ADVERTISEMENT

ಕ್ಷೇಮ ಕುಶಲ: ನಿಮ್ಮ ಮಗುವನ್ನು ಸಂತೈಸಿರಿ...

ರಮ್ಯಾ ಶ್ರೀಹರಿ
Published 30 ಜುಲೈ 2024, 0:03 IST
Last Updated 30 ಜುಲೈ 2024, 0:03 IST
<div class="paragraphs"><p>ನಿಮ್ಮ ಮಗುವನ್ನು ಸಂತೈಸಿರಿ...</p></div>

ನಿಮ್ಮ ಮಗುವನ್ನು ಸಂತೈಸಿರಿ...

   

– ಗೆಟ್ಟಿ ಚಿತ್ರ

ಮಕ್ಕಳಿಗೆ ಪೋಷಕರು ತನ್ನನ್ನು ಗಮನಿಸುತ್ತಿದ್ದಾರೆ ಎನ್ನುವ ನಂಬಿಕೆಯು ಸುರಕ್ಷೆಯ ಭಾವನೆಯನ್ನು ಕೊಡುತ್ತದೆ; ಅಷ್ಟೆ ಅಲ್ಲದೆ, ಆ ನಂಬಿಕೆಯೇ ಅವರ ಬಾಳಿಗೆ ದೊಡ್ಡ ಬಲವೂ, ಭದ್ರ ಬುನಾದಿಯೂ ಹೌದು.

ADVERTISEMENT

ಅನಾರೋಗ್ಯ, ದೈಹಿಕ-ಮಾನಸಿಕ ಅಸೌಖ್ಯಗಳಿದ್ದಾಗಲಂತೂ ತಂದೆ-ತಾಯಿಯ ಸಾಮೀಪ್ಯಕ್ಕಿಂತ ಹೆಚ್ಚಿನದೇನೂ ಮಕ್ಕಳಿಗೆ ಬೇಡವಾಗಿರುತ್ತದೆ. ಅನಾರೋಗ್ಯವಾದೊಡನೆ ಎಲ್ಲ ತಂದೆ-ತಾಯಿಯೂ ಸಹಜವಾಗೇ ತಮ್ಮ ಮಗುವಿಗೆ ತಡಮಾಡದೆ ತಜ್ಞವೈದ್ಯರ ಬಳಿಗೆ ಕರೆದೊಯ್ದು ವೈದ್ಯರ ಸಲಹೆಯಂತೆ ಔಷಧೋಪಚಾರಗಳನ್ನು ಒದಗಿಸುವುದು ಸಾಮಾನ್ಯ. ಆದರೆ ಮಕ್ಕಳ ಅಸೌಖ್ಯಕ್ಕೆ ತಂದೆ-ತಾಯಿ ಹೇಗೆ ಸ್ಪಂದಿಸುತ್ತಾರೆ, ಮಗುವಿಗಾಗುತ್ತಿರುವ ಸಂಕಟವನ್ನು ಅವರು ಎಷ್ಟರ ಮಟ್ಟಿಗೆ ಮತ್ತು ಹೇಗೆ ಗ್ರಹಿಸುತ್ತಾರೆ, ಹೇಗೆ ಸಂತೈಸುತ್ತಾರೆ ಎನ್ನುವುದು ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಈಗ ಹೇಗಿದೆ ಮುಂದೆ ಅದು ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನು ತಿಳಿಸಿಕೊಡುವ ಒಂದು ಮಹತ್ವಪೂರ್ಣ ಸಂದರ್ಭವೂ ಹೌದು.

ಮಕ್ಕಳೇ ಇರಲಿ, ವಯಸ್ಕರೇ ಇರಲಿ ಯಾರಿಗಾದರೂ ಅಷ್ಟೇ, ಅನಾರೋಗ್ಯವಾದಾಗ ಸಂತೈಸುವ ಮಾತುಗಳು, ತಾಳ್ಮೆಯ ನಡೆನುಡಿ, ಆತ್ಮೀಯತೆಯ ಬೆಚ್ಚನೆಯ ಭಾವನೆಗಳೇ ಔಷಧಕ್ಕಿಂತಲೂ ಪರಿಣಾಮಕಾರಿ ಎನಿಸುವುದಿದೆ. ಅದರಲ್ಲೂ ಎಳೆಯ ಮಕ್ಕಳಿಗಂತೂ ಮನಸ್ಸು ಬುದ್ಧಿ ರೂಪುಗೊಳ್ಳುವ ಹಂತದಲ್ಲಿ, ಪೋಷಕರು ‘ತನ್ನ ರಕ್ಷಣೆಯನ್ನು ಹೇಗೆ ಮಾಡುತ್ತಾರೆ’, ‘ತಾನು ಅವರಿಗೆಷ್ಟು ಮುಖ್ಯ’, ‘ತನಗೆ ನೋವಾದಾಗ ಅವರಿಗೆ ಹೇಗಾಗುತ್ತದೆ’ – ಎನ್ನುವುದೆಲ್ಲ ಪೋಷಕರ ವರ್ತನೆಯ ಮೂಲಕ ಮಗುವಿಗೆ ನಿಚ್ಚಳವಾಗಿ ಅರಿವಾಗುತ್ತಿರುತ್ತದೆ. ಅನಾರೋಗ್ಯಕ್ಕೊಳಗಾದಾಗ ನಿರ್ಲಕ್ಷ್ಯಕ್ಕೊಳಗಾದ ಭಾವವು ಮಕ್ಕಳ ಮನಸ್ಸನ್ನು ಕಂಗೆಡಿಸಿ ಕಡು ದುಃಖವನ್ನುಂಟುಮಾಡಿ ಮುಂದೆಯೂ ಅದರ ಕಹಿಯನ್ನು ಅವರು ಮರೆಯುವುದು ಕಷ್ಟವೂ ಆಗುತ್ತದೆ.

ಎಳೆಯ ಮಕ್ಕಳಿಗೆ ತಮಗೇನಾಗುತ್ತಿದೆ ಎಂದು ಹೇಳಿಕೊಳ್ಳಲು ಬಾರದ ವಯಸ್ಸಿನಲ್ಲಿ ಅವರಿಗಾಗುತ್ತಿರುವ ಸಂಕಟವನ್ನು ಊಹಿಸಿ ತಕ್ಕ ಉಪಚಾರ ಮಾಡಿದಾಗಲೂ ಆ ಔಷಧವು ಸರಿಯಾದ ಪರಿಣಾಮ ಬೀರಿ ದೇಹ ಮತ್ತೆ ಸಹಜಸ್ಥಿತಿಗೆ ಮರಳುವುದಕ್ಕೆ ಸಾಕಷ್ಟು ಸಮಯ ಬೇಕು. ಆಗ ಅಳುತ್ತಾ ರಗಳೆ ಮಾಡುವ ಮಗುವಿಗೆ ತಾಯಿ ಏನು ಮಾಡುತ್ತಾಳೆ? ಮಗುವನ್ನು ಮುದ್ದಿಸಿ ಸಮಾಧಾನಿಸುತ್ತಾ, ಅದರ ಕಿರಿಕಿರಿಯನ್ನು ಕಡಿಮೆ ಮಾಡಲು ಹಾಡುತ್ತಲೋ, ಗಮನವನ್ನು ಬೇರೆಡೆ ತಿರುಗಿಸಲು ಆಟವಾಡಿಸುತ್ತಲೋ, ತಟ್ಟಿ ಮಲಗಿಸುತ್ತಲೋ, ತೊಟ್ಟಿಲು ತೂಗುತ್ತಲೋ ಒಟ್ಟಿನಲ್ಲಿ ನೋವಿನಿಂದ ಪ್ರಕ್ಷುಬ್ದಗೊಂಡ ಮಗುವನ್ನು ಶಾಂತಗೊಳಿಸಲು ‘ನಾನಿಲ್ಲೇ ಇದ್ದೇನೆ, ನಿನ್ನ ಕಷ್ಟ ಅರ್ಥವಾಗುತ್ತಿದೆ’ ಎನ್ನುವುದನ್ನು ಮಗುವಿಗೆ ಅದಕ್ಕೆ ತಿಳಿಯುವ ರೀತಿಯಲ್ಲಿ ಸಂವಹಿಸುತ್ತಾಳೆ. ತಾಯಿಯ ಈ ನಡೆ ಮಕ್ಕಳಷ್ಟೇ ಅಲ್ಲದೆ ಸಂಕಟದಲ್ಲಿರುವ ಯಾರನ್ನೇ ಆದರೂ ಹೇಗೆ ಸಂತೈಸಿ ಅವರಲ್ಲಿ ಸ್ಥೈರ್ಯ–ಸಂತೋಷಗಳನ್ನು ತುಂಬಿಕೊಡಬಹುದು ಎನ್ನುವುದಕ್ಕೆ ಮಾದರಿಯೂ ಹೌದು.

ಅನಾರೋಗ್ಯದಲ್ಲಿರುವ ಮಕ್ಕಳನ್ನು ಸಂತೈಸಬೇಕಾದಾಗ ಪೋಷಕರಿಗೆ ಸಹಾಯಕವಾಗಬಹುದಾದ ಕೆಲವು ಮಾತುಗಳು ಇಲ್ಲಿವೆ:

  • ಮಕ್ಕಳಿಗೆ ಅನಾರೋಗ್ಯವಾದಾಗ ಪೋಷಕರಾದ ನಾವು ನಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಮಕ್ಕಳ ಮುಂದೆ ಕುಳಿತಿರುವುದಕ್ಕಾಗುತ್ತದೆಯೇ – ಎನ್ನುವ ಪ್ರಶ್ನೆ ಸಹಜ. ಹೌದು, ಅನಾರೋಗ್ಯದಲ್ಲಿರುವ ಮಗುವಿಗೆ ಹೆಚ್ಚಿನ ಪ್ರಾಮುಖ್ಯವನ್ನು ಕೊಡಬೇಕಾಗುತ್ತದೆ. ಆಗ ನಮ್ಮ ದಿನಚರಿ, ಊಟ, ನಿದ್ರೆ, ಕೆಲಸ ಎಲ್ಲವೂ ಅಸ್ತವ್ಯಸ್ತಗೊಳ್ಳುತ್ತದೆ. ನಮಗೇ ಒಂದು ಬಗೆಯ ಬೇಸರವೂ ಆಗುತ್ತದೆ. ಅಂತಹ ದಿನಗಳನ್ನು ತಾಳ್ಮೆಯಿಂದ, ಎಲ್ಲ ಕೆಲಸವನ್ನೂ ಸ್ವಲ್ಪ ನಿಧಾನವಾಗಿ, ಆದಾಗ ಮಾಡಿ ಆಗದ್ದನ್ನು ಮುಂದೂಡಿ ನಮಗೂ ನಾವೇ ಸ್ವಲ್ಪ ಸಹಾನುಭೂತಿಯನ್ನು ತೋರಿಸಿಕೊಂಡಾಗ ಮಾತ್ರ ಮಕ್ಕಳ ಬಗೆಗೂ ಸಹಾನುಭೂತಿಯುಂಟಾಗುವುದು ಸಾಧ್ಯ. ಅಷ್ಟೇ ಅಲ್ಲದೆ ಮಕ್ಕಳಿಗೆ ಒಮ್ಮೆ ನಾವು ಅವರ ಬಗೆಗೆ ಎಷ್ಟೆಲ್ಲಾ ಕಾಳಜಿ ಹೊಂದಿದ್ದೇವೆ ಎನ್ನುವುದನ್ನು ಮನದಟ್ಟು ಮಾಡಿಸಿದಾಗ ಅವರೂ ನಮ್ಮ ಗಮನವನ್ನು ಸೆಳೆಯುವುದನ್ನು ಕಡಿಮೆ ಮಾಡುತ್ತಾರೆ.

  • ಮಕ್ಕಳು ಔಷಧ ಮತ್ತು ಪಥ್ಯದ ಆಹಾರವನ್ನು ಸೇವಿಸಲು ಹಠ ಮಾಡುವುದು ಸಾಮಾನ್ಯ. ಬಾಯಿಗೆ ಹಾಕಿದ ಔಷಧವನ್ನು ಉಗಿಯುವುದು, ವಾಕರಿಸಿಕೊಳ್ಳುವುದು, ವಾಂತಿಮಾಡಿ ಹಾಸಿಗೆ ಬಟ್ಟೆಗಳನ್ನು ಮಲಿನಗೊಳಿಸುವುದೇ ಮುಂತಾದ್ದು ಮಾಡಿದಾಗಂತೂ ತಾಳ್ಮೆ ತಪ್ಪದಿರುವುದು ಹೇಗೆ? ಆಗ ಮಗುವಿನ ಮೇಲೆ ಸಿಟ್ಟಾಗದೆ, ಮಗುವಿನ ಮನವೊಲಿಸಿ ಔಷಧವನ್ನು ಕುಡಿಸುವುದು ಕಡಿಮೆ ಸಾಧನೆಯೇನಲ್ಲ!

  • ಮಗುವಿನ ಆರೋಗ್ಯ ಕೈಕೊಟ್ಟಾಗ ಅದಕ್ಕೆ ಮಗುವನ್ನೇ ದೂಷಿಸದಿರುವುದು, ಮಗುವಿನ ಯಾವುದೋ ತಪ್ಪಿನಿಂದಲೇ ಆರೋಗ್ಯ ಹಾಳಾಯಿತು – ಎನ್ನುವಂತೆ ಮಾತನಾಡದಿರುವುದು ಪ್ರಜ್ಞಾವಂತ ಪೋಷಕರ ಲಕ್ಷಣ. ‘ಏನೋ ತಿಂದೆ, ಮಳೆಯಲ್ಲಿ ನೆನೆದೆ, ಯಾರದೋ ಮನೆಗೆ ಹೋಗಿದ್ದೆ, ಬೇಡವೆಂದರೂ ಬಿಸಿಲಲ್ಲಿ ಆಟವಾಡಿದೆ, ಹಾಗಾಗಿ ಅನಾರೋಗ್ಯವಾಯಿತು’ ಎಂದೆಲ್ಲಾ ಮಗುವನ್ನು ದೂಷಿಸದೆ ಯಾವ ಕಾರಣಕ್ಕಾದರೂ ಅನಾರೋಗ್ಯವಾಗಿರಲಿ, ಅದರ ಕುರಿತು ಹೆಚ್ಚಿನ ಚರ್ಚೆ ಮಾಡದೇ ಪರಿಹಾರದ ಕಡೆಗೆ ಗಮನ ಕೊಡುವುದೊಳಿತು.

  • ಮಗುವಿಗೆ ಪದೇ ಪದೇ ಒಂದೇ ರೀತಿಯ ಅಲರ್ಜಿ, ಸೋಂಕು ಅಥವಾ ಯಾವುದೇ ರೀತಿಯ ನೋವುಗಳು ಉಂಟಾದಾಗ ತಜ್ಞವೈದ್ಯರೊಂದಿಗೆ ಸಮಾಲೋಚಿಸಿ ಅಸ್ವಸ್ಥತೆ ಮರುಕಳಿಸುವುದಕ್ಕಿರುವ ಕಾರಣಗಳನ್ನು ಅರ್ಥಮಾಡಿಕೊಂಡು, ಅದನ್ನು ನಿರ್ವಹಿಸಲು ಬೇಕಾದ ಮಾನಸಿಕ ಸಿದ್ಧತೆಯನ್ನು ಪೋಷಕರು ಮಾಡಿಕೊಳ್ಳಬೇಕಾಗುತ್ತದೆ. ಮಗು ಪದೇ ಪದೇ ಅಸ್ವಸ್ಥತೆಗೆ ಒಳಗಾಗುವುದರಿಂದ ಆಗುವ ಆತಂಕ, ಚಡಪಡಿಕೆ, ಸಿಟ್ಟು, ಹತಾಶೆಗಳಿಂದ ಮನಸ್ಸಿನ ಸ್ತಿಮಿತವನ್ನು ಕಳೆದುಕೊಂಡು ಮೂಢನಂಬಿಕೆಗಳಿಗೆ ಮೊರೆಹೋಗುವುದು, ವೈದ್ಯರ ಅನುಮತಿ ಇಲ್ಲದ ಅಥವಾ ವೈದ್ಯರ ಸಲಹೆ ಪಡೆಯದೆ ಮನೆಮದ್ದುಗಳನ್ನು ಮಾಡುವುದು, ರೋಗದ ಬಗೆಗೆ ವೈಜ್ಞಾನಿಕವಾಗಿ ಸಾಬೀತಾಗದ ವಿಚಾರಗಳನ್ನು ಒಪ್ಪುವಂತೆ, ಅದನ್ನು ಪಾಲಿಸುವಂತೆ ಮಗುವಿಗೆ ಒತ್ತಾಯಿಸುವುದು ಮಕ್ಕಳಲ್ಲಿ ಗೊಂದಲ ಮತ್ತು ಪೋಷಕರ ಬಗೆಗೆ ಭಯ, ಅಪನಂಬಿಕೆಗಳನ್ನು ಹುಟ್ಟಿಸುತ್ತವೆ.

  • ಮಗು ಸ್ವಲ್ಪ ಬೆಳೆದಂತೆ ತನಗಾಗುತ್ತಿರುವ ದೈಹಿಕ ಸಂಕಟದ ಬಗೆಗೆ, ಅಸೌಖ್ಯದ ಭಾವದ ಬಗೆಗೆ ಹೇಳಿಕೊಂಡಾಗ ಅದನ್ನು ಪ್ರಶ್ನೆಮಾಡದೆ, ಅಪಹಾಸ್ಯ ಮಾಡದೆ, ನಿರ್ಲಕ್ಷಿಸದೆ ಕೇಳಿಸಿಕೊಳ್ಳುವುದೂ ಕೂಡ ಮಕ್ಕಳನ್ನು ಸಂತೈಸುವ ಬಗೆಯೇ ಹೌದು. ಮಗುವಿನ ದೈಹಿಕ ಸ್ಥಿತಿಯನ್ನು ಅಲಕ್ಷಿಸುವುದು, ಅವಮಾನಗೊಳಿಸುವುದು, ಮಗು ತನ್ನ ನೋವನ್ನು ತೋಡಿಕೊಂಡಾಗ ಅದರ ಬಗೆಗೆ ಅಪನಂಬಿಕೆಯನ್ನು ವ್ಯಕ್ತಪಡಿಸುತ್ತಾ ‘ನೋವಿಲ್ಲ, ಏನಿಲ್ಲ ಸುಮ್ಮನೆ ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಹೀಗೆಲ್ಲಾ ನಾಟಕವಾಡುತ್ತಿದ್ದೀಯ’ ಎಂದೆಲ್ಲಾ ಹೇಳುವುದು ಮಗು ತನ್ನ ದೇಹದ ಸಂವೇದನೆಗಳನ್ನು ತಾನೇ ಸರಿಯಾಗಿ ಗ್ರಹಿಸದಿರುವ, ಅದಕ್ಕೆ ಪ್ರಾಮುಖ್ಯ ಕೊಡದಿರುವ, ತನ್ನ ದೇಹದ ಬಗೆಗೆ ನಕಾರಾತ್ಮಕ ಭಾವಗಳನ್ನು, ಆಲೋಚನೆಗಳನ್ನು ಹೊಂದುವ ಸಾಧ್ಯತೆಯಿದೆ. ಆದ್ದರಿಂದ ಅನಾರೋಗ್ಯದಲ್ಲಿರುವ ಮಗುವಿನ ಉಪಚಾರದಲ್ಲಿ ಸಹಾನುಭೂತಿ, ಪ್ರೀತಿಗಳು ಧಾರಾಳವಾಗಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.