ADVERTISEMENT

ಮಕ್ಕಳಿಗೂ ಕಾಡುವ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ: ಇರಲಿ ಈ ಬಗ್ಗೆ ಎಚ್ಚರಿಕೆ

ಪ್ರಜಾವಾಣಿ ವಿಶೇಷ
Published 22 ಅಕ್ಟೋಬರ್ 2024, 6:28 IST
Last Updated 22 ಅಕ್ಟೋಬರ್ 2024, 6:28 IST
ಮೂತ್ರಪಿಂಡ
ಮೂತ್ರಪಿಂಡ   

ಇತ್ತೀಚಿನ ದಿನಗಳಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಇದನ್ನು ಕ್ರಾನಿಕ್‌ ಕಿಡ್ನಿ ಡಿಸೀಸ್‌ (CKD) ಎಂದು ಕರೆಯುವ ಈ ಕಾಯಿಲೆಯು ವಯಸ್ಕರಲ್ಲಷ್ಟೇ ಅಲ್ಲದೆ, ಮಕ್ಕಳಲ್ಲೂ ಹೆಚ್ಚಾಗುತ್ತಿದೆ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿಷವನ್ನು ಫಿಲ್ಟರ್ ಮಾಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಮೂತ್ರಪಿಂಡಗಳು ಹೆಚ್ಚು ಶ್ರಮಿಸುತ್ತವೆ. ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳದೇ ಹೋದಲ್ಲಿ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಬಹುದು. ಈ ಕಾಯಿಲೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ವೈದ್ಯರು ವಿವರಿಸಿದ್ದಾರೆ.

CKDಯ ಲಕ್ಷಣಗಳು ಯಾವುವು?

ಸಿಕೆಡಿ ತನ್ನ ಆರಂಭಿಕ ಹಂತದಲ್ಲಿ ಯಾವುದೇ ಗಮನಾರ್ಹ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಈ ಕಾರಣದಿಂದಾಗಿ ಅದನ್ನು ಗುರುತಿಸಲು ಕಷ್ಟವಾಗುತ್ತದೆ. ಆದಾಗ್ಯೂ, ರೋಗವು ಮುಂದುವರೆದಂತೆ, ಕೆಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ.

ADVERTISEMENT

1. ಆಯಾಸ ಮತ್ತು ದೌರ್ಬಲ್ಯ

2. ಪಾದ, ಕಣಕಾಲುಗಳು ಹಾಗೂ ಕಾಲುಗಳಲ್ಲಿ ಊತ

3. ಮೂತ್ರದ ಆವರ್ತನ ಹೆಚ್ಚಳ ಅಥವಾ ಕಡಿಮೆ ಆಗುವುದು

4. ಆಗಾಗ್ಗೆ ವಾಕರಿಕೆ ಅಥವಾ ವಾಂತಿ

5. ಉಸಿರಾಟದ ತೊಂದರೆ

6. ಅಧಿಕ ರಕ್ತದೊತ್ತಡ

ಮಕ್ಕಳಲ್ಲಿ ದೀರ್ಘಕಾಲಿಕ ಮೂತ್ರಪಿಂಡದ ಕಾಯಿಲೆ

ಕ್ರಾನಿಕ್ ಕಿಡ್ನಿ ಡಿಸೀಸ್ (CKD) ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಮಕ್ಕಳು ಮತ್ತು ವಯಸ್ಕರಲ್ಲಿ ಇಬ್ಬರಲ್ಲೂ ಹೆಚ್ಚುತ್ತಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.20-30 ರಷ್ಟು ವಯಸ್ಕರು ಸಿಕೆಡಿ ಕಾಯಿಲೆಯಿಂದ ಬಳಲುತ್ತಿದ್ದರೆ, ಶೇ.5 ರಷ್ಟು ಮಕ್ಕಳು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ, ಆನುವಂಶಿಕ, ಅಪೌಷ್ಠಿಕತೆ, ಕಡಿಮೆ ತೂಕದಲ್ಲಿ ಜನಿಸುವ ಮಕ್ಕಳು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ, ಮಕ್ಕಳಲ್ಲಿ ಜನ್ಮಜಾತ ಆರೋಗ್ಯ ಸಮಸ್ಯೆ, ಇತರೆ ಸೋಂಕಿಗೂ ಒಳಗಾಗಬಹುದು. ಇದರಿಂದ ಬೆಳವಣಿಗೆಯಲ್ಲಿ ಕುಂಠಿತ, ಹೃದಯನಾಳದ ಕಾಯಿಲೆ, ಬೆಳವಣಿಗೆಯಲ್ಲಿ ವಿಳಂಬ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಾರೆ.

UNICEF ಸಂಸ್ಥೆಯ ಮಾಹಿತಿಯ ಪ್ರಕಾರ, 2 ಕೆಜಿಗೂ ಕಡಿಮೆ ಜನನದ ತೂಕ ಹೊಂದಿ, ಹುಟ್ಟುವ ಶಿಶುಗಳು ಈ ಮೂತ್ರಪಿಂಡದ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚು. ಇಂತಹ ಮಕ್ಕಳ ಮೂತ್ರಪಿಂಡ ಹಾಗೂ ಮೂತ್ರಕೋಶವು ಹೆಚ್ಚು ಸೂಕ್ಷ್ಮವಾಗಿರಲಿದ್ದು, ಮಾಲಿನ್ಯ, ಹೊಗೆ ಇತ್ಯಾದಿ ಕಲುಷಿತ ಗಾಳಿ ಸೇವಿಸಿದರೆ, ಮೂತ್ರಪಿಂಡದ ಕಾಯಿಲೆಗೆ ವೇಗವಾಗಿ ಒಳಗಾಗುತ್ತಾರೆ. ಭವಿಷ್ಯದಲ್ಲಿ ಇದೇ ಸಿಕೆಡಿಯಾಗಿ ಪರಿವರ್ತನೆಯಾಗಲಿದೆ. ಒಂದು ವೇಳೆ ಮಗುವಿಗೆ ಮೂತ್ರಪಿಂಡದ ಕಾಯಿಲೆ ಇರುವುದು ಕಂಡು ಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ನೀಡಿಸುವುದರಿಂದ ಭವಿಷ್ಯದಲ್ಲಿ ಮೂತ್ರಪಿಂಡಕ್ಕೆ ಆಗುವ ಅಪಾಯವನ್ನು ತಪ್ಪಿಸಬಹುದು.

ವಯಸ್ಕರಲ್ಲಿ ಸಿಕೆಡಿ ಹರಡುವಿಕೆ

ಇನ್ನು, ವಯಸ್ಕರಲ್ಲಿಯೂ ದೀರ್ಘಕಾಲದ ಕಿಡ್ನಿ ಕಾಯಿಲೆ ಹೆಚ್ಚು ಅಪಾಯವನ್ನು ಉಂಟು ಮಾಡಲಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ ಮತ್ತು ಅನಾರೋಗ್ಯಕರ ಜೀವನಶೈಲಿ ಹೊಂದಿರುವವರಿಗೆ ಈ ಕಾಯಿಲೆ ಬರುವುದು ಕಟ್ಟಿಟ್ಟ ಬುತ್ತಿ. ಇದರ ಜೊತೆಗೆ, ಕಳಪೆ ನೈರ್ಮಲ್ಯ, ಕಲುಷಿತ ನೀರು ಕುಡಿಯುವುದು, ಕೈಗಾರಿಕಾ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದರಿಂದಲೂ ಮೂತ್ರಪಿಂಡ ಹಾನಿಗೊಳಗಾಗಿ ಸಿಕೆಡಿಗೆ ತುತ್ತಾಗಬಹುದು.

CKD ನಿಯಂತ್ರಿಸುವುದು ಹೇಗೆ?

ಸಿಕೆಡಿಯನ್ನು ನಿಯಂತ್ರಿಸಲು ಮೊದಲು ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು. ಉತ್ತಮ ಜೀವನಶೈಲಿ, ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಮಾಡುವುದರಿಂದ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಸೇವಿಸುವ ಆಹಾರ ಹಾಗೂ ನೀರಿನ ಶುದ್ಧತೆಗೆ ಆದ್ಯತೆ ನೀಡಿ. ಕೆಟ್ಟ ಚಟಗಳನ್ನು ನಿಯಂತ್ರಿಸುವ ಮೂಲಕ ಸಿಕೆಡಿಯಿಂದ ದೂರ ಇರಬಹುದು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಸಂಪೂರ್ಣವಾಗಿ ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಹಲವು ರೀತಿಯ ಚಿಕಿತ್ಸೆಗಳ ಮೂಲಕ ನಿಯಂತ್ರಣಕ್ಕೆ ತರಬಹುದು. ಇನ್ನು, ಹುಟ್ಟುವ ಶಿಶುಗಳಿಗೆ ಹೆಚ್ಚು ಆರೈಕೆ ನೀಡುವ ಮೂಲಕ ಈ ಕಾಯಿಲೆಯಿಂದ ವಿಮುಕ್ತಿ ನೀಡಬಹುದು. ಕಡಿಮೆ ತೂಕದ ಮಕ್ಕಳ ತೂಕವನ್ನು ತಾಯಿಯ ಎದೆಹಾಲು ಸೇವನೆ ಮೂಲಕ ಹೆಚ್ಚಿಸುವುದು, ಶುದ್ಧ ವಾತಾವರಣದಲ್ಲಿ, ಗುಣಮಟ್ಟದ ಜೀವನ ಶೈಲಿಯಿಂದ ಮಕ್ಕಳ ಮೂತ್ರಪಿಂಡ ಆರೋಗ್ಯವಾಗಿ ಬೆಳೆಯಲು ಸಾಧ್ಯ.

–ಡಾ. ಶ್ರೀನಿವಾಸ್ ಮಹೇಶ್ ಪ್ರಸಾದ್, ಸಮಾಲೋಚಕರು- ನೆಫ್ರಾಲಜಿ, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.