ಮಗುವಿಗೆ ಎರಡೂವರೆ ತಿಂಗಳು. ತುಂಬ ಆರೋಗ್ಯವಂತನಾಗಿದ್ದಾನೆ. ಆದರೆ ಪ್ರತಿದಿನ ಸಂಜೆ ಆಗುತ್ತಿದ್ದಂತೆ ಒಮ್ಮಿಂದೊಮ್ಮೆಲೇ ವಿಪರೀತ ಅಳು. ಎತ್ತಿಕೊಂಡು ತಿರುಗಾಡಿ, ಲಾಲಿಹಾಡು ಕೇಳಿಸಿ, ಏನೇನೆಲ್ಲಾ ಪ್ರಯತ್ನ ಮಾಡಿದರೂ ಅಳುವುದು ನಿಲ್ಲಿಸುವುದಿಲ್ಲ. ಮನೆಯವರಿಗೆಲ್ಲಾ ಆತಂಕ. ಪಕ್ಕದ ಮನೆಯವರಿಂದ ಮಗು ಎಷ್ಟು ಅಳುತ್ತಿದೆಯಲ್ಲಾ ಎಂಬ ಮಾತು. ‘ಮಗುವಿಗೆ ಬೇಬಿ ಕೊಲಿಕ್ ಆಗಿದೆಯಾ ಡಾಕ್ಟ್ರೇ?’ ಎಂಬ ಹೆತ್ತವರ ಆತಂಕ ಅಪರೂಪವೇನಲ್ಲ.
ಬೇಬಿ ಕೊಲಿಕ್ ಎಂದರೇನು?
ತುಂಬಾ ಆರೋಗ್ಯವಂತವಾದ ಮಗು ಯಾವುದೇ ಕಾರಣವಿಲ್ಲದೆ ಅನಿಯಂತ್ರಿತವಾಗಿ ದಿನಕ್ಕೆ ಮೂರು ಗಂಟೆಗಿಂತ ಹೆಚ್ಚಿಗೆ, ವಾರಕ್ಕೆ ಮೂರು ಬಾರಿ ಅಳುವುದು ಮತ್ತು ಇದು ಮೂರು ವಾರಗಳವರೆಗೆ ಮುಂದುವರೆದರೆ ಬೇಬಿ ಕೊಲಿಕ್ ಎನ್ನುತ್ತೇವೆ. ಇತರೆ ಹೆಸರುಗಳು ಇನಫಂಟ್ ಕೊಲಿಕ್, ಉದರಶೂಲೆ, ಕಂದನ ಅತಿಯಾದ ಅಳು. ಹೆಣ್ಣು/ ಗಂಡು ಮಗು ಎಂಬ ಭೇದವಿಲ್ಲದ ಈ ತೊಂದರೆ, ಜನಿಸಿದ ಎರಡನೇ ವಾರದಿಂದ ಆರನೇ ತಿಂಗಳುಗಳವರೆಗೆ ಸಾಮಾನ್ಯ.
ಶೇ 20ರಷ್ಟು ಮಕ್ಕಳಲ್ಲಿ ಸಾಮಾನ್ಯವಾದ ಇದರ ಇತರ ಲಕ್ಷಣಗಳೆಂದರೆ ಎಷ್ಟು ಪ್ರಯತ್ನಿಸಿದರೂ ಅಳು ನಿಲ್ಲಿಸುವುದಿಲ್ಲ, ಮುಷ್ಟಿಯನ್ನು ಗಟ್ಟಿ ಹಿಡಿಯುವುದು, ಮುಖ ಕೆಂಪಗೆ ಮಾಡುವುದು, ಮೊಣಕಾಲನ್ನು ಹೊಟ್ಟೆ ಹತ್ತಿರ ತರುವುದು, ಬೆನ್ನನ್ನು ಕಮಾನಿನಂತೆ ಮಾಡುವುದು, ಹೊಟ್ಟೆಯಲ್ಲಿ ಗಾಳಿಗುಳ್ಳೆಯ ಗುಡು ಗುಡು ಶಬ್ದ, ಗುದದ್ವಾರದಿಂದ ಗಾಳಿ ಬರುವುದು, ನಿರ್ಧರಿತ ಸಮಯಕ್ಕೆ (ಮದ್ಯಾಹ್ನ ಅಥವಾ ಸಂಜೆ) ಅಳು ಆರಂಭ. ಶಿಶುವಿಗೆ ಗಂಭೀರವಾದ ಕಾಯಿಲೆ ಇದೆ ಎಂಬ ಭಯವಾಗುವಷ್ಟು ಜೋರಾಗಿ ಅಳುತ್ತಿರುತ್ತದೆ.
ಕಾರಣಗಳು
ಸುಮಾರು ಮೂವತ್ತು ವರ್ಷಗಳ ಹಿಂದೆ ಗುರುತಿಸಲಾದ ಈ ತೊಂದರೆಯ ಕಾರಣ ಅಸ್ಪಷ್ಟ. ಕೆಲವು ಹೀಗಿವೆ: ಪೌಡರ್, ಕೃತಕ ಮತ್ತು ಆಕಳು ಹಾಲಿಗೆ ಅಲರ್ಜಿ, ಎಳೆ ಮಗುವಿನ ಕರುಳಿನ ಅಸಮರ್ಪಕ ಚಲನವಲನ, ಎದೆಹಾಲು ಉಣಿಸುವ ತಪ್ಪು ವಿಧಾನದಿಂದ. ಎದೆ ಹಾಲಿನ ಜೊತೆ ಸ್ವಲ್ಪ ಪ್ರಮಾಣದ ಗಾಳಿ ಹಿರುವ ಸಂಭವವಿರುತ್ತದೆ. ಈ ಗಾಳಿ ಕರುಳಿನಲ್ಲಿ ಸಂಗ್ರಹವಾಗಿ ಹೊರಬರದಿದ್ದರೆ ಕೊಲಿಕ್ ಸಾಧ್ಯ. ಮಗುವಿನ ಕಾಳಜಿಯಲ್ಲಿ ನಿರ್ಲಕ್ಷ್ಯ, ಅವಶ್ಯಕತೆಗಿಂತ ಹೆಚ್ಚಿನ ಜಾಗ್ರತೆ, ಹೆತ್ತವರು ಮತ್ತು ಶಿಶುವಿನ ನಡುವೆ ಬಾಂಧವ್ಯದ ಕೊರತೆ, ಗರ್ಭಿಣಿ ಮತ್ತು ಬಾಣಂತಿ ಧೂಮಪಾನ ಮಾಡುತ್ತಿದ್ದರೆ ಸಾಮಾನ್ಯ. ಕುಡಿದ ಹಾಲು ಹೊಟ್ಟೆಯಿಂದ ತಿರುಗಿ ಬಾಯಿಗೆ ಬರುವುದು. ಹೆರಿಗೆ ನಂತರ ಖಿನ್ನತೆ. ಆದರೆ ಈ ಎಲ್ಲ ಕಾರಣಗಳಿಗೆ ಯಾವುದೇ ಪುರಾವೆಗಳಿಲ್ಲ. ವೈದ್ಯಕೀಯ ಲೋಕಕ್ಕೆ ಇದೊಂದು ಸವಾಲಾಗಿದೆ.
ಉಪಶಮನ ಹೇಗೆ?
ಇದು ಕಾಯಿಲೆಯಲ್ಲ. ವೈದ್ಯರನ್ನು ತುರ್ತಾಗಿ ಕಾಣುವ ಅಗತ್ಯವಿಲ್ಲ. ಇದಕ್ಕೆ ಪರಿಣಾಮಕಾರಿ ಔಷಧಗಳಿಲ್ಲ. ವಯಸ್ಸಿಗೆ ಅನುಗುಣವಾಗಿ ತೂಕದಲ್ಲಿ ಹೆಚ್ಚಳ(ಮೊದಲ ನಾಲ್ಕು ತಿಂಗಳಲ್ಲಿ ಪ್ರತಿದಿನ 30 ಗ್ರಾಂ, 5–8 ತಿಂಗಳಲ್ಲಿ ದಿನಕ್ಕೆ 20 ಗ್ರಾಂ, 9–12 ತಿಂಗಳಲ್ಲಿ ನಿತ್ಯ 10 ಗ್ರಾಂ) ಮತ್ತು ದಿನಕ್ಕೆ ಹತ್ತರಿಂದ ಹದಿನೈದು ಬಾರಿ ಮೂತ್ರ ವಿಸರ್ಜನೆ, ಸತತವಾಗಿ ಎರಡರಿಂದ ನಾಲ್ಕು ಗಂಟೆ ನಿದ್ದೆ ಮಾಡುತ್ತಿದ್ದರೆ ಶಿಶು ಆರೋಗ್ಯವಾಗಿದೆ ಮತ್ತು ಕೊಲಿಕ್ ಶಿಶು ಬೆಳವಣಿಗೆಯ ಬಂದು ಹೋಗುವ ಹಂತ ಎಂದು ತಿಳಿಯಿರಿ.
ತಡೆ ಹೇಗೆ
ಮಗು ಕೇಳಿದಾಗೆಲ್ಲಾ ಕೇವಲ ಎದೆ ಹಾಲನ್ನು 6 ತಿಂಗಳು ಕೊಡಿ. ಹಾಲು ಕುಡಿಯುವಾಗ ಮಗು ಗಾಳಿ ಸೇವನೆ ಮಾಡದಂತೆ ಎಚ್ಚರವಹಿಸಿ. ಶಿಶುವನ್ನು ಕುಳಿತು ಮಡಿಲಲ್ಲಿ ಎತ್ತಿಕೊಂಡು ಹಾಲುಣಿಸಿ, ಮಗ್ಗಲು ಮಲಗಿ ಬೇಡ. ಕುಡಿಸಿದ ನಂತರ ಮಗುವನ್ನು ನೆಟ್ಟಗೆ ಹಿಡಿಯಿರಿ. ಹೆಗಲ ಮೇಲೆ ಹಾಕಿಕೊಂಡು ಮೃದುವಾಗಿ ಬೆನ್ನುತಟ್ಟಿ, ಸೇವಿಸಿದ ಗಾಳಿ ಬಾಯಿಯಿಂದ ಹೊರಬರುತ್ತದೆ.
ಕುಕ್ಕರ್ ಶಬ್ದ, ನೆಲದ ಮೇಲೆ ಮೇಜು ಕುರ್ಚಿ ಎಳೆದಾಡಿದರೆ, ನಾಯಿ ಬೊಗಳಿದರೆ, ತಂಬಾಕು, ಬೆಳ್ಳುಳ್ಳಿ, ಈರುಳ್ಳಿ, ಒಗ್ಗರಣೆ ವಾಸನೆ ಅಹಿತಕರ. ನಿದ್ರೆ ಅಥವಾ ಅಳು ಸಮಯದಲ್ಲಿ ಇವು ಬೇಡ.
ತಾಯಿ ಆಹಾರ
ತಾಯಿ ಆದ ಸಂಭ್ರಮದಲ್ಲಿ ರುಚಿಯಾದದ್ದನ್ನು ತಿನ್ನುವ ಮುಂಚೆ ಯೋಚಿಸಿರಿ. ಕೊಲಿಕ್‌ಗೆ ಪೂರಕವಾದ ಕೆಲವು ಆಹಾರಗಳನ್ನು ಆರು ತಿಂಗಳು ಸೇವಿಸಬೇಡಿ. ಇವೆಂದರೆ ಕೆಫಿನ್ ಇರುವ ಸಾಫ್ಟ್ ಮತ್ತು ಎನರ್ಜಿ ಡ್ರಿಂಕ್ಸ್, ಅಲಸಂದಿ, ಸೋಯಾ, ಗೋಡಂಬಿ, ಮೊಟ್ಟೆ, ಜಂಕ್, ಎಲೆ ಮತ್ತು ಹೂಕೋಸು.
ದಂಪತಿ ಮೇಲೆ ಪರಿಣಾಮ
ಶಿಶುವಿನ ನಿರಂತರ ಅಳುವಿನಿಂದ ವೈವಾಹಿಕ ಅಪಶ್ರುತಿ, ಪ್ರಸವಾನಂತರದ ಖಿನ್ನತೆ, ಅವಧಿಪೂರ್ವ ಸ್ತನ್ಯಪಾನ ನಿಲ್ಲಿಸುವುದು, ಅಲ್ಪಾವಧಿಯ ಆತಂಕ ಖಿನ್ನತೆ ಸಾಧ್ಯ. ಹೀಗಾದಾಗ ಆಪ್ತಸಮಾಲೋಚನೆ ಅವಶ್ಯ.
ಅಳು ಜೊತೆ ಜ್ವರ, ನೆಗಡಿ, ವಾಂತಿ, ಬೇಧಿ, ಮಲಬದ್ಧತೆ, ಉಸಿರಾಟದ ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸಿರಿ.
(ಲೇಖಕರು ಮಕ್ಕಳ ತಜ್ಞರು, ಬೆಂಗಳೂರು)
ಅಳುವಾಗ ಹೀಗೆ ಮಾಡಿ
ಎತ್ತಿ, ಮುದ್ದಾಡಿ.
ತೊಟ್ಟಿಲಲ್ಲಿ ಹಾಕಿ ತೂಗಿ.
ಸ್ನಾನ ಮಾಡಿಸಿ ಬಟ್ಟೆ ಬದಲಾಯಿಸಿ. ಜೋಗುಳ ಹಾಡಿ.
ಮಗುವಿನ ತಲೆ, ಬೆನ್ನನ್ನು ಮೃದುವಾಗಿ ಸವರಿ.
ಅಪ್ಪ-ಅಮ್ಮನ ಹೃದಯ ಬಡಿತ, ಉಸಿರಾಟದ ಶಬ್ದವನ್ನು ಶಿಶುಗಳು ಇಷ್ಟಪಡುತ್ತವೆ. ಅಳುವ ಶಿಶುವನ್ನು ಎದೆ ಮೇಲೆ ಹಾಕಿಕೊಂಡು ರಮಿಸಲು ಪ್ರಯತ್ನಿಸಿ. ಹೃದಯ, ಉಸಿರಾಟದ ಶಬ್ದ ಕೇಳುತ್ತ ಅಳು ನಿಲ್ಲಿಸಿ, ನಿದ್ರಿಸುವ ಸಾಧ್ಯತೆ ಅಧಿಕ.
ಮಗು ವಿಶೇಷ ಭಂಗಿಯಲ್ಲಿ ನಿಮ್ಮ ಕೈಯಲ್ಲಿ ಇರಲು ಇಷ್ಟಪಡುತ್ತದೆ. ಇದು ನಿಮ್ಮ ತೋಳು, ಹೆಗಲ ಮೇಲೆ ಅಥವಾ ಹೊಟ್ಟೆಯ ಮೇಲೆ ತೊಟ್ಟಿಲಲ್ಲಿ ನಿದ್ರಿಸುವುದಾಗಿರಬಹುದು. ಇದನ್ನು ಗುರುತಿಸಿಕೊಳ್ಳಿ.
ಮನೆ ಹೊರಗೆ ಬೇಬಿ ಸ್ಟ್ರೋಲರ್ ಅಥವಾ ಕಾರಿನಲ್ಲಿ ತಿರುಗಾಡಿಸಿ. ಹೊಸ ದೃಶ್ಯ, ಶಬ್ದ, ಸುವಾಸನೆ, ತಾಜಾ ಗಾಳಿಗೆ ಅಳು ನಿಲ್ಲಿಸಬಹುದು.
ಅಳು ಆರಂಭವಾದ ತಕ್ಷಣ ಕೈ, ದೇಹ ಮುಚ್ಚುವಂತೆ ಬಟ್ಟೆಯಲ್ಲಿ ಸುತ್ತಿ (ಸ್ವಾಡ್‌ಲಿಂಗ್) ಮಗುವನ್ನು ಎತ್ತಿಕೊಳ್ಳಿ. ಇದು ಅಳು ನಿಲ್ಲಿಸಿ ನಿದ್ರೆ ಹೋಗಲು ಸಹಾಯಕಾರಿ. ಆದರೆ ಇದು ಎರಡು ತಿಂಗಳೊಳಗಿನ ಮಕ್ಕಳಿಗೆ ಮಾತ್ರ ಸುರಕ್ಷಿತ.
ಬೆರಳು ಅಥವಾ ಸ್ವಚ್ಛ, ಸುರಕ್ಷಿತ ಆಟಿಕೆ ಚೀಪಲು ಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.