ಮಕ್ಕಳು ಎಂದರೆ ಸಂತಸದ ಚಿಲುಮೆ! ಸಂತೋಷ ಎನ್ನುವುದಕ್ಕೆ ಅನ್ವರ್ಥನಾಮವೆಂದರೆ ಮಕ್ಕಳು. ಮಕ್ಕಳಂತೆ ಇದ್ದರೆ ಯಾವ ಚಿಂತೆಗಳೂ ಇರುವುದಿಲ್ಲ ಎನ್ನುವ ಕಾಲವೊಂದಿತ್ತು. ಮಕ್ಕಳು ಯಾವುದರ ಬಗ್ಗೆ ಚಿಂತಿಸಬೇಕು? ಕೆಲಸದ ಬಗ್ಗೆಯೇ? ಸಂಸಾರದ ತಾಪತ್ರಯಗಳ ಕುರಿತೇ? ಹಣದ ಬಗ್ಗೆಯೇ? ಇವ್ಯಾವುದರ ಗೊಡವೆ ಮಕ್ಕಳಿಗೆ ಇಲ್ಲವಾದ್ದರಿಂದ ಮಕ್ಕಳು ಚಿಂತೆಗಳಿಂದ ಮುಕ್ತರು. ಹೀಗಾಗಿ ಚಿಂತೆಯೇ ಇಲ್ಲದ ಕಾರಣ ಒತ್ತಡ ಅವರಿಗೆ ಇರುವುದಿಲ್ಲ ಎಂದೇ ಹೆಚ್ಚಿನ ಹಿರಿಯರು ಯೋಚಿಸುತ್ತಾರೆ. ಆದರೆ ಈಗಿನ ಮಕ್ಕಳು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಅದರಲ್ಲೂ ಈ ಕೊರೊನಾಕಾಲದಲ್ಲಿ ಇದು ಹೆಚ್ಚಿದೆ ಎಂದೇ ಹೇಳಬೇಕು.
ಮಕ್ಕಳ ಒತ್ತಡದ ಜೀವನಕ್ಕೆ ಕಾರಣಗಳೇನು?
‘ಇರುವೆಯ ಭಾರ ಇರುವೆಗೆ, ಆನೆಯ ಭಾರ ಆನೆಗೆ’ ಎಂಬ ಮಾತಿನಂತೆ, ಅವರವರ ಚಿಂತೆಯ ಹೊರೆ ಹೊತ್ತವರಿಗಷ್ಟೇ ಗೊತ್ತು. ಒತ್ತಡವೆಂದರೆ ನಮಗಿಷ್ಟವಿಲ್ಲದ ಅಥವಾ ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಾದ ಕೋರಿಕೆಗಳನ್ನು ತನು-ಮನಗಳ ಮೇಲೆ ಹೇರಿದಾಗ ಉಂಟಾಗುವಂಥದ್ದು. ಇವು ಹೊರಗಿನಿಂದ ಬಂದವುಗಳಾಗಿರಬಹುದು; ಕೆಲವೊಂದು ಮನಸ್ಸಿನ ಒಳಗಿನಿಂದ ಉಂಟಾಗುವ ಒತ್ತಡಗಳು ಇವೆ. ಪ್ರಸ್ತುತ ಬಹಳಷ್ಟು ಮಕ್ಕಳ ಒತ್ತಡಕ್ಕೆ ಕಾರಣವಾಗಿರುವುದು ಇತ್ತೀಚೆಗೆ ಎಲ್ಲೆಡೆ ವ್ಯಾಪಿಸಿರುವ ಸರ್ವವ್ಯಾಪಿ ವ್ಯಾಧಿ ಕೊರೋನಾ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ಶಾಲೆಯಿಲ್ಲ, ಮನೆಯಿಂದ ಹೊರಬರುವಂತಿಲ್ಲ. ಬಂದರೂ ಯಾರೊಡನೆಯೂ ಕೂಡಿ ಆಡುವಂತಿಲ್ಲ. ಹೀಗಾದಾಗ ಮಕ್ಕಳು ಖಿನ್ನತೆಗೂ ಒಳಗಾಗುತ್ತಾರೆ.
ಪೋಷಕರ ಬೇರ್ಪಡುವಿಕೆ, ಕಿಶೋರಾವಸ್ಥೆಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಒತ್ತಡಗಳು ಮಕ್ಕಳನ್ನು ಬಾಧಿಸುತ್ತವೆ. ಬಹಳಷ್ಟು ಮಕ್ಕಳು ಆಟೋಟಗಳಿಗೇ ಸಮಯವಿಲ್ಲದಂತೆ ಓದುತ್ತಾರೆ. ಓದಿನ ಜೊತೆಗೆ ಆಟವೂ ಇದ್ದರೆ ಮಾತ್ರ ಮಕ್ಕಳ ಮನಸ್ಸು ಹಾಗೂ ದೇಹ ಒತ್ತಡರಹಿತವಾಗಿರಲು ಸಾಧ್ಯ. ಇಂದು ಮಕ್ಕಳಿಗೆ ಶಾಲೆಯೂ ಇಲ್ಲ; ಸ್ನೇಹಿತರ ಸಂಪರ್ಕವೂ ಇಲ್ಲ; ಆಟ ಇರಲಿ, ಹೊರಗೆ ಹೋಗುವಂತೆಯೇ ಇಲ್ಲ. ಹೀಗಾಗಿ ಮಕ್ಕಳು ಸಹಜವಾಗಿ ಖಿನ್ನತೆಗೂ ಒಳಗಾಗಬಹುದಾದ ಅಪಾಯವಿದೆ.
ಮನೆಯಲ್ಲಿ ಮಕ್ಕಳ ಎದುರಿಗೆ ಹಿರಿಯರ ಜಗಳ, ಮಕ್ಕಳೆದುರಿಗೆ ಮನೆಯ ಸಮಸ್ಯೆಗಳ ಬಗ್ಗೆ ಚರ್ಚೆ – ಇಂತಹ ವಿಷಯಗಳು ಮಕ್ಕಳ ಒತ್ತಡವನ್ನು ಹೆಚ್ಚಿಸುತ್ತವೆ. ಬಹಳಷ್ಟು ಬಾರಿ ಮಕ್ಕಳು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಕೂಡ ತಿಳಿದಿರುವುದಿಲ್ಲ. ಇದಕ್ಕಿಂತ ಪ್ರಮಾದ ಇನ್ನೊಂದಿಲ್ಲ.
ಹಾಗಾದರೆ ಮಕ್ಕಳು ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಯುವುದು ಹೇಗೆ?
ಮಕ್ಕಳು ಒತ್ತಡದಲ್ಲಿದ್ದಾರೆಂದು ತಿಳಿಯುವುದು ಕಷ್ಟದ ಕೆಲಸ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಗಳಾಗುತ್ತವೆ. ನಿದ್ದೆಯಲ್ಲಿ ವ್ಯತ್ಯಾಸವಾಗುತ್ತದೆ. ಮನಃಸ್ಥಿತಿ ಒಮ್ಮೆ ಇದ್ದಂತೆ ಇನ್ನೊಮ್ಮೆ ಇರುವುದಿಲ್ಲ. ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಹೊಟ್ಟೆನೋವು ಹಾಗೂ ತಲೆನೋವು ಎಂದು ದೂರುವುದು, ಹಟ ಮಾಡುವುದು, ಕಾರಣವಿಲ್ಲದೆ ಅಳುವುದು – ಇವು ಮಕ್ಕಳು ಒತ್ತಡಕ್ಕೊಳಗಾದಾಗ ಕಾಣುವು ಕೆಲವು ಲಕ್ಷಣಗಳು. ಹದಿಹರೆಯದ ಮಕ್ಕಳು ಕೆಲವೊಂದು ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಉಗುರು ಕಚ್ಚುವುದು, ಸುಳ್ಳು ಹೇಳುವುದು, ಬೇರೆ ಮಕ್ಕಳನ್ನು ಕಾಡಿಸುವುದು, ಸಿಡಿಮಿಡಿಗೊಳ್ಳುವುದು, ಹೀಗೆ ಒತ್ತಡ ಹೆಚ್ಚಾದಾಗ ಮಕ್ಕಳು ತಮ್ಮ ಇರುವಿಕೆಗಿಂತ ಭಿನ್ನವಾಗಿ ವರ್ತಿಸುತ್ತಾರೆ.
ಇದಕ್ಕೆ ಪರಿಹಾರವಿದೆಯೇ? ಖಂಡಿತ ಇದೆ.
ವಿಶ್ರಾಂತಿ ಹಾಗೂ ಪೌಷ್ಟಿಕವಾದ ಆಹಾರವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೋಷಕರು ದಿನದ ಸ್ವಲ್ಪ ಸಮಯವಾದರೂ ಮಕ್ಕಳೊಂದಿಗೆ ಕಳೆಯಬೇಕು.
ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು.
ಮಕ್ಕಳೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂಥ ಘಟನೆಗಳನ್ನು ಹೇಳಬೇಕು. ಪಾಲಕ–ಪೋಷಕರು ಅವರಿಗೆ ಸ್ಫೂರ್ತಿಯಾಗುವಂತೆ ನಡೆದುಕೊಳ್ಳಬೇಕು.
ಓದು, ಅಂಕಗಳು, ಮೊದಲ ದರ್ಜೆ – ಎಂದು ಸದಾ ಮಕ್ಕಳ ಮೇಲೆ ಒತ್ತಡವನ್ನು ಹೇರಬಾರದು. ಇಂದಿನ ಮಕ್ಕಳ ಒತ್ತಡದ ಜೀವನಕ್ಕೆ ಇವುಗಳೇ ಮೂಲಕಾರಣಗಳು.
ಮಕ್ಕಳಿಗೆ ಬೇರೆ ಬೇರೆ ಕ್ಷೇತ್ರದ ಸಾಧಕರ ಆತ್ಮಕಥೆಯನ್ನು, ಸ್ಫೂರ್ತಿದಾಯಕ ಕಥೆಗಳನ್ನು ಓದಲು ಪ್ರೇರೇಪಿಸಬೇಕು.
ಪ್ರತಿಯೊಂದು ಮಗುವಿಗೂ ಯಾವುದಾದರೊಂದು ವಿಷಯದಲ್ಲಿ ಮೇಲುಗೈ ಸಾಧಿಸುವ ಸಾಮರ್ಥ್ಯ ಇದ್ದೇ ಇರುತ್ತದೆ. ಯಾವ ಮಕ್ಕಳೂ ದಡ್ಡರಲ್ಲ! ಮಕ್ಕಳ ಆಸಕ್ತಿಯನ್ನೂ ಶಕ್ತಿಯನ್ನೂ ಗಮನಿಸಿ, ಅದಕ್ಕೆ ತಕ್ಕಂತೆ ವ್ಯಕ್ತಿತ್ವವನ್ನೂ ಸಾಧನೆಯನ್ನೂ ರೂಢಿಸಿಕೊಳ್ಳಲು ನೆರವಾಗಬೇಕು.
ಇಂದು ಎದುರಾಗಿರುವ ಪರಿಸ್ಥಿತಿ ಶಾಶ್ವತವಲ್ಲ; ಇದು ಸದ್ಯದಲ್ಲಿಯೇ ನಿವಾರಣೆಯಾಗುತ್ತದೆ. ಮತ್ತೆ ಒಳ್ಳೆಯ ದಿನಗಳು ಬರುತ್ತವೆ; ಮೊದಲಿನಂತೆಯೇ ಶಾಲೆ, ಆಟ, ಸ್ನೇಹಿತರು – ಎಲ್ಲವೂ ಮುಂದುವರೆಯುತ್ತದೆ ಎಂಬ ವಿಶ್ವಾಸವನ್ನೂ ಧೈರ್ಯವನ್ನೂ ಮಕ್ಕಳಲ್ಲಿ ಮೂಡಿಸಬೇಕು.
ಈಗ ಸಿಕ್ಕಿರುವ ಬಿಡುವಿನ ವೇಳೆಯನ್ನು ಮಕ್ಕಳೊಂದಿಗೆ ಸರಿಯಾಗಿ ವಿನಿಯೋಗವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹಿರಿಯರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.