-ಲಾವಣ್ಯಗೌರಿ ವೆಂಕಟೇಶ್
ಮನೆಯಾಗಲೀ ಮನಸ್ಸಾಗಲೀ ನಿರ್ಮಲವಾಗಿದ್ದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ತಿಳಿಯಾದ ನೀರಿನಲ್ಲಿ ಹೇಗೆ ಪ್ರತಿಬಿಂಬ ಕಾಣುವುದೋ ಅದೇ ರೀತಿ ತಿಳಿಯಾದ ಮನವಿದ್ದಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ; ಯಾವುದೇ ಸಮಸ್ಯೆಗಾದರೂ ಪರಿಹಾರ ಲಭ್ಯ. ಮನಸ್ಸು ತಿಳಿಯಾಗಲು ನಾವಿರುವ ಜಾಗ ತಿಳಿಯಾಗಿರಬೇಕು. ಅಂದರೆ ಸ್ವಚ್ಛವಾಗಿರಬೇಕು. ವೈಜ್ಞಾನಿಕವಾಗಿಯೂ ಸ್ಚಚ್ಛತೆಯಿದ್ದಲ್ಲಿ ರೋಗರಹಿತ ವಾತಾವರಣವಿರುತ್ತದೆ. ಶುಚಿತ್ವದ ತವರೇ ಸಕಾರಾತ್ಮಕತೆ!
ಕಛೇರಿಯಲ್ಲಾಗಲೀ, ಮನೆಯಲ್ಲಾಗಲೀ ಸದಾಕಾಲ ಜಗಳ, ಮನಸ್ಸಿಗೆ ಕಿರಿಕಿರಿ ಎಂದು ಹಲವರು ಹೇಳುವುದನ್ನು ನಾವು ಕೇಳಿದ್ದೇವೆ. ಅದಕ್ಕೆ ಕಾರಣ ಚೊಕ್ಕತನವಿಲ್ಲದ ನಮ್ಮ ಪರಿಸರ. ಇಂತಹ ಪರಿಸ್ಥಿತಿಯಲ್ಲಿ ಒಮ್ಮೆ ಸುತ್ತಲೂ ಕಣ್ಣಾಡಿಸಿ ನೋಡಿ. ಜೋಡಿಸದೇ ಬಿದ್ದಿರುವ ಪತ್ರಿಕೆಗಳು, ಪುಸ್ತಕಗಳು, ಮಡಿಸದೇ ಗುಡ್ಡೆ ಮಾಡಿರುವ ಬಟ್ಟೆಗಳು, ಉಪಯೋಗಕ್ಕೆ ಬಾರದ ಹಲವು ಪದಾರ್ಥಗಳು ಕಣ್ಣಿಗೆ ಕಾಣುತ್ತವೆ. ಓರಣವಿಲ್ಲದ ವಸ್ತುಗಳಿಂದುಂಟಾದ ನಕಾರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮನಸ್ಸನ್ನು ಅಶಾಂತಿಯ ಗೂಡಾಗಿ ಮಾಡಿಬಿಡುತ್ತದೆ. ಕ್ರಮವಾಗಿ, ವ್ಯವಸ್ಥಿತವಾಗಿ ಇರುವ ಪರಿಸರವು ಮನಸ್ಸಿಗೆ ಮುದವನ್ನು ನೀಡುತ್ತದೆ. ಇದಕ್ಕೆ ಅದ್ಭುತವಾದ ಉದಾಹರಣೆ ಪ್ರಕೃತಿ. ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಯಾವುದೇ ಕಲ್ಮಷಗಳೂ ಇರುವುದಿಲ್ಲ. ನೈಸರ್ಗಿಕವಾಗಿ ಇರುವ ಗಾಳಿ, ಬೆಟ್ಟ, ಗುಡ್ಡ, ನದಿ, ಗಿಡ, ಮರ, ಕಾಡು, ಸಮುದ್ರ ಎಲ್ಲವೂ ಶುಚಿಯಾಗಿರುವುದು ಸೃಷ್ಟಿಯ ಸಹಜಗುಣ. ಅಂತೆಯೇ ಪ್ರಕೃತಿಯಲ್ಲಿ ಸದಾಕಾಲ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತಿರುತ್ತದೆ. ಆದ್ದರಿಂದಲೇ ನಿಸರ್ಗದ ಮಡಿಲಲ್ಲಿದ್ದಾಗ ಪ್ರತಿಯೊಬ್ಬರೂ ಸಂತೋಷವಾಗೇ ಇರುತ್ತೇವೆ!
ಅಚ್ಚುಕಟ್ಟುತನಕ್ಕೆ ಬಡವ-ಬಲ್ಲಿದರೆಂಬ ಬೇಧವಿಲ್ಲ. ಮನೆ ಚಿಕ್ಕದಿರುವುದರಿಂದ ಸಾಮಾನುಗಳನ್ನು ವ್ಯವಸ್ಥಿತವಾಗಿ ಜೋಡಿಸಲು ಜಾಗವಿಲ್ಲ ಎಂದು ಹಲವರು ಹೇಳುವುದುಂಟು. ಹಾಗೆಯೇ ದೊಡ್ಡ ಮನೆ ಇರುವವರು, ಮನೆ ದೊಡ್ಡದಿರುವುದರಿಂದ ಸ್ವಚ್ಛಗೊಳಿಸಲು ಕಷ್ಟ ಎಂದು ಗೊಣಗುವುದು ಸಾಮಾನ್ಯ. ಮನೆ ಚಿಕ್ಕದಿರಲಿ, ದೊಡ್ಡದಿರಲಿ, ಒಪ್ಪ ಓರಣಕ್ಕೇಕೆ ಕೊರತೆ? ಬಟ್ಟೆ-ಬರೆಗಳನ್ನು ಎಲ್ಲಂದರಲ್ಲಿ ಹಾಕುವ ಬದಲು ಇರುವ ಜಾಗದಲ್ಲೇ ಮಡಿಸಿ ಇಡಿ. ಪುಸ್ತಕಗಳನ್ನಾಗಲೀ ಪತ್ರಿಕೆಗಳನ್ನಾಗಲೀ, ಒಂದರ ಮೇಲೆ ಒಂದನ್ನು ಚೊಕ್ಕವಾಗಿ ಜೋಡಿಸಿ ಇಡಿ.
ಒಮ್ಮೆಲೇ ಎಲ್ಲವನ್ನೂ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಶುಚಿಯಾಗಿಡುವುದು ಯೋಜನೆಯಲ್ಲ, ಅದೊಂದು ಅಭ್ಯಾಸ. ದಿನವೂ ಸ್ವಲ್ಪ ಸ್ವಲ್ಪವೇ ಅಭ್ಯಾಸ ಮಾಡಿಕೊಂಡಲ್ಲಿ ಯಾವುದೂ ಅಸಾಧ್ಯವಲ್ಲ.
ದಿನಕ್ಕೊಂದು ಕಪಾಟನ್ನು ಶುಚಿಗೊಳಿಸುವ ಕಾರ್ಯವನ್ನು ಇಂದಿನಿಂದಲೇ ಪ್ರಾರಂಭಿಸಿ. ಒಂದೊಂದು ಕಪಾಟಿನಲ್ಲೂ ಬೇಡದ, ಉಪಯೋಗಿಸದ ಎಷ್ಟು ವಸ್ತುಗಳಿವೆಯೆಂದು ತಿಳಿದು ನೀವೇ ಅಚ್ಚರಿಗೊಳ್ಳುತ್ತೀರಿ! ಪ್ರತಿ ಬಾರಿಯೂ ಬೇಡದ ವಸ್ತುಗಳು ಮನೆಯಿಂದ ಹೊರ ಹೋದಾಗಲೂ, ನೀವು ಒಂದೊಂದೇ ಋಣಾತ್ಮಕ ಅಂಶಗಳನ್ನು ನಿಮ್ಮ ಜೀವನದಿಂದ ಕಳೆಯುತ್ತಿದ್ದೀರೆಂದು ಅರ್ಥ! ಅಂತೆಯೇ ನಕಾರಾತ್ಮಕ ಶಕ್ತಿ ಕ್ಷೀಣಿಸುತ್ತಿರುವಂತೆಯೇ ಧನಾತ್ಮಕ ಶಕ್ತಿಯ ಪ್ರಭಾವಳಿ ಮನೆಯನ್ನು, ಮನವನ್ನು ತುಂಬಿಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.