ್ಟದ ಅಂಶವಿರುವ ತರಕಾರಿಗಳು, ಹೆಚ್ಚಾಗಿ ಕರಿದ ಪದಾರ್ಥಗಳು, ಸಿಹಿ ತಿನಿಸುಗಳು ಮತ್ತು ಪಾನೀಯಗಳು ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತವೆ. ಇವುಗಳಲ್ಲಿ ಪೋಷಕಾಂಶಗಳು ಕಡಿಮೆಯಿದ್ದು, ಕ್ಯಾಲರಿ ಜಾಸ್ತಿ ಇರುತ್ತದೆ’ ಎನ್ನುವ ಬೆಂಗಳೂರಿನ ಆಹಾರ ತಜ್ಞೆ ಕೋಯಲ್ ಪಾಂಡೆ, ‘ಇಂತಹ ಆಹಾರದಿಂದಲೇ ಮಧುಮೇಹ, ಹೃದ್ರೋಗ ಹಾಗೂ ಕೆಲವು ಬಗೆಯ ಕ್ಯಾನ್ಸರ್ ಬರುತ್ತದೆ. ಜೊತೆಗೆ ದೇಹದ ತೂಕ ಹೆಚ್ಚಾಗುವುದು ಕೂಡ ಇದರಿಂದಲೇ’ ಎನ್ನುತ್ತಾರೆ.
ಹೀಗಾಗಿ ಕಾರ್ಬೊಹೈಡ್ರೇಟ್ ಸೇವನೆಗೆ ಕೊಂಚ ಕಡಿವಾಣ ಹಾಕಿದರೆ ತೂಕವೂ ಕಡಿಮೆಯಾಗುತ್ತದೆ, ಜೊತೆಗೆ ಆರೋಗ್ಯಕರ ತೂಕವನ್ನು ಕೂಡ ಕಾಯ್ದುಕೊಳ್ಳಬಹುದು. ಆದರೆ ಕಾರ್ಬೊಹೈಡ್ರೇಟ್ ಪ್ರಮಾಣ ಜಾಸ್ತಿಯಿದ್ದರೆ, ಒಳ್ಳೆಯ ಕೊಬ್ಬು ಕಡಿಮೆ ಇದ್ದರೆ ಚಯಾಪಚಯ ಕ್ರಿಯೆಯ ದರ ಕುಸಿಯುತ್ತದೆ. ಇದರಿಂದ ತೂಕ ಕಡಿಮೆಯಾದರೂ ಕ್ಯಾಲರಿ ಕರಗುವ ಪ್ರಮಾಣ ಕಡಿಮೆ. ಹೀಗಾಗಿ ಕಡಿಮೆಯಾದ ತೂಕ ವಾಪಸ್ಸು ಬರುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸುತ್ತಾರೆ ತಜ್ಞರು.
ಕೋಯಲ್ ಪ್ರಕಾರ, ಕಡಿಮೆ ಪ್ರಮಾಣದ ಕಾರ್ಬೊಹೈಡ್ರೇಟ್ ಸೇವನೆಯಿಂದ ನಿತ್ಯ 100– 400 ಕ್ಯಾಲರಿವರೆಗೂ ಕರಗಿಸಬಹುದು. ವಿಶೇಷವಾಗಿ ಸಂಸ್ಕರಿಸಿದ, ಪಿಷ್ಟದ ಅಂಶ ಹೆಚ್ಚಿರುವ ಆಹಾರ, ಸಿಹಿ ತಿನಿಸು ಮತ್ತು ಸಕ್ಕರೆ ಸೇರಿಸಿದ ಪಾನೀಯ ತ್ಯಜಿಸುವುದು ಒಳಿತು. ಇವುಗಳಲ್ಲಿ ಪೋಷಕಾಂಶವೂ ಕಡಿಮೆ. ಪಿಷ್ಟವಿಲ್ಲದ ಧಾನ್ಯ, ಬೇಳೆಕಾಳು, ತರಕಾರಿ, ಸಕ್ಕರೆ ಬದಲು ಸ್ಟೀವಿಯ ಬಳಕೆ ಸೂಕ್ತ. ಆಲೂಗೆಡ್ಡೆಯಂತಹ ಹೆಚ್ಚು ಪಿಷ್ಟವಿರುವ ತರಕಾರಿ ತ್ಯಜಿಸಿ ಎನ್ನುತ್ತಾರೆ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.