ADVERTISEMENT

ಅರಳಲಿ ಬಾಲನಂದನ

ರಘು ವಿ
Published 21 ನವೆಂಬರ್ 2022, 19:45 IST
Last Updated 21 ನವೆಂಬರ್ 2022, 19:45 IST
c
c   

ಮನಸ್ಸು ಎಂಬ ಮಡುವಿಗೆ ಯಾವ ಗಾತ್ರದ ಕಲ್ಲು ಬಿತ್ತೆಂಬುದು ಮುಖ್ಯವಲ್ಲ. ಆದರೆ ಅದು ನೀರನ್ನು ಕದಡಿತು ಎಂಬುದು ಮುಖ್ಯ. ಅದರಲ್ಲೂ ಬೆಳವಣಿಗೆಯ ಹಂತದಲ್ಲಿರುವ ಮನಸ್ಸಿಗೆ ಆಗುವ ಆಘಾತ ಬಹಳ ಪರಿಣಾಮ ಬೀರುತ್ತದೆ. ಮತ್ತೊಂದು ಗಮನೀಯ ಅಂಶ ಇದೆ. ಕಲ್ಲು ಬೀಳದೆ ಅದರಲ್ಲಿ ಮಳೆನೀರು ಬಿದ್ದರೂ ಅದು ಕದಡುತ್ತದೆ. ತುಂಬಿಕೊಳ್ಳಲೆಂದು ಬಿಂದಿಗೆಯನ್ನು ಅದ್ದಿದರೂ ಕೊಳದ ನೀರು ಕಲಮಲಗೊಳ್ಳುತ್ತದೆ. ಅಂದರೆ ಮನೋವ್ಯಾಪಾರದಲ್ಲಿ ಈ ಬಗೆಯ ಕಲಮಲ ಸಹಜ ಎಂದಾಯಿತು. ದೂರದ ಬೆಟ್ಟ ಹೇಗೆ ನುಣ್ಣಗೋ ಹಾಗೇ ದೂರದ ಮಡುವೂ ಶಾಂತ, ತರಂಗರಹಿತ. ಹತ್ತಿರ ಹೋದಾಗಲೇ ಅದರ ಮೇಲ್ಮೈ ನಡುಗುತ್ತಿರುವುದು ಕಾಣುವುದು. ಮನುಷ್ಯರ ಮನಸ್ಸೂ ಅಂತೆಯೇ. ದೂರದಿಂದ ಎಲ್ಲ ಹಸನು. ಆದರೆ ಹತ್ತಿರವಿದ್ದಾಗ ಮಾತ್ರ ತುಮುಲದ ತರಂಗಗಳು ಗೋಚರಿಸುವವು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ-ಶಿಕ್ಷಕ-ಪೋಷಕರು ಹೇಗೆ ಪರಸ್ಪರ ಪೂರಕರಾಗಿ ನಿಂತು ಸದೃಢ ಮನಸ್ಸನ್ನು, ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ ಎಂಬುದನ್ನು ಈ ಲೇಖನದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿದೆ.

