ಒಂದೂವರೆ ತಿಂಗಳ ಕುಶಾಲ ಮನೆಯೆಲ್ಲರ ಕಣ್ಣ ಬಿಂದು. ಸಹಜ ಹೆರಿಗೆಯಿಂದ ಸುಖಪ್ರಸವವಾಗಿ, ಆರೋಗ್ಯವಾಗಿ ಜನಿಸಿದ ಚಟುವಟಿಕೆಯ ಕೂಸು. ಒಂದೂವರೆ ತಿಂಗಳ ಲಸಿಕೆ ಕೊಡಿಸಲು ಹೋದಾಗ ಮಕ್ಕಳ ವೈದ್ಯರು ಪರೀಕ್ಷೆ ಮಾಡಿ ‘ಮಗುವಿನ ಹೃದಯದಲ್ಲಿ ಮರ್ಮರ್ ಸದ್ದು ಕೇಳುತ್ತಿದೆ. ಅವನಿಗೆ ಹೃದಯ ಪರೀಕ್ಷೆ ಮಾಡಬೇಕು’ ಎಂದು ಹೇಳಿ, ದೊಡ್ಡಾಸ್ಪತ್ರೆಗೆ ಬರೆದುಕೊಟ್ಟಿದ್ದಾರೆ. ಅವನ ತಾಯಿ ದೇವಕಿಗೆ ಅಂದಿನಿಂದ ಒಂದೇ ಅಳು. ಮನೆಮಂದಿಯೆಲ್ಲಾ ದಿಗಿಲು ಬಿದ್ದಿದ್ದಾರೆ.
‘ಹೃದ್ರೋಗ ಮಕ್ಕಳಿಗೂ ಬರುವುದುಂಟೆ?’ ಎಂದು ಕೆಲವರಿಗೆ ಅಚ್ಚರಿ ಆಗಬಹುದು. ಮಕ್ಕಳಲ್ಲಿ ಕಾಣುವ ಹೃದಯದ ಸಮಸ್ಯೆಗಳು ಹಿರಿಯರ ಹೃದ್ರೋಗಗಳಿಗಿಂತ ಸಂಪೂರ್ಣ ಭಿನ್ನ. ವಯಸ್ಸಾದವರಲ್ಲಿ ಬಹುಮಟ್ಟಿಗೆ ಕಾಣುವುದು ಹೃದಯಕ್ಕೆ ರಕ್ತಪೂರೈಸುವ ಧಮನಿಗಳ ಅಡೆತಡೆ. ಆದರೆ, ಹೃದಯದ ರಚನೆಯಲ್ಲಿ ಆಗುವ ಜನ್ಮಜಾತ ದೋಷಗಳು ಎಳೆಯ ವಯಸ್ಸಿನಲ್ಲೇ ಗೋಚರವಾಗುತ್ತವೆ. ಹೃದಯ ಸರಳವಾದರೂ ಸಂಕೀರ್ಣ ಅಂಗ. ಶರೀರದ ಅಶುದ್ಧ ರಕ್ತ ಅಪಧಮನಿಗಳ ಮೂಲಕ ಹೃದಯದ ಬಲಭಾಗವನ್ನು ಸೇರಿ, ಅಲ್ಲಿಂದ ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ ಉಸಿರಾಟದ ಆಕ್ಸಿಜನ್ ಬೆರೆತು ರಕ್ತ ಶುದ್ಧವಾಗುತ್ತದೆ. ಈ ಆಕ್ಸಿಜನ್-ಯುಕ್ತ ಶುದ್ಧ ರಕ್ತವು ಹೃದಯದ ಎಡಭಾಗವನ್ನು ಸೇರಿ, ಅಭಿಧಮನಿಗಳ ಮೂಲಕ ಇಡೀ ಶರೀರಕ್ಕೆ ಸರಬರಾಜಾಗುತ್ತದೆ. ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸಲು ಹೃದಯದ ಎಡ ಮತ್ತು ಬಲಭಾಗಗಳ ನಡುವೆ ಎರಡು ಗೋಡೆಗಳು ಇರುತ್ತವೆ. ರಕ್ತದ ಏಕಮುಖ ಸಂಚಾರವನ್ನು ನಿಯಂತ್ರಿಸಲು ಹೃದಯದಲ್ಲಿ ಸ್ವಯಂಚಾಲಿತ ಬಾಗಿಲಿನಂತಹ, ನಿಶ್ಚಿತ ಸಮಯಕ್ಕೆ ಸರಿಯಾಗಿ ತೆರೆದು, ಮುಚ್ಚಿಕೊಳ್ಳುವ ನಾಲ್ಕು ಕವಾಟಗಳು ಇರುತ್ತವೆ. ಶ್ವಾಸಕೋಶಗಳಿಗೆ ಮತ್ತು ಶರೀರಕ್ಕೆ ರಕ್ತ ಒಯ್ಯುವ ಸಲುವಾಗಿ ಬೇರೆ ಬೇರೆ ಧಮನಿಗಳು ಇರುತ್ತವೆ. ಹೀಗೆ, ಒಂದೇ ಹೃದಯದಲ್ಲಿ ಇದ್ದರೂ, ಅಶುದ್ಧ ಮತ್ತು ಶುದ್ಧ ರಕ್ತಗಳು ಪರಸ್ಪರ ಸಂಪರ್ಕಕ್ಕೆ ಬಾರದಂತೆ ವ್ಯವಸ್ಥೆ ಇರುತ್ತದೆ.
ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸುವ ಗೋಡೆಗಳಲ್ಲಿ ರಂಧ್ರವಿದ್ದರೆ ಅವು ಒಂದರ ಜೊತೆಗೊಂದು ಬೆರೆಯುತ್ತವೆ. ಈ ರೀತಿಯ ರಂಧ್ರಗಳು ಹುಟ್ಟಿನಿಂದಲೇ ಬರುವುದರಿಂದ, ಎಳೆಯ ವಯಸ್ಸಿನಲ್ಲೇ ಪತ್ತೆಯಾಗುತ್ತವೆ. ಹೃದಯದ ನಾಲ್ಕು ಕವಾಟಗಳ ಪೈಕಿ ಯಾವುದೋ ಒಂದು ಕವಾಟದ ರಚನೆಯಲ್ಲಿ ದೋಷವಿದ್ದರೆ, ಅದು ಸರಿಯಾಗಿ ಮುಚ್ಚದೆಯೋ, ತೆರೆಯದೆಯೋ ಇರಬಹುದು. ಆಗಲೂ ರಕ್ತಸಂಚಾರದಲ್ಲಿ ತಡೆಯಾಗುತ್ತದೆ. ರಕ್ತ ಒಯ್ಯುವ ರಕ್ತನಾಳಗಳಲ್ಲಿ ಏನಾದರೂ ಸಮಸ್ಯೆ ಇದ್ದರೂ, ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ರಕ್ತಪೂರೈಕೆಯ ಸಂಪೂರ್ಣ ಜವಾಬ್ದಾರಿ ಹೃದಯದ್ದೇ ಆದ್ದರಿಂದ, ಇಡೀ ರಕ್ತಸಂಚಾರದ ವ್ಯವಸ್ಥೆಯಲ್ಲಿ ಎಲ್ಲೇ ತೊಂದರೆಯಾದರೂ, ಅದರ ಪ್ರತ್ಯಕ್ಷ ಯಾ ಪರೋಕ್ಷ ಪರಿಣಾಮ ಹೃದಯದ ಮೇಲೆಯೇ ಆಗುತ್ತದೆ.
ಹೃದಯದ ಸಮಸ್ಯೆ ಸಣ್ಣ ಮಟ್ಟದಲ್ಲಿದ್ದರೆ ಶರೀರಕ್ಕೆ ಯಾವುದೇ ಹಾನಿಯಾಗದೇ ಇರಬಹುದು. ಅಂತಹ ಮಕ್ಕಳು ಇತರ ಮಕ್ಕಳಂತೆ ಆರಾಮವಾಗಿ, ಚಟುವಟಿಕೆಯಿಂದಲೇ ಇರುತ್ತಾರೆ. ಬೇರೆ ಯಾವುದೋ ಕಾರಣಕ್ಕೆ ವೈದ್ಯರ ಬಳಿ ಒಯ್ದಾಗ, ಅಂತಹ ಮಕ್ಕಳ ಹೃದಯವನ್ನು ಪರೀಕ್ಷಿಸುವ ವೈದ್ಯರಿಗೆ ವಿಭಿನ್ನ ಸದ್ದು ಕೇಳುತ್ತದೆ. ಹೃದಯದ ರಂಧ್ರ ಯಾ ದೋಷಪೂರ್ಣ ಕವಾಟದ ಮೂಲಕ ಹರಿಯುವ ರಕ್ತ ಮರ್ಮರ್ ಸದ್ದನ್ನೋ, ಅಥವಾ ಕ್ಲಿಕ್ ಸದ್ದನ್ನೋ ಮಾಡುತ್ತದೆ. ಅನುಭವಿ ವೈದ್ಯರು ಇಂತಹ ಸದ್ದನ್ನು ಖಚಿತವಾಗಿ ಗ್ರಹಿಸಬಲ್ಲರು. ಆದರೆ, ಪ್ರತಿಯೊಂದು ವಿಭಿನ್ನ ಸದ್ದಿಗೂ ಹೃದಯದ ಆಂತರಿಕ ದೋಷವೇ ಕಾರಣ ಎನ್ನಲಾಗದು. ಕೆಲವೊಮ್ಮೆ ಸಾಮಾನ್ಯ ಮಕ್ಕಳಲ್ಲೂ ಮರ್ಮರ್ ಸದ್ದು ಕೇಳಿಸುತ್ತದೆ. ಹೀಗಾಗಿ, ಹೃದಯದ ಸದ್ದು ವಿಭಿನ್ನವಾಗಿದ್ದರೆ, ವೈದ್ಯರು ಮಕ್ಕಳ ಹೃದಯದ ತಪಾಸಣೆ ಮಾಡಿಸುತ್ತಾರೆ.
ಹೃದಯದ ಜನ್ಮಜಾತ ಸಮಸ್ಯೆ ತೀವ್ರವಾಗಿದ್ದರೆ, ಅಂತಹ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಚರ್ಮ ಮತ್ತು ಲೋಳೆಪದರ ನೀಲಿಗಟ್ಟುವುದು, ಪದೇಪದೇ ಕಾಯಿಲೆ ಬೀಳುವುದು, ತೂಕ ಸರಿಯಾಗಿ ಏರದಿರುವುದು, ಹಾಲೂಡಿಸುವಾಗ ಮಗು ವಿಪರೀತ ಬೆವರುವುದು, ಬಿಟ್ಟು-ಬಿಟ್ಟು ಹಾಲು ಕುಡಿಯುವುದು, ಸರಿಯಾಗಿ ನಿದ್ರಿಸದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಕಾಣುತ್ತವೆ. ಶಿಶುವೈದ್ಯತಜ್ಞರ ಸಲಹೆ ಪಡೆದು, ಇಂತಹ ಮಕ್ಕಳನ್ನು ಸಾಧ್ಯವಾದಷ್ಟೂ ಬೇಗ ಮಕ್ಕಳ ಹೃದ್ರೋಗತಜ್ಞರಿಗೆ ತೋರಿಸಬೇಕು.
ಮಕ್ಕಳ ಜನ್ಮಜಾತ ಹೃದ್ರೋಗ ಸಮಸ್ಯೆಗಳು ಹಲವಾರು ಬಗೆಯವು. ಸರಳವಾದ ಸಣ್ಣ ರಂಧ್ರದಿಂದ ಹಿಡಿದು, ರಕ್ತನಾಳಗಳ ಅದಲಿ-ಬದಲಿ, ಹೃದಯದ ಒಂದು ಕೋಣೆಯೇ ಬೆಳವಣಿಗೆ ಆಗದಿರುವುದು, ಕವಾಟಗಳ ಅನುಪಸ್ಥಿತಿಯಂತಹ ಸಂಕೀರ್ಣ ಸಮಸ್ಯೆಗಳು ಇರುತ್ತವೆ. ಪ್ರತಿಯೊಂದಕ್ಕೂ ಚಿಕಿತ್ಸೆ ಭಿನ್ನವಾಗಿರುತ್ತದೆ. ‘ಒಂದು ಶಿಶುವಿನ ಹೃದಯದಂತೆ ಮತ್ತೊಂದು ಇರುವುದಿಲ್ಲ’ ಎಂದು ಮಕ್ಕಳ ಹೃದ್ರೋಗತಜ್ಞರು ಅಭಿಪ್ರಾಯ ಪಡುತ್ತಾರೆ.
ಪ್ರಸ್ತುತ ವೈದ್ಯಕೀಯ ವಿಜ್ಞಾನ ಬಹಳ ಪ್ರಗತಿ ಸಾಧಿಸಿದೆ. ಜನ್ಮಜಾತ ಹೃದ್ರೋಗ ಸಮಸ್ಯೆಗಳಿಗೆ ಈಗ ನಿರ್ದಿಷ್ಟ ಚಿಕಿತ್ಸೆಗಳಿವೆ. ಗರ್ಭಸ್ಥ ಭ್ರೂಣದ ಹಂತದಲ್ಲಿಯೇ ಹೃದ್ರೋಗವನ್ನು ನಿರ್ದಿಷ್ಟವಾಗಿ ಪತ್ತೆ ಮಾಡಬಲ್ಲ ತಂತ್ರಜ್ಞಾನವಿದೆ. ಸರಿಯಾದ ವೇಳೆಗೆ ವೈದ್ಯಕೀಯ ನೆರವು ಪಡೆದರೆ ಯಾವುದೇ ಜನ್ಮಜಾತ ಹೃದ್ರೋಗವನ್ನಾದರೂ ಸುಧಾರಿಸಬಲ್ಲ ಚಿಕಿತ್ಸೆಗಳಿವೆ. ಈಗಷ್ಟೇ ಜನಿಸಿದ ಮಗುವಿನ ಹೃದಯಕ್ಕೂ ಶಸ್ತ್ರಚಿಕಿತ್ಸೆ ಮಾಡಿ, ಸಮಸ್ಯೆಯನ್ನು ನಿಗ್ರಹಿಸಬಲ್ಲ ತೀವ್ರ ನಿಗಾ ಘಟಕಗಳಿವೆ. ಈ ನಿಟ್ಟಿನಲ್ಲಿ ಜಗತ್ತಿನ ಯಾವುದೇ ಮುಂದುವರೆದ ದೇಶಕ್ಕೆ ಸಮನಾಗಿ ನಿಲ್ಲುವಷ್ಟು ತಾಂತ್ರಿಕತೆ ಭಾರತದಲ್ಲೇ, ಅದೂ ಬೆಂಗಳೂರಿನ ಆಸ್ಪತ್ರೆಗಳಲ್ಲಿಯೇ ಲಭ್ಯವಿದೆ. ದೇಶ-ವಿದೇಶಗಳ ಶಿಶುಗಳು ಈಗ ಹೃದಯಚಿಕಿತ್ಸೆಗಾಗಿ ಬೆಂಗಳೂರನ್ನು ಎಡತಾಕುತ್ತಿದ್ದಾರೆ. ಮಕ್ಕಳ ಹೃದ್ರೋಗ ಈಗ ಪೋಷಕರಿಗೆ ಆತಂಕದ ವಿಷಯವಾಗಬೇಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.