ADVERTISEMENT

ಮಳೆಗಾಲದಲ್ಲಿ ಮಕ್ಕಳ ಕಾಳಜಿ ಹೀಗಿರಲಿ...

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 19:30 IST
Last Updated 23 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಳೆಗಾಲ ಶುರುವಾಗಿ ಎರಡು ತಿಂಗಳೇ ಕಳೆದಿದೆ. ಆರಂಭದಲ್ಲಿ ಬೇಸಿಗೆಯ ಬೇಗೆಗೆ ತಂಪೆರೆದ ಮಳೆ ದೇಹಕ್ಕೆ, ಮನಸ್ಸಿಗೆ ಮುದ ನೀಡಿದ್ದಲ್ಲದೇ ಬಿಸಿಬಿಸಿ ಕರಿದ ತಿನಿಸು, ಟೀ ಜೊತೆಗೆ ನಾಲಗೆಯ ರುಚಿಯನ್ನೂ ತಣಿಸುತ್ತಿದೆ. ಮಕ್ಕಳಂತೂ ಮಳೆಯಲ್ಲಿ ನೆನೆಯುತ್ತ, ನಿಂತ ನೀರಿನಲ್ಲಿ ಕಾಲನ್ನು ತೋಯಿಸುತ್ತ, ಕಾಗದದ ದೋಣಿ ಮಾಡುತ್ತ ಸಂಭ್ರಮಿಸುತ್ತಿದ್ದಾರೆ.

ಆದರೆ ಈ ಖುಷಿಯ ಮಧ್ಯೆ ಆತಂಕ ಹುಟ್ಟಿಸುವಂತಹ ಅಂಶವೆಂದರೆ ಸಾಂಕ್ರಾಮಿಕ ಕಾಯಿಲೆ. ಅದು ಸೊಳ್ಳೆ ಕಡಿತದಿಂದ ಬರುವಂತಹ ಡೆಂಗಿ, ಚಿಕುನ್‌ಗುನ್ಯ ಅಥವಾ ಮಲೇರಿಯ ಇರಲಿ, ನೀರು ಹಾಗೂ ಕಲುಷಿತ ಆಹಾರದಿಂದ ಬರುವಂತಹ ಟೈಫಾಯ್ಡ್‌, ಹೆಪಟೈಟಿಸ್‌ ಎ ಇರಲಿ, ವೈರಸ್‌ನಿಂದ ಗಾಳಿಯಲ್ಲಿ ಹರಡುವಂತಹ ಫ್ಲೂ ಅಥವಾ ಇತರ ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳಿರಲಿ... ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಇಟ್ಟುಕೊಂಡಿರಬೇಕಾಗುತ್ತದೆ. ಇವೆಲ್ಲವುಗಳ ಮಧ್ಯೆ ಕೋವಿಡ್‌–19 ಭಯವಂತೂ ಇದ್ದೇ ಇದೆ.

ಹೀಗಿರುವಾಗ ದೊಡ್ಡವರಿಗಿಂತ ಮಕ್ಕಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಒಂದಿಷ್ಟು ಹೆಚ್ಚೇ ಮುನ್ನೆಚ್ಚರಿಕೆ ತೆಗೆದುಕೊಂಡರೆ ಮಕ್ಕಳನ್ನು ಕಾಯಿಲೆಗಳಿಂದ ಕಾಪಾಡಬಹುದು.

ADVERTISEMENT

ಆಹಾರ ಮತ್ತು ನೀರು:ಕುಡಿಯುವ ನೀರು ಶುಚಿಯಾಗಿರುವಂತೆ ಕಾಳಜಿ ವಹಿಸಿ. ಮಕ್ಕಳಿಗೆ ಅದರಲ್ಲೂ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಚೆನ್ನಾಗಿ ಕುದಿಸಿದ ನೀರನ್ನೇ ಕುಡಿಸಿ. ಬೇಯಿಸದ ಆಹಾರ, ಉದಾಹರಣೆಗೆ ಚಟ್ನಿ, ಸಲಾಡ್‌ನಂತ ಆಹಾರ ನೀಡಬೇಡಿ. ಹಾಗೆಯೇ ಹಣ್ಣಿನ ರಸ ಅಥವಾ ಹೊರಗಡೆ ಹೋದಾಗ ಅಲ್ಲಿ ಲಭ್ಯವಿರುವ ನೀರು ಕುಡಿಸುವುದು ಸುತಾರಾಂ ಸಲ್ಲದು. ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಿ.

ಕೈಗಳ ಮತ್ತು ವೈಯಕ್ತಿಕ ಸ್ವಚ್ಛತೆ:ಮನೆಯಿಂದ ಹೊರಗೆ, ಅಂದರೆ ಆಟವಾಡಲು ಅಥವಾ ಪಕ್ಕದ ಮನೆಗೆ ಹೋಗಿ ಬಂದರೆ ಮಕ್ಕಳ ಕೈ ಮತ್ತು ಕಾಲುಗಳನ್ನು ಚೆನ್ನಾಗಿ ತೊಳೆಯಿರಿ. ಉಗುರುಗಳನ್ನೂ ಕತ್ತರಿಸಿ, ಶುಚಿಯಾಗಿರುವಂತೆ ನೋಡಿಕೊಳ್ಳಿ.

ಲಸಿಕೆ ಹಾಕಿಸಿ:ನಿಮ್ಮ ಮಗುವಿಗೆ ವಾರ್ಷಿಕ ಫ್ಲೂ ಲಸಿಕೆ ಹಾಕಿಸಲು ಮರೆಯಬೇಡಿ. ಸಾಮಾನ್ಯವಾಗಿ ಇದನ್ನು ಮಳೆಗಾಲಕ್ಕಿಂತ ಮುಂಚೆ ಅಥವಾ ಮಳೆಗಾಲದಲ್ಲಿ ಹಾಕಿಸಿದರೆ ಒಳ್ಳೆಯದು. ಫ್ಲೂ (ಇನ್‌ಫ್ಲೂಯೆಂಜ) ಹಾಗೂ ಕೋವಿಡ್‌–19 ಹೆಚ್ಚು ಕಡಿಮೆ ಒಂದೇ ತರಹದ ಲಕ್ಷಣಗಳನ್ನು ಹೊಂದಿವೆ. ಅಂದರೆ ಜ್ವರ, ಗಂಟಲು ನೋವು ಅಥವಾ ಕೆಮ್ಮು.. ಇವೆಲ್ಲ ಲಕ್ಷಣಗಳು ಒಂದೇ ರೀತಿಯಿದ್ದು, ಮೇಲ್ನೋಟಕ್ಕೆ ಕಂಡು ಹಿಡಿಯುವುದು ಕಷ್ಟ. ಹೀಗಾಗಿ ಆರು ತಿಂಗಳಿಗಿಂತ ಹೆಚ್ಚು ವಯಸ್ಸಾದ ಮಕ್ಕಳಿಗೆ ವಾರ್ಷಿಕ ಫ್ಲೂ ಲಸಿಕೆ ಕೊಡಿಸುವುದು ಉತ್ತಮ

ಫ್ಲೂ ಮತ್ತು ಕೋವಿಡ್‌–19 ಎರಡೂ ಸೋಂಕು ಬಂದರೆ ಗಂಭೀರ ಸಮಸ್ಯೆ ಉಂಟಾಗಬಹುದು. ಹೀಗಾಗಿ ಮಕ್ಕಳಿಗೆ ಕೋವಿಡ್‌–19 ಲಸಿಕೆ ಬರುವವರೆಗೆ ಫ್ಲೂ ಲಸಿಕೆ ಉತ್ತಮ ಆಯ್ಕೆ ಎನ್ನಬಹುದು. ಹಾಗೆಯೇ ಮಕ್ಕಳನ್ನು ಕೋವಿಡ್‌–19 ಸೋಂಕಿನಿಂದ ಪಾರು ಮಾಡಲು ಮನೆಯಲ್ಲಿರುವ ದೊಡ್ಡವರು ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ. ಮಗುವಿಗೆ ಹಾಲೂಡಿಸುವ ತಾಯಂದಿರು ಕೂಡ ಈ ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಮಗುವಿಗೂ ಎದೆಹಾಲಿನ ಮೂಲಕ ರೋಗ ನಿರೋಧಕ ಶಕ್ತಿ ಲಭ್ಯವಾಗುತ್ತದೆ.

ಇನ್ನು ಲಸಿಕೆಯಿಂದ ಟೈಫಾಯ್ಡ್‌ ಮತ್ತು ಹೆಪಟೈಟಿಸ್‌ ಎ ಕೂಡ ಬರದಂತೆ ತಡೆಯಬಹುದು. ಮಕ್ಕಳ ವೈದ್ಯರಿಂದ ಈ ಬಗ್ಗೆ ಸೂಕ್ತ ಮಾಹಿತಿ ಪಡೆಯಬಹುದು.

ಸೊಳ್ಳೆಗಳಿಗೆ ತಡೆ: ಈ ಕಾಲದಲ್ಲಿ ಸೊಳ್ಳೆಗಳು ಜಾಸ್ತಿ. ಅವುಗಳ ಕಡಿತದಿಂದ ಪಾರಾಗಲು ನೈಸರ್ಗಿಕ ಸೊಳ್ಳೆ ರೆಪೆಲೆಂಟ್‌ ಬಳಸಿ. ಕಿಟಕಿ, ಬಾಗಿಲಿಗೆ ಸೊಳ್ಳೆ ಪರದೆ (ಮೆಶ್‌) ಹಾಕಿಸಿ. ಮನೆಯ ಸುತ್ತ ಮಳೆ ನೀರು ತುಂಬಿಕೊಳ್ಳುವಂತಹ ಖಾಲಿ ಪಾತ್ರೆಗಳಿರದಂತೆ ಎಚ್ಚರಿಕೆ ವಹಿಸಿ. ನಿಂತ ಮಳೆನೀರು ಸೊಳ್ಳೆ ಲಾರ್ವಾ ಬೆಳೆಯಲು ಸೂಕ್ತ ಜಾಗ.

ಸೂಕ್ತ ಉಡುಪು:ನಿಮ್ಮ ಮಗುವಿಗೆ ಇಸ್ತ್ರಿ ಮಾಡಿದಂತಹ, ಚೆನ್ನಾಗಿ ಒಣಗಿದಂತಹ ಉಡುಪು ತೊಡಿಸಿ. ಹಾಗೆಯೇ ಶೀತದಿಂದ ದೂರ ಇಡಲು ತಲೆಯನ್ನು ಟೊಪ್ಪಿ ಅಥವಾ ಮಫ್ಲರ್‌ನಿಂದ ಬೆಚ್ಚಗಿಡಿ. ಆದರೆ ಜಾಸ್ತಿ ಉಡುಪು ತೊಡಿಸಿ ಬೆವರುವಂತೆ ಮಾಡದಿರುವುದು ಉತ್ತಮ. ಬೆವರಿನಿಂದ ಬಟ್ಟೆ ಒದ್ದೆಯಾಗಿ ಫಂಗಸ್‌ ಸೋಂಕಾಗಬಹುದು. ಹೆಚ್ಚು ಕಾಲ ಡೈಪರ್ ಬಳಸಬೇಡಿ. ಅಂದರೆ ಆಗಾಗ ಡೈಪರ್ ಬದಲಿಸುವುದು, ಹತ್ತಿಯ ಡೈಪರ್‌ ಬಳಸುವುದು ಉತ್ತಮ. ಮನೆಯಲ್ಲಿರುವಾಗ ವೆಟ್‌ ವೈಪ್ಸ್‌ ಅಥವಾ ಒದ್ದೆ ಬಟ್ಟೆ ಬಳಸಿ ಮಗುವನ್ನು ಸ್ವಚ್ಛ ಮಾಡಬೇಡಿ. ಮಗುವಿಗೆ ಡೈಪರ್ ಹಾಕುವ ಜಾಗವನ್ನು ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ. ಮಕ್ಕಳು ಮಳೆಯಲ್ಲಿ ನೆನೆಯುವುದಕ್ಕೆ ಬಿಡಬೇಡಿ.

ಮನೆಯೊಳಗೆ ಬೆಚ್ಚಗಿರುವಂತೆ ನೋಡಿಕೊಳ್ಳಿ. ಮಳೆ ನೀರು ಸೋರಿದರೆ ಫಂಗಸ್‌ ಬೆಳೆದುಕೊಂಡು ಆಸ್ತಮಾದಂತಹ ಅಲರ್ಜಿ ಉಂಟಾಗಬಹುದು.

ಕೋವಿಡ್‌ ಮೂರನೇ ಅಲೆಯ ಆತಂಕ ಇರುವುದರಿಂದ ಮಾಸ್ಕ್‌ ಧರಿಸುವುದು, ಅಂತರ ಕಾಪಾಡುವುದು, ಪದೇ ಪದೇ ಕೈ ತೊಳೆಯುವುದು, ಗುಂಪುಗೂಡದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಓಡಾಡದಿರುವುದು ಸೂಕ್ತ.

(ಲೇಖಕರು: ಸೀನಿಯರ್‌ ಕನ್ಸಲ್ಟೆಂಟ್‌, ನಿಯೊನೇಟೊಲೋಜಿಸ್ಟ್‌ ಮತ್ತು ಮಕ್ಕಳ ತಜ್ಞೆ, ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.