ಮನಸ್ಸು ಕಲಮಲಗೊಳ್ಳುತ್ತದೆ ಎಂದ ಮಾತ್ರಕ್ಕೆ ಅದನ್ನು ಹಾಗೇ ಬಿಡಲಾರದು. ಏಕೆಂದರೆ ಮನುಷ್ಯ ಚಿಂತನಾಜೀವಿ. ಕೇವಲ ಕರಣಗಳ ಅನುಭವಕ್ಕೆ ಅವನ ಬದುಕು ಸೀಮಿತವಲ್ಲ. ಹೆಚ್ಚಿನ ಅನುಭವಕ್ಕೆ ಒತ್ತಡಕ್ಕೆ ಅವನು ತನ್ನನ್ನು ತಾನು ಒಪ್ಪಿಸಿಕೊಂಡಾಗ ಅವನಿಂದ ಮಹತ್ತರವಾದದ್ದು ಘಟಿಸುತ್ತದೆ. ಶಿಕ್ಷಣದ ಒಂದು ಮುಖ್ಯ ಉದ್ದೇಶವೇ ಸಮಾಜಪೂರಕ ವ್ಯಕ್ತಿಗಳನ್ನು ರೂಪಿಸುವುದು. ‘ರೂಪಿಸು’ ಎಂಬ ಪದದಲ್ಲೇ ತಿದ್ದು ಎಂಬ ಅರ್ಥ ಧ್ವನಿತವಾಗುತ್ತಿದೆ. ತಿದ್ದಬೇಕಾದರೆ ಕೊಂಚ ಒತ್ತಡವನ್ನು ಹಾಕಬೇಕು. ಜೇಡಿಮಣ್ಣನ್ನು ತಿಗರಿಯ ಮೇಲಿಟ್ಟು ತಿರುಗಿಸಿ, ಅದನ್ನು ಒತ್ತಿ ಆಕಾರಕ್ಕೆ ತಂದು ತಟ್ಟಿ ಒಣಗಿಸಿ ಆವುಗೆಯ ಬೆಂಕಿ, ಕಾವು ಕೊಟ್ಟ ಮೇಲೆ ತಾನೇ ಮಡಕೆಯಾಗುವುದು? ಇಲ್ಲವಾದರೆ ಮಣ್ಣು ಮಣ್ಣಾಗಿಯೇ ಉಳಿದುಬಿಡುತ್ತದೆ. ಶಿಕ್ಷಣ ವ್ಯವಸ್ಥೆಯ ತಿಗರಿಯ ಮೇಲೆ ಮಕ್ಕಳನ್ನು ಇರಿಸಿ ಅವರ ಆಲೋಚನೆಗಳಿಗೊಂದು ಆಕಾರ ಕೊಟ್ಟು ಪ್ರಾಯೋಗಿಕ ಅಂಶಗಳಲ್ಲಿ ಬೇಯಿಸಿ ಹದಗೊಳಿಸಿದಾಗಲೇ ಅವನು ಸಮಾಜೋಪಯೋಗಿ ವ್ಯಕ್ತಿಯಾಗುವುದು. ಹೀಗಾಗಿ ಒತ್ತಡ ಹಾಕುವುದು ತಪ್ಪು ಎನ್ನಲಾಗದು. ಶಿಸ್ತಿಲ್ಲದ, ಶಿಸ್ತು ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ. ಶಿಸ್ತಿಗೆ, ದಂಡನೆಗೆ ಒಳಗಾಗದೆ ಶಾಲಾ ಕಲಿಕೆ ಪೂರೈಸಿದವರು ಯಾರಿದ್ದಾರೆ?

