ADVERTISEMENT

ಮಕ್ಕಳ ಆತಂಕಗಳಲ್ಲಿ ಪೋಷಕರ ಪಾತ್ರ

ಡಾ.ಕಿರಣ್ ವಿ.ಎಸ್.
Published 10 ಜುಲೈ 2023, 23:30 IST
Last Updated 10 ಜುಲೈ 2023, 23:30 IST
   

ಧಾವಂತದ ಆಧುನಿಕ ಬದುಕು ಯಾರನ್ನೂ ಮಾನಸಿಕ ಆತಂಕಕ್ಕೆ ದೂಡದೆ ಬಿಟ್ಟಿಲ್ಲ. ಮನೆಯಲ್ಲಿ, ಕಚೇರಿಯಲ್ಲಿ, ರಸ್ತೆಯಲ್ಲಿ - ಹೀಗೆ ಪ್ರತಿಯೊಂದು ಕಡೆಯೂ ಮನಸ್ಸಿಗೆ ಒಂದಲ್ಲ ಒಂದು ಆತಂಕ ಕಾಡುತ್ತಲೇ ಇರುತ್ತದೆ. ಯಾವುದೋ ಒಂದು ರೀತಿಯಲ್ಲಿ ಈ ಆತಂಕವನ್ನು ಶಮನಗೊಳಿಸಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಮಕ್ಕಳ ಕಥೆ ಏನು? ಇಂದಿನ ಮಕ್ಕಳಿಗೆ ಆತಂಕ ಇರುವುದಿಲ್ಲವೇ? ತಮ್ಮ ಮನಸ್ಸಿನಲ್ಲಿ ಮನೆ ಮಾಡಿರುವ ಆತಂಕದ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗದ ಮಕ್ಕಳು ಅದನ್ನು ಯಾವ ರೀತಿಗಳಲ್ಲಿ ಸೂಚಿಸುತ್ತಾರೆ? ಹಿರಿಯರಾಗಿ ನಾವು ಅವರ ಆತಂಕವನ್ನು ಗ್ರಹಿಸುವುದು ಹೇಗೆ? ಮಕ್ಕಳ ಆತಂಕವನ್ನು ದೂರ ಮಾಡುವ ಯಾವ ವಿಧಾನಗಳನ್ನು ನಾವು ಪಾಲಿಸಬಹುದು? ಈ ನಿಟ್ಟಿನಲ್ಲಿ ಕೆಲವು ನೋಟಗಳು.

ಪ್ರತಿಯೊಂದು ಕಾಲದಲ್ಲೂ ಆಯಾ ಕಾಲಘಟ್ಟಕ್ಕೆ ಸಂಬಂಧಿಸಿದ ವಿಶಿಷ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಎರಡು-ಮೂರು ದಶಕಗಳ ಹಿಂದಿನ ಸಮಸ್ಯೆಗಳು ಇಂದಿಗೆ ಪ್ರಾಯಶಃ ಪ್ರಸ್ತುತವಾಗಲಾರವು. ಹೀಗಾಗಿ, ಇಂದಿನ ಪೋಷಕರು ‘ನಾವು ಎದುರಿಸಿದ ಸಮಸ್ಯೆಗಳನ್ನು ನಮ್ಮ ಮಕ್ಕಳು ಎದುರಿಸಬಾರದು’ ಎನ್ನುವಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಆದರೆ, ಮಕ್ಕಳಿಗೆ ಒದಗಬಹುದಾದ ಇಂದಿನ ಕಾಲದ ಸಮಸ್ಯೆಗಳತ್ತಲೂ ಅರಿವು ಮೂಡಿಸಿಕೊಳ್ಳುವುದು ಹಿರಿಯರ ಜವಾಬ್ದಾರಿಯೇ ಆಗಿರುತ್ತದೆ. ವರ್ತಮಾನದ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಆತಂಕದ ಆಯಾಮಗಳು ಬೇರೆಯೇ ಇದ್ದಾವು. ನಮಗಿಂತಲೂ ಭಿನ್ನವಾದ ವಾತಾವರಣದಲ್ಲಿ ಬೆಳೆದಿರುವ ಮಕ್ಕಳಿಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸುವ ವಿಧಾನಗಳೂ ವಿಭಿನ್ನವಾಗಿಯೇ ಇರುತ್ತವೆ.

ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಕೆಲವು ವಯೋಸಹಜ ಆತಂಕಗಳು ಸಾಮಾನ್ಯ. ಸಣ್ಣ ಮಕ್ಕಳು ಪೋಷಕರಿಂದ ದೂರಾಗುವ ಆತಂಕವನ್ನು ಅನುಭವಿಸುತ್ತಾರೆ. ಬೆಳವಣಿಗೆಯ ಹಂತಗಳಲ್ಲಿ ಕತ್ತಲೆಯ ಆತಂಕ, ಅಪರಿಚಿತರ ಆತಂಕ, ಪ್ರಾಣಿಗಳ, ಕೀಟಗಳ ಆತಂಕವನ್ನು ಆರೋಗ್ಯವಂತ ಮಕ್ಕಳೂ ಅನುಭವಿಸುತ್ತಾರೆ. ಇವು ತಾತ್ಕಾಲಿಕ ಆತಂಕಗಳು. ಇದನ್ನು ಮೀರಿದ ಆತಂಕಗಳು ಕೂಡ ಮಕ್ಕಳನ್ನು ಕಾಡಬಹುದು. ತನ್ನ ದೇಹದ ಬಗ್ಗೆ, ಚರ್ಮದ ಬಣ್ಣದ ಬಗ್ಗೆ, ಶಾಲೆಗೆ ಹೋಗುವ ಹಾದಿಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕುವ ಸಾಧ್ಯತೆಗಳ ಬಗ್ಗೆ, ಶಾಲೆಯ ಶಿಕ್ಷಕರ ಅಭಿಪ್ರಾಯದ ಬಗ್ಗೆ, ಸ್ನೇಹಿತರು ತನ್ನನ್ನು ಸ್ವೀಕರಿಸುವ ಬಗ್ಗೆ, ತನ್ನ ಜೊತೆಯಲ್ಲಿ ಕೆಟ್ಟದ್ದಾಗಿ ವರ್ತಿಸುವವರ ಬಗ್ಗೆ ಮಕ್ಕಳಿಗೆ ಆತಂಕವಿರುವ ಸಾಧ್ಯತೆಗಳು ಇಂದಿನ ದಿನಗಳಲ್ಲಿ ದಟ್ಟವಾಗಿವೆ. ಇದನ್ನು ಪೋಷಕರು ತಿರಸ್ಕರಿಸದೆ, ಹಾಸ್ಯ ಮಾಡದೆ, ನಿರ್ಲಕ್ಷ್ಯ ಮಾಡದೆ, ಉಪೇಕ್ಷಿಸದೆ, ಗಮನಿಸಿ, ಪರಿಹರಿಸಬೇಕಾಗುತ್ತದೆ.

ADVERTISEMENT

ಆತಂಕಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸುವುದರಲ್ಲಿ ಬಹಳ ಮಕ್ಕಳು ಸೋಲುತ್ತಾರೆ. ಬಹುತೇಕ ಮಕ್ಕಳಲ್ಲಿ ಆತಂಕ ಅವರ ವರ್ತನೆಗಳಲ್ಲಿ ಕಾಣುತ್ತದೆ. ಮಗು ಅಕಾರಣವಾಗಿ ಸಹನೆ ಕಳೆದುಕೊಳ್ಳಬಹುದು; ಕೋಪ ಪ್ರದರ್ಶಿಸಬಲ್ಲದು; ಹಿರಿಯರ ಮೇಲೆ ಸಿಡುಕಬಲ್ಲದು; ನಿದ್ರಾಹೀನತೆ ಇಲ್ಲವೆ ಅತಿನಿದ್ರೆಯಿಂದ ಬಳಲಬಹುದು; ಹಾಸಿಗೆಯಲ್ಲಿಯೇ ಮೂತ್ರ ಮಾಡಬಹುದು; ಕೆಟ್ಟ ಕನಸುಗಳಿಂದ ಭೀತಿಗೊಳ್ಳಬಹುದು; ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳು ಇಳಿಮುಖವಾಗಬಲ್ಲವು; ಓದು, ಹೋಂವರ್ಕ್‌ಗಳಲ್ಲಿ ಹಿಂದುಳಿಯಬಲ್ಲದು; ಅನ್ಯಮನಸ್ಕವಾಗಬಲ್ಲದು; ಓರಗೆಯ ಮಕ್ಕಳ ಜೊತೆಗೆ ಆಟವಾಡಲು ನಿರಾಕರಿಸಬಲ್ಲದು; ಆಗಾಗ ಸುಸ್ತು, ತಲೆನೋವು, ಹೊಟ್ಟೆನೋವು, ಮೈ-ಕೈ ನೋವುಗಳೆಂದು ದೂರಬಹುದು. ಕೆಲವೊಮ್ಮೆ ಇಂತಹ ಮಕ್ಕಳಲ್ಲಿ ಕಾಣುವ ಉಸಿರಾಟದ ಸಮಸ್ಯೆ, ತಲೆಸುತ್ತು, ಎದೆಬಡಿತದ ಅನುಭವ, ಶರೀರ ಕಂಪನ, ಅಧಿಕ ಬೆವರುವಿಕೆಯಂತಹ ಚಿಹ್ನೆಗಳು ಪೋಷಕರ ಭಯಕ್ಕೆ ಕಾರಣವಾಗಬಲ್ಲವು. ಕೆಲವು ಮಕ್ಕಳು ಯಾವುದಾದರೂ ಕಾರಣದಿಂದ ತಮ್ಮ ಆತಂಕಗಳನ್ನು ಹೊರಗೆ ತೋರದೆ ಮನದೊಳಗೇ ಉಳಿಸಿಕೊಂಡು ಮಾನಸಿಕ ಖಿನ್ನತೆಗೆ ಜಾರಬಹುದು.

ಕಾರಣಗಳು ಸ್ಪಷ್ಟವಾಗಿ ಪತ್ತೆಯಾಗುವ ಆತಂಕಗಳನ್ನು ನಿವಾರಿಸಬಹುದು. ಇಂತಹವುಗಳ ಸಂಖ್ಯೆ ಕಡಿಮೆ. ಮಕ್ಕಳು ಅನುಭವಿಸುವುದಕ್ಕಿಂತ ಊಹಿಸಿಕೊಂಡು ಆತಂಕಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಇಂತಹ ಬಹುತೇಕ ಆತಂಕಗಳನ್ನು ನಿರ್ವಹಿಸುವ ವಿಧಾನಗಳನ್ನು, ಕಲೆಯನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗುತ್ತದೆ. ಇದನ್ನು ಸಾಧಿಸಲು ಬೇಕಾದ ಅತ್ಯಂತ ಮುಖ್ಯ ಆವಶ್ಯಕತೆ ಮಕ್ಕಳೊಡನೆ ಪ್ರಾಮಾಣಿಕ ಸಂವಹನ. ನಮ್ಮ ತುರ್ತುಗಳು ಏನೇ ಇದ್ದರೂ ಕನಿಷ್ಠ ಒಬ್ಬ ಪೋಷಕರಾದರೂ ಮಕ್ಕಳೊಡನೆ ದಿನವೂ ಕೆಲನಿಮಿಷಗಳ ಕಾಲ ಅನೌಪಚಾರಿಕವಾಗಿ ಸಂವಹನ ನಡೆಸಬೇಕು. ಈ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಮಾತನಾಡಲು ಅವಕಾಶ ನೀಡಬೇಕು. ಅವರ ಮಾತುಗಳನ್ನು ಮಧ್ಯದಲ್ಲಿ ತುಂಡರಿಸಬಾರದು. ಅನಗತ್ಯ ಮುಖಭಾವಗಳನ್ನು ಪ್ರದರ್ಶಿಸಬಾರದು. ಅವರ ಮಾತಿನ ಮಧ್ಯದಲ್ಲಿ ಬಾಯಿ ಹಾಕಿ ಪರಿಹಾರಗಳನ್ನು ಸೂಚಿಸುವತ್ತ ಸಂಭಾಷಣೆಯನ್ನು ಒಯ್ಯಬಾರದು. ಅವರು ಪರಿಹಾರಗಳನ್ನು ಬೇಡಿದರೆ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವಂತಹ ಮಾತುಗಳನ್ನು ಆಡಬಾರದು. ಎಲ್ಲಿ ಸರಿಯಾದ ಸಲಹೆಗಳನ್ನು ನೀಡುವಲ್ಲಿ ನಮ್ಮ ಜ್ಞಾನ, ಅನುಭವಗಳು ಸಾಲುವುದಿಲ್ಲವೋ, ಅಲ್ಲಿ ಮಕ್ಕಳಿಗೆ ಸಾಂತ್ವನದ ಮಾತುಗಳನ್ನು ಹೇಳಿ, ತಜ್ಞರ ಸಲಹೆ ಪಡೆಯುವುದು ಸೂಕ್ತ. ಒಟ್ಟಿನಲ್ಲಿ ಮಕ್ಕಳ ವರ್ತನೆಗೆ ಕಣ್ಣಾಗಬೇಕು; ಅವರ ಅಗತ್ಯಗಳಿಗೆ ಕಿವಿಯಾಗಬೇಕು. ಈ ನಿಟ್ಟಿನಲ್ಲಿ ತೀರ್ಪುದಾರರ ವರ್ತನೆ ಸಲ್ಲದು; ಸಮಾನಸ್ತರದ ವ್ಯವಹಾರ ಮುಖ್ಯವಾಗುತ್ತದೆ.

ನೈಜ ಆತಂಕಗಳಿಂದ ಪಲಾಯನ ಮಾಡುವುದು ತಾತ್ಕಾಲಿಕ ಪರಿಹಾರವನ್ನು ನೀಡಬಹುದು. ಆದರೆ ಭವಿಷ್ಯದಲ್ಲಿ ಅಂತಹುದೇ ಪ್ರಸಂಗಗಳು ಮತ್ತೆ ಎದುರಾದಾಗ ಹೇಗೆ ನಿಭಾಯಿಸಬೇಕು ಎಂದು ಹೇಳಿಕೊಡುವುದಿಲ್ಲ. ಈಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಪ್ರತಿಯೊಂದು ಅಹಿತಕರ ಅನುಭವದಿಂದ ದೂರವಿಡಬೇಕೆಂದು ಬಯಸುತ್ತಾರೆ. ಆಟವಾಡುವ ಮಕ್ಕಳ ಮಾತುಕತೆಯಂತಹ ತೀರಾ ಸಣ್ಣ ವಿಷಯಗಳಲ್ಲೂ ತಾವೇ ಮಧ್ಯೆ ಪ್ರವೇಶಿಸಿ, ತಮ್ಮ ಮಗುವಿನ ಪರವಾಗಿ ವಕಾಲತ್ತು ಮಾಡುತ್ತಾ, ಮಗುವಿನ ಮಾನಸಿಕ ಬೆಳವಣಿಗೆಯನ್ನು ಕುಂಠಿಸುತ್ತಾರೆ. ಇದರ ದೀರ್ಘಕಾಲಿಕ ಪರಿಣಾಮಗಳನ್ನು ಅವರು ಅರಿಯುವುದೇ ಇಲ್ಲ. ಇಂತಹ ಮಕ್ಕಳು ಸ್ವಭಾವತಃ ಅಂಜುಬುರುಕರಾಗಿ, ಪ್ರತಿಯೊಂದಕ್ಕೂ ಪೋಷಕರನ್ನೇ ಆಶ್ರಯಿಸುತ್ತಾ ಬೆಳೆಯುತ್ತಾರೆ. ಇದು ಭವಿಷ್ಯದಲ್ಲಿ ಅಪಾಯಕಾರಿ ಪರಿಣಾಮಗಳಿಗೆ ದಾರಿಯಾಗಬಹುದು. ಅವರ ಆತಂಕಗಳನ್ನು ಏನಕೇನ ಪ್ರಕಾರಗಳಿಂದ ಕಳೆಯುವುದಕ್ಕಿಂತಲೂ ಮಕ್ಕಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ನೀಡುವ ಶಿಕ್ಷಣ ಮುಖ್ಯ. ಬಹುತೇಕ ಆತಂಕಗಳ ನಿರ್ವಹಣೆಯಲ್ಲಿ ಮಕ್ಕಳ ಜೊತೆ ಮಾನಸಿಕವಾಗಿ ನಿಂತು ಆತ್ಮವಿಶ್ವಾಸ ಹೆಚ್ಚಿಸುವುದು ಭೌತಿಕವಾಗಿ ನಿಂತು ರಕ್ಷಣೆ ನೀಡುವುದಕ್ಕಿಂತಲೂ ಸೂಕ್ತ.

ಬದಲಾಗುತ್ತಿರುವ ಜೀವನವಿಧಾನಗಳಲ್ಲಿ ಮಕ್ಕಳ ಕಲಿಕೆಯ ಜೊತೆಗೆ ಹಿರಿಯರ ಕಲಿಕೆಯೂ ನಿರಂತರವಾಗಿ ಆಗುತ್ತಿರಬೇಕು. ಆತಂಕಗಳ ನಿರ್ವಹಣೆ ಇದಕ್ಕೊಂದು ಪ್ರಬಲ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.