ADVERTISEMENT

ಶಿಸ್ತಿನ ನೆಪದಲ್ಲಿ ಮಕ್ಕಳನ್ನು ಸುಸ್ತು ಮಾಡುವುದು ತಪ್ಪೇ. ಕೊಂಚ ಮಟ್ಟಿಗಿನ ಬಿಗಿ ಇಲ್ಲದಿದ್ದರೆ ಕಲಿಕೆಯಾಗದು. ಎಲ್ಲ ಮಕ್ಕಳಿಗೂ ಕಲಿಕೆ ಎಂಬುದು ಇಷ್ಟವಾಗದ ಅನುಭವ. ಆದರೆ ಒಮ್ಮೆ ಓದಿನ ರುಚಿ ಹತ್ತಿಬಿಟ್ಟರೆ, ಅಂತಹ ವಿದ್ಯಾರ್ಥಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗದು. ಮಕ್ಕಳಿಗೂ ಮನಸ್ಸಿದೆ, ಅವರಿಗೂ ಗೌರವವಿದೆ, ಕಾನೂನಿನ ಚೌಕಟ್ಟಿನಲ್ಲಿ ಅವರಿಗೂ ಹಕ್ಕಿದೆ ಎಂಬುದನ್ನು ಮರೆಯಲಾಗದು. ಅದರಲ್ಲೂ ಅವರ ಸಮಾನವರ್ಗದವರ ಮುಂದೆ ಅಪಮಾನವಾದರೆ ಅವರು ಸಹಿಸರು. ಹೀಗಾಗಿ ತರಗತಿಯಲ್ಲಿ ಮಾತನಾಡುವಾಗ ಶಿಕ್ಷಕ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಮಕ್ಕಳು ಹೊರನೋಟಕ್ಕೆ ದೃಢವಾಗಿ ಕಂಡರೂ ಅವರೊಳಗೊಂದು ದುರ್ಬಲತೆಯೂ ಇರಬಹುದು. ಮಕ್ಕಳು ತಪ್ಪು ಮಾಡಿದಾಗ ಗದರಿಸುವುದೇ ಆದರೆ ಅವರನ್ನು ಶಿಕ್ಷಕರ ಕೊಠಡಿಗೆ ಕರೆದು ಎಚ್ಚರಿಸುವುದು ಒಳಿತು. ತರಗತಿಯಲ್ಲಿ ವಿದ್ಯಾರ್ಥಿಯ ಒಳ್ಳೆಗುಣಗಳನ್ನು ಎಲ್ಲರ ಮುಂದೆ ಶ್ಲಾಘಿಸಬೇಕು. ಮಕ್ಕಳಲ್ಲಿ ಶಿಕ್ಷಕನಾದವನು ನಿರ್ವ್ಯಾಜಪ್ರೀತಿಯನ್ನು ಹೊಂದಿರಬೇಕು. ತಮ್ಮಿಷ್ಟದ ಶಿಕ್ಷಕ ದಂಡಿಸಿದರೂ ಬೈದರೂ ಮಕ್ಕಳು ತಡೆದುಕೊಳ್ಳುತ್ತಾರೆ. ಮೊದಲಿಗೆ ಮಕ್ಕಳ ಪ್ರೀತಿ ಗೌರವಗಳನ್ನು ಗಳಿಸಿದರೆ, ಅವರನ್ನು ಕೊಂಚ ದಂಡಿಸಿದರೂ ಅವರು ಅದನ್ನು ಅರಗಿಸಿಕೊಂಡು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ. ಹಿಂದಿನ ಕಾಲದಂತೆ ಈಗ ಮನೆ ತುಂಬ ಮಕ್ಕಳಿರುವುದಿಲ್ಲ. ಒಬ್ಬರೋ ಇಬ್ಬರೋ ಇರುತ್ತಾರೆ. ಆದುದರಿಂದ ಅವರಿಗೆ ಜೋಪಾನವಾಗಿ ವಿದ್ಯೆ ಕಲಿಸಿ ಕಳಿಸಿಕೊಡಬೇಕು. ಮಕ್ಕಳ ಮನಸ್ಸನ್ನು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಅವರಲ್ಲಿ ಕ್ರಿಯಾಶೀಲತೆ ಹೆಚ್ಚಿ ಮನಸ್ಸು ಖಾಲಿಯಾಗಿರುವುದು ನಕಾರಾತ್ಮಕ ಆಲೋಚನೆ ಮಾಡುವುದು ತಪ್ಪುತ್ತದೆ. ಪಠ್ಯೇತರ ಚಟುವಟಿಕೆಗಳು ಇರುವುದೇ ಇದಕ್ಕಾಗಿ. ಶಾಲೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಎಲ್ಲ ಮಕ್ಕಳೂ ಭಾಗವಹಿಸುವಂತೆ ಶಿಕ್ಷಕರು ಗಮನಿಸಿಕೊಳ್ಳಬೇಕು. ಅಲ್ಲಿಯ ಸೋಲು-ಗೆಲುವುಗಳು, ನೋವು-ಅಪಮಾನಗಳು ಮಕ್ಕಳನ್ನು ಗಟ್ಟಿಗೊಳಿಸುತ್ತವೆ.

ವಿದ್ಯಾರ್ಥಿಗಳ ಮಾನಸಿಕ ಶಕ್ತಿಯ ಮೇಲೆ ಪರಿಣಾಮ ಬೀರುವುದು ಮನೆಯ ವಾತಾವರಣ; ಮುಖ್ಯವಾಗಿ ತಂದೆ-ತಾಯಿಯರ ವರ್ತನೆಗಳು. ಮಗುವಿಗೆ ಅಭದ್ರತೆ ಕಾಡದಂತೆ ದಂಪತಿಗಳು ಮನೆಯಲ್ಲಿ ವರ್ತಿಸಬೇಕು. ಅವರೇ ಬಡಿದಾಡುತ್ತಿದ್ದರೆ, ಅಥವಾ ಇಬ್ಬರಲ್ಲಿ ಒಬ್ಬರೋ ಅಥವಾ ಇಬ್ಬರೋ ವ್ಯಸನಿಗಳಾಗಿದ್ದರೆ, ಅದು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸದಾ ಟಿವಿ ಹಾಕಿರುವುದು, ಮನೆಯಲ್ಲಿ ಅಸಭ್ಯ ಪದ, ಬೈಗುಳ ಬಳಸುವುದು, ಅಶ್ಲೀಲ ಸಂಭಾಷಣೆಯನ್ನು ನಡೆಸುವುದು ಮಾಡಬಾರದು. ಆರೋಗ್ಯಕಾರಿ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣಾಗಲಿ ಗಂಡಾಗಲೀ, ಮನೆಗೆಲಸವನ್ನೂ ಕಲಿಸಬೇಕು. ಮನೆಯಲ್ಲಿ ಯಾರೂ ಅಮುಖ್ಯರಲ್ಲ ಎಂಬ ಭಾವ ಮಕ್ಕಳಲ್ಲಿ ಗಟ್ಟಿಯಾಗಬೇಕು. ಆಗ ಸಹಜವಾಗಿಯೇ ಅವರಲ್ಲಿ ಜವಾಬ್ದಾರಿ ಮೂಡುತ್ತದೆ.

ಮಕ್ಕಳು ಶಾಲೆಯಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುತ್ತಾರೆ. ಆದುದರಿಂದ ಮಕ್ಕಳ ಮನಸ್ಸು ರೂಪುಗೊಳ್ಳುವುದು ಹೆಚ್ಚಾಗಿ ಮನೆಯ ವಾತಾವರಣದಲ್ಲಿ. ಮಕ್ಕಳಿಗೆ ಅನ್ನ-ಆಹಾರದ ಜೊತೆಗೆ ಪ್ರೀತಿ, ವಿಶ್ವಾಸ, ಭರವಸೆ, ನಂಬಿಕೆ, ಆತ್ಮಶ್ರದ್ಧೆ – ಇವುಗಳನ್ನೂ ಪೋಷಕರು ಒದಗಿಸಬೇಕು. ಆಗ ಮಕ್ಕಳು ಗಟ್ಟಿಯಾಗಿ, ಶಾಲೆಯಷ್ಟೇ ಅಲ್ಲದೆ ಹೊರಜಗತ್ತಿನ ಯಾವುದೇ ಒತ್ತಡಗಳನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಮನೆಯವರೆಲ್ಲ ಒಟ್ಟಾಗಿ ಪ್ರವಾಸ ಕೈಗೊಳ್ಳುವುದು, ಎಲ್ಲರೂ ಸೇರಿ ಆಟವಾಡುವುದು, ಸಂಗೀತ–ಸಾಹಿತ್ಯ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಮಕ್ಕಳು ಗೆದ್ದಾಗ ಸಂಭ್ರಮಿಸುವಂತೆ, ಅವರ ಸೋಲನ್ನೂ ಖುಷಿಯಿಂದಲೇ ಒಪ್ಪಿಕೊಳ್ಳಬೇಕು. ಸೋಲುವುದು ಅಪಮಾನವಲ್ಲ – ಎಂದು ಮಕ್ಕಳು ತಿಳಿಯಬೇಕು. ಮುಖ್ಯವಾಗಿ ಮಕ್ಕಳ ಪೂರ್ಣ ವಿಶ್ವಾಸವನ್ನು ಪೋಷಕರು ಗಳಿಸಬೇಕು. ಪೂರ್ಣ ವಿಶ್ವಾಸ ಇರದಿದ್ದರೆ ಅವರು ತಮ್ಮನ್ನು ತಾವು ತೆರೆದುಕೊಳ್ಳುವುದಿಲ್ಲ, ತಮ್ಮೊಳಗಿನದನ್ನು ತೋಡಿಕೊಳ್ಳುವುದೂ ಇಲ್ಲ. ಯಾವುದೇ ಸಂದರ್ಭದಲ್ಲೂ ಮಗು ತನ್ನ ಪೋಷಕರಲ್ಲಿ ಅನಿಸಿಕೆಯನ್ನು ಹಂಚಿಕೊಳ್ಳುವ ಮುಕ್ತ ಅವಕಾಶ ಇರಬೇಕು. ಇಡೀ ಜಗತ್ತು ಎದುರಾದರೂ ಪೋಷಕರು ನನ್ನೊಂದಿಗೆ ಇರುತ್ತಾರೆ ಎಂಬ ನಂಬಿಕೆ ದಟ್ಟವಾಗಿದ್ದಾಗ ಮಕ್ಕಳು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ಮಕ್ಕಳ ಮನಸ್ಸು ಕುಗ್ಗಿದಾಗ ಅದನ್ನು ಗುರುತಿಸಿ ಸಕಾಲದಲ್ಲಿ ಸೂಕ್ತ ನೆರವು ನೀಡಿ ಸುಧಾರಿಸಿಕೊಳ್ಳುವಂತೆ ಮಾಡಬೇಕು. ಬಾಡುವ ಮುನ್ನವೇ ಗಿಡಕ್ಕೆ ನೀರೆರೆವಂತೆ ಶಿಕ್ಷಕರು-ಪೋಷಕರು ಇಂತಹ ಸಂದರ್ಭಗಳಲ್ಲಿ ಎಚ್ಚೆತ್ತು ಕ್ರಮಕೈಗೊಳ್ಳಬೇಕು. ಅರಳಲಿ ಮನೋನಂದನ, ಕ್ಷೇಮವಾಗಿರಲಿ ಬಾಲನಂದನ